ವ್ಯಾವಹಾರಿಕ ವಿಷಯಗಳ ಬದಲು ಶಿಷ್ಯನಿಗೆ ಜ್ಞಾನ, ಭಕ್ತಿ, ವೈರಾಗ್ಯ ನೀಡುವ ರಾಮಕೃಷ್ಣ ಪರಮಹಂಸರು !

ಶ್ರೀರಾಮಕೃಷ್ಣ ಪರಮಹಂಸರ ಜಯಂತಿ ನಿಮಿತ್ತ (ಫಾಲ್ಗುಣ ಶುಕ್ಲ ಪಕ್ಷ ದ್ವಿತೀಯಾ ೪.೩.೨೦೨೨)

ಶ್ರೀ ರಾಮಕೃಷ್ಣ ಪರಮಹಂಸರು

ಸ್ವಾಮಿ ವಿವೇಕಾನಂದರು ಜಗದಂಬೆಯ ಬಳಿ ಕೇವಲ ‘ಜ್ಞಾನ, ಭಕ್ತಿ ಮತ್ತು ವೈರಾಗ್ಯ’ ಬೇಡಿದ್ದರು. ಇದು ಹೇಗೆ ಘಟಿಸಿತು, ಎಂಬುದನ್ನು ತಿಳಿಸಿ ಹೇಳುವಾಗ ಸ್ವಾಮಿ ವಿವೇಕಾನಂದರು, ‘ಮೊದಲಿನಂತೆ ಹಣ ಗಳಿಸಲು ಮನೆಯಿಂದ ಹೊರಗೆ ಬಿದ್ದೆನು ಮತ್ತು ಅನೇಕ ಪ್ರಯತ್ನಗಳನ್ನು ಮಾಡುತ್ತ ಅತ್ತ ಇತ್ತ ತಿರುಗಾಡುತ್ತಿದ್ದೆನು. ಒಂದು ಆಟರ್ನಿ ಕಚೇರಿಯಲ್ಲಿ ಸ್ವಲ್ಪಮಟ್ಟಿಗೆ ಕೆಲಸ ಮಾಡಿ ಕೆಲವು ಪುಸ್ತಕಗಳ ಅನುವಾದ ಮಾಡಿ ಸ್ವಲ್ಪ ಹಣ ಗಳಿಸಿದೆನು ಮತ್ತು ಹೇಗೋ ದಿನ ಕಳೆಯುತ್ತಿದ್ದೆನು; ಆದರೆ ಶಾಶ್ವತ ಕೆಲಸ ಸಿಗಲಿಲ್ಲ. ಹೀಗಾಗಿ ತಾಯಿಯ ಮತ್ತು ಸಹೋದರರನ್ನು ಸಾಕುವ ವ್ಯವಸ್ಥೆ ಸರಿಯಾಗಿ ಆಗಲಿಲ್ಲ. ಕೆಲವು ದಿನಗಳ ನಂತರ ಮನಸ್ಸಿನಲ್ಲಿ ವಿಚಾರ ಬಂದಿತು, ಈಶ್ವರನು ಠಾಕುರರ (ರಾಮಕೃಷ್ಣ ಪರಮಹಂಸ) ರ ಮಾತುಗಳನ್ನು ಕೇಳುತ್ತಾನೆ. ಆದುದರಿಂದ ಅವರನ್ನು ವಿನಂತಿಸಿ ಅವರಿಂದ ಪ್ರಾರ್ಥನೆ ಮಾಡಿಸಿಕೊಳ್ಳುತ್ತೇನೆ. ಎಂದು ನಾನು ದಕ್ಷಿಣೇಶ್ವರಕ್ಕೆ ತಲುಪಿದೆನು ಮತ್ತು ಠಾಕುರರಿಗೆ ಒತ್ತಾಯದಿಂದ ಪದೇಪದೇ ಹೇಳತೊಡಗಿದೆನು, ತಾಯಿಯ ಮತ್ತು ಸಹೋದರನ ಅರ್ಥಿಕ ಕಷ್ಟಗಳನ್ನು ದೂರಗೊಳಿಸುವುದಕ್ಕಾಗಿ ತಾವು ಜಗದಂಬೆಮಾತೆಯಲ್ಲಿ ಪ್ರಾರ್ಥನೆ ಮಾಡಲೇಬೇಕು’ ಎಂದು ಹೇಳಿದೆ. ಅದಕ್ಕೆ ಠಾಕುರರು, “ಅಪ್ಪಾ, ತಾಯಿಯ ಬಳಿ ನಾನು ಇಂತಹ ವಿಷಯಗಳನ್ನು ಹೇಳುವುದಿಲ್ಲ. ನೀನು ಸ್ವತಃ ಮಾತೆಗೆ ಈ ವಿಷಯಗಳನ್ನು ಏಕೆ ಹೇಳುವುದಿಲ್ಲ ? ನೀನು ಜಗದಂಬೆಯನ್ನು ನಂಬುವುದಿಲ್ಲ, ಆದುದರಿಂದ ನೀನು ಇಷ್ಟೊಂದು ಕಷ್ಟವನ್ನು ಅನುಭವಿಸುತ್ತಿದ್ದಿಯಾ” ಎಂದು ಹೇಳಿದರು. ಆಗ ನಾನು ಹೇಳಿದೆ, “ನನಗೆ ಜಗದಂಬೆಯನ್ನು ತಿಳಿದುಕೊಳ್ಳುವಷ್ಟು ಜ್ಞಾನವಿಲ್ಲ; ನೀವೇ ನನಗಾಗಿ ಅವಳಲ್ಲಿ ಹೇಳಿ. ನೀವು ಹೇಳಲೇಬೇಕು; ಹಾಗೆ ಮಾಡುವವರೆಗೂ ನಾನು ನಿಮ್ಮನ್ನು ಬಿಡುವುದಿಲ್ಲ” ಎಂದು ಹೇಳಿದೆನು. ಅದಕ್ಕೆ ಪ್ರೀತಿಯಿಂದ ಠಾಕುರರು, “ಇಂದು ರಾತ್ರಿ ಕಾಳಿಕಾಮಂದಿರಕ್ಕೆ ಹೋಗಿ ಜಗದಂಬೆಗೆ ನಮಸ್ಕರಿಸಿ ನೀನು ಏನು ಬೇಡುವೆಯೋ ಅದನ್ನು ತಾಯಿ ಜಗದಂಬೆ ನಿನಗೆ ಕೊಡುವಳು. ನನ್ನ ತಾಯಿ ಚಿನ್ಮಯಿ ಬ್ರಹ್ಮಶಕ್ತಿಯಾಗಿದ್ದಾಳೆ. ಅವಳು ತನ್ನ ಇಚ್ಛೆಯಿಂದ ಈ ಜಗತ್ತಿಗೆ ಜನ್ಮ ನೀಡಿದ್ದಾಳೆ. ಅವಳ ಇಚ್ಛೆ ಇದ್ದರೆ ಅವಳು ಏನು ಸಹ ಮಾಡಬಲ್ಲಳು” ಎಂದು ಹೇಳಿದರು.

ಒಂದು ಪ್ರಹರ ಕಳೆದ ನಂತರ ಠಾಕುರರು ನನಗೆ ಕಾಳಿಮಂದಿರಕ್ಕೆ ಹೋಗಲು ಹೇಳಿದರು. ದೇವಸ್ಥಾನಕ್ಕೆ ಹೋಗುತ್ತ ಹೋಗುತ್ತ ಒಂದು ಪ್ರಕಾರದ ಗಾಢವಾದ ನಶೆಯು ನನ್ನ ಮೇಲೆ ಪ್ರಭಾವ ಬೀರಿತು, ಕಾಲು ನಡುಗುತ್ತಿತ್ತು ಮತ್ತು ತಾಯಿ ಜಗದಂಬೆಯನ್ನು ನಾನು ನಿಜವಾಗಿಯೂ ನೋಡಬಹುದು ಮತ್ತು ಅವಳ ಮುಖದಿಂದ ಶಬ್ದಗಳನ್ನು ಕೇಳಬಹುದು ಈ ರೀತಿಯ ಸ್ಥಿರ ನಂಬಿಕೆಯಿಂದ ಅತ್ಯಂತ ಏಕಾಗ್ರ ಹಾಗೂ ತನ್ಮಯವಾಗಿ ಮೈಮರೆಯಿತು ಮತ್ತು ಅದೇ ವಿಷಯದ ಬಗ್ಗೆ ವಿಚಾರ ಮಾಡುತ್ತಿದ್ದೆನು. ದೇವಸ್ಥಾನದಲ್ಲಿ ಹೋದ ಬಳಿಕ ನೋಡಿದರೆ, ತಾಯಿ ಜಗದಂಬೆಯು ನಿಜವಾಗಿ ಚಿನ್ಮಯಿಯಾಗಿದ್ದಾಳೆ, ನಿಜವಾಗಿಯೂ ಜೀವಂತವಿದ್ದಾಳೆ ಮತ್ತು ಅವಳು ಅನಂತ ಪ್ರೀತಿಯ ಮತ್ತು ಸೌಂದರ್ಯದ ಉತ್ಪತ್ತಿಸ್ಥಾನ ವಾಗಿದ್ದಾಳೆ. ಭಕ್ತಿಯಿಂದ ಮತ್ತು ಪ್ರೇಮದಿಂದ ಹೃದಯದಲ್ಲಿ ಪ್ರೀತಿಯು ಉಕ್ಕಿ ಬರುತ್ತಿತ್ತು; ವ್ಯಾಕುಲತೆಯಿಂದ ಪದೇಪದೇ ನಮಸ್ಕರಿಸುತ್ತ ನಾನು, ‘ತಾಯಿ ನನಗೆ ವಿವೇಕ ಕೊಡು, ವೈರಾಗ್ಯ ಕೊಡು, ಜ್ಞಾನ ಕೊಡು, ಭಕ್ತಿ ಕೊಡು ಹೀಗೆ ಹೇಳುತ್ತ ನನಗೆ ಯಾವಾಗಲೂ ಯಾವ ಅಡಚಣೆ ಇಲ್ಲದೆ ನಿನ್ನ ದರ್ಶನ ಲಭಿಸಲಿ’ ಎಂದು ಹೇಳಿದೆನು. ಹೃದಯವು ಶಾಂತಿಯಿಂದ ತುಂಬಿಹೋಯಿತು. ಎಲ್ಲ ಜಗತ್ತು ಪೂರ್ಣ ಅದೃಶ್ಯವಾಗಿ ಮಾತೆಯು ಹೃದಯವನ್ನಿಡೀ ವ್ಯಾಪಿಸಿ ಬಿಟ್ಟಳು’, ಹೀಗೆ ಎರಡು-ಮೂರು ಬಾರಿ ಅನಿಸಿತು. ಆಗ ಸ್ವಾಮಿ ವಿವೇಕಾನಂದರವರಿಗೆ ಇದು ರಾಮಕೃಷ್ಣ ಪರಮಹಂಸರ ಲೀಲೆಯಾಗಿದೆ, ಎಂಬುದು ಗಮನಕ್ಕೆ ಬಂದಿತು.

ಈ ರೀತಿ ವಿವಿಧ ಪ್ರಸಂಗಗಳಿಂದ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರನ್ನು ತಯಾರಿಸಿ ಧರ್ಮಕಾರ್ಯಕ್ಕಾಗಿ ಸಿದ್ಧಪಡಿಸಿದರು ಮತ್ತು ಅವರಿಂದ ಜಗತ್ತಿನಾದ್ಯಂತ ಹಿಂದೂ ಧರ್ಮಪ್ರಚಾರದ ಮಹಾನ ಕಾರ್ಯವನ್ನು ಮಾಡಿಸಿಕೊಂಡರು.

ಆಧಾರ – www.hindujagruti.org