ಆನ್‌ಲೈನ್ ವಿಶೇಷ ಸಂವಾದ : ‘ರಷ್ಯಾ-ಉಕ್ರೇನ್ ಯುದ್ಧ : ಮೂರನೇ ವಿಶ್ವಯುದ್ಧದ ಪ್ರಾರಂಭವೇ ?’
‘ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆದರೆ ಉಕ್ರೇನ್ ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದು ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಹೇಳುತ್ತಿದ್ದವು; ಆದರೆ ಪ್ರತ್ಯಕ್ಷದಲ್ಲಿ ರಷ್ಯಾವು ಉಕ್ರೇನ್‌ನ ಸೈನ್ಯ ಸಹಿತ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದರೂ ಉಕ್ರೇನ್‌ಗೆ ಸಹಾಯ ಮಾಡಲು ಯಾವುದೇ ದೇಶವು ಪ್ರತ್ಯಕ್ಷವಾಗಿ ಯಾವುದೇ ರೀತಿಯ ಸೇನಾ ಕಾರ್ಯಾಚರಣೆ ಮಾಡಲಿಲ್ಲ. ಆದ್ದರಿಂದ ಈ ಯುದ್ಧದಲ್ಲಿ ಉಕ್ರೇನ್ ಏಕಾಂಗಿಯಾಗಿ ಉಳಿದಿದೆ. ಇವೆಲ್ಲವುದರ ಪರಿಣಾಮ ನಾಳೆ, ಚೀನಾ ಕೂಡ ಅಮೇರಿಕಾ ಮತ್ತು ಪಾಶ್ಚಿಮಾತ್ಯ ದೇಶಗಳ ಬೆದರಿಕೆಗಳಿಗೆ ಹೆದರದೆ, ತೈವಾನ್ ಅನ್ನು ವಶಪಡಿಸಿಕೊಳ್ಳಲು ಯುದ್ಧವನ್ನು ಮಾಡಬಹುದು. ತೈವಾನ್ ನಂತರ ಚೀನಾದ ಮುಂದಿನ ಗುರಿ ಭಾರತವೇ ಆಗಿರಬಹುದು. ರಷ್ಯಾವು ಚೀನಾದ ಬಹುದೊಡ್ಡ ಮಿತ್ರರಾಷ್ಟ್ರವಾಗಿರುವುದರಿಂದ ಭವಿಷ್ಯದಲ್ಲಿ ಭಾರತ ಯಾರ ಮೇಲೂ ಅವಲಂಬಿತರಾಗದೆ ತಾನೇ ತನ್ನ ಸಾಮರ್ಥ್ಯದಿಂದ ಹೋರಾಡಬೇಕಾಗುತ್ತದೆ. ಅದಕ್ಕಾಗಿ ಭಾರತವು ತನ್ನ ಸೇನಾ ಸಾಮರ್ಥ್ಯ ಮತ್ತು ಯುದ್ಧ ಸಾಮಗ್ರಿಗಳ ಆಧುನೀಕರಣದತ್ತ ಗಮನ ಹರಿಸಬೇಕು, ಎಂದು ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್ ಅವರು ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ’ರಷ್ಯಾ-ಉಕ್ರೇನ್ ಯುದ್ಧ: ಮೂರನೇ ವಿಶ್ವಯುದ್ಧದ ಪ್ರಾರಂಭವೇ ?’ ಎಂಬ ‘ವಿಶೇಷದ ಆನ್‌ಲೈನ್ ಸಂವಾದ’ದಲ್ಲಿ ಮಾತನಾಡುತ್ತಿದ್ದರು,
ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಅವರು ಬ್ರಿಗೇಡಿಯರ್ ಮಹಾಜನ್ ಅವರೊಂದಿಗೆ ಸಂವಾದ ನಡೆಸಿದರು. ಆ ಸಮಯದಲ್ಲಿ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಬ್ರಿಗೇಡಿಯರ್ ಮಹಾಜನ್ ಇವರು, ಉಕ್ರೇನ್‌ಗೆ ಸಹಾಯ ಮಾಡಲು ‘ನ್ಯಾಟೋ’ ಸದಸ್ಯ ರಾಷ್ಟ್ರಗಳು ‘ನ್ಯಾಟೋ’ ಪಡೆಗಳನ್ನು ಕಳುಹಿಸಲು ಸಿದ್ಧವಾಗಿಲ್ಲ. ‘ನ್ಯಾಟೋ’ ವಿಶ್ವದ ಅತ್ಯಂತ ಸಮರ್ಥ ಮತ್ತು ಆಧುನಿಕ ಸೇನೆಗಳಲ್ಲಿ ಒಂದಾಗಿದೆ. ಇದು ಯಾವುದೇ ಯುದ್ಧವನ್ನು ಎದುರಿಸಲು ಸಮರ್ಥವಾಗಿದೆ; ಆದರೆ ಪಾಶ್ಚಿಮಾತ್ಯ ದೇಶಗಳು ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿ ಅನೇಕ ವಿಷಯಗಳಲ್ಲಿ ಆಧುನಿಕವಾಗಿದ್ದರೂ, ಯುದ್ಧವನ್ನು ಎದುರಿಸಲು ಅವರಿಗೆ ಧೈರ್ಯವಿಲ್ಲ. ಪರಿಣಾಮವಾಗಿ, ಜಗತ್ತಿನಾದ್ಯಂತ ‘ನ್ಯಾಟೋ’ ಸದಸ್ಯ ರಾಷ್ಟ್ರಗಳು ಕೇವಲ ಬೆದರಿಕೆಗಳನ್ನು ಹಾಕುತ್ತವೆ; ಆದರೆ ಪ್ರತ್ಯಕ್ಷವಾಗಿ ಏನನ್ನೂ ಮಾಡುತ್ತಿಲ್ಲ, ಎಂಬುದು ಚಿತ್ರಣವಾಗಿದೆ. ಆದ್ದರಿಂದ ನಾಳೆ ಚೀನಾವೂ ರಷ್ಯಾದ ಅನುಕರಣೆ ಮಾಡುವ ಮೂಲಕ ತೈವಾನ್ ಮೇಲೆ ತನ್ನ ಹಕ್ಕಿದೆ ಎಂದು ಹೇಳುತ್ತಾ ಆ ಹಕ್ಕನ್ನು ಪಡೆಯಲು ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಬಹುದು. ಕಳೆದ 8 ವರ್ಷಗಳಿಂದ, ಚೀನಾ ‘ಗ್ರೇ ವಾರ್ ಫೇರ್ ಝೋನ್’ (ಪ್ರತ್ಯಕ್ಷ ಯುದ್ಧ ಮಾಡದೇ ನಿರಂತರ ಯುದ್ಧಜನ್ಯ ಸ್ಥಿತಿ ನಿರ್ಮಿಸುವುದು) ಅನ್ನು ರಚಿಸಿದೆ. ಇದರಲ್ಲಿ ರಷ್ಯಾಕ್ಕಿಂತ ಚೀನಾ ಬಹಳ ಮುಂದಿದೆ ಎಂದು ಹೇಳಿದರು.
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾಟುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಇತರೆ ವಸ್ತುಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ, ಭಾರತದಲ್ಲಿನ ನಮ್ಮ ಆಂತರಿಕ ವಿವಾದಗಳು ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳನ್ನು ನಿಲ್ಲಿಸುವ ಮೂಲಕ ನಮ್ಮ ದೇಶವನ್ನು ಎಲ್ಲಾ ರೀತಿಯಲ್ಲೂ ಆತ್ಮನಿರ್ಭರ (ಸ್ವಾವಲಂಬಿ)ಯಾಗಿಸಲು ಎಲ್ಲರೂ ಒಗ್ಗೂಡಬೇಕು. ಕಾಶ್ಮೀರದಲ್ಲಿನ ಭಯೋತ್ಪಾದಕ ಚಟುವಟಿಕೆಗಳು, ನಕಲಿ ನೋಟುಗಳ ವ್ಯವಹಾರ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಒಳನುಸುಳುವಿಕೆ, ನಾರ್ಕೋ ಟೆರರಿಸಮ್ ಇತ್ಯಾದಿಗಳ ವಿರುದ್ಧ ಕಾರ್ಯಾಚರಣೆ ಮಾಡಿ ಅವರನ್ನು ಸದೆಬಡಿಯಬೇಕು. ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಎಂದು ಕೊನೆಯಲ್ಲಿ ಮಹಾಜನ್‌ರವರು ಹೇಳಿದರು.