೧. ವ್ಯುತ್ಪತ್ತಿ
ಭಸ್ಮ ಶಬ್ದದಲ್ಲಿನ ‘ಭ’ ಎಂದರೆ ‘ಭರ್ತ್ಸನಮ್’ ಅಂದರೆ ‘ನಾಶವಾಗಲಿ’. ಭಸ್ಮ ಶಬ್ದದಲ್ಲಿನ ‘ಸ್ಮ’ ಎಂದರೆ ಸ್ಮರಣೆ. ಭಸ್ಮದಿಂದ ಪಾಪವು ನಾಶವಾಗಿ ಈಶ್ವರನ ಸ್ಮರಣೆಯಾಗುತ್ತದೆ. ಶರೀರ ನಶ್ವರ. ಇದನ್ನು ಸತತವಾಗಿ ಸ್ಮರಣೆಯಲ್ಲಿಡುವುದರ ಪ್ರತೀಕವೇ ಭಸ್ಮ; ಇದು ಭಸ್ಮ ಶಬ್ದದ ಭಾವಾರ್ಥವಾಗಿದೆ.
೨. ವ್ಯಾಖ್ಯೆ
‘ಭಸ್ಮವೆಂದರೆ ಯಾವುದೇ ವಸ್ತುವನ್ನು ಸುಟ್ಟ ನಂತರ ಉಳಿದಿರುವ ಬೂದಿ’, ಎಂದು ತಪ್ಪು ತಿಳುವಳಿಕೆಯಿದೆ. ಯಜ್ಞದಲ್ಲಿ ಆಹುತಿ ನೀಡಿದ ಸಮಿಧೆ ಮತ್ತು ತುಪ್ಪವು ಉರಿದು ಹೋದ ನಂತರ ಉಳಿದ ಭಾಗಕ್ಕೆ ಭಸ್ಮವೆನ್ನುತ್ತಾರೆ. ಕೆಲವು ಜನರು ಪೂಜೆಯನ್ನು ಮಾಡಲು ದೇವತೆಗೆ ಬೂದಿಯಿಂದ ಅಭಿಷೇಕ ಮಾಡುತ್ತಾರೆ. ದೇವತೆಯ ಮೂರ್ತಿಯ ಸ್ಪರ್ಶದಿಂದ ಪವಿತ್ರವಾದ ಈ ಬೂದಿಯನ್ನೂ ಭಸ್ಮವೆಂದು ಉಪಯೋಗಿಸುತ್ತಾರೆ.
೩. ಭಸ್ಮದ ಬೋಧನೆ
ಮಾನವೀ ದೇಹವು ನಶ್ವರವಾಗಿರುವುದರಿಂದ ಮರಣದ ನಂತರ ಈ ದೇಹವು ಸುಟ್ಟು ಬೂದಿಯಾಗುತ್ತದೆ. ಆದುದರಿಂದ ಯಾರೂ ದೇಹಾಸಕ್ತಿಯನ್ನು ಇಟ್ಟುಕೊಳ್ಳಬಾರದು. ಮೃತ್ಯು ಯಾವುದೇ ಕ್ಷಣ ಬರಬಹುದು. ಇದರ ಅರಿವನ್ನಿಟ್ಟುಕೊಂಡು ಬಹುಪ್ರಯತ್ನದಿಂದ ದೊರಕಿರುವ ಈ ಮನುಷ್ಯಜನ್ಮವನ್ನು ಸಾರ್ಥಕ ಮಾಡಿಕೊಳ್ಳಲು ಮತ್ತು ನಮ್ಮ ಪ್ರತಿಯೊಂದು ಕ್ಷಣವನ್ನು ಪವಿತ್ರ ಹಾಗೂ ಆನಂದಮಯಗೊಳಿಸಲು ಪ್ರಯತ್ನಿಸಬೇಕು ಎಂಬುದನ್ನೇ ಭಸ್ಮವು ಸೂಚಿಸುತ್ತದೆ.