ಹೊಸ ವರ್ಷವಾದ ಯುಗಾದಿ ಹಬ್ಬದ ಆರೋಗ್ಯ ನಿಯಮಗಳು !

ನಮ್ಮ ಋಷಿ-ಮುನಿಗಳು ಹೇಳಿದಂತೆ ಯುಗಾದಿಯಂದು ಬಾಗಿಲಿಗೆ ಕಟ್ಟಿದ ತೋರಣದ ಕೆಳಗಿನಿಂದ ಹೋಗುವವರು, ಋತು-ಬದಲಾವಣೆಗೆ ಸಂಬಂಧಿಸಿದ ರೋಗಗಳಿಂದ ರಕ್ಷಿಸಲ್ಪಡುತ್ತಾರೆ. ಹೊಸ ವರ್ಷದಂದು ಸೂರ್ಯೋದಯದ ಸಮಯಕ್ಕೆ ಭಗವಾನ ಸೂರ್ಯನಾರಾಯಣನಿಗೆ ಅರ್ಘ್ಯ ನೀಡಿ ಮತ್ತು ಶಂಖನಾದವನ್ನು ಮಾಡಿ ಹೊಸ ವರ್ಷವನ್ನು ಸ್ವಾಗತಿಸಬೇಕು. ಕಳೆದ ವರ್ಷದಲ್ಲಿ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗಾಗಿ ಭಗವಂತನಲ್ಲಿ ಕ್ಷಮೆಯಾಚಿಸಬೇಕು ಮತ್ತು ಮುಂಬರುವ ವರ್ಷದಲ್ಲಿ ತಪ್ಪುಗಳಿಂದ ದೂರವಿದ್ದು, ಸನ್ಮಾರ್ಗದಲ್ಲಿ ನಡೆಯುವ ಮನುಷ್ಯ-ಜೀವನದ ಪರಮ ಧ್ಯೇಯವಾದ ಅಂದರೆ ಪರಮಾತ್ಮನ ಪ್ರಾಪ್ತಿಯನ್ನು ಮಾಡಿಕೊಳ್ಳುವ ಸಂಕಲ್ಪ ಮಾಡಬೇಕು. ‘ಹೊಸ ವರ್ಷ ಮಂಗಲಮಯವಾಗಲಿ, ಆನಂದಮಯವಾಗಲಿ. ಭಾರತೀಯ ಸಂಸ್ಕೃತಿ, ಹಾಗೆಯೇ ಸದ್ಗುರು ಮತ್ತು ಮಹಾಪುರುಷರ ಜ್ಞಾನದಿಂದ ಎಲ್ಲರ ಜೀವನವು ಅಭಿವೃದ್ಧಿ ಹೊಂದಲಿ.’ ಈ ರೀತಿ ಪರಸ್ಪರರಿಗೆ ಶುಭಾಶಯ ನೀಡಿ ಹೊಸ ವರ್ಷವನ್ನು ಸ್ವಾಗತಿಸಬೇಕು.

ಕಹಿಬೇವನ್ನು ಏಕೆ ಸೇವಿಸುತ್ತಾರೆ ?

ಚೈತ್ರ ತಿಂಗಳಿಂದ ಬಿಸಿಲಿನ ಪ್ರಭಾವ ಹೆಚ್ಚಾಗುತ್ತದೆ, ಇದರಿಂದ ಋತುಮಾನ ಕಾಯಿಲೆಗಳು, ಉದಾ ಬೊಕ್ಕೆಗಳು, ಗುಳ್ಳೆ, ಬೆವರುಸಾಲೆ ಮತ್ತು ಇತರ ಚರ್ಮರೋಗ ಗಳಿಂದ ರಕ್ಷಣೆಯಾಗಲು ಕಹಿಬೇವಿನ ಸೇವನೆ ಉಪಯುಕ್ತವಾಗಿರುತ್ತದೆ. ಈ ದಿನ ಆರೋಗ್ಯರಕ್ಷಣೆ, ಹಾಗೆಯೇ ಚಂಚಲ ಮನಸ್ಸಿನ ಸ್ಥಿರತೆಗಾಗಿ ಕಹಿಬೇವಿನ ಎಲೆಗಳನ್ನು ಕಲ್ಲುಸಕ್ಕರೆ, ಮೆಣಸಿನಕಾಳು, ಅಜ್ವಾನ ಇತ್ಯಾದಿಗಳೊಂದಿಗೆ ಪ್ರಸಾದರೂಪದಲ್ಲಿ ಸೇವಿಸುವ ನಿಯಮವಿದೆ. ತಾತ್ತ್ವಿಕ ದೃಷ್ಟಿಯಿಂದ ನೋಡಿದರೆ ನಮ್ಮ ಜೀವನದಲ್ಲಿ ವ್ಯವಹರಿಸುವಾಗ ಕಹಿಯಾದ ಗುಟುಕುಗಳನ್ನು ಕುಡಿಯುವ ಪ್ರಸಂಗಗಳು ಬರುತ್ತಿರುತ್ತವೆ; ಆದುದರಿಂದ ಕಹಿಬೇವನ್ನು ಸೇವಿಸುವಾಗ, ‘ಈ ವರ್ಷದಲ್ಲಿ ಪ್ರಾರಬ್ಧದಿಂದ ಬರುವ ದುಃಖ, ಸಂಕಟಗಳು, ಪ್ರತಿಕೂಲತೆಗಳು, ಅವಮಾನ ಇತ್ಯಾದಿಗಳ ಕಹಿ ಗುಟುಕುಗಳನ್ನು ಕುಡಿಯಬೇಕಾದ ಪ್ರಸಂಗ ಬಂದರೆ ನಾನು ದೇವರ ಕೃಪೆಯೆಂದು ತಿಳಿದು ಜೀರ್ಣಿಸಿಕೊಳ್ಳುತ್ತೇನೆ’, ಎಂಬ ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕು. (ಆಧಾರ : ಮಾಸಿಕ ‘ಋಷಿಪ್ರಸಾದ’, ಮಾರ್ಚ್ ೨೦೧೭)