ಒಮ್ಮೆ ಒಬ್ಬ ವ್ಯಕ್ತಿಯು ಜಗದ್ಗುರು ಶಂಕರಾಚಾರ್ಯರಿಗೆ, ದೇವರಿಗೆ ನೈವೇದ್ಯವನ್ನು ಏಕೆ ತೋರಿಸಬೇಕು ? ನಾವು ತೋರಿಸುವ ನೈವೇದ್ಯದಲ್ಲಿನ ಏನನ್ನೂ ದೇವರು ತಿನ್ನುವುದಿಲ್ಲ ಅಥವಾ ಆ ಪದಾರ್ಥಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ, ಹೀಗಿರುವಾಗ ನೈವೇದ್ಯವನ್ನು ಏಕೆ ತೋರಿಸಬೇಕು ? ನೈವೇದ್ಯ ತೋರಿಸುವುದೆಂದರೆ ಒಂದು ರೀತಿಯಲ್ಲಿ ತೋರಿಕೆ ಆಗುವುದಿಲ್ಲವೇ ? ಎಂದು ಕೇಳಿದನು.
ಶಂಕರಾಚಾರ್ಯರು ಸ್ವಲ್ಪವೂ ವಿಚಲಿತರಾಗದೇ, ಶಾಂತ ರೀತಿಯಿಂದ, “ನೀನು ದೇವರಿಗೆ ನೈವೇದ್ಯಕ್ಕೆಂದು ಪೇಡಾಗಳನ್ನು ತೆಗೆದುಕೊಂಡು ಹೋಗುವಾಗ, ರಸ್ತೆಯಲ್ಲಿ ಯಾರಾದರೂ ಭೇಟಿಯಾದರೆ, ಅವರಿಗೆ ನೀನು ಏನು ಹೇಳುತ್ತಿ ? ಇವು ನನ್ನ ಪೇಡಾ ಮತ್ತು ನಾನು ಇವುಗಳನ್ನು ದೇವರಿಗಾಗಿ ತಂದಿದ್ದೇನೆ; ಎಂದು ಹೇಳುತ್ತೀ; ಆದರೆ ಅದೇ ಪೇಡಾಗಳನ್ನು ಯಾವಾಗ ನೀನು ದೇವರಿಗೆ ನೈವೇದ್ಯವನ್ನು ತೋರಿಸಿ ತರುತ್ತಿಯೋ, ಆಗ ನಿನಗೆ ಯಾರಾದರೂ ಕೇಳಿದರೆ, ನೀನು ಏನು ಹೇಳುತ್ತೀ ? ಇದು ದೇವರ ಪ್ರಸಾದವಾಗಿದೆ, ಇದು ಶ್ರೀರಾಮನ ಅಥವಾ ಹನುಮಂತನ ಪ್ರಸಾದವಾಗಿದೆ ಎಂದು ಹೇಳುತ್ತೀ. ಆಗ ಇದು ನನ್ನದಲ್ಲ, ಭಗವಂತನದ್ದಾಗಿದೆ, ಎಂಬ ಭಾವನೆಯು ನಿನ್ನ ಮನಸ್ಸಿನಲ್ಲಿ ಮೂಡುತ್ತದೆ. ಇದೇ ಎಲ್ಲಕ್ಕಿಂತ ಮಹತ್ವದ ವಿಷಯವಾಗಿದೆ. ಆ ಪ್ರಸಾದದಿಂದ ನಿನ್ನಲ್ಲಿನ ‘ನಾನು’ ಎಂಬುದು ಹೊರಗೆ ಹೋಗುತ್ತದೆ. ಭಗವಂತನಿಗೆ ನೈವೇದ್ಯವನ್ನು ತೋರಿಸುವುದರಿಂದ ಮನುಷ್ಯನು ಅವನ ಮುಂದೆ ನತಮಸ್ತಕನಾಗುತ್ತಾನೆ, ಅಹಂಕಾರರಹಿತನಾಗುತ್ತಾನೆ. ಅವನಿಗೆ ಸ್ವಚ್ಛ ಮತ್ತು ನಿರ್ಮಲ ಮನಸ್ಸಿನ ಅನುಭೂತಿ ಬರುತ್ತದೆ. ಇದೇ ನೈವೇದ್ಯ ಮತ್ತು ಪ್ರಸಾದದ ಮಹತ್ವವಾಗಿದೆ !”, ಎಂದರು.
ಆದುದರಿಂದಲೇ ಹಬ್ಬ-ಹರಿದಿನಗಳಂದು ಮನೆಯಲ್ಲಿ ಏನಾದರೂ ಸಿಹಿ ಅಡುಗೆಯನ್ನು ಮಾಡಿದ್ದರೆ ಅಥವಾ ಇತರ ದಿನಗಳಲ್ಲಿಯೂ ದೇವರಿಗೆ ನೈವೇದ್ಯವನ್ನು ತೋರಿಸುವ ಪರಿಪಾಠವು ಹಿಂದಿನಿಂದ ಹಿಂದೂ ಸಂಸ್ಕೃತಿಯಲ್ಲಿ ಬಂದಿದೆ. ಪ್ರತಿಯೊಂದು ಪ್ರಸಂಗದಲ್ಲಿ ದೇವರ ನೆನಪಾಗಬೇಕು, ಎಂಬ ಒಂದು ಉದ್ದೇಶವಂತೂ ಇದ್ದೇ ಇದೆ; ಅದರ ಜೊತೆಗೆ ನನ್ನತನ ನಾಶವಾಗಬೇಕು ಎಂಬ ಉದ್ದೇಶವೂ ಇದೆ.
(ಆಧಾರ : ವಾಟ್ಸ್ ಆಪ್)