೧. ಮನುಷ್ಯರನ್ನು ಪೀಡಿಸುವ ರಾಹುದೋಷಕ್ಕಾಗಿ ಶಿವೋಪಾಸನೆಯು ಆವಶ್ಯಕವಾಗಿದೆ !
‘ಪಿತೃದೋಷವು ರಾಹು ದೋಷದ ಹೆಸರಿನಿಂದ ಗುರುತಿಸಲ್ಪಡುತ್ತದೆ. ರಾಹುವಿನ ದೋಷವು ಎಷ್ಟು ಕೆಟ್ಟದ್ದಾಗಿರುತ್ತದೆಯೆಂದರೆ, ಜೀವಿಸುವುದೇ ಕಠಿಣವಾಗುತ್ತದೆ. ಕೆಲವು ದೋಷಗಳು ಮನೆತನದಲ್ಲಿನ ವ್ಯಕ್ತಿಗಳಿಗೆ ನಿರಂತರ ತೊಂದರೆ ನೀಡುತ್ತವೆ. ಕೆಲವು ಸ್ಥಳಗಳಲ್ಲಿ ಯಾವಾಗಲೂ ಆರ್ಥಿಕ ಸಂಕಟಗಳು ಬರುತ್ತವೆ. ಕೆಲವು ಮನೆಗಳಲ್ಲಿ ಎಲ್ಲ ಸುಖಸೌಲಭ್ಯಗಳಿದ್ದರೂ ಅಶಾಂತಿ ಇರುತ್ತದೆ. ಕೆಲವು ಮನೆಗಳಲ್ಲಿ ಯಾವುದೇ ಕಾರಣವಿಲ್ಲದಿರುವಾಗ ಯಾವಾಗಲೂ ಜಗಳಗಳಾಗುತ್ತವೆ. ಕೆಲವು ಮನೆಗಳಲ್ಲಿ ಭೋಜನ ತಯಾರಿದ್ದರೂ ಶಾಂತರೀತಿಯಿಂದ ತಿನ್ನಲು ಆಗುವುದಿಲ್ಲ. ಈ ರೀತಿ ಒಂದಲ್ಲ ಎರಡು, ಅನೇಕ ರೀತಿಗಳಲ್ಲಿ ರಾಹುದೋಷವು ಪೀಡಿಸುತ್ತದೆ. ಇವೆಲ್ಲವುಗಳಿಗೆ ಉಪಾಯವೆಂದರೆ ಶಿವೋಪಾಸನೆ ಮಾಡುವುದು. ಭಗವಾನ ಶಂಕರನ ಉಪಾಸನೆ ಮಾಡುವುದಾಗಿದೆ. ಉಪಾಸಕನ ಉಪಾಸನೆಯು ಹೆಚ್ಚಾದಂತೆ ಅವನು ಈ ದೋಷಗಳಿಂದ ಮುಕ್ತನಾಗುತ್ತಾನೆ. ಶಿವೋಪಾಸನೆಯಿಂದ ರಾಹುವಿನ ದೋಷವು ದೂರವಾಗುತ್ತದೆ ಮತ್ತು ವ್ಯಕ್ತಿಯು ತೊಂದರೆಗಳಿಂದ ಮುಕ್ತನಾಗುತ್ತಾನೆ. ಶಿವೋಪಾಸನೆ ಎಂದರೆ ರುದ್ರಾಭಿಷೇಕ ಮಾಡುವುದು ಅಥವಾ ಸೋಮವಾರದಂದು ಉಪವಾಸ ಮಾಡುವುದು ಮತ್ತು ಅದನ್ನು ಸಂಜೆಯ ಸಮಯದಲ್ಲಿ (ಪ್ರದೋಷಕಾಲ) ಬಿಡುವುದು. ಸೋಮವಾರವು ಶಿವನ ವಾರವಾಗಿದೆ. ಆ ದಿನ ಸಾಧ್ಯವಾದರೆ ಪೂರ್ಣ ಉಪವಾಸ ಮಾಡಬೇಕು. (ಫಲಾಹಾರ ಬೇಡ) ಸಾಧ್ಯವಾದರೆ ನಿರ್ಜಲ (ನೀರು ಕುಡಿಯದೇ) ಉಪವಾಸ ಮಾಡಬೇಕು ಮತ್ತು ಸಾಯಂಕಾಲವೇ ನೀರು ಕುಡಿಯಬೇಕು. ‘ಓಂ ನಮಃ ಶಿವಾಯ’ ನಾಮಜಪವನ್ನು ಸತತವಾಗಿ ಮಾಡುತ್ತಿರಬೇಕು.
೨. ದತ್ತಾತ್ರೇಯರ ಉಪಾಸನೆಯನ್ನು ಮಾಡಿದರೆ ಶಿವೋಪಾಸನೆಯ ಎಲ್ಲ ಫಲಗಳು ದೊರಕುವುದು
ಶ್ರೀ ದತ್ತಾತ್ರೇಯ ಭಗವಂತನ ಮೂರ್ತಿಯು ಶಿವಮೂರ್ತಿಯೇ ಆಗಿದೆ. ಶ್ರೀ ದತ್ತಾತ್ರೇಯರಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಈ ೩ ಮೂರ್ತಿಗಳ ಸಮಾವೇಶವಿದೆ. ಶ್ರೀ ದತ್ತಾತ್ರೇಯರ ಉಪಾಸನೆಯನ್ನು ಮಾಡಿದರೆ ಶಿವೋಪಾಸನೆಯ ಎಲ್ಲ ಫಲಗಳು ಸಿಗುತ್ತವೆ. ಮನೆಯಲ್ಲಿ ಶುದ್ಧ ತುಪ್ಪದ ದೀಪವನ್ನು ಹಚ್ಚಬೇಕು, ಧೂಪ ಹಾಕಬೇಕು, ರುದ್ರಾಕ್ಷಿ ಮಾಲೆಯನ್ನು ಧರಿಸಬೇಕು, ಸಾಧ್ಯವಿದ್ದಷ್ಟು ಉಪವಾಸದ ದಿನ ನೀವು ಯಾರನ್ನೂ ಸ್ಪರ್ಶಿಸಬಾರದು ಅಥವಾ ಯಾರ ಸ್ಪರ್ಶವಾಗದಂತೆ ಎಚ್ಚರ ವಹಿಸಬೇಕು. ಗಣಪತಿ ದೇವರು ಎಷ್ಟೋ ಮನೆತನಗಳ ಅಂದರೆ ಕುಟುಂಬಗಳ ಕುಲದೇವರಾಗಿದ್ದಾರೆ. ಅವರು ಗಣಪತಿಯ ಉಪಾಸನೆಯನ್ನು ಮಾಡಲೇಬೇಕು; ಆದರೆ ಯಾರ ಕುಲದೇವತೆ ಗಣಪತಿಯಲ್ಲವೋ ಅವರು ಸಹ ಶ್ರೀಗಣೇಶನ ಉಪಾಸನೆಯನ್ನು ಮಾಡಿ ಅವರನ್ನು ಪ್ರಸನ್ನಗೊಳಿಸಬೇಕು. ಗಣಪತಿಯು ರಾಹುವಿನ ಅಧಿದೇವತೆಯಾಗಿರುವುದರಿಂದ ರಾಹುವಿನ ಪೀಡೆ ಇರುವವರು ಗಣಪತಿಯನ್ನು ಅವಶ್ಯ ಪೂಜಿಸಬೇಕು. ರಾಹುವಿನ ದೋಷವು ತಲೆಮಾರುಗಳಿಂದ ಮುಂದುವರಿಯುತ್ತಿರುತ್ತದೆ. ಅದು ಬೇಗನೆ ಕೊನೆಗೊಳ್ಳುವುದಿಲ್ಲ. ಅದು ಮನೆತನದಿಂದ ಬಂದ ದೋಷವಾಗಿರುವುದರಿಂದ, ಅವರೆಲ್ಲರೂ ಗಣಪತಿಯ ಉಪಾಸನೆಯನ್ನು ಅವಶ್ಯ ಮಾಡಬೇಕು.
೩. ಮನೆಯಲ್ಲಿ ಎಲ್ಲೆಡೆ ಕೆಂಪು ಇರುವೆಗಳು ಬರುವುದು, ಇದು ಮನೆತನಕ್ಕಿರುವ ದೋಷದ ಪರಿಣಾಮವಾಗಿದೆ !
ಕೆಲವು ಮನೆಗಳಲ್ಲಿ ಎಲ್ಲೆಡೆ ಕೆಂಪು ಇರುವೆಗಳು ಹುಟ್ಟಿಕೊಳ್ಳು ತ್ತವೆ. ಎಷ್ಟೇ ಔಷಧಿ ಮಾಡಿದರೂ ಪರಿಹಾರ ಸಿಗುವುದಿಲ್ಲ. ಒಂದು ವೇಳೆ ಮನೆಯಲ್ಲಿ ಮನೆತನದ ದೋಷವಿದ್ದರೆ, ಕೆಂಪು ಇರುವೆಗಳು ಯಾವಾಗಲೂ ಹುಟ್ಟಿಕೊಳ್ಳುತ್ತವೆ. ಅದಕ್ಕಾಗಿ ಮನೆಯಲ್ಲಿ ಎಲ್ಲೆಡೆ ಮೂಲೆಮೂಲೆಗಳಲ್ಲಿ ಕರ್ಪೂರವನ್ನು ಪುಡಿ ಮಾಡಿ ಅದರ ಪುಡಿಯನ್ನು ಉದುರಿಸಬೇಕು. ಕರ್ಪೂರ ಅತ್ಯಂತ ಪವಿತ್ರವಾಗಿರುವುದರಿಂದ ಮನೆಯಲ್ಲಿನ ಇಂತಹ ದೋಷವು ಕಡಿಮೆಯಾಗುತ್ತದೆ.
೪. ವೈದ್ಯಕೀಯ ಚಿಕಿತ್ಸೆಯಿಂದ ರಾಹು ದೋಷವನ್ನು ದೂರ ಮಾಡಲು ಬರುವುದಿಲ್ಲ.
ಮಕ್ಕಳಾಗದಿರುವುದು, ಗರ್ಭಧಾರಣೆಯಾದರೂ ಗರ್ಭವು ನಿಲ್ಲದಿರುವುದು, ತಾಯಿಯ ಉದರದಲ್ಲಿ ೫-೬ ತಿಂಗಳು ಗರ್ಭವು ಬೆಳೆದು ನಂತರ ತಾನಾಗಿಯೇ ಗರ್ಭಪಾತವಾಗುವುದು, ಮಗು ಜನಿಸಿದ ನಂತರ ಒಂದೆರಡು ತಿಂಗಳಲ್ಲಿ ಅಥವಾ ವರ್ಷದಲ್ಲಿ ತೀರಿ ಹೋಗುವುದು, ಜನಿಸಿದ ಮಗು ಅಂಗವಿಕಲ (ವಿದ್ರೂಪ)ನಾಗಿ ರುವುದು, ಕೆಲವೊಮ್ಮೆ ಮಂದ ಬುದ್ಧಿಯ, ವಿಕಸನಗೊಳ್ಳದ ಮಗು ಜನ್ಮಕ್ಕೆ ಬರುವುದು, ಇವೆಲ್ಲವುಗಳು ತಲೆಮಾರಿನ ಮತ್ತು ಅನುವಂಶಿಕ ದೋಷಗಳಾಗಿರುತ್ತವೆ. ಇವು ರಾಹುವಿನ ದೋಷಗಳಾಗಿರುತ್ತವೆ. ಈ ರಾಹು ದೋಷಗಳಿಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲ.
೫. ಅದೃಶ್ಯ ಅಡಚಣೆಗಳು ಯೋಗ್ಯ ಮಾರ್ಗದರ್ಶನದಿಂದ ಮಾಡಿದ ಮಂತ್ರೋಚ್ಚಾರಗಳಿಂದಲೇ ದೂರವಾಗುವುದು
ಸಂತಾನವಾಗದಿರಲು ಬಹಳ ಕಾರಣಗಳಿರುತ್ತವೆ. ನಿಮ್ಮ ಮನೆಯಲ್ಲಿ ಬಂದ ಹಣ ಯಾವ ರೀತಿಯದ್ದಾಗಿರುತ್ತದೆ, ಜನರನ್ನು ಎಷ್ಟು ದುಃಖಕ್ಕೀಡು ಮಾಡಿದ್ದೀರಿ, ಯಾರನ್ನು ಎಷ್ಟು ದೋಚಿರುವಿರಿ, ಬಡವ, ಅನಾಥ, ವಿಧವಾ ಸ್ತ್ರೀಯರ ಹಣವು ಅದರಲ್ಲಿದೆಯೇ ? ಇದಕ್ಕೆ ಹೊರತಾಗಿ ಮೃತ್ಯು ಹೊಂದಿದ ಪೂರ್ವಜರಿಗೆ ಗತಿ ಪ್ರಾಪ್ತವಾಗಿದೆಯೇ ? ಕೆಲವು ದೃಶ್ಯ ಮತ್ತು ಕೆಲವು ಅದೃಶ್ಯ ಅಡಚಣೆ ಗಳಿರುತ್ತವೆ, ಅವುಗಳನ್ನು ದೂರ ಮಾಡಬೇಕಾಗುತ್ತದೆ. ದೃಶ್ಯ ಅಡಚಣೆಗಳನ್ನು ದೂರ ಮಾಡಬಹುದು; ಆದರೆ ಅದೃಶ್ಯ ಅಡಚಣೆಗಳು ಯೋಗ್ಯ ಮಾರ್ಗದರ್ಶನದಿಂದ ವ್ಯವಸ್ಥಿತ ಶಾಸ್ತ್ರೋಕ್ತ ಪದ್ಧತಿ ಯಿಂದ ಮಾಡಿದ ಮಂತ್ರೋಚ್ಚಾರಗಳಿಂದಲೇ ದೂರವಾಗುತ್ತವೆ.
೬. ತೀರ್ಥಕ್ಷೇತ್ರಗಳಲ್ಲಿ ತ್ರಿಪಿಂಡಿ ಶ್ರಾದ್ಧವನ್ನು ಮಾಡಬೇಕಾಗುವುದು
ತ್ರ್ಯಂಬಕೇಶ್ವರ ಅಥವಾ ನೃಸಿಂಹವಾಡಿಗೆ ಹೋಗಿ ತ್ರಿಪಿಂಡಿ ಶ್ರಾದ್ಧವನ್ನು ಮಾಡಬೇಕಾಗುತ್ತದೆ. ತೀರ್ಥಕ್ಷೇತ್ರಗಳ ಸ್ಥಳಗಳಲ್ಲಿ ೩ ದಿನಗಳ ಕಾಲ ಇರಬೇಕಾಗುತ್ತದೆ. ಕ್ಷೌರವನ್ನು ಮಾಡಿಕೊಂಡು ಎಲ್ಲ ನಿಯಮಗಳನ್ನು ಪಾಲಿಸಿ ಮೂರೂ ದಿನ ಸೂತಕ (ಮರಣಾಶೌಚ) ವನ್ನು ಪಾಲಿಸಬೇಕಾಗುತ್ತದೆ, ಮನೆಯಲ್ಲಿ ಎಲ್ಲರೂ ಸೂತಕವನ್ನು ಪಾಲಿಸಬೇಕಾಗುತ್ತದೆ.
೭. ಅತೃಪ್ತವಾಗಿ ಉಳಿದ ಇಚ್ಛೆಯಿಂದ ದೋಷವು ಉತ್ಪನ್ನವಾಗುವುದು
ಎರಡನೇಯದೆಂದರೆ, ಮನೆತನದಲ್ಲಿ ೩ ಪೀಳಿಗೆಗಳಲ್ಲಿ ಯಾರಾದೊಬ್ಬರಿಗೆ ಗತಿ ಅಥವಾ ಮುಕ್ತಿ ಸಿಕ್ಕಿರದಿದ್ದರೂ ಈ ತೊಂದರೆಯಾಗುತ್ತದೆ. ೩ ಪೀಳಿಗೆ ಅಂದರೆ ಬಹಳ ದೊಡ್ಡ ಕಾಲವಾಗಿದೆ. ಈ ಅವಧಿಯಲ್ಲಿ ಬಹಳ ಜನರ ಮೃತ್ಯುವಾಗಿರುತ್ತದೆ. ಒಬ್ಬರಲ್ಲ ಒಬ್ಬರ ಇಚ್ಛೆ ಅತೃಪ್ತವಾಗಿ ಉಳಿದಿರುತ್ತದೆ. ಇದರಿಂದ ದೋಷವು ಉದ್ಭವಿಸುತ್ತದೆ. ಆ ಇಚ್ಛೆಯನ್ನು ಪೂರ್ಣ ಮಾಡಬೇಕಾಗುತ್ತದೆ.
ಪ್ರತಿಯೊಂದು ಮನೆತನದಲ್ಲಿ ಒಂದಿಲ್ಲೊಂದು ದೋಷ ಇದ್ದೇ ಇರುತ್ತದೆ. ಕೆಲವರಿಗೆ ಅದು ತಿಳಿಯುತ್ತದೆ ಮತ್ತು ಕೆಲವರಿಗೆ ಅದು ತಿಳಿಯುವುದಿಲ್ಲ. ನೌಕರಿ, ಉದ್ಯೋಗ, ವ್ಯವಸಾಯದಲ್ಲಿ ಯಶಸ್ಸು ಸಿಗದಿರುವುದು, ನಿತ್ಯವೂ ಏನಾದರೂ ಅಡಚಣೆ ಬರುತ್ತಿರುವುದು. ಇವೆಲ್ಲ ಅತೃಪ್ತ ಆತ್ಮಗಳ ದೋಷವಾಗಿರುತ್ತದೆ.
(ಆಧಾರ : ಮನೆತನದಲ್ಲಿನ ದೋಷ, ‘(ದಿ.) ಪ.ಪೂ. ರಾಮಕೃಷ್ಣ ಕ್ಷೀರಸಾಗರ ಮಹಾರಾಜರ ಗುರುವಾಣಿ’, ಪುಟ ೧೦)