ಕೇರಳದ ಮೊನ್ಸೂನ ಮಾವುಂಕಳ ಪ್ರಕರಣ ಮತ್ತು ಪೊಲೀಸರ ಸಂಶಯಾಸ್ಪದ ನಡವಳಿಕೆ !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

‘೬ ಅಕ್ಟೋಬರ್ ೨೦೨೧ ರಂದು ಕೇರಳ ಉಚ್ಚ ನ್ಯಾಯಾಲಯವು ಮೊನ್ಸೂನ ಮಾವುಂಕಳ ಪ್ರಕರಣದ ತನಿಖೆಯನ್ನು ಹೊರರಾಜ್ಯದ ತನಿಖಾ ದಳದಿಂದ ನಡೆಸಬೇಕೆ ?’ ಎನ್ನುವ ಬಗ್ಗೆ ಕೇರಳ ಸರಕಾರ ಮತ್ತು ಕೇರಳ ಪೊಲೀಸರ ಅಭಿಪ್ರಾಯವನ್ನು ಕೋರಿದೆ. ಮೊನ್ಸೂನ ಮಾವುಂಕಳ ಬಳಿ ಅಜಿತ ಎಂಬವನು ವಾಹನ ಚಾಲಕನೆಂದು ಕಾರ್ಯ ನಿರ್ವಹಿಸುತ್ತಿದ್ದನು. ಅಜಿತನು ‘ತನ್ನ ಮಾಲೀಕ ಮೊನ್ಸೂನ ಮಾವುಂಕಳನ ವ್ಯವಹಾರ ಅಥವಾ ಉದ್ಯೋಗ ಕಾನೂನುಬಾಹಿರವಾಗಿರಬೇಕು’, ಎನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದನು. ಈ ಕಾರಣದಿಂದ ಅಜಿತನಿಗೆ ಬೆದರಿಕೆ ಕರೆಗಳು ಬರುತ್ತಿದ್ದವು.

ಮೊನ್ಸೂನ ಮಾವುಂಕಳ ಯಾರು ?

ಮೊನ್ಸೂನ ಮಾವುಂಕಳನ ಬಳಿ ಆತ ಹೇಳಿಕೊಳ್ಳುವಂತೆ ದುರ್ಲಭ ಪ್ರಾಚೀನ ವಸ್ತುಗಳ ಸಂಗ್ರಹವಿದೆ. ಕೆಲವು ವರ್ಷಗಳ ಹಿಂದೆ ಅವನು ಅಲಪುಝಾದಲ್ಲಿ ಬಾಡಿಗೆಯ ಮನೆ ತೆಗೆದುಕೊಂಡು ಅಲ್ಲಿ ಒಂದು ಪ್ರಾಚೀನ ಸಂಗ್ರಹಾಲಯವನ್ನು ಸ್ಥಾಪಿಸಿದ್ದನು. ಈ ಪ್ರಾಚೀನ ಸಂಗ್ರಹಾಲಯದಲ್ಲಿ ಏಸು ಕ್ರಿಸ್ತನ ಪೋಶಾಕಿನ ತುಣುಕು, ಟಿಪ್ಪು ಸುಲ್ತಾನನ ಸಿಂಹಾಸನ, ರಾಜಾ ರವಿವರ್ಮನ ಚಿತ್ರ (ಪೈಂಟಿಂಗ್), ಛತ್ರಪತಿ ಶಿವಾಜಿ ಮಹಾರಾಜರ ಬಳಿಯಿದ್ದ ಗೀತೆ, ತ್ರಾವಣಕೋರ ರಾಜರ ಸಿಂಹಾಸನ, ಮೊದಲ ಗ್ರಾಮಾಫೋನ ಇತ್ಯಾದಿ ವಸ್ತುಗಳು ಇರುವುದಾಗಿ ಅವನು ಹೇಳುತ್ತಾನೆ. ಅವನ ಸಂಗ್ರಹಾಲಯಕ್ಕೆ ಭೇಟಿ ನೀಡಲು ಗಣ್ಯ ವ್ಯಕ್ತಿಗಳು ಬರುತ್ತಾರೆ. ಅವರಲ್ಲಿ ಚಲನಚಿತ್ರ ಕಲಾವಿದರು, ರಾಜಕಾರಣಿಗಳು, ಹಿರಿಯ ಪೊಲಿಸ್ ಅಧಿಕಾರಿಗಳು ಮುಂತಾದವರು ಇರುತ್ತಾರೆ. ಮಾವುಂಕಳನ ಮೇಲೆ ೬ ಜನರಿಗೆ ೧೦ ಕೋಟಿ ರೂಪಾಯಿಗಳನ್ನು ಮೋಸ ಮಾಡಿರುವ ಆರೋಪವಿದೆ. ಈ ಕಾರಣದಿಂದ ಅವನನ್ನು ಸಪ್ಟೆಂಬರ್ ೨೬ ರಂದು ಅವನ ನಿವಾಸದಲ್ಲಿ ಬಂಧಿಸಲಾಯಿತು. ಈಗ ಅವನ ಬಳಿಯಿರುವ ತಥಾಕಥಿತ ಪ್ರಾಚೀನ ವಸ್ತುಗಳ ಸಂಗ್ರಹಗಳು ವಿವಾದಕ್ಕೆ ಸಿಲುಕಿದೆ. ಅವನು ಕೇರಳದ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ರಾಜಕಾರಣಿಗಳೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು.

೧. ಮೊನ್ಸೂನ ಮಾವುಂಕುಳ ಪ್ರಕರಣದಲ್ಲಿ ಪೋಲೀಸ್ ಮಹಾನಿರ್ದೇಶಕರ ನಡುವಳಿಕೆಯಿಂದ ಕೇರಳ ವಿಧಾನಸಭೆಯಲ್ಲಿ ಕೋಲಾಹಲ

ಮೊನ್ಸೂನ ಮಾವುಂಕಳ ಪ್ರಕರಣದಿಂದ ವಿಧಾನಸಭೆಯಲ್ಲಿಯೂ ಬಹಳಷ್ಟು ಕೋಲಾಹಲವಾಯಿತು. ೨೦೧೯ ನೇ ಇಸವಿಯಲ್ಲಿ ಕೇರಳದ ಪೋಲೀಸ್ ಮಹಾನಿರ್ದೇಶಕರಾದ ಲೋಕನಾಥ ಬೆಹರಾ ಇವರು ಮೊನ್ಸೂನ ಮಾವುಂಕಳನ ಮನೆಗೆ ಭೇಟಿ ನೀಡಿದ್ದರು. ಆಗ ಅವರು ‘ಈ ಪ್ರಕರಣದ ವಿಚಾರಣೆಯನ್ನು ಗುಪ್ತಚರ ಇಲಾಖೆಯ ಮೂಲಕ ನಡೆಸಬೇಕು’, ಎಂದು ಸರಕಾರಕ್ಕೆ ಮನವಿ ಮಾಡಿದ್ದರು. ಇಷ್ಟೇ ಅಲ್ಲದೇ ಅವರು ಮೊನ್ಸೂನ ಮಾವುಂಕಳ ಮತ್ತು ಅವನ ವ್ಯವಹಾರಗಳ ವಿಚಾರಣೆಯನ್ನು ನಡೆಸುವಂತೆ ಜಾರಿ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಪೋಲೀಸ್ ಮಹಾನಿರ್ದೇಶಕರು ಇಂತಹ ವ್ಯಕ್ತಿಯ ಮನೆಗೆ ಹೋಗುತ್ತಾರೆ ಅಥವಾ ಆ ವ್ಯಕ್ತಿಯ ವಿರುದ್ಧ ದೂರು ನೀಡುತ್ತಾರೆ ಆಗ ಸಹಜವಾಗಿಯೇ ಈ ಅಂಶ ರಾಜಕೀಯ ಪಕ್ಷಗಳ ಚರ್ಚೆಗೆ ಗ್ರಾಸವಾಗುತ್ತದೆ. ಆ ಸಮಯದಲ್ಲಿ ಒಂದು ವೇಳೆ ವಿಧಾನಸಭೆಯ ಅಧಿವೇಶನ ನಡೆಯುತ್ತಿದ್ದರಂತೂ ಕೇಳುವುದೇ ಬೇಡ.

ವಿಪಕ್ಷದ ಶಾಸಕರಾದ ಥಾಮಸ್ ಪಿ.ಟಿ. ಇವರು ಕೇರಳದ ಅಧಿವೇಶನದಲ್ಲಿ ಠರಾವು ಮಂಡಿಸಿ ‘ಪೋಲೀಸ್ ಮಹಾನಿರ್ದೇಶಕರು ಮೊನ್ಸೂನ ಮಾವಂಕುಳ ಮನೆಗೆ ಭೇಟಿ ನೀಡಿರುವ ವಿಚಾರವನ್ನು ಚರ್ಚೆಗೆ ಪರಿಗಣಿಸಬೇಕು’, ಎಂದು ಕೋರಿದರು. ಆ ಸಮಯದಲ್ಲಿ ಅನೇಕ ಆಶ್ಚರ್ಯಕರ ವಿಷಯಗಳು ಗಮನಕ್ಕೆ ಬಂದಿತು. ಆಗ ‘ಮಾವುಂಕಳ ಮನೆಗೆ ದಿನದಲ್ಲಿ ೪ ಸಲ ಗಸ್ತು ಮಾಡಬೇಕು’, ಎಂದು ಪೋಲೀಸರಿಗೆ ಆದೇಶ ನೀಡಲಾಯಿತು.

೨. ಅನೇಕ ಸಂಶಯಾಸ್ಪದ ಅಂಶಗಳ ಮೂಲಕ ಪೋಲೀಸರ ಕಣ್ಣು ತೆರೆಸಿದ ಕೇರಳ ಉಚ್ಚ ನ್ಯಾಯಾಲಯ !

  ಈ ಪ್ರಕರಣವು ಕೇರಳ ಉಚ್ಚ ನ್ಯಾಯಾಲಯದಲ್ಲಿ ದಾಖಲಾದಾಗ ಮೊನ್ಸೂನ ಮಾವುಂಕಳ ಬಗ್ಗೆ ಅನೇಕ ಅಘಾತಕಾರಿ ಅಂಶಗಳು ಬಹಿರಂಗಗೊಂಡವು. ಮಾವುಂಕಳನು ಒಂದು ವಸ್ತು ಸಂಗ್ರಹಾಲಯವನ್ನು ತೆರೆದಿದ್ದನು. ಅದರಲ್ಲಿ ಅವನು ಪುರಾತನ ಮತ್ತು ಪ್ರಾಚೀನ ವಸ್ತುಗಳನ್ನು ಇಟ್ಟಿರುವುದಾಗಿ ಹೇಳುತ್ತಿದ್ದನು. ಈ ಕಾರಣದಿಂದ ಅವನ ವಸ್ತು ಸಂಗ್ರಹಾಲಯಕ್ಕೆ ಅನೇಕ ಪ್ರಸಿದ್ಧ ಗಣ್ಯವ್ಯಕ್ತಿಗಳು, ಪೋಲೀಸ ವಿಭಾಗದ ಹಿರಿಯ ಅಧಿಕಾರಿಗಳು, ಅಲ್ಲದೇ ರಾಜಕಾರಣಿಗಳು ಭೇಟಿ ನೀಡುತ್ತಿದ್ದರು; ಆದರೆ ಈ ಎಲ್ಲ ವಸ್ತುಗಳು ನಕಲಿಯಾಗಿವೆಯೆಂದು ಈಗ ಚರ್ಚೆಯೂ ಆರಂಭವಾಗಿತ್ತು. ವಿಚಾರಣೆಗೆ ಗುರಿಯಾಗಬೇಕಾಗಿದ್ದ ವ್ಯಕ್ತಿಗೆ ಪೋಲೀಸರ ರಕ್ಷಣೆ ಸಿಗುತ್ತಿತ್ತು. ಈ ವಿಷಯವನ್ನು ಕಂಡು ಹಿಡಿದು ಉಚ್ಚ ನ್ಯಾಯಾಲಯವು ವಿಚಾರಣೆ ನಡೆಸಿತು, ‘ಯಾವ ವ್ಯಕ್ತಿಯ ವ್ಯವಹಾರ ನಕಲಿ ಮತ್ತು ಸಂಶಯಾಸ್ಪದವಾಗಿದೆಯೋ, ಮನೆಯಲ್ಲಿಆನೆಯ ದಂತ ಇಟ್ಟುಕೊಂಡಿರುತ್ತಾನೆಯೋ, ಸಾಮಾನ್ಯ ನಾಗರಿಕರು ಮನೆಯಲ್ಲಿ ಇಡಲು ಹಿಂಜರಿಯುವಂತಹ ವಸ್ತುಗಳು ಅವನ ಬಳಿ ಕಂಡು ಬರುತ್ತದೆಯೋ, ಯಾರ ದಿನಚರಿ ವಿವಾದಿತವಾಗಿದೆಯೋ, ಇಂತಹ ವ್ಯಕ್ತಿಗೆ ಪೋಲೀಸ್ ಭದ್ರತೆ ಸಿಗುತ್ತದೆ. ಆದರೆ ಮಾಲೀಕನ ಸಂಶಯಾಸ್ಪದ ವ್ಯವಹಾರಗಳನ್ನು ಬಹಿರಂಗ ಪಡಿಸಿದ್ದರಿಂದ ಅವನ ವಾಹನ ಚಾಲಕನಾಗಿದ್ದ ಅಜಿತನು ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆಯೆಂದು ತಿಳಿಸಿದರೂ, ಅವನಿಗೆ ರಕ್ಷಣೆ ಸಿಗುವುದಿಲ್ಲ. ಹೀಗಿರುವಾಗ ಪೋಲೀಸರ ರಕ್ಷಣೆ ನಿರ್ದಿಷ್ಟವಾಗಿ ಯಾರಿಗೆ ಒದಗಿಸಬೇಕಾಗಿದೆ ?, ಎನ್ನುವುದು ಪೋಲೀಸರ ಗಮನಕ್ಕೆ ಬಂದಿದೆಯೇ ?’ ಎಂದು ಕೇಳಿತು. ‘ಯಾವ ವ್ಯಕ್ತಿಯೊಂದಿಗೆ ಹಿರಿಯ ಪೋಲೀಸ ಅಧಿಕಾರಿಗಳ ಸಂಬಂಧ ಚೆನ್ನಾಗಿದೆಯೋ, ಆ ವ್ಯಕ್ತಿಯ ವಿರುದ್ಧ ನಿಷ್ಪಕ್ಷಪಾತವಾದ ತನಿಖೆಯಾಗಲು ಹೇಗೆ ಸಾಧ್ಯ’, ಎಂದು ನ್ಯಾಯಾಲಯವು ಪ್ರಶ್ನಿಸಿತು. ‘ಇಂತಹ ಸ್ಥಿತಿಯಲ್ಲಿ ಈ ಪ್ರಕರಣವನ್ನು ಹೊರಗಿನವರಿಗೆ ವಹಿಸಬೇಕೇ ?’, ಎಂದು ನ್ಯಾಯಾಲಯವು ಕೇರಳ ಸರಕಾರ ಮತ್ತು ಕೇರಳ ಪೋಲೀಸರನ್ನು ಕೇಳಿತು. ‘ಮಾವುಂಕಳನ ಆದಾಯದ ಮೂಲ ಮತ್ತು ಅವನ ಹಣಕಾಸಿನ ವ್ಯವಹಾರಗಳು ಒಂದಕ್ಕೊಂದು ತಾಳೆಯಾಗುತ್ತಿಲ್ಲ’, ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ದೂರುದಾರ ಅಜಿತನಿಗೆ ಏಕೆ ಜೀವ ಬೆದರಿಕೆಯ ಕರೆಗಳು ಬರುತ್ತಿವೆ ? 2020 ನೇ ಇಸವಿಯಲ್ಲಿ ಪೋಲೀಸರು ತಮ್ಮ ಮನವಿಯಲ್ಲಿ ‘ಮೊನ್ಸೂನ ಮಾವುಂಕಳ ಮೋಸಗಾರ, ಅಪ್ರಾಮಾಣಿಕ ಮತ್ತು ಭ್ರಷ್ಟಾಚಾರಿ’, ಎಂದು ತಿಳಿಸಿದ್ದಾರೆ. ಪ್ರಕರಣದ ಕುರಿತು ದೀಪಾವಳಿಯ ರಜೆ ಮುಗಿದ ಬಳಿಕ ವಿಚಾರಣೆ ಜರುಗಬಹುದು’ ಎಂದು ಹೇಳಲಾಗಿದೆ. ಆಗ ಸಾಮ್ಯವಾದಿ ಸರಕಾರ ನ್ಯಾಯಾಲಯದಲ್ಲಿ ಯಾವ ರೀತಿ ಮಂಡಿಸುವುದು ತನ್ನ ಅಭಿಪ್ರಾಯ ಮಂಡಿಸಬಹುದು ಎನ್ನುವುದು ನೋಡಲು ನಮಗೆ ಸಿಗಬಹುದು.
ಕೇರಳ, ಆಂಧ್ರಪ್ರದೇಶ ಮತ್ತು ಬಂಗಾಳ ಈ ರಾಜ್ಯಗಳಲ್ಲಾಗುವ ಘಟನಾವಳಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಹಳ ಚರ್ಚೆಯ ವಿಷಯವಾಗುತ್ತದೆ. ಈ ಕಾರಣದಿಂದ ಆಯಾ ಸರಕಾರಗಳ ಕಾರ್ಯವಿಧಾನ
ಹೇಗಿದೆಯೆನ್ನುವುದು ಗಮನಕ್ಕೆ ಬರುತ್ತದೆ.

 ‘ಶ್ರೀಕೃಷ್ಣಾರ್ಪಣಮಸ್ತು !’

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯ ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿಗಳು, ಮುಂಬಯಿ ಉಚ್ಚ ನ್ಯಾಯಾಲಯ (17.10.2021)