ಗುರು ಗೋವಿಂದಸಿಂಹರು ಔರಂಗಜೇಬನಿಗೆ ಬರೆದ ಪತ್ರ ಎಂದರೆ ಆಧ್ಯಾತ್ಮಿಕತೆ ಮತ್ತು ಶೌರ್ಯಗಳ ಪ್ರತೀಕ

೯ ಜನವರಿ ೨೦೨೨ ರಂದು ಗುರು ಗೋವಿಂದಸಿಂಹರವರ ಜಯಂತಿ (ಪರಂಪರೆಗನುಸಾರ) ಇದೆ. ಆ ನಿಮಿತ್ತದಿಂದ …

ಗುರು ಗೋವಿಂದಸಿಂಹರು

ಭಾರತದ ಗೌರವಶಾಲಿ ಇತಿಹಾಸದಲ್ಲಿ ಎರಡು ಪತ್ರಗಳು ಜಗದವಿಖ್ಯಾತವಾದವು. ಮೊದಲ ಪತ್ರ ಛತ್ರಪತಿ ಶಿವಾಜಿ ಮಹಾರಾಜರು ರಾಜಾ ಜಯಸಿಂಹನಿಗೆ ಬರೆದಿದ್ದರು, ಎರಡನೇ ಪತ್ರವನ್ನು ಗುರು ಗೋವಿಂದಸಿಂಹರವರು ಅತ್ಯಾಚಾರಿ ಮತ್ತು ಕ್ರೂರ ಮೊಘಲರ ಶಾಸಕ ಔರಂಗಜೇಬನಿಗೆ ಬರೆದರು, ಅದಕ್ಕೆ ‘ಜಫರನಾಮಾ’ ಅಂದರೆ ‘ವಿಜಯಪತ್ರ’ ಎಂದು ಕರೆಯಲಾಗುತ್ತದೆ. ನಿಃಸಂದೇಹವಾಗಿ ಗುರುಗೋವಿಂದಸಿಂಹರವರ ಈ ಪತ್ರವೆಂದರೆ ‘ಆಧ್ಯಾತ್ಮಿಕತೆ, ಕೂಟನೀತಿ, ಹಾಗೆಯೇ ಶೌರ್ಯಗಳ ಅದ್ಭುತ ತ್ರಿವೇಣಿಸಂಗಮ’ವಾಗಿದೆ.

೧. ಗುರು ಗೋವಿಂದಸಿಂಹರವರ ಪತ್ರದಿಂದ ಔರಂಗಜೇಬನಿಗೆ ಅವರ ಶೌರ್ಯ ಮತ್ತು ಪ್ರತಿಷ್ಠೆಯ ಅನುಭವವಾಗುವುದು

ತಮ್ಮ ತಂದೆ ಗುರು ತೇಗಬಹಾದೂರ ಮತ್ತು ತಮ್ಮ ೪ ಮಕ್ಕಳ ಬಲಿದಾನದ ನಂತರ ೧೭೦೬ ರಲ್ಲಿ ಖಿದರಾನಾದ ಕದನವಾಯಿತು. ಅನಂತರ ಗುರು ಗೋವಿಂದಸಿಂಹರವರು ಮೊಘಲ ಚಕ್ರವರ್ತಿ ಔರಂಗಜೇಬನಿಗಾಗಿ ಸಹೋದರ ದಯಾಸಿಂಹ ಇವರ ಮೂಲಕ ಒಂದು ‘ಜಫರನಾಮಾ’ವನ್ನು ಬರೆದು ಕಳುಹಿಸಿದ್ದರು. ಆ ಕಾಲಕ್ಕೆ ಔರಂಗಜೇಬನು ದಕ್ಷಿಣ ಭಾರತದ ಅಹಮದನಗರದಲ್ಲಿ ತನ್ನ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿದ್ದನು. ಸಹೋದರ ದಯಾಸಿಂಹರು ದೆಹಲಿ, ಆಗ್ರಾದಿಂದ ದೂರದ ಪ್ರಯಾಣ ಮಾಡಿ ಅಹಮದನಗರವನ್ನು ತಲುಪಿದರು. ಗುರು ಗೋವಿಂದಸಿಂಹರವರು ಕಳುಹಿಸಿದ ಪತ್ರದ ಮೂಲಕ ಔರಂಗಜೇಬನಿಗೆ ಉತ್ತರ ಭಾರತದ, ಅದರಲ್ಲೂ ಪಂಜಾಬನ ಸತ್ಯಸ್ಥಿತಿಯ ಬಗ್ಗೆ ತಿಳಿಯಿತು. ಪಂಜಾಬನ ತನ್ನ ಮೊಘಲ ಸುಭೇದಾರನಿಂದ ದೊರಕಿದ ತಪ್ಪು ವಿವರಣೆಗಳಿಂದಾಗಿ ಅವನು ಭ್ರಮೆಯಲ್ಲಿದ್ದನು ಎಂದು ಅವನಿಗೆ ಅರಿವಾಯಿತು. ಅದರೊಂದಿಗೆ ಈ ಪತ್ರದಿಂದ ಅವನಿಗೆ ಗುರು ಗೋವಿಂದಸಿಂಹರ ಶೌರ್ಯ ಮತ್ತು ಪ್ರತಿಷ್ಠೆಯ ಬಗ್ಗೆಯೂ ಅನುಭವ ಬಂದಿತು.

೨. ಔರಂಗಜೇಬನು ಗುರು ಗೋವಿಂದಸಿಂಹ ಇವರನ್ನು ಭೇಟಿಗೆ ಕರೆಯುವುದು; ಆದರೆ ಅವರ ಭೇಟಿಯಾಗುವ ಮೊದಲೇ ಔರಂಗಜೇಬನು ನಿಧನವಾಗಿರುವುದಾಗಿ ತಿಳಿಯುವುದು

ಔರಂಗಜೇಬನು ಜಬರದಾರ ಮತ್ತು ಮೊಹಮ್ಮದ ಯಾರ ಮನಸಬದಾರರಿಗೆ (ಸುಭೇದಾರರಿಗೆ) ಒಂದು ವಿಶೇಷ ಆದೇಶವನ್ನು ನೀಡಿ ದೆಹಲಿಗೆ ಕಳುಹಿಸಿದನು. ಅದರಲ್ಲಿ ಗುರು ಗೋವಿಂದಸಿಂಹ ಇವರಿಗೆ ಯಾವುದೇ ರೀತಿಯ ಕಷ್ಟ ನೀಡದೇ ಗೌರವ ಪೂರ್ವಕವಾಗಿ ಕರೆತರಲು ಆದೇಶ ನೀಡಲಾಗಿತ್ತು; ಆದರೆ ಗುರು ಗೋವಿಂದಸಿಂಹ ಇವರಿಗೆ ಸಹೋದರ ದಯಾ ಸಿಂಹನು ಅಹಮದನಗರದಲ್ಲಿ ಔರಂಗಜೇಬನಿಗೆ ಪತ್ರವನ್ನು ತಲುಪಿಸಲು ಯಶಸ್ವಿಯಾಗಿದ್ದಾನೆಯೋ ಇಲ್ಲವೋ ಎಂಬುದು, ತುಂಬಾ ದಿನಗಳ ವರೆಗೆ ತಿಳಿಯಲಿಲ್ಲ. ಆದುದರಿಂದ ಅವರು ಸ್ವತಃ ಅಹಮದನಗರಕ್ಕೆ ಹೊರಟರು. ಅವರು ಅಕ್ಟೋಬರ್ ೧೭೦೬ ರಲ್ಲಿ ದಕ್ಷಿಣ ಭಾರತದ ಮಾರ್ಗವಾಗಿ ಹೊರಟರು. ಅವರು ಮಾರವಾಡದ ಮಾರ್ಗದಿಂದ ದಕ್ಷಿಣದ ಕಡೆಗೆ ಹೊರಡಲು ವಿಚಾರ ಮಾಡಿದರು. ಮಾರ್ಗದಲ್ಲಿ ರಾಜಸ್ಥಾನದ ಅನೇಕ ರಾಜರು ಅವರನ್ನು ಸ್ವಾಗತಿಸಿದರು. ದಕ್ಷಿಣದ ಮಾರ್ಗದಿಂದ ಸಾಗುವಾಗ ಮಧ್ಯದಲ್ಲಿ ಬಾಪೌರ ಎಂಬಲ್ಲಿ ಸಹೋದರ ದಯಾಸಿಂಹ ಅವರೊಂದಿಗೆ ಭೇಟಿಯಾಯಿತು ಅವರು ಪಂಜಾಬದತ್ತ ಮರಳಿ ಬರುತ್ತಿದ್ದರು. ಗುರು ಗೋವಿಂದಸಿಂಹ ಇವರಿಗೆ ಅದೇ ಸಮಯಕ್ಕೆ ಸಹೋದರ ದಯಾ ಸಿಂಹರಿಂದ ಔರಂಗಜೇಬನ ಕುರಿತು ಎಲ್ಲ ವಾರ್ತೆ ತಿಳಿಯಿತು. ದಕ್ಷಿಣದ ಕಡೆಗಿನ ಪ್ರಯಾಣದಲ್ಲಿರುವಾಗಲೇ ಅಹಮದನಗರದಲ್ಲಿ ೨೦ ಫೆಬ್ರವರಿ ೧೭೦೭ ರಂದು ಅವರಿಗೆ ಔರಂಗಜೇಬನ ಮೃತ್ಯುವಿನ ವಾರ್ತೆ ಸಿಕ್ಕಿತು. ಹೀಗಾಗಿ ಕೊನೆಯ ತನಕ ಔರಂಗಜೇಬನೊಂದಿಗೆ ಅವರ ಭೇಟಿಯಾಗಲೇ ಇಲ್ಲ.

೩. ಗುರು ಗೋವಿಂದಸಿಂಹರು ಔರಂಗಜೇಬನಿಗೆ ಪತ್ರದ ಮೂಲಕ ಅವನ ಯೋಗ್ಯತೆಯನ್ನು ತೋರಿಸಿ ಕೊಡುವುದು

ಗುರು ಗೋವಿಂದಸಿಂಹರು ಪತ್ರವನ್ನು ಈಶ್ವರನ ಸ್ಮರಣೆಯಿಂದ ಪ್ರಾರಂಭಿಸಿದ್ದಾರೆ. ಅವರು ತಮ್ಮ ಬಗ್ಗೆ ಬರೆಯುತ್ತಾ, ‘ನಾನು ಈಶ್ವರನಲ್ಲಿ ಪ್ರತಿಜ್ಞೆ ಮಾಡಿದ್ದೇನೆ, ಆ ಈಶ್ವರನು ಕತ್ತಿ, ಧನುಷ್ಯಬಾಣ, ಭಾಲಾ ಮತ್ತು ಕಟ್ಯಾರ್ (ಸಣ್ಣ ಕತ್ತಿ) ಇವುಗಳ ಈಶ್ವರನಾಗಿದ್ದಾನೆ. ಗುರು ಗೋವಿಂದಸಿಂಹ ಅವರು ಔರಂಗಜೇಬನನ್ನು ಉದ್ದೇಶಿಸಿ ಬರೆಯುತ್ತಾರೆ, ‘ಈಶ್ವರನ ಸ್ಮರಣೆಯನ್ನು ಮಾಡಿ. ಆ ಭಗವಂತನು ನಿನಗೆ ಬಾದಶಾಹಿ ಸ್ಥಾನವನ್ನು ನೀಡಿದನು ಮತ್ತು ನನಗೆ ಧರ್ಮದ ರಕ್ಷಣೆ ಮಾಡುವ ಧನವನ್ನು ಒದಗಿಸಿದನು ಮತ್ತು ನನಗೆ ಕೊಟ್ಟಂತಹ ಶಕ್ತಿಯಿಂದ ನಾನು ಧರ್ಮದ ರಕ್ಷಣೆಯನ್ನು ಮಾಡುವೆನು ಮತ್ತು ಸತ್ಯದ ಧ್ವಜವನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸುವೆನು’ ಎಂದು ಬರೆದಿದ್ದಾರೆ. ಗುರು ಗೋವಿಂದಸಿಂಹರವರು ಈ ಪತ್ರದಲ್ಲಿ ಔರಂಗಜೇಬನಿಗೆ ‘ಧೂರ್ತ’, ‘ಮೋಸಗಾರ’ ಮತ್ತು ಸ್ವಾರ್ಥಿ ‘(ದುರುಳ)’ ಎಂದು ಬರೆದಿದ್ದಾರೆ. ಅಲ್ಲದೇ ಅವನು ಏನೆಲ್ಲ ನಮಾಜುಪಠಣ ಇತ್ಯಾದಿ ಮಾಡುತ್ತಾನೆಯೋ, ಅದೆಲ್ಲವೂ ನಾಟಕವಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಅವನನ್ನು ತಮ್ಮ ತಂದೆ ಮತ್ತು ಸಹೋದರರ ‘ಕೊಲೆಗಾರ’ ಎಂದೂ ಬರೆದಿದ್ದಾರೆ.

೪. ಔರಂಗಜೇಬನಿಗೆ ಯುದ್ಧಕ್ಕಾಗಿ ಸವಾಲೊಡ್ಡುವ ಪರಮವೀರ ಗುರು ಗೋವಿಂದಸಿಂಹರು !

ಗುರು ಗೋವಿಂದಸಿಂಹರವರು ತಮ್ಮ ಸ್ವಾಭಿಮಾನ ಮತ್ತು ಶೌರ್ಯದ ಪರಿಚಯವನ್ನು ನೀಡುವಾಗ, ‘ನಾನು ನಿನ್ನ ಕಾಲ್ಕೆಳಗೆ ಯಾವ ರೀತಿ ಬೆಂಕಿ ಇಡುತ್ತೇನೆ, ಅಂದರೆ ಪಂಜಾಬನಲ್ಲಿ ಅದನ್ನು ಆರಿಸಲು ಮತ್ತು ನಿನಗೆ ಕುಡಿಯಲು ನೀರು ಸಹ ದಕ್ಕುವುದಿಲ್ಲ’, ಎಂದು ಬರೆದಿದ್ದಾರೆ. ಗುರು ಗುರು ಗೋವಿಂದಸಿಂಹರು ಔರಂಗಜೇಬನಿಗೆ ಸವಾಲೊಡ್ಡುವಾಗ, “ನಾನು ಈ ಯುದ್ಧದಲ್ಲಿ ಒಬ್ಬನೇ ಬರುವೆನು, ನೀನು ಮಾತ್ರ ಕುದುರೆ ಸವಾರರನ್ನು ತೆಗೆದುಕೊಂಡು ಬಾ’’ ಎಂದು ಹೇಳುತ್ತಾರೆ. ಮುಂದೆ “ನನ್ನ ನಾಲ್ಕೂ ಮಕ್ಕಳ (ಅಜಿತಸಿಂಹ, ಜುಝಾರಸಿಂಹ, ಫತೆಸಿಂಹ, ಜೊರಾವರ ಸಿಂಹ) ಕೊಲೆ ಆದರೆ ಏನಾಯ್ತು ? ಹೆಡೆ ಎತ್ತಿ ದಂಶ ಮಾಡುವ ಈ ನಾಗ ಇನ್ನೂ ಜೀವಂತವಾಗಿದ್ದಾನೆ’’ ಎಂದು ಬರೆಯುತ್ತಾರೆ.

೫. ದುರ್ಬಲರಿಗೆ ಅನ್ಯಾಯ ಮಾಡಿದರೆ ಔರಂಗಜೇಬನನ್ನು ನುಚ್ಚುನೂರು ಮಾಡುವುದಾಗಿ ಎಚ್ಚರಿಕೆಯನ್ನು ನೀಡುವುದು !

ಗುರು ಗೋವಿಂದಸಿಂಹರು ಔರಂಗಜೇಬನಿಗೆ ಇತಿಹಾಸದಿಂದ ಪಾಠ ಕಲಿಯುವ ಸಲಹೆಯನ್ನು ನೀಡುತ್ತಾ, “ಸಿಕಂದರ ಮತ್ತು ಶೇರಶಹಾ ಎಲ್ಲಿದ್ದಾರೆ ? ಇಂದು ತೈಮೂರ ಎಲ್ಲಿದ್ದಾನೆ ? ಬಾಬರ ಎಲ್ಲಿದ್ದಾನೆ ? ಹುಮಾಯೂನ ಎಲ್ಲಿದ್ದಾನೆ ?’’ ಎಂದರು. ಅವರು ಪುನಃ ಔರಂಗಜೇಬನಿಗೆ ಸವಾಲು ಎಸೆಯುತ್ತಾ ಮುಂದಿನಂತೆ ಬರೆದರು, “ಒಂದು ವೇಳೆ ನೀನು ದುರ್ಬಲರಿಗೆ ಅನ್ಯಾಯ ಮಾಡಿದರೆ, ಅವರನ್ನು ಹಿಂಸಿಸಿದರೆ, ನೋಡು ನಾನು ಪ್ರತಿಜ್ಞೆ ಮಾಡುತ್ತೇನೆ ! ಒಂದು ದಿನ ನಿನ್ನನ್ನು ಉಳಿಯಿಂದ (ಕಟ್ಟಿಗೆ ಕತ್ತರಿಸುವ ಒಂದು ವಿಶಿಷ್ಟ ವಿಧದ ಆಯುಧ) ಕತ್ತರಿಸಿ ತುಂಡು ತುಂಡು ಮಾಡುತ್ತೇನೆ.’’

ಅದಲ್ಲದೇ ಗುರು ಗೋವಿಂದಸಿಂಹರವರು ಯುದ್ಧ ಮತ್ತು ಶಾಂತಿಯ ಸಂದರ್ಭದಲ್ಲಿ ತಮ್ಮ ನೀತಿಯನ್ನು ಸ್ಪಷ್ಟಪಡಿಸಿ ಬರೆದರು, “ಯಾವಾಗ ಎಲ್ಲ ಪ್ರಯತ್ನಗಳು ಮುಗಿದ ನಂತರ, ನ್ಯಾಯದ ಮಾರ್ಗವು ವಿರುದ್ಧವಾಗಿದ್ದರೆ, ಕತ್ತಿಯನ್ನು ಎತ್ತುವುದು ಅನಿವಾರ್ಯವಾಗಿದೆ ಮತ್ತು ಯುದ್ಧ ಮಾಡುವುದು ಸೂಕ್ತವಿದೆ.’’ ಪತ್ರದ ಕೊನೆಯಲ್ಲಿ ಈಶ್ವರನ ಬಗ್ಗೆ ಪೂರ್ಣ ಶ್ರದ್ಧೆಯನ್ನು ವ್ಯಕ್ತಪಡಿಸಿ ಅವರು ಬರೆದಿದ್ದಾರೆ ‘ವೈರಿಯು ನಮ್ಮೊಡನೆ ಸಾವಿರಾರು ಸಲ ಹಗೆತನ ಮಾಡಿರಲಿ, ಯಾರಿಗೆ ಈಶ್ವರನ ಮೇಲೆ ವಿಶ್ವಾಸವಿದೆಯೋ, ಅವರ ಕೂದಲೂ ಕೊಂಕಲು ಸಹ ಸಾಧ್ಯವಿಲ್ಲ !’ ಎಂದು ಬರೆದು ಎಚ್ಚರಿಕೆ ನೀಡಿದರು.

೬. ಗುರು ಗೋವಿಂದಸಿಂಹ ಇವರ ಪತ್ರವೆಂದರೆ, ಔರಂಗಜೇಬನ ದುಷ್ಕೃತ್ಯಗಳ ಮೇಲೆ ನೈತಿಕತೆ ಹಾಗೂ ಆಧ್ಯಾತ್ಮಿಕ ಗೆಲುವಿನ ಪರಿಚಯ !

ವಾಸ್ತವಿಕವಾಗಿ ಗುರು ಗೋವಿಂದಸಿಂಹ ಇವರ ಜಫರನಾಮಾ ಅರ್ಥಾತ್ ‘ವಿಜಯಪತ್ರ’. ಇದು ಕೇವಲ ಒಂದು ಪತ್ರವಾಗಿರದೇ, ಅದೊಂದು ವೀರನ ಕಾವ್ಯವಾಗಿದೆ, ಅಂದರೆ ಅದು ಭಾರತೀಯ ಜನಸಾಮಾನ್ಯರ ಭಾವನೆಗಳ ಪ್ರತೀಕವಾಗಿದೆ. ಅಂದಿನಿಂದ ಇಲ್ಲಿಯ ವರೆಗೆ ಅಸಂಖ್ಯಾತ ದೇಶಭಕ್ತರು ಅವರ ಪತ್ರದಿಂದ ಪ್ರೇರಣೆ ಪಡೆದಿದ್ದಾರೆ. ಗುರು ಗೋವಿಂದಸಿಂಹ ಇವರ ವ್ಯಕ್ತಿತ್ವ ಮತ್ತು ಆಚರಣೆಗಳ ತುಣುಕು ಅವರ ಪತ್ರದಿಂದ ಕಂಡು ಬರುತ್ತದೆ. ಅವರ ಈ ಪತ್ರವೆಂದರೆ ಶರಣಾಗತಿಯಾಗಿರದೇ ಯುದ್ಧದ ಕರೆಯಾಗಿದೆ. ಅದರೊಂದಿಗೆ ಶಾಂತಿ, ಧರ್ಮರಕ್ಷಣೆ, ಶ್ರದ್ಧೆ ಮತ್ತು ಆತ್ಮವಿಶ್ವಾಸ ಇವುಗಳ ಪರಿಚಯ ಮಾಡಿಕೊಡುವಂತಹದ್ದಾಗಿದೆ. ಅವರ ಈ ಪತ್ರ ಶೋಷಿತರು, ಅಸಹಾಯಕರು, ನಿರಾಸೆ ಹೊಂದಿದ ಹಾಗೆಯೇ ಅಚೇತನ ಸಮಾಜದಲ್ಲಿ ಹೊಸಹುರುಪು ಮತ್ತು ಗೌರವಾನುಭೂತಿಯನ್ನು ಸಂಚರಿಸುವಂತಹದ್ದಾಗಿದೆ. ಈ ಪತ್ರವು ಅತ್ಯಾಚಾರಿ ಔರಂಗಜೇಬನ ದುಷ್ಕೃತ್ಯಗಳ ಮೇಲೆ ನೈತಿಕ ಮತ್ತು ಆಧ್ಯಾತ್ಮಿಕ ಗೆಲುವಿನ ಪರಿಚಯವನ್ನು ಮಾಡಿ ಕೊಡುವಂತಹದಾಗಿದೆ.

(ಆಧಾರ : ಮಾಸಿಕ ‘ಸಂಗತ ಸಂಸಾರ’, ಜೂನ್ ೨೦೧೧)