ಜನವರಿ ೧೨ ರಂದು ಇರುವ ಸ್ವಾಮಿ ವಿವೇಕಾನಂದರ ಜಯಂತಿ (ದಿನಾಂಕಾನುಸಾರ) ನಿಮಿತ್ತ…
೧. ‘ಜೀವನವಿಡಿ ಅಳವಡಿಸಿಕೊಳ್ಳದ ಹಾಗೂ ಮೆದುಳಿನಲ್ಲಿ ಅಸ್ತವ್ಯಸ್ತವಾಗಿ ತುಂಬಿಕೊಂಡ ಜ್ಞಾನದ ಭಾರವೆಂದರೆ ಶಿಕ್ಷಣವಲ್ಲ ! ನಮ್ಮ ಜೀವನವನ್ನು ರೂಪಿಸುವ, ‘ಮನುಷ್ಯ’ನನ್ನು ರೂಪಿಸುವ, ಚಾರಿತ್ರ್ಯವನ್ನು ಬಿಂಬಿಸುವ ಹಾಗೂ ಒಳ್ಳೆಯ ವಿಚಾರಗಳನ್ನು ಅಳವಡಿಸಿಕೊಳ್ಳಲು ಕಲಿಸುವ ಶಿಕ್ಷಣವು ಬೇಕಾಗಿದೆ. ನೀವು ೪-೫ ಉತ್ತಮ ವಿಚಾರಗಳನ್ನು ಅಳವಡಿಸಿಕೊಂಡು ಅದನ್ನು ನಿಮ್ಮ ಜೀವನದಲ್ಲಿ ಹಾಗೂ ಆಚರಣೆಯಲ್ಲಿ ತಂದರೆ, ಇಡೀ ಗ್ರಂಥಾಲಯವನ್ನೇ ಬಾಯಿಪಾಠ ಮಾಡುವವರಿಗಿಂತಲೂ ನಿಮ್ಮ ಶಿಕ್ಷಣವು ಶ್ರೇಷ್ಠವೆನಿಸಿಕೊಳ್ಳುವುದು !
೨. ನಮ್ಮ ದೇಶದ ಆಧ್ಯಾತ್ಮಿಕ ಹಾಗೂ ಭೌತಿಕ ಶಿಕ್ಷಣದ ಭಾರವನ್ನು ನಾವೇ ವಹಿಸಬೇಕೆಂದು ನಿಮ್ಮ ಗಮನಕ್ಕೆ ಬರುತ್ತದೆಯೇ ? ಇಂದು ನಿಮಗೆ ಸಿಗುತ್ತಿರುವ ಶಿಕ್ಷಣದಲ್ಲಿ ಕೆಲವು ಉತ್ತಮ ವಿಷಯಗಳಿವೆ; ಆದರೆ ಅದರಲ್ಲಿ ಎಷ್ಟು ಭಯಂಕರ ದೋಷಗಳಿವೆಯೆಂದರೆ, ಅವುಗಳಿಂದಾಗಿ ಉತ್ತಮ ವಿಷಯಗಳು ನಿರುಪಯುಕ್ತ ಎನಿಸಿಕೊಂಡಿವೆ. ಮೊದಲ ವಿಷಯವೆಂದರೆ, ಈ ಶಿಕ್ಷಣವು ‘ಮನುಷ್ಯ’ನನ್ನು ರೂಪಿಸಲು ಎಲ್ಲ ರೀತಿಯಿಂದ ನಿಷ್ಕ್ರಿಯವಾಗಿದೆ. ನಿಷ್ಕ್ರಿಯ ಶಿಕ್ಷಣವು ಮೃತ್ಯುವಿಗಿಂತಲೂ ಕೆಟ್ಟದ್ದಾಗಿರುತ್ತದೆ.’
೩. ‘ಜಗತ್ತಿನಲ್ಲಿನ ಪಾಪ ಹಾಗೂ ದುಷ್ಟತನ ಇವುಗಳ ಬಗ್ಗೆ ಸುಮ್ಮನೆ ಡಂಗುರ ಸಾರಬೇಡಿ. ತದ್ವಿರುದ್ಧ ನಮಗೆ ಜಗತ್ತಿನಲ್ಲಿ ಇನ್ನೂ ಪಾಪವು ಕಂಡು ಬರುತ್ತಿದೆ’, ಎಂಬ ಬಗ್ಗೆ ದುಃಖವಾಗಬೇಕು. ನಮಗೆ ಎಲ್ಲ ಕಡೆಗೂ ಪಾಪವೇ ಕಾಣಿಸುತ್ತಿದೆ ಎಂಬ ಬಗ್ಗೆ ಮನಃಪೂರ್ವಕ ಕೆಟ್ಟದೆನಿಸಬೇಕು ಹಾಗೂ ಒಂದು ವೇಳೆ ನಿಮಗೆ ಜಗತ್ತಿಗೆ ಸಹಾಯ ಮಾಡಬೇಕೆನಿಸಿದರೆ, ಅದರ ಹೆಸರಿನಲ್ಲಿ ಲಟಿಕೆ ಮುರಿದು ಅದನ್ನು ದ್ವೇಷಿಸುತ್ತಾ ಕುಳಿತುಕೊಳ್ಳಬೇಡಿ. ಅದನ್ನು ಇನ್ನೂ ಹೆಚ್ಚು ದುರ್ಬಲಗೊಳಿಸದಿರಿ; ಏಕೆಂದರೆ ಪಾಪ ಎನ್ನಿ ದುಃಖ ಎನ್ನಿರಿ, ಎಲ್ಲವೂ ದೌರ್ಬಲ್ಯವೇ ಆಗಿದೆ. ‘ನಾವು ದುರ್ಬಲರಾಗಿದ್ದೇವೆ, ಪಾಪಿಯಾಗಿದ್ದೇವೆ’, ಎಂದು ಚಿಕ್ಕಂದಿನಿಂದಲೇ ಕಿವಿಯಲ್ಲಿ, ಮನಸ್ಸಿನಲ್ಲಿ ಬಿಂಬಿಸಲಾಗಿದೆ. ಇಂತಹ ಬೋಧನೆಯಿಂದಾಗಿ ಜಗತ್ತು ದಿನದಿಂದ ದಿನಕ್ಕೆ ಹೆಚ್ಚೆಚ್ಚು ದುರ್ಬಲವಾಗುತ್ತಿದೆ.
೪. ಹಣೆಯ ಮೇಲೆ ಕೈಯಿಟ್ಟು ನಮ್ಮ ದೌರ್ಬಲ್ಯದ ಬಗ್ಗೆ ನಿಟ್ಟುಸಿರು ಬಿಡುತ್ತಿರುವುದು ದೌರ್ಬಲ್ಯವನ್ನು ದೂರ ಮಾಡುವ ಉಪಾಯವಲ್ಲ. ದೌರ್ಬಲ್ಯವನ್ನು ದೂರ ಮಾಡುವ ಉಪಾಯವೆಂದರೆ ಬಲ ಮತ್ತು ಶಕ್ತಿ. ಮನುಷ್ಯನಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಶಕ್ತಿಯು ಜಾಗೃತವಾಗಬೇಕು, ಅಂತಹದ್ದೇನಾದರೂ ಮಾಡಿರಿ. ಅವನಿಗೆ ಆ ಬಗ್ಗೆ ನೆನಪಿಸಿ ಕೊಡಿ, ಅದರ ಜ್ಞಾನವನ್ನು ನೀಡಿರಿ.’
(ಆಧಾರ : ಶಕ್ತಿದಾಯಿ ವಿಚಾರ, ಸ್ವಾಮಿ ವಿವೇಕಾನಂದ (ಆರನೆಯ ಆವೃತ್ತಿ), ರಾಮಕೃಷ್ಣ ಮಠ, ನಾಗಪೂರ)