ಇಂದಿನ ಹಿರಿಯ ನಾಗರಿಕರು : ಒಂದು ಸಕಾರಾತ್ಮಕ ಭಾಗ !

ತಾಯಿ-ತಂದೆಯರ ಬಗ್ಗೆ ಕೃತಜ್ಞತಾಬುದ್ಧಿಯನ್ನು ಇಟ್ಟುಕೊಂಡು ಅವರಿಗೆ ಆನಂದ ನೀಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯವಾಗಿದೆ !

ಪ್ರತಿನಿಧಿಕ ಛಾಯಾಚಿತ್ರ

‘೨೦ ನೆಯ ಶತಮಾನದ ಕೊನೆಯ ದಶಮಾನದಲ್ಲಿ ಯುವ ಪೀಳಿಗೆಯ ಮುಂದಿನ ಸವಾಲುಗಳು ಹೆಚ್ಚಾದವು. ಹಿಂದಿನ ಅಭಿಯಂತ (ಇಂಜಿನೀಯರ್), ಆಧುನಿಕ ವೈದ್ಯ (ಡಾಕ್ಟರ್), ನ್ಯಾಯವಾದಿ, ಪ್ರಾಧ್ಯಾಪಕ ಈ ವ್ಯವಸಾಯದ ಜೊತೆಗೆ ಮಾಹಿತಿ ತಂತ್ರಜ್ಞಾನ, ಪ್ರವಾಸದಂತಹ ಹೆಚ್ಚು ಆಕರ್ಷಕ ಹಾಗೂ ಕೈತುಂಬ ಹಣ ಬರುವ ಕ್ಷೇತ್ರಗಳು ಈ ಯುವಕರನ್ನು ಕೈಬೀಸಿ ಕರೆಯಲು ಆರಂಭಿಸಿದವು. ನಗರಗಳಲ್ಲಿ ‘ಫ್ಲಾಟ್’ ಸಂಸ್ಕೃತಿಯ ಉದಯವಾಯಿತು. ಕೈಯಲ್ಲಿ ಸಂಚಾರವಾಣಿ, ಕಾರ್ಯಾಲಯದಲ್ಲಿ ಗಣಕಯಂತ್ರ, ಪ್ರಯಾಣಿಸಲು ದ್ವಿಚಕ್ರವಾಹನ, ಚತುಶ್ಚಕ್ರ ವಾಹನಗಳಿಂದಾಗಿ ಜೀವನಕ್ಕೆ ವೇಗ ಲಭಿಸಿತು. ಯಾವಾಗ ದಿನ ಬೆಳಗಾಯಿತು, ಯಾವಾಗ ಸೂರ್ಯಾಸ್ತವಾಯಿತು ಎಂಬುದು ತಿಳಿಯದಂತಾಯಿತು. ‘ಹಮ್ ದೋ ಹಮಾರೆ ದೋ’ ಈ ವಿಚಾರವು ಹಿಂದೆ ಉಳಿಯಿತು. ಪತಿ-ಪತ್ನಿ ಇಬ್ಬರೂ ಹಣ ಮತ್ತು ಕ್ಯಾರಿಯರ್‌ನ ಹಿಂದೆ ಓಡಿದರು. ಅದರ ಪರಿಣಾಮದಿಂದ ನಗರದಲ್ಲಿ ತ್ರಿಕೋನ, ಚೌಕೋನ ಕುಟುಂಬಗಳ ನಿರ್ಮಾಣವಾಯಿತು. ಸಂವೇದನಾಶೀಲ ಯುವಕರು ತಮ್ಮ ಪೋಷಕರಿಗೆ ಅದರಲ್ಲಿ ಅವಕಾಶ ಕಲ್ಪಿಸಿದರು. ಕೆಲವರಿಗೆ ಮಾತ್ರ ತಮ್ಮ ಪೋಷಕರು ಅಡಚಣೆ ಮತ್ತು ಕಷ್ಟಕರವಾಗಿ ಕಾಣತೊಡಗಿದರು. ೨೧ ನೆಯ ಶತಮಾನದ ಹೊಸ ವೃದ್ಧರ ಪೀಳಿಗೆಯು ಕಾಲಪ್ರವಾಹಕ್ಕನುಸಾರ ಬದಲಾಗುವುದು ಅನಿವಾರ್ಯವಾಗಿದೆ. ನೌಕರಿ-ವ್ಯವಸಾಯದಿಂದ ನಿವೃತ್ತರಾದ ವೃದ್ಧರು ವಿದ್ಯಾವಂತ ಹಾಗೂ ಆರ್ಥಿಕ ದೃಷ್ಟಿಯಲ್ಲಿ ಸುಸ್ಥಿತಿಯಲ್ಲಿದ್ದಾರೆ. ನಿವೃತ್ತಿಯ ಮೊದಲ ನಿಯೋಜನೆಯಿಂದಾಗಿ ಹಾಗೂ ಹೂಡಿಕೆಯ ಅನೇಕ ಕ್ಷೇತ್ರಗಳು ನಿರ್ಮಾಣವಾಗಿರುವುದರಿಂದ ಸುಶಿಕ್ಷಿತ ವೃದ್ಧರು ನಿವೃತ್ತಿಯ ನಂತರ ಸುಖಸಮಾಧಾನದಿಂದ ಜೀವನವನ್ನು ಕಳೆಯುವ ಸಾಧ್ಯತೆಯು ಹೆಚ್ಚಾಯಿತು.

ಮಗನೆಂದರೆ, ‘ವಂಶದ ದೀಪ ಅಥವಾ ಇಳಿ ವಯಸ್ಸಿನ ಆಧಾರ’, ಎನ್ನುವ ವಿಚಾರ ಕಾಲಬಾಹ್ಯವಾಗುತ್ತಾ ಹೋಗುತ್ತಿದೆ. ಆದ್ದರಿಂದ ವೃದ್ಧರು ಸೀಮಿತ ಸಂತತಿಯನ್ನೆ ಸಮಾಧಾನವೆಂದು ತಿಳಿಯುತ್ತಿದ್ದಾರೆ. ಪ್ರಗತಿ ಹೊಂದಿದ ವೈದ್ಯಕೀಯಶಾಸ್ತ್ರ ಮತ್ತು ಆಧುನಿಕ ಜೀವನಪದ್ಧತಿಯಿಂದಾಗಿ ಜನಸಾಮಾನ್ಯರ ಸರಾಸರಿ ಆಯುಷ್ಯ ಹೆಚ್ಚಾಯಿತು. ಮಿತ ಆಹಾರ, ಸಾಕಷ್ಟು ವ್ಯಾಯಾಮ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿದರೆ ೭೫, ೮೦ ವಯಸ್ಸಿನ ಸ್ತ್ರೀ-ಪುರುಷರು ಗಟ್ಟಿಮುಟ್ಟಾಗಿ ಜೀವಿಸಲು ಸಾಧ್ಯವಿದೆ, ಎನ್ನುವ ವಿಚಾರವು ಸ್ವೀಕಾರವಾಗಿದೆ; ಆದ್ದರಿಂದ ೬೦ ವರ್ಷದ ಮೇಲಿನ ವ್ಯಕ್ತಿಗೆ ‘ವೃದ್ಧ’ ಅಥವಾ ‘ಮುದುಕ’ ಎಂದು ಹೇಳದೆ ‘ಹಿರಿಯ ನಾಗರಿಕ’ ಎಂದು ಹೇಳಬೇಕು ಎನ್ನುವ ಪದ್ಧತಿ ಆರಂಭವಾಗುತ್ತಿದೆ. ಆಧುನಿಕ ವೈದ್ಯಕೀಯಶಾಸ್ತ್ರವು ಹಲ್ಲಿನ ಸೆಟ್, ಕಣ್ಣಿಗಾಗಿ ಕನ್ನಡಕ, ಕಿವಿಯಲ್ಲಿ ಶ್ರವಣಯಂತ್ರ, ಇಷ್ಟವಿದ್ದರೆ ತಲೆಯ ಮೇಲೆ ವಿಗ್ (ಕೂದಲಿನ ಟೊಪ್ಪಿ), ಇತ್ಯಾದಿ ಸಾಧನಗಳನ್ನು ಉಪಲಬ್ಧ ಮಾಡಿ ಕೊಟ್ಟಿದೆ. ಆದ್ದರಿಂದ ಇಂದಿನ ವೃದ್ಧನು ಯುವಕನಾಗಿದ್ದಾನೆ. ಆರೋಗ್ಯ ಶಿಬಿರಗಳು, ಅದರಿಂದಾಗುವ ಪರೀಕ್ಷಣೆಗಳಿಂದ ಆರೋಗ್ಯದ ವಿಷಯದ ಅರಿವು, ಜಾಗೃತಿ ನಿರ್ಮಾಣವಾಗಿದೆ. ಹಿರಿಯ ನಾಗರಿಕರ ಚಳುವಳಿಯಿಂದಾಗಿ ಪ್ರಯಾಣದಲ್ಲಿ ಸೌಲಭ್ಯಗಳು, ಆದಾಯ ತೆರಿಗೆಯಲ್ಲಿ ವಿನಾಯಿತಿ, ಬ್ಯಾಂಕ್‌ಗಳಲ್ಲಿನ ಹೆಚ್ಚಿನ ಬಡ್ಡಿದರ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಡಚಣೆಯಿಲ್ಲದೆ ಪ್ರವೇಶ ಇತ್ಯಾದಿ ಸೌಲಭ್ಯಗಳಿಂದಾಗಿ ಹಿರಿಯರಿಗೆ ಸಮಾಧಾನವಾಗಿದೆ. ಆದ್ದರಿಂದ ಇಂದಿನ ಹಿರಿಯ ನಾಗರಿಕರು ಕನಿಕರ ಪಡುವಂತಿರದೆ, ಅವರು ಸಮಾಜಕ್ಕೆ ಹೊರೆಯಾಗದೆ ಸಮಾಜದಲ್ಲಿ ಗೌರವದ ಸ್ಥಾನವಿರುವ ಮತ್ತು ದೇಶದ ಜವಾಬ್ದಾರ ನಾಗರಿಕರೆಂಬ ಪಾತ್ರವನ್ನು ನಿರ್ವಹಿಸಲು ಸಕ್ಷಮರಾಗಿದ್ದಾರೆ.

ವೃದ್ಧರಿಗಾಗುವ ಲಾಭ !

ಇವೆಲ್ಲ ವಿಷಯಗಳ ಪರಿಣಾಮ ಹೇಗಾಗಿದೆಯೆಂದರೆ, ಇಂದಿನ ಹಿರಿಯ ನಾಗರಿಕರು ಮಕ್ಕಳ ಸಹಕಾರವಿದ್ದರೆ, ತ್ರಿಕೋನ, ಚೌಕೋನ ಕುಟುಂಬದಲ್ಲಿರಲು ಸಾಧ್ಯವಿದೆ. ಕುಟುಂಬವು ಎಲ್ಲಕ್ಕಿಂತ ಉತ್ತಮವಾದ ವೃದ್ಧಾಶ್ರಮವಾಗಿದೆ ಎಂಬುದನ್ನು ಅವರು ತಿಳಿದುಕೊಂಡಿದ್ದಾರೆ. ಕುಟುಂಬದಲ್ಲಿ ಸುಲಭವಾದ ಕೆಲಸಗಳನ್ನು ಮಾಡಿ ಅವರು ತಮ್ಮ ಉಪಯುಕ್ತತೆಯ ಮೌಲ್ಯವನ್ನು ಹೆಚ್ಚಿಸುತ್ತಾರೆ ಹಾಗೂ ಉಪದ್ರವ ಮೌಲ್ಯಗಳನ್ನು ಕಡಿಮೆಗೊಳಿಸುತ್ತಾರೆ. ಮೊಮ್ಮಕ್ಕಳಿಗೂ ಅಜ್ಜಿ-ಅಜ್ಜ ಸಿಗುತ್ತಾರೆ. ಈ ರೀತಿಯಲ್ಲಿ ಯುವಪೀಳಿಗೆಯನ್ನು ಅರ್ಥ ಮಾಡಿಕೊಂಡು ಆಧುನಿಕ ವಾನಪ್ರಸ್ಥಾಶ್ರಮದ ಆನಂದವನ್ನು ಸವಿಯುತ್ತಾರೆ.

ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸ್ವತಂತ್ರ ಹಾಗೂ ವೃದ್ಧ ದಂಪತಿಗಳು ಸ್ವತಂತ್ರವಾಗಿ ವಾಸಿಸುತ್ತಿದ್ದರೆ, ‘ಮಕ್ಕಳು ಬೇರೆಯಾದರು’, ಎನ್ನುವ ಮನಸ್ತಾಪ ಮಾಡಿಕೊಳ್ಳದೆ ವಾಸ್ತವಿಕತೆಯನ್ನು ಸ್ವೀಕರಿಸುತ್ತಿದ್ದಾರೆ. ಹಬ್ಬದ ದಿನಗಳಂದು ಒಟ್ಟಾಗುತ್ತಾರೆ. ಮಕ್ಕಳು-ಮೊಮ್ಮಕ್ಕಳೊಂದಿಗೆ ಆಟವಾಡುತ್ತಾರೆ. ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಬೇರೆ ಊರಿನಲ್ಲಿ ಬೇರೆ ಪ್ರಾಂತದಲ್ಲಿ, ವಿದೇಶಗಳಲ್ಲಿ ವಾಸಿಸುತ್ತಿದ್ದರೆ, ಅವರ ಸಂಪರ್ಕದಲ್ಲಿರುತ್ತಾರೆ. ತಮ್ಮ ಮಿತ್ರರು, ಸಂಬಂಧಿಕರು ಹಾಗೂ ವಿಶೇಷವಾಗಿ ನೆರೆಮನೆಯರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ; ಏಕೆಂದರೆ ಕೊನೆಗಳಿಗೆಯಲ್ಲಿ ಅವರೆ ಉಪಯೋಗಕ್ಕೆ ಬರುತ್ತಾರೆ.

ವೃದ್ಧಾಶ್ರಮವು ಕುಟುಂಬವೆಂದು ತಿಳಿಯುವ ಪ್ರಯತ್ನವಾಗಬೇಕು !

‘ಇಂದಿನ ವೃದ್ಧಾಶ್ರಮಗಳು ಕೂಡ ವಿಸ್ತಾರವಾದ ಕುಟುಂಬವಾಗಬೇಕು’, ಎಂಬುದು ಅಪೇಕ್ಷಿತವಿದೆ. ಅವುಗಳಲ್ಲಿ ಊಟ-ತಿಂಡಿ ಕೊಡುವ ಖಾನಾವಳಿಗಳು, ವಸತಿಗೃಹಗಳು ಇತ್ಯಾದಿಗಳ ಸ್ವರೂಪವಿರದೆ ಅವುಗಳು ವಿಸ್ತಾರವಾದ ಕುಟುಂಬ ಅಂದರೆ ‘ನಮ್ಮ ಮನೆಯಾಗಿದೆ’, ಎಂದು ವೃದ್ಧರಿಗೆ ಅನಿಸಬೇಕು, ಎನ್ನುವ ದೃಷ್ಟಿಯಿಂದ ಆಧುನಿಕ ವೃದ್ಧಾಶ್ರಮವಾಗುವುದು ಕಾಲದ ಅವಶ್ಯಕತೆಯಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿರಿಯರಿಗಾಗಿ ನಿಲುವನ್ನು ಘೋಷಿಸಬೇಕು !

ಹಿರಿಯ ನಾಗರಿಕರಲ್ಲಿ ಶೇ. ೨೫ ರಿಂದ ೩೦ ರಷ್ಟು ವೃದ್ಧರು ಬಡತನರೇಖೆಯ ಕೆಳಗಿದ್ದಾರೆ. ಈ ವೃದ್ಧರು ವಿಶೇಷವಾಗಿ ಗ್ರಾಮೀಣ ಹಾಗೂ ಆದಿವಾಸಿ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಹೊಟ್ಟೆಗೆ ಅನ್ನವಿಲ್ಲದ ಕುಟುಂಬಗಳು ನಗರಗಳಲ್ಲಿ ಕೂಡ ಇವೆ. ಅವರ ಸ್ಥಿತಿ ಮಾತ್ರ ದಯನೀಯವಾಗಿದೆ. ದುರ್ಬಲ ಆರ್ಥಿಕ ಸ್ಥಿತಿ, ಅಸಮರ್ಪಕ ಆರೋಗ್ಯ ಸೌಲಭ್ಯಗಳು ಹಾಗೂ ಅಭದ್ರತೆಯಿಂದಾಗಿ ಈ ಹಿರಿಯ ನಾಗರಿಕರ ಗುಂಪಿನ ಬಗ್ಗೆ ಸಮಾಜ ಮತ್ತು ಸರಕಾರ ಗಮನ ಹರಿಸುವುದು ಅತ್ಯಂತ ಆವಶ್ಯಕವಾಗಿದೆ. ಅವರಿಗಾಗಿ ನಿವೃತ್ತಿ ಯೋಜನೆ, ವೈದ್ಯಕೀಯ ಸೌಲಭ್ಯಗಳು, ವಸತಿ ವ್ಯವಸ್ಥೆ ಮತ್ತು ಭದ್ರತೆಯ ಸಾಕಷ್ಟು ಅವಕಾಶ ಕಲ್ಪಿಸುವುದು ರಾಜ್ಯಗಳ ಕರ್ತವ್ಯವಾಗಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಿರಿಯರಿಗೆ ಸಂಬಂಧಿಸಿದ ಅವುಗಳ ನಿಲುವನ್ನು ಘೋಷಿಸಬೇಕು, ಎಂಬ ಆಗ್ರಹಪೂರ್ವಕ ನಿಲುವನ್ನು ಹಿರಿಯ ನಾಗರಿಕ ಸಂಘಟನೆಗಳು ತೆಗೆದುಕೊಳ್ಳುತ್ತಿವೆ.’

– ರಾಜಾರಾಮ ವಾಘ್ (ಆಧಾರ : ಮಾಸಿಕ ‘ಮನೋಹಾರಿ ಮನೋಯುವಾ’)