ಸನಾತನ ಧರ್ಮದ ತತ್ತ್ವಗಳು ಮತ್ತು ಪರಂಪರೆಗಳು ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ `ಪ್ರಾಚೀನ ವೈಜ್ಞಾನಿಕ ಜ್ಞಾನ’ದ ಕುರಿತು ಸಂಶೋಧನೆ ಮಂಡನೆ !

ಅನೇಕ ಶತಮಾನಗಳಿಂದ ಭಾರತವು ವೇದಗಳು, ಉಪನಿಷತ್ತುಗಳು ಮತ್ತು ಭಗವದ್ಗೀತೆಯಂತಹ ಧರ್ಮಗ್ರಂಥಗಳಿಂದ ಮಾತ್ರವಲ್ಲದೆ, ವೈಜ್ಞಾನಿಕ ಚಿಂತನೆಯಿಂದಲೂ ವಿಶ್ವಕ್ಕೆ ನೀಡಿದ ಸಮೃದ್ಧ ಜ್ಞಾನಕ್ಕಾಗಿ ಗುರುತಿಸಿಕೊಂಡಿದೆ. ಗುರುತ್ವಾಕರ್ಷಣೆಯ ಸಿದ್ಧಾಂತ, ಶೂನ್ಯದ ಪರಿಕಲ್ಪನೆ ಮತ್ತು ಬೆಳಕಿನ ವೇಗದ ಮಾಪನ ಇತ್ಯಾದಿ ಪರಿಕಲ್ಪನೆಯು ಪ್ರಾಚೀನ ಭಾರತೀಯ ಜ್ಞಾನದ ಭಾಗವಾಗಿದೆ ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಶ್ರೀ. ಶಾನ್ ಕ್ಲಾರ್ಕ್ ಪ್ರತಿಪಾದಿಸಿದರು. ಅವರು `ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೊಯಿಕೊಡ (ಐಐಎಂ) ಕೇರಳ’ ಆಯೋಜಿಸಿದ್ದ `ದಿ ಇಂಟರ್‌ನ್ಯಾಶನಲ್ ಕಾನ್‌ಕ್ಲೇವ್ ಆನ್ ಗ್ಲೋಬಲೈಸಿಂಗ್ ಇಂಡಿಯನ್ ಥಾಟ್ 2021‘ ನ ಕಾರ್ಯಕ್ರಮದಲ್ಲಿ ಆನ್‌ಲೈನ್ ಪ್ರಸ್ತುತಿಯನ್ನು ಮಂಡಿಸುವಾಗ ಮಾತನಾಡುತ್ತಿದ್ದರು. ಶ್ರೀ. ಕ್ಲಾರ್ಕ್ ಇವರು `ಆಧುನಿಕ ಯುಗದಲ್ಲಿ ಪ್ರಾಚೀನ ವೈಜ್ಞಾನಿಕ ಜ್ಞಾನದ ಉಪಯುಕ್ತತೆ’ ಈ ಶೋಧ ಪ್ರಬಂಧವನ್ನು ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಈ ಶೋಧಪ್ರಬಂಧದ ಮುಖ್ಯ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

ಶ್ರೀ. ಶಾನ್ ಕ್ಲಾರ್ಕ್

ಕ್ಲಾರ್ಕ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು `ಯುನಿವರ್ಸಲ್ ಆರಾ ಸ್ಕ್ಯಾನರ್ ‘ (ಯು.ಎ.ಎಸ್.) ಪ್ರಭಾವಳಿ ಮಾಪನ ಯಂತ್ರವನ್ನು ಬಳಸಿಕೊಂಡು ನಡೆಸಿದ ಕೆಲವು ಪರೀಕ್ಷೆಗಳ ಮಾಹಿತಿ ನೀಡಿದರು. ಒಂದು ಪರೀಕ್ಷಣೆಯಲ್ಲಿ, ಮಹಿಳೆಯು ವಿವಿಧ ಉಡುಪುಗಳನ್ನು ಧರಿಸಿದ ನಂತರ `ಯು.ಎ.ಎಸ್.’ ಯಂತ್ರವನ್ನು ಬಳಸಿ ಆಕೆಯ ಪ್ರಭಾವಳಿಯನ್ನು ಅಳೆಯಲಾಯಿತು. ಧರಿಸಿದ ಎಲ್ಲಾ ಉಡುಪುಗಳಲ್ಲಿ ಒಂಬತ್ತು ಗಜದ ಸೀರೆ ಮತ್ತು ಆರು ಗಜದ ಸೀರೆಯನ್ನು ಧರಿಸಿದ ನಂತರ ಮಹಿಳೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗಿತ್ತು. ಇತರ ಉಡುಪುಗಳಲ್ಲಿ ನಕಾರಾತ್ಮಕ ಶಕ್ತಿ ಇತ್ತು. ಬಿಳಿ ಶರ್ಟ್-ಪ್ಯಾಂಟ್ ಮತ್ತು ಕಪ್ಪು ಶರ್ಟ್-ಪ್ಯಾಂಟ್ ಧರಿಸಿದ ಮಹಿಳೆಯ ಪರೀಕ್ಷಣೆಯಲ್ಲಿ, ಬಿಳಿ ಉಡುಪುಗಳ ತುಲನೆಯಲ್ಲಿ ಕಪ್ಪು ಉಡುಪು ಆಕೆಯ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರಿತು ಎಂದು ಕಂಡುಬಂದಿತು.

ಪ್ರಪಂಚದಲ್ಲಿ ವ್ಯಾಪಕವಾಗಿ ಬಳಸಲಾಗುವ 19 ಭಾಷೆಗಳ ತುಲನಾತ್ಮಕ ಅಧ್ಯಯನದಲ್ಲಿ ಸಂಸ್ಕೃತ ಮತ್ತು ದೇವನಾಗರಿ ಲಿಪಿಗಳಲ್ಲಿ ಅತ್ಯಂತ ಹೆಚ್ಚು ಸಕಾರಾತ್ಮಕ ಸ್ಪಂದನಗಳು ಕಂಡು ಬಂದಿತು. 34 ದೇಶಗಳ ಮಣ್ಣು ಮತ್ತು ನೀರಿನ ಮಾದರಿಗಳ ತುಲನಾತ್ಮಕ ಅಧ್ಯಯನ ಮಾಡಿದ ನಂತರ ಕೇವಲ ಭಾರತದ ಮಾದರಿಗಳು ಆಧ್ಯಾತ್ಮಿಕ ಮಟ್ಟದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೊಂದಿವೆ ಎಂದು ಕಂಡು ಬಂದಿತು. ಇದೇ ರೀತಿ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿನ ರಾಗಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ಕಡಿಮೆ ಮಾಡಲು, ಜೊತೆಗೆ ರೋಗಿಯ ಸಕಾರಾತ್ಮಕ ಶಕ್ತಿಯ ಪ್ರಭಾವಳಿಯನ್ನು ಹೆಚ್ಚಿಸಲು ಉಪಯುಕ್ತವಾಗಿವೆ ಎಂದು ಕಂಡು ಬಂದಿತು. ಒಟ್ಟಾರೆ ಭಾರತೀಯ ಸಾಂಪ್ರದಾಯಿಕ ಆಚರಣೆಗಳು, ತತ್ತ್ವಗಳು, ಸಂಪ್ರದಾಯಗಳು ಮತ್ತು ಆಧುನಿಕ ಆಚರಣೆಗಳ ತುಲನಾತ್ಮಕ ಅಧ್ಯಯನ ಮಾಡಿದಾಗ, `ಭಾರತೀಯ ಸಂಪ್ರದಾಯಗಳು’ ಜಗತ್ತಿನಲ್ಲಿ ಆಧ್ಯಾತ್ಮಿಕ ಮಟ್ಟದಲ್ಲಿ ಸಾಕಷ್ಟು ಸಕಾರಾತ್ಮಕತೆಯನ್ನು ಸೃಷ್ಟಿಸುತ್ತವೆ, ಪರಿಣಾಮವಾಗಿ ವ್ಯಕ್ತಿಯ ಮತ್ತು ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ, ಅದೇ ರೀತಿ `ಆಧುನಿಕ ಆಚರಣೆ’ಯಿಂದ ಆಧ್ಯಾತ್ಮಿಕ ಮಟ್ಟದಲ್ಲಿ ನಕರಾತ್ಮಕತೆ ಹೆಚ್ಚಾಗುತ್ತದೆ.