ಕರ್ಮಯೋಗಿಗಳ ‘ಪದ್ಮ’ ಸನ್ಮಾನ !

ಸಂಪಾದಕೀಯ

ನಿಸ್ವಾರ್ಥವಾಗಿ ಸಮಾಜಕಾರ್ಯ ಮಾಡುವ ಭಾರತೀಯರಿಗೆ ಪದ್ಮ ಪ್ರಶಸ್ತಿಗಳು ಲಭಿಸಿರುವುದು ಸಂತಸ ತಂದಿದೆ !

ದೇಶದ ಹಿತಕ್ಕಾಗಿ ಅಮೂಲ್ಯ ಕೊಡುಗೆಯನ್ನು ನೀಡಿದವರಿಗೆ ನವೆಂಬರ್ ೮ ರಂದು ‘ಪದ್ಮ’ ಪ್ರಶಸ್ತಿಗಳಿಂದ ಗೌರವಿಸಲಾಯಿತು. ಇಂದು ಅನೇಕರು ‘ಪ್ರಸಿದ್ಧಿ’ಯ ಸ್ವಾರ್ಥಕ್ಕಾಗಿ ಪರಿಶ್ರಮ ಪಡುತ್ತಿರುವುದು ನೋಡಲು ಸಿಗುತ್ತದೆ. ಪ್ರಾಯಶಃ ತಮ್ಮ ಪ್ರಾಬಲ್ಯ ಅಥವಾ ಪ್ರಾಮುಖ್ಯತೆಯನ್ನು ಸ್ಥಾಪಿಸಲು ಇದೊಂದು ಸ್ಪರ್ಧೆಯಾಗಿಬಿಟ್ಟಿದೆ. ಆ ದೃಷ್ಟಿಯಿಂದ ಕಳೆದ ಕೆಲವು ವರ್ಷಗಳಿಂದ ಪದ್ಮ ಪ್ರಶಸ್ತಿಗಳು ಸಮಾಜದ ಕೆಲವು ನಿರ್ದಿಷ್ಟ ಪ್ರತಿಷ್ಠಿತರಿಗೆ ಅಥವಾ ಹೆಸರಾಂತ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಆದರೆ ಈಗ ಅನೇಕ ದಶಕಗಳ ಕಾಲ ನಿಸ್ವಾರ್ಥವಾಗಿ ಕೆಲಸ ಮಾಡುವ ಮತ್ತು ಪ್ರಸಿದ್ಧಿಯ ಲಾಲಸೆಯಿಂದ ದೂರವಿರುವವರನ್ನು ಪರಿಗಣಿಸಲಾಗುತ್ತಿದೆ. ಇದು ಸರ್ವಸಾಮಾನ್ಯ ಭಾರತೀಯ ನಾಗರಿಕರಿಗಾಗಿ ಖಂಡಿತ ಆನಂದದಾಯಕವಾಗಿದೆ.

ಸಾಮಾನ್ಯರಲ್ಲಿನ ‘ಅಸಾಮಾನ್ಯರು’ !

ಪದ್ಮ ಪ್ರಶಸ್ತಿಯನ್ನು ಪ್ರಾಪ್ತಮಾಡಿಕೊಂಡವರಲ್ಲಿ ಉದ್ಯಮಿಗಳಾದ ಆನಂದ ಮಹಿಂದ್ರಾ, ನಟಿ ಕಂಗನಾ ರಾಣಾವತ, ಗಾಯಕ ಅದನಾನ್ ಸಾಮಿ, ಬ್ಯಾಡಮಿಂಟನ್ ಪಟು ಪಿ.ವಿ. ಸಿಂಧೂ ಮತ್ತು ಮುಷ್ಟಿಯೋಧೆ (ಬಾಕ್ಸರ್) ಮತ್ತು ರಾಜ್ಯಸಭೆಯ ಸಂಸದೆ ಮೇರಿ ಕಾಮ್‌ರಂತಹ ಪ್ರಸಿದ್ಧ ಮುಖಗಳಿವೆ. ಅವರನ್ನು ಪ್ರತ್ಯೇಕವಾಗಿ ಪರಿಚಯ ಮಾಡಿಕೊಡುವ ಆವಶ್ಯಕತೆಯಿಲ್ಲ; ಆದರೆ ಈಗ ಇವರಲ್ಲಿ ಕುಗ್ರಾಮಗಳಲ್ಲಿಯೂ ಕೆಲಸವನ್ನು ಮಾಡುವವರ ಸಮಾವೇಶವಿದೆ. ಇಂತಹವರ ಪೈಕಿ ಒಬ್ಬರೆಂದರೆ ಕರ್ನಾಟಕದ  ಅಂಕೋಲಾ ತಾಲೂಕಿನ ಹೊನ್ನಳ್ಳಿಯ ೭೨ ವರ್ಷದ ಆದಿವಾಸಿ ಮಹಿಳೆ ತುಳಸಿ ಗೌಡ ! ಪದ್ಮ ಪ್ರಶಸ್ತಿಯನ್ನು ಪಡೆಯಲು ಅವರು ಬರಿಗಾಲಿನಲ್ಲಿ ಬಂದಿದ್ದರು. ಇದರಿಂದ ಅವರ ಅತಿಸರಳತೆ ಸ್ಪಷ್ಟವಾಗುತ್ತದೆ; ಆದರೆ ಇಂದು ಅವರು ದೇಶದೆದುರು ಅಸಾಮಾನ್ಯತ್ವದ ಉದಾಹರಣೆಯನ್ನಿಟ್ಟಿದ್ದಾರೆ. ಕಳೆದ ಸುಮಾರು ೬೦ ವರ್ಷಗಳಿಂದ ಅಂದರೆ ೧೨ ನೇ ವಯಸ್ಸಿನಿಂದ ಇಲ್ಲಿಯವರೆಗೆ ಅವರು ೩೦ ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಈ ಬಗ್ಗೆ ಎಲ್ಲಿಯೂ ಪ್ರಚಾರ ಪ್ರಸಾರ ಮಾಡಲಿಲ್ಲ. ಇಲ್ಲದಿದ್ದರೆ ಯುರೋಪ್‌ನ ೧೮ ವರ್ಷದ ಗ್ರೇಟಾ ಥನಬರ್ಗ್ ಮತ್ತು ಪಾಕಿಸ್ತಾನದ ಮಲಾಲಾ ಯುಸೂಫಝಾಯಿ ಇವರಂತಹ ಯುವತಿಯರಿದ್ದಾರೆ, ಇವರು ಯಾವುದೇ ವಿಶೇಷ ಕಾರ್ಯವನ್ನು ಮಾಡಿಲ್ಲ, ಗೌಡ ಇವರಷ್ಟು ಇಲ್ಲವೇ ಇಲ್ಲ, ಆದರೂ ಅವರಿಗೆ ತಕ್ಷಣ ಪ್ರತಿಷ್ಠೆ ದೊರಕುತ್ತದೆ ಮತ್ತು ಜಾಗತಿಕ ಪ್ರಶಸ್ತಿಗಳ ಸುರಿಮಳೆಯನ್ನೇ ಸುರಿಸಲಾಗುತ್ತದೆ. ಅವರ ತುಲನೆಯಲ್ಲಿ ಗೌಡ ಇವರ ಪ್ರಾಮುಖ್ಯತೆಯು ಅವರಿಗಿಂತ ಭಿನ್ನವಾಗಿದೆ. ಜಾಗತಿಕ ವೇದಿಕೆಯಲ್ಲಿ ಇಂತಹವರಿಗೆ ನಿಶ್ಚಿತವಾಗಿಯೂ ಪ್ರಶಸ್ತಿ ಸಿಗುವುದಿಲ್ಲ, ಆದರೆ ಅನಂತಕೋಟಿ ಬ್ರಹ್ಮಾಂಡಗಳ ಸ್ವಾಮಿಯಾಗಿರುವ ಭಗವಂತನು ಅವರನ್ನು ಗಮನಿಸುತ್ತಾನೆ, ಎಂದು ಹಿಂದೂಗಳ ಭಾವವಾಗಿದೆ. ಇಂದು ಭಾರತ ಸರಕಾರವೂ ಅವರನ್ನು ಸನ್ಮಾನಿಸಿದೆ.

ಈ ವರ್ಷ ದೊರಕಿದ ಪದ್ಮಶ್ರೀ ಪ್ರಶಸ್ತಿಗಳಲ್ಲಿ ಇನ್ನೊಂದು ಹೆಸರೆಂದರೆ ಮಂಗಳೂರಿನ ಹರೇಕಳ ಹಾಜಬ್ಬಾ. ಇವರು ಕಿತ್ತಳೆ ಹಣ್ಣುಗಳನ್ನು ಮಾರುವ ಮೂಲಕ ಜೀವನವನ್ನು ಸಾಗಿಸುವ ಅತ್ಯಂತ ಸರಳ ವ್ಯಕ್ತಿ ! ಹಾಜಬ್ಬಾ ಇವರ ‘ನ್ಯೂಪಡ್ಪು’ ಎಂಬ ಹಳ್ಳಿಯಲ್ಲಿ ಶಾಲೆಗಳಿರಲಿಲ್ಲ. ಅವರು ೨೦೦೦ ನೇ ಇಸವಿಯಲ್ಲಿ ತಾವು ಗಳಿಸಿದ ಎಲ್ಲವನ್ನೂ ಖರ್ಚು ಮಾಡಿ ಒಂದು ಎಕರೆ ಭೂಮಿಯಲ್ಲಿ ಪ್ರಾಥಮಿಕ ಶಾಲೆಯನ್ನು ಕಟ್ಟಿದರು. ಪ್ರತಿದಿನ ಕಿತ್ತಳೆ ಮಾರಿ ೧೫೦ ರೂಪಾಯಿಗಳನ್ನು ಗಳಿಸುವ ಹಾಜಬ್ಬಾ ಇವರ ಶಾಲೆಯಲ್ಲಿ ಇಂದು ೨೧ ವರ್ಷಗಳ ನಂತರ ಒಂದನೇಯ ತರಗತಿಯಿಂದ ಹತ್ತನೇಯ ತರಗತಿಯವರೆಗೆ ಒಟ್ಟು ೧೭೫ ಮಕ್ಕಳು ಓದುತ್ತಿದ್ದಾರೆ. ಆದುದರಿಂದ ಎಲ್ಲಿ ಹಾಜಬ್ಬಾರಂತಹ ಸಾಮಾನ್ಯರಲ್ಲಿನ ಅಸಾಮಾನ್ಯ ವ್ಯಕ್ತಿ ಮತ್ತು ಎಲ್ಲಿ ರಾಜಕಾರಣಕ್ಕಾಗಿ ಅಥವಾ ಕಪ್ಪು ಹಣವನ್ನು ಬಿಳಿ ಮಾಡಲು ಶಾಲೆ-ಮಹಾವಿದ್ಯಾಲಯಗಳನ್ನು ತೆರೆಯುವ ಇಂದಿನ ಕೆಲವು ಶಿಕ್ಷಣ ಚಕ್ರವರ್ತಿಗಳು ?

‘ಬೀಜಗಳ ಮಾತೆ’ ಎಂದರೆ ‘ಸೀಡ್ ಮದರ್’ ಈ ಹೆಸರಿನಿಂದ ಪ್ರಸಿದ್ಧರಾಗಿರುವ ರಾಹಿಬಾಯಿ ಸೊಮಾ ಪೊಪೆರೆ ಇವರು ಮಹಾರಾಷ್ಟ್ರದ ನಗರ ಜಿಲ್ಲೆಯ ಆದಿವಾಸಿ ಸಮಾಜದ ರೈತಳಾಗಿದ್ದು ಅವರಿಗೂ ಪದ್ಮಶ್ರೀ ಪ್ರಶಸ್ತಿಯು ದೊರಕಿದೆ. ರಾಹಿಬಾಯಿಯವರು ವಂಶಪರಂಪರೆಯಿಂದ ಬಂದ ಜ್ಞಾನದ ಲಾಭವನ್ನು ಪಡೆದು ೨೦ ವರ್ಷಗಳ ಹಿಂದೆ ಬೀಜಗಳನ್ನು ಉತ್ಪಾದಿಸಿ ಅವುಗಳನ್ನು ವಿತರಿಸಲು ಆರಂಭಿಸಿದರು. ಹಾಗೆಯೇ ಇಡೀ ಮಹಾರಾಷ್ಟ್ರವನ್ನು ವ್ಯಾಪಿಸಿ ದೇಶಿಯ ಬೀಜಗಳ ರಕ್ಷಣೆಗಾಗಿ ಅಭಿಯಾನವನ್ನು ನಡೆಸಿದರು. ಕೃಷಿ ವ್ಯವಸಾಯ, ಮಾರುಕಟ್ಟೆ ಸಮಿತಿಗಳು, ಇಷ್ಟೇ ಅಲ್ಲದೇ ರೈತರಿಗಾಗಿ ಇರುವ ವಿವಿಧ ಸರಕಾರಿ ಯೋಜನೆಗಳಲ್ಲಿಯೂ ಕಂಡು ಬರುವ ಭ್ರಷ್ಟಾಚಾರಕ್ಕೆ ರಾಹಿಬಾಯಿಯವರ ಕಪಾಳಮೋಕ್ಷವೇ ಆಗಿದೆ. ಕೇಂದ್ರ ಸರಕಾರವು ಸರ್ವಸಾಮಾನ್ಯ ಸಮಾಜದಲ್ಲಿನ ಇಂತಹ ರತ್ನಗಳನ್ನು ಹುಡುಕಿ ಅವರನ್ನು ಯಥೋಚಿತವಾಗಿ ಸನ್ಮಾನಿಸಿತು. ಇದರಿಂದ ಭಾರತೀಯ ಸಮಾಜಕ್ಕೆ ನಿಸ್ವಾರ್ಥ ಕಾರ್ಯವನ್ನು ಮಾಡಲು ಪ್ರೇರಣೆ ಸಿಗಲಿದೆ.

‘ಭೂಷಣ’ಪ್ರಾಯ ಗೌರವ !

ಪಂಡಿತ್ ಛನ್ನುಲಾಲ್ ಮಿಶ್ರಾ

ಈ ವರ್ಷ ‘ಪದ್ಮವಿಭೂಷಣ’ ಈ ಎರಡನೇಯ ಸರ್ವೋಚ್ಚ ನಾಗರಿಕ ಪ್ರಶಸ್ತಿಯನ್ನು ಪಡೆಯುವವರಲ್ಲಿ ವಾರಣಾಸಿಯ ಸುಪ್ರಸಿದ್ಧ ಠುಮರಿ ಗಾಯಕರಾದ ಪಂಡಿತ ಛನ್ನುಲಾಲ ಮಿಶ್ರ ಇವರ ಹೆಸರನ್ನು ಉಲ್ಲೇಖಿಸುವುದು ಆವಶ್ಯಕವಾಗಿದೆ. ಕಿರಾನಾ ಮನೆತನ ಮತ್ತು ಬನಾರಸಿ ಖ್ಯಾಲ್ (ರಾಗ ವಿಸ್ತಾರದ ಒಂದು ಪದ್ಧತಿಯ) ಪ್ರಮುಖ ಗಾಯಕ ಪಂಡಿತ್ ಮಿಶ್ರಾ ಇವರ ಭಜನೆಗಳು ಅತ್ಯಂತ ಜನಪ್ರಿಯವಾಗಿವೆ. ಅವರ ಗಾಯನದಿಂದ ಭಗವಂತನ ಬಗ್ಗೆ ಅವರಲ್ಲಿನ ಶರಣಾಗತಭಾವದ ಅನುಭೂತಿ ಬರುತ್ತದೆ. ಪಂಡಿತ್ ಛನ್ನುಲಾಲ್ ಮಿಶ್ರಾ ಇವರ ಸ್ಫೂರ್ತಿದಾಯಕ ಜೀವನವು ಅಧ್ಯಾತ್ಮಿಕತೆಯ, ಹಾಗೆಯೇ ‘ಕಲೆ ಕಲೆಗಾಗಿ ಇರದೇ ಅದು ಈಶ್ವರಪ್ರಾಪ್ತಿಗಾಗಿ ಇದೆ’, ಎಂಬ ಸಂದೇಶವನ್ನು ನೀಡುತ್ತದೆ

ನಿಷ್ಕಾಮ ಕರ್ಮಯೋಗ !

ಭಾರತವು ಆಧ್ಯಾತ್ಮಿಕ ಭೂಮಿಯಾಗಿದೆ. ಅದು ಇಂದಿನವರೆಗೆ ಅನೇಕ ರತ್ನಗಳನ್ನು ರೂಪಿಸಿದೆ. ಇವರಲ್ಲಿ ಋಷಿಮುನಿಗಳು, ಸಾಧು ಸಂತರು ಇಂತಹ ಅಸಂಖ್ಯ ವಿಭೂತಿಗಳನ್ನು ಉಲ್ಲೇಖಿಸಬಹುದು. ಅವರಿಂದಾಗಿ ಭಾರತದ ಮತ್ತು ಇನ್ನೊಂದು ರೀತಿಯಲ್ಲಿ ಜಗತ್ತಿನ ಒಳಿತಾಗಿದೆ. ಭಾರತದ ‘ಗುರು-ಶಿಷ್ಯ ಪರಂಪರೆ’ಯು ಜಗತ್ತಿಗೆ ಭಾರತವು ನೀಡಿದ ಎಲ್ಲಕ್ಕಿಂತ ಅಮೂಲ್ಯ ಕೊಡುಗೆಯಾಗಿದೆ. ಹಿಂದೂ ಧರ್ಮವು ನೀಡಿದ ಆಧ್ಯಾತ್ಮಿಕ ಬೋಧನೆಗನುಸಾರ ಯಾವ ವ್ಯಕ್ತಿಯು ತನ್ನನ್ನು ಮರೆತು ಇತರರಿಗಾಗಿ ನಿಸ್ವಾರ್ಥದಿಂದ ಕಾರ್ಯವನ್ನು ಮಾಡುವನೋ ಮತ್ತು ಅವರ ಹಿತದ ಬಗ್ಗೆ ವಿಚಾರ ಮಾಡುವನೋ ಅವನನ್ನು ಕರ್ಮಯೋಗಿ ಎಂದು ಹೇಳುತ್ತಾರೆ. ‘ತತ್ಕರ್ಮ ಯತ್ ನ ಬನ್ಧಾಯ |’, ಈ ಸಂಸ್ಕೃತ ಶ್ಲೋಕದ ಪ್ರಕಾರ ‘ಯಾವ ಕರ್ಮದಿಂದ ಚಿತ್ತದಲ್ಲಿ ಯಾವುದೇ ಹೊಸ ಬಂಧನದ ಸಂಸ್ಕಾರವಾಗುವುದಿಲ್ಲವೋ, ಅದಕ್ಕೆ ‘ಕರ್ಮಯೋಗ’ ಈ ಶಬ್ದದ ಸಂದರ್ಭದಲ್ಲಿ ‘ಕರ್ಮ’ ಎನ್ನುತ್ತಾರೆ. ಇಂತಹ ಕರ್ಮಗಳನ್ನು ಸತತವಾಗಿ ಮಾಡುವುದ್ದಕ್ಕೆ, ‘ಕರ್ಮಯೋಗ’ ಎಂದು ಹೇಳುತ್ತಾರೆ. ಈ ಶಿಕ್ಷಣವು ಇಂದಿನ ಸಾಮಾಜಿಕ ವಿಚಾರಪ್ರವಾಹದ ತೀರಾ ವಿರುದ್ಧವಾಗಿದೆ. ಕೇಂದ್ರ ಸರಕಾರವು ಈ ದೃಷ್ಟಿಯಿಂದ ಇಂತಹ ಕರ್ಮಯೋಗಿಗಳನ್ನು ಹುಡುಕುತ್ತಿದೆ. ಈ ಮಾಧ್ಯಮದಿಂದ ಆಧುನಿಕ ಶಿಕ್ಷಣ ಪದ್ಧತಿಯಿಂದ ದಿಕ್ಕುತಪ್ಪಿದ ಭಾರತೀಯ ಸಮಾಜಕ್ಕೆ ನಿಶ್ಚಿತವಾಗಿಯೂ ಯೋಗ್ಯ ತಿರುವು ದೊರಕುವುದು. ಮನುಷ್ಯನನ್ನು ಸ್ವಾರ್ಥಿಯನ್ನಾಗಿಸುವ ಪಾಶ್ಚಾತ್ಯ ವಿಚಾರಸರಣಿಯ ಪ್ರಭಾವವು ಇಂತಹ ಉದಾಹರಣೆಗಳಿಂದ ಕಡಿಮೆಯಾಗಲು ಸಹಾಯವಾಗುವುದು ಎಂಬುದು ಖಚಿತ.