ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ(೮೭ ವರ್ಷ) ‘ಐ.ಐ.ಟಿ, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ನಲ್ಲಿ ಪಿ.ಎಚ್.ಡಿ. ಪಡೆದಿರುವ ಪ್ರಾಧ್ಯಾಪಕರೆಂದು ಕಾರ್ಯನಿರತರಾಗಿದ್ದರು. ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಇತ್ಯಾದಿ ವಿಷಯಗಳಲ್ಲಿ ೧೧ ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ? ಈ ಹಿಂದಿ ಭಾಷೆಯ ಗ್ರಂಥದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ೨೩/೦೪ ನೇ ಸಂಚಿಕೆಯಲ್ಲಿ ಪ್ರಕಟಿಸಿದ ಲೇಖನದಲ್ಲಿ ‘ಆಧುನಿಕತೆಯಿಂದ ಪೀಡಿತರಾದ ಯುವಕರ ಸಂದೇಹಗಳ ನಿವಾರಣೆಯನ್ನು ಯೋಗ್ಯ ರೀತಿಯಲ್ಲಿ ಮಾಡಲು ಸಾಧ್ಯವಾಗದಿರುವುದು, ಜ್ಞಾನ ಮತ್ತು ಅದರ ೪ ವಿಧಗಳು ಹಾಗೂ ಜ್ಞಾನ ಮತ್ತು ಜ್ಞಾನದ ಸಾಧನಗಳು ಇವುಗಳ ಬಗ್ಗೆ ಪೂರ್ಣತೆಯ ಅಭಾವ, ಇವುಗಳ ಬಗೆಗಿನ ಮಾಹಿತಿಯನ್ನು ಓದಿದೆವು. ಈ ವಾರ ನಾವು ಅದರ ಮುಂದಿನ ಭಾಗವನ್ನು ನೋಡೋಣ.     

(ಭಾಗ ೭)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/51249.html

೧೧. ಶಿಕ್ಷಣಪದ್ಧತಿಯನ್ನು ನಿರ್ಧರಿಸಲು ಬೇಕಾದ ವ್ಯಾಪಕ ದೃಷ್ಟಿಕೋನದ ಅಭಾವವಿರುವುದರಿಂದ ಮನುಷ್ಯನು ಅಜ್ಞಾನಿಯಾಗಿದ್ದಾನೆ

‘ಪ್ರಚಲಿತ ಆಧುನಿಕ ಶಿಕ್ಷಣಪದ್ಧತಿಯು ಸಂಕುಚಿತವಾಗಿದ್ದು ಅದರಲ್ಲಿ ವ್ಯಾಪಕ ದೃಷ್ಟಿಕೋನವಿಲ್ಲ. ಆಧುನಿಕ ಶಿಕ್ಷಣದಲ್ಲಿ ಕೇವಲ ಮನುಷ್ಯನ ನೈಸರ್ಗಿಕ ಆವಶ್ಯಕತೆಗಳಿಗಷ್ಟೇ ಗಮನ ನೀಡಲಾಗಿದೆ. ಅವುಗಳನ್ನು ಪೂರೈಸಲು ಬೇಕಾದ ಧ್ಯೇಯವನ್ನಷ್ಟೇ ಎದುರಿಟ್ಟುಕೊಂಡು ಅದಕ್ಕನುಸಾರ ಆಧುನಿಕ ಶಿಕ್ಷಣ ಪದ್ಧತಿಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಶಿಕ್ಷಣಪದ್ಧತಿಯಲ್ಲಿ ವ್ಯಾಪಕ ದೃಷ್ಟಿಕೋನವಿರುವುದು ಅತ್ಯಂತ ಆವಶ್ಯಕವಾಗಿದೆ. ವ್ಯಾಪಕ ದೃಷ್ಟಿಕೋನದ ಅಭಾವದಿಂದ ಮನುಷ್ಯನು ತನ್ನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಸಂದರ್ಭದಲ್ಲಿ ಅಜ್ಞಾನಿಯಾಗಿರುತ್ತಾನೆ ಮತ್ತು ಇತರ ಅತ್ಯಂತ ಮಹತ್ವಪೂರ್ಣ ಆವಶ್ಯಕತೆಗಳ ಬಗ್ಗೆ ಪ್ರಯತ್ನವಾಗುವ ಸಾಧ್ಯತೆಯೇ ಇಲ್ಲ, ಉದಾ ವಾಸನಾ (ಸಿಟ್ಟು, ದ್ವೇಷ, ಮತ್ಸರ, ಲೋಭ ಇತ್ಯಾದಿ) ನಾಶ ಮಾಡುವುದು, ಚಾರಿತ್ರ್ಯ ನಿರ್ಮಿತಿ, ಆಂತರಿಕ ಶಕ್ತಿಗಳ (ಸಿದ್ಧಿಗಳ) ಜಾಗೃತಿ, ಮನುಷ್ಯ ಜೀವನದ ಧ್ಯೇಯಗಳ ಯಥಾರ್ಥ ರೂಪದಲ್ಲಿ ನಿಶ್ಚಯ, ಜೀವನಕ್ಕೆ ಸಂಬಂಧಿಸಿದ ಅನೇಕ ಗೂಢ ಸಮಸ್ಯೆಗಳಿಗೆ ಪರಿಹಾರ ಇತ್ಯಾದಿ. ‘ಶಿಕ್ಷಣಪದ್ಧತಿಯನ್ನು ನಿರ್ಧರಿಸುವ ಹಿಂದೆ ವ್ಯಾಪಕ ದೃಷ್ಟಿಕೋನವಿರುವುದು ಆವಶ್ಯಕವಾಗಿರುವುದು’, ಇದು ಒಂದು ಮಹತ್ವದ ವಿಚಾರವಾಗಿದೆ.

೧೨. ಆಧುನಿಕ ಶಿಕ್ಷಣಪದ್ಧತಿಯನ್ನು ಸುಧಾರಿಸಲು ವಿಫಲವಾಗುವುದು

೧೨ ಅ. ಭಾರತದಲ್ಲಿ ಆಧುನಿಕ ಶಿಕ್ಷಣಪದ್ಧತಿಯ ಬುನಾದಿಯು ಆಂಗ್ಲರ ಶಿಕ್ಷಣಕ್ಕೆ ಸಂಬಂಧಿಸಿದ ನಿಲುವಿನ ಮೇಲೆ ಆಧರಿಸಿದೆ : ಭಾರತದಲ್ಲಿ ಪ್ರಚಲಿತವಿರುವ ಆಧುನಿಕ ಶಿಕ್ಷಣಪದ್ಧತಿಯಲ್ಲಿನ ದೋಷ ಮತ್ತು ಅವುಗಳ ಪರಿಣಾಮಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಭಾರತದಲ್ಲಿ ಆಧುನಿಕ ಶಿಕ್ಷಣಪದ್ಧತಿಯ ಬುನಾದಿಯು ಆಂಗ್ಲರ ಶಿಕ್ಷಣಕ್ಕೆ ಸಂಬಂಧಿಸಿದ ನಿಲುವಿನ ಮೇಲಾಧರಿಸಿದೆ. ವಿದ್ಯಾರ್ಥಿಗಳು ಮತ್ತು ನವಯುವಕರು ಪಾಶ್ಚಿಮಾತ್ಯ ಸಭ್ಯತೆಯ ಪ್ರಶಂಸಕರಾಗಬೇಕು ಮತ್ತು ಅವರಿಗೆ (ಆಂಗ್ಲರಿಗೆ) ಸರಕಾರ ನಡೆಸಲು ಮತ್ತು ಆಡಳಿತಕಾಲವನ್ನು ಹೆಚ್ಚಿಸಲು ಸುಲಭವಾಗಬೇಕೆಂಬ ಸ್ವರೂಪದ ಶಿಕ್ಷಣ (ಆಂಗ್ಲೀಕೃತ)ವಾಗಿತ್ತು.

೧೨ ಆ. ಆಂತರಿಕ ಸ್ವರೂಪದಲ್ಲಿ ಪರಿವರ್ತನೆ ಮಾಡುವ ಧೈರ್ಯವಿರದ ಕಾರಣ ವಿವಿಧ ದೋಷಗಳಿಂದ ಕೂಡಿರುವ ಆಧುನಿಕ ಶಿಕ್ಷಣ : ಸ್ವಾತಂತ್ರ್ಯದ ನಂತರ (ಸರಕಾರದ ಹಸ್ತಾಂತರದಕರಾರು) ಆಧುನಿಕ ಶಿಕ್ಷಣಕ್ಕೆ ಸಂಬಂಧಿಸಿದ ವ್ಯವಸ್ಥೆ ಮತ್ತು ನಿಲುವಿನಲ್ಲಿ ಪರಿವರ್ತನೆ ಮಾಡಲು ಆಗಾಗ ಆಯೋಗಗಳ ಸ್ಥಾಪನೆಗಳಾದವು ಮತ್ತು ಶಿಫಾರಸು ಮಾಡಲಾಯಿತು. ಆದ್ದರಿಂದ ಶಿಕ್ಷಣದ ಬಾಹ್ಯರೂಪವನ್ನು ಸ್ವಲ್ಪ ಪ್ರಮಾಣದಲ್ಲಿ ಬದಲಾಯಿಸಲಾಯಿತು; ಆದರೆ ಅದರ ಆಂತರಿಕ ಸ್ವರೂಪದಲ್ಲಿ ಪರಿವರ್ತನೆ ಮಾಡುವ ಧೈರ್ಯವನ್ನು ತೋರಿಸಲಿಲ್ಲ. ಆದ್ದರಿಂದ ಆಧುನಿಕ ಶಿಕ್ಷಣವೂ ಇಂದು ವಿವಿಧ ದೋಷಗಳಿಂದ ತುಂಬಿದೆ.

೧೨ ಇ. ಆಧುನಿಕ ಶಿಕ್ಷಣದ ಸುಧಾರಣೆಗಾಗಿ ಮಾಡಿದ ವಿವಿಧ ವಿಫಲ ಉಪಾಯಗಳು

೧. ಶೈಕ್ಷಣಿಕ ಕೇಂದ್ರಗಳಲ್ಲಿ ಪ್ರತಿದಿನ ಕೆಲವು ಬಾರಿ ಆರಂಭದಲ್ಲಿ ಪ್ರಾರ್ಥನೆಗಳನ್ನು ಮಾಡಿಸುವುದು

೨. ಇತರ ದೇಶಗಳ ಶಿಕ್ಷಣಪದ್ಧತಿಯ ಅನುಕರಣೆ ಮಾಡಲು ವಿಚಾರ ಮಾಡುವುದು

೩. ಸಮಸ್ಯೆಗಳನ್ನು (ಮೂಲದಿಂದಲೇ ಪರಿಹರಿಸದೇ) ಮಧ್ಯದಲ್ಲಿಯೇ ಪರಿಹರಿಸುವುದು

೪. ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ದಂಡದ ಏರ್ಪಾಡು ಇರುವುದು

೫. ಸಮಸ್ಯೆಗಳನ್ನು ಪರಿಹರಿಸಲು ಬೌದ್ಧಿಕ ವಿಚಾರವನ್ನು ಪ್ರಸ್ತುತ ಪಡಿಸುವುದು, ಉದಾ, ಆರ್ಥಿಕ ಸಮಾನತೆ.

ಉಪಾಯಗಳಿಂದ ಪ್ರತ್ಯಕ್ಷದಲ್ಲಿ ಯಾವುದೇ ಗಮನಾರ್ಹ ಲಾಭವಾಗಲಿಲ್ಲ.

೧೩. ಪಾಶ್ಚಿಮಾತ್ಯ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿಯ ವಿಚಾರಸರಣಿಯ ಬಗ್ಗೆ ಭಾರತೀಯರನ್ನು ಅಜ್ಞಾನದಲ್ಲಿಡುವುದು ಮತ್ತು ಭಾರತೀಯ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳು ತಪೋಮಯ ಜೀವನವನ್ನು ನಡೆಸಿ ಅವರು ಮಾನವೀಯ ಮೌಲ್ಯಗಳ ರಕ್ಷಣೆ ಮಾಡಲು ಸಕ್ಷಮರಾಗಬಲ್ಲರು

ಪಾಶ್ಚಿಮಾತ್ಯ ಶಿಕ್ಷಣವನ್ನು ಪ್ರಾಪ್ತಮಾಡಿಕೊಂಡ ಬುದ್ಧಿಜೀವಿ ಮತ್ತು ಶಿಕ್ಷಣತಜ್ಞರಿಗೂ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ (Human Value) ಶಿಕ್ಷಣವನ್ನು ವಿದ್ಯಾಲಯಗಳಲ್ಲಿ ನೀಡಬೇಕು. ಅದರಿಂದ ವಿದ್ಯಾರ್ಥಿಗಳು ಸದಾಚಾರಿಗಳಾಗುವರು, ಎಂದು ಅನಿಸುತ್ತದೆ. ಆದರೆ ಕೇವಲ ಮಾನವೀಯ ಮೌಲ್ಯಗಳನ್ನು ಕಲಿಸುವುದರಿಂದ ವಿದ್ಯಾರ್ಥಿಗಳು ಸದಾಚರಣಿಯಾಗಬಹುದೇ ?

ಎಲ್ಲ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳ ಬಗ್ಗೆ (ಉದಾ. ಸತ್ಯ ಮಾತನಾಡುವುದು, ತೊಂದರೆ ಕೊಡದಿರುವುದು, ಮೋಸ ಮಾಡದಿರುವುದು (ವಂಚಿಸದಿರುವುದು) ಹಿಂಸೆಯನ್ನು ಮಾಡದಿರುವುದು ಇತ್ಯಾದಿ) ಮೊದಲಿನಿಂದಲೇ ಪರಿಚಯವಿದೆ. ಮಾನವೀಯ ಮೌಲ್ಯಗಳು ತಿಳಿದಿದ್ದರೂ ಅವುಗಳನ್ನು ಆಚರಣೆಯಲ್ಲಿ ತರಲು ಏಕೆ ಆಗುತ್ತಿಲ್ಲ? ಈ ಬಗ್ಗೆ ಭಾರತೀಯ ಸಂಸ್ಕೃತಿಯಲ್ಲಿ ಸಂಶೋಧನೆಯಾಗಿದ್ದು ಸದಾಚಾರಣೆಯ ಬಗ್ಗೆ ದೃಢಪ್ರತಿಜ್ಞೆ, ಪ್ರವೃತ್ತ ಮತ್ತು ಅನಾಸಕ್ತರಾಗುವ ವಿವಿಧ ವ್ಯಾವಹಾರಿಕ ಉಪಾಯಗಳನ್ನು ಹೇಳಲಾಗಿದೆ. ಆಧುನಿಕ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿಯ ವಿಚಾರಸರಣಿಯ ಬಗ್ಗೆ ನಮ್ಮನ್ನು ಅಜ್ಞಾನದಲ್ಲಿಡಲಾಗುತ್ತದೆ, ಇದು ಭಾರತೀಯರ ದೌರ್ಭಾಗ್ಯವಾಗಿದೆ. ಮಾನವೀಯ ಮೌಲ್ಯಗಳ ಪಾಲನೆ ಮತ್ತು ಅವುಗಳನ್ನು ರಕ್ಷಿಸಲು ಮನುಷ್ಯನಿಗೆ ವಿವಿಧ ರೀತಿಯ ಕಠಿಣ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಇದು ಭೋಗವಾದಿ ಆಧುನಿಕ ವಿದ್ಯಾರ್ಥಿ ಅಥವಾ ಯುವಕರಿಗೆ ಸಾಧ್ಯವಾಗುವುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ವಿದ್ಯಾರ್ಥಿಗಳಿಗೆ ತಪೋಮಯ ಜೀವನವನ್ನು ನಡೆಸಬೇಕಾಗುತ್ತದೆ. ಆದ್ದರಿಂದ ಮಾನವೀಯ ಮೌಲ್ಯಗಳ ಪಾಲನೆ ಮತ್ತು ಅವುಗಳ ರಕ್ಷಣೆ ಮಾಡಲು ಅವರು ಸಕ್ಷಮರಾಗುತ್ತಾರೆ.

೧೪. ಭಾರತೀಯ ಸಂಸ್ಕೃತಿಯ ಮೂಲಕ ನಿರ್ಧರಿಸಲಾದ ಶಿಕ್ಷಣವನ್ನು ತಿಳಿದುಕೊಳ್ಳುವ ಪ್ರಯತ್ನವಾದರೆ ಮಾತ್ರ ಆಧುನಿಕ ಶಿಕ್ಷಣದ ಚಕ್ರದಿಂದ ಹೊರಬರಲು ಸಾಧ್ಯವಾಗುತ್ತದೆ

ಶಿಕ್ಷಣದ ಸ್ವರೂಪದಲ್ಲಿ ಏಕೆ ಸುಧಾರಣೆಯಾಗಲಿಲ್ಲ ? ಎಂಬುದರ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕಾಗಿದೆ. ಆಧುನಿಕ ಸಮಾಜ, ಆಡಳಿತ ವರ್ಗ, ಶಿಕ್ಷಣದ ಪ್ರಮುಖರು, ಶಿಕ್ಷಣತಜ್ಞರು ಇತ್ಯಾದಿ ಎಲ್ಲರಿಗೂ ಆಧುನಿಕ ಶಿಕ್ಷಣವು ಪ್ರಾಪ್ತವಾಗಿದೆ. ಆದುದರಿಂದ ಅವರೆಲ್ಲರೂ ಆಧುನಿಕ ಶಿಕ್ಷಣದ ಪರಿಣಾಮಗಳಿಂದ ಪೀಡಿತರಾಗಿದ್ದಾರೆ. ಅದರಿಂದ ಹೊರಗೆ ಬರುವ ವಿಚಾರವು ಸಹ ಅವರ ಮನಸ್ಸಿನಲ್ಲಿ ಬರುವುದಿಲ್ಲ. ಅನೇಕರು ಆಧುನಿಕ ಭೋಗವಾದಿ ಸಂಸ್ಕೃತಿಯಲ್ಲಿ ಆನಂದದಲ್ಲಿದ್ದು ತಮ್ಮ ತರ್ಕ-ವಿತರ್ಕಗಳನ್ನೇ ತಮ್ಮ ಬುದ್ಧಿಶಕ್ತಿಯೆಂದು ತಿಳಿದು ಅಹಂಕಾರವನ್ನು ಪೋಷಿಸುತ್ತಿರುತ್ತಾರೆ. ಯಾವಾಗ ಭಾರತೀಯ ಸಂಸ್ಕೃತಿಯ ಮೂಲಕ ನಿರ್ಧರಿಸಲಾದ ಶಿಕ್ಷಣವನ್ನು ತಿಳಿದುಕೊಳ್ಳುವ ಪ್ರಯತ್ನವಾಗುವುದೋ, ಆಗಲೇ ಅವರಿಗೆ ಈ ಚಕ್ರದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಅಂತಃಕರಣವನ್ನು ಶುದ್ಧ ಮಾಡಿಕೊಳ್ಳುವ ಉಪಾಯವನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಲು ಸಾಧ್ಯವಾಗುತ್ತದೆ. ಅನಂತರವೇ ಆಧುನಿಕ ಶಿಕ್ಷಣದ ಸ್ವರೂಪದಲ್ಲಿ ಸುಧಾರಣೆಯಾಗಬಹುದು.

೧೫. ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಂಡು ಅದನ್ನು ಪಾಲಿಸಿದರೆ ಶಿಕ್ಷಣದ ಆಧುನಿಕೀಕರಣದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ !

ಶಿಕ್ಷಣಪದ್ಧತಿಯಲ್ಲಿ ದೋಷಗಳಿರುವುದು ಇದು ಒಂದು ವಿಷಯವಾಯಿತು. ಇದಕ್ಕಿಂತಲೂ ಹೆಚ್ಚು ಗಂಭೀರ ವಿಷಯವೆಂದರೆ ಆಧುನಿಕ ಜೀವನದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಶಿಕ್ಷಣದಲ್ಲಿ ಸುಧಾರಣೆಯ ಎಲ್ಲ ಪ್ರಯತ್ನಗಳು ವಿಫಲವಾಗಿವೆ. ಎಲ್ಲ ಬುದ್ಧಿಜೀವಿಗಳು ಚಿಂತಿತರಾಗಿದ್ದಾರೆ; ಆದರೆ ಸಮಾಧಾನಕರ ಪರಿಹಾರವನ್ನು ಕಂಡು ಹಿಡಿಯುವಲ್ಲಿಯೂ ಅವರು ಅಸಮರ್ಥರಾಗಿದ್ದಾರೆ. ಇದು ಭಯಾನಕ ಸ್ಥಿತಿಯಾಗಿದೆ. ಭಾರತೀಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರೆ ಮತ್ತು ಈ ಸಂಸ್ಕೃತಿಯ ಮಾಧ್ಯಮದಿಂದ ಶಿಕ್ಷಣ ಮತ್ತು ಜೀವನದ ಬಗ್ಗೆ ಹೇಳಲಾದ ಮಾರ್ಗದ ಮೇಲೆ ಶ್ರದ್ಧೆಯನ್ನಿಟ್ಟು ಅದನ್ನು ಪಾಲಿಸಿದರೆ ಈ ಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ.’

(ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)