ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ‘ಐ.ಐ.ಟಿ, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್ ನಲ್ಲಿ ಪಿ.ಎಚ್.ಡಿ. ಪಡೆದಿರುವ ಪ್ರಾಧ್ಯಾಪಕರೆಂದು ಕಾರ್ಯನಿರತರಾಗಿದ್ದರು. ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಇತ್ಯಾದಿ ವಿಷಯಗಳಲ್ಲಿ ೧೧ ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’ ಈ ಹಿಂದಿ ಭಾಷೆಯ ಗ್ರಂಥದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ಕೇವಲ ‘ಅರ್ಥ ಮತ್ತು ‘ಕಾಮ ಇಷ್ಟೇ ಧ್ಯೇಯವನ್ನಿಟ್ಟುಕೊಂಡು ಮನುಷ್ಯನನ್ನು ಪರಾಜಯದ ಮಾರ್ಗದಲ್ಲಿ ಕರೆದೊಯ್ಯುವ ಆಧುನಿಕ ಶಿಕ್ಷಣ ! ಈ ಕುರಿತಾದ ಮಾಹಿತಿಯನ್ನು ತಿಳಿದುಕೊಂಡೆವು. ಈಗ ಅದರ ಮುಂದಿನ ಭಾಗವನ್ನು ತಿಳಿದುಕೊಳ್ಳೋಣ.        

(ಭಾಗ ೬)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/50788.html

೪. ಆಧುನಿಕತೆಗೆ ಅಂಟಿಕೊಂಡಿರುವ ಯುವಕರ ಸಂದೇಹಗಳಿಗೆ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಲು ಸಾಧ್ಯವಾಗದಿರುವುದು

ಇಂದಿನ ವಿದ್ಯಾರ್ಥಿಗಳು ಏನೇನೋ ಪ್ರಶ್ನೆಗಳನ್ನು ಕೇಳುತ್ತಾರೆ. ತಮ್ಮ ಪ್ರಶ್ನೆಗಳಿಗೆ ತಕ್ಕ ಉತ್ತರ ಸಿಗದಿದ್ದಾಗ ತಮ್ಮ ಅಭಿಪ್ರಾಯವೇ ಸರಿ ಎಂದು ಅವರಿಗೆ ಅನಿಸುತ್ತದೆ. ಇಂತಹ ಕೆಲವು ಪ್ರಶ್ನೆಗಳ ಬಗೆಗಿನ ವಿಚಾರವನ್ನು ಪ್ರಸ್ತುತ ಪುಸ್ತಕದಲ್ಲಿ ನೀಡಲಾಗಿದೆ.

೫. ಆಧುನಿಕ ಯುಗದ ಭೌತಿಕ ಪ್ರಗತಿಯು ಪ್ರತ್ಯಕ್ಷ ಪ್ರಮಾಣ, ಮಾನಸಿಕ ಅನುಮಾನ ಮತ್ತು ತರ್ಕ ಇವುಗಳನ್ನು ಆಧರಿಸಿರುವುದು

ಆಧುನಿಕ ಜೀವನದಲ್ಲಿ ಜ್ಞಾನೇಂದ್ರಿಯಗಳ ಮೂಲಕ (ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ ಇವುಗಳ ಮೂಲಕ) ಕೆಲವು ಪದಾರ್ಥಗಳ ಪ್ರತ್ಯಕ್ಷ ಸ್ವರೂಪವನ್ನು ಅರಿತುಕೊಂಡು ಆ ಆಧಾರದಲ್ಲಿ ಕೆಲವು ಇತರ ಪದಾರ್ಥಗಳ ಮಾನಸಿಕ ಅನುಮಾನವನ್ನು (Guess) ಸಹ ತೆಗೆಯಲಾಗುತ್ತದೆ. ಅದರ ಸತ್ಯತೆಯನ್ನು ಪರೀಕ್ಷಿಸಲು ಪ್ರತ್ಯಕ್ಷ ಪ್ರಮಾಣ ಮತ್ತು ತರ್ಕ ಇವುಗಳ ಆಧಾರವನ್ನು ಪಡೆಯಲಾಗುತ್ತದೆ. ಪ್ರತ್ಯಕ್ಷ  ಪ್ರಮಾಣದ ಜ್ಞಾನಕ್ಕಾಗಿ ಪ್ರಯತ್ನಿಸಲಾಗುತ್ತದೆ. ಆಧುನಿಕ ಯುಗದ ಸಮಸ್ತ ಭೌತಿಕ ಪ್ರಗತಿಯು ಪ್ರತ್ಯಕ್ಷ ಪ್ರಮಾಣ, ಮಾನಸಿಕ ಅನುಮಾನ ಮತ್ತು ತರ್ಕ ಇವುಗಳನ್ನು ಆಧರಿಸಿದೆ. ಆ ಆಧಾರದಲ್ಲಿ ಉತ್ತರೋತ್ತರ ಭೌತಿಕ ಉಪಕರಣಗಳು ಅಥವಾ ಭೌತಿಕ ಸೌಲಭ್ಯಗಳ ಶೋಧ ನಡೆದಿದೆ. ಇಲ್ಲಿ ಪ್ರತ್ಯಕ್ಷ ಪ್ರಮಾಣದ ಜೊತೆಗೆ ತರ್ಕಕ್ಕೆ ಸಹ ಅತ್ಯಂತ ಮಹತ್ವವನ್ನು ನೀಡಲಾಗಿದೆ.

ಇವೇ ಮೂರು ಮೂಲಭೂತ ಸಾಧನಗಳ ಮೂಲಕ ಪ್ರಾಪ್ತವಾದ ಜ್ಞಾನಕ್ಕೆ ಆಂಗ್ಲ ಭಾಷೆಯಲ್ಲಿ ‘ಸೈನ್ಸ್’ (Science) ಎಂದು ಹೇಳಲಾಗುತ್ತದೆ. ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಅದನ್ನು ವಿಜ್ಞಾನ ಎಂದು ಹೇಳಲಾಗುತ್ತದೆ. ಈ ವಿಜ್ಞಾನವು ವಾಸ್ತವದಲ್ಲಿ ಇಂದ್ರಿಯ ವಿಷಯಗಳ ವಿಜ್ಞಾನವಾಗಿದೆ, ಎಂದರೆ ಮನುಷ್ಯನು ತನ್ನ ಇಂದ್ರಿಯಗಳನ್ನು ಬಳಸಿ ಅರಿತುಕೊಳ್ಳುವಂತಹ ವಿಜ್ಞಾನವಾಗಿದೆ.

೬. ಆಧಿಭೌತಿಕ ಮತ್ತು ಆಧ್ಯಾತ್ಮಿಕ ಪದ್ಧತಿ

ಆಧುನಿಕ ವಿಜ್ಞಾನಿಗಳು ಪ್ರತ್ಯಕ್ಷ ಪದಾರ್ಥಗಳನ್ನು ಪರೀಕ್ಷಿಸಿ ಅದರಿಂದ ಕೆಲವು ತತ್ತ್ವಗಳನ್ನು ಅಥವಾ ಸಿದ್ಧಾಂತಗಳನ್ನು ನಿರ್ಧರಿಸುತ್ತಾರೆ. ಇವು ಆಧಿಭೌತಿಕ ಪದ್ಧತಿಗಳಾಗಿವೆ. ಇದಕ್ಕೆ ಮಿತಿಯು (Limitations) ಇರುತ್ತದೆ. ಪ್ರಾಚೀನ ಭಾರತೀಯ ಪದ್ಧತಿಯ ಮೂಲಕ ಅನುಭವಗಳನ್ನು ಪರೀಕ್ಷಿಸಿ ಅವುಗಳ ಮೂಲಕ ಕೆಲವು ತತ್ತ್ವಗಳನ್ನು ಅಥವಾ ಸಿದ್ಧಾಂತಗಳನ್ನು ನಿಶ್ಚಿತ ಪಡಿಸಲಾಗುತ್ತದೆ. ಇದು ಆಧ್ಯಾತ್ಮಿಕ ಪದ್ಧತಿಯಾಗಿದೆ. ಇದು ಆದಿಭೌತಿಕ ಪದ್ಧತಿಗಿಂತ ಹೆಚ್ಚು ವಿಸ್ತೃತ ಮತ್ತು ನಿಗೂಢವಾಗಿದೆ.

೭. ಜ್ಞಾನ ಮತ್ತು ಅದರ ೪ ವಿಧಗಳು

ಆಧುನಿಕ ಶಿಕ್ಷಣವು ಪ್ರತ್ಯಕ್ಷ ಜ್ಞಾನ ಮತ್ತು ಪರೋಕ್ಷ ಜ್ಞಾನದ ಮೇಲೆ ಆಧರಿಸಿರುವುದರಿಂದ ನಮ್ಮ ಜ್ಞಾನವನ್ನು ಸೀಮಿತಗೊಳಿಸುತ್ತದೆ. ಅಂತಃಕರಣದ ವೃತ್ತಿಯು ಸಹ ಜ್ಞಾನವನ್ನು ಪ್ರದಾನಿಸುತ್ತದೆ. ಜ್ಞಾನವು ನಾಲ್ಕು ವಿಧಗಳದ್ದಾಗಿರುತ್ತದೆ. – ಪ್ರತ್ಯಕ್ಷ, ಪರೋಕ್ಷ, ಅಪರೋಕ್ಷ ಮತ್ತು ಸಾಕ್ಷಾತ್ ಅಪರೋಕ್ಷ. ಈ ನಾಲ್ಕು ವಿಧಗಳ ಜ್ಞಾನಗಳ ವಿಸ್ತೃತ ಚರ್ಚೆಯನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ.

೮. ನ್ಯಾಯದರ್ಶನದಲ್ಲಿನ ೪ ಪ್ರಮಾಣಗಳು

ಜ್ಞಾನಪ್ರಾಪ್ತಿಯ ಸಾಧನಗಳಿಗೆ ‘ಪ್ರಮಾಣ’ವೆಂದು ಹೇಳಲಾಗಿದೆ. ಪ್ರಮಾಣಗಳ ವಿಷಯದಲ್ಲಿ ವಿಸ್ತೃತ ಚರ್ಚೆಯನ್ನು ಮಹರ್ಷಿ ಗೌತಮರು ಸಂಗ್ರಹಿಸಿ ಬರೆದ ‘ನ್ಯಾಯದರ್ಶನ’ ಹೆಸರಿನ ಗ್ರಂಥದಲ್ಲಿ ಮಾಡಲಾಗಿದೆ. ನ್ಯಾಯದರ್ಶನದಲ್ಲಿ ೪ ಪ್ರಮಾಣಗಳ ಬಗ್ಗೆ ಹೇಳಿದ್ದಾರೆ. ಪ್ರತ್ಯಕ್ಷ ಪ್ರಮಾಣ, ಅನುಮಾನ ಪ್ರಮಾಣ, ಉಪಮಾನ ಪ್ರಮಾಣ ಮತ್ತು ಆಪ್ತ ಪ್ರಮಾಣ, ಈ ಪ್ರಮಾಣಗಳ ಸಂಕ್ಷಿಪ್ತ ವಿವರಣೆಯನ್ನು ಪ್ರಸ್ತುತ ಗ್ರಂಥದಲ್ಲಿ ನೀಡಲಾಗಿದೆ.

೯. ಜ್ಞಾನಪ್ರಾಪ್ತಿಯಾಗುವುದು ಮತ್ತು ಅದರಲ್ಲಿನ ಹಂತಗಳು

ಅ. ಜ್ಞಾನವು ಕೇವಲ ಜ್ಞಾನೇಂದ್ರಿಯಗಳ ಮೂಲಕ ರೂಪ, ಶ್ರವಣ, ಗಂಧ, ಸ್ವಾದ ಮತ್ತು ಸ್ಪರ್ಶ ಈ ವೃತ್ತಿಗಳ ರೂಪದಲ್ಲಿ ಮಾತ್ರ ಪ್ರಾಪ್ತವಾಗುವುದಿಲ್ಲ, ಆದರೆ ಪ್ರತ್ಯಕ್ಷ ಅಂತಃಕರಣದ (ಮನಸ್ಸು ಬುದ್ಧಿ, ಚಿತ್ತ ಮತ್ತು ಅಹಂಕಾರ) ವಿವಿಧ ವೃತ್ತಿಗಳ ಮೂಲಕವೂ ಪ್ರಾಪ್ತವಾಗುತ್ತದೆ.

ಆ. ಜ್ಞಾನವು ಕೇವಲ ಜಾಗೃತಾವಸ್ಥೆಯಲ್ಲಿ ಮಾತ್ರವಲ್ಲ, ಆದರೆ ಸ್ವಪ್ನಾವಸ್ಥೆ ಮತ್ತು ಸುಷುಪ್ತಾವಸ್ಥೆಯ ಅನುಭವವೂ ಸಹ ನಮಗೆ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಅವಕಾಶ ನೀಡುತ್ತದೆ.

ಇ. ತಪಸ್ಸಿನ ಮೂಲಕ ಚೈತನ್ಯವನ್ನು ಹೆಚ್ಚಿಸಿದರೂ ನಮಗೆ ಜ್ಞಾನ ಪ್ರಾಪ್ತವಾಗುತ್ತದೆ, ಅತೀಂದ್ರಿಯ ಜ್ಞಾನ ಮತ್ತು ಸಿದ್ಧಿ ಪ್ರಾಪ್ತವಾಗುತ್ತದೆ.

ಈ. ಜ್ಞಾನವು ನಮಗೆ ಕೆಲವೊಮ್ಮೆ ಅಕಸ್ಮಾತ್ತಾಗಿಯೂ ಸಿಗುತ್ತದೆ.

ಅದಕ್ಕೆ ‘ಪ್ರತಿಭಾಜ್ಞಾನ’ ಎಂದು ಹೇಳುತ್ತಾರೆ. ಅದು ಅಪರೋಕ್ಷ ರೂಪದಿಂದಾಗುತ್ತದೆ.

೧೦. ಜ್ಞಾನ ಮತ್ತು ಜ್ಞಾನದ ಸಾಧನಗಳ ಬಗ್ಗೆ ಪೂರ್ಣತ್ವದ ಅಭಾವ

ನಮ್ಮ ಚಿತ್ತದಲ್ಲಿ ಪುನರ್ಜನ್ಮದಲ್ಲಿನ ಯಾವ್ಯಾವ ಸಂಸ್ಕಾರಗಳಿವೆ ? ಅವು ಯಾವಾಗ ಪ್ರಕಟಗೊಳ್ಳುವವು ? ಮತ್ತು ಯಾವ ರೀತಿಯ ಅನುಭವವನ್ನು ಮಂಡಿಸುತ್ತವೆ ? ಎಂಬುದನ್ನು ಹೇಳುವುದು ಸಾಧ್ಯವಿಲ್ಲ. ಹಾಗಾಗಿ ನಮ್ಮ ಅನುಭವಗಳ ಕ್ಷೇತ್ರವು ಕೇವಲ ಜ್ಞಾನೇಂದ್ರಿಯಗಳ ಮೂಲಕ ಪ್ರಾಪ್ತ ಅನುಭವಗಳ ತುಲನೆಯಲ್ಲಿ ಅತೀ ವಿಶಾಲ ಮತ್ತು ನಿಗೂಢವಾಗಿವೆ. ಆಧುನಿಕ ಕಾಲದಲ್ಲಿ ನಾವೆಲ್ಲರೂ ನಮ್ಮ ಸೀಮಿತ ಜ್ಞಾನ ಮತ್ತು ಸೀಮಿತ ಜ್ಞಾನ-ಸಾಧನಗಳ ಆಧಾರ ಪಡೆದು ಜೀವನವನ್ನು ನಡೆಸುತ್ತಿದ್ದೇವೆ, ಅಂದರೆ ಜ್ಞಾನ ಮತ್ತು ಜ್ಞಾನದ ಸಾಧನೆಯ ಬಗ್ಗೆ ಪೂರ್ಣತ್ವದ ಅಭಾವವು ಬಳಹ ಇದೆ. ಆದುದರಿಂದ ಆಧುನಿಕ ಜೀವನದಲ್ಲಿ ಕಂಡು ಬರುವ ಅಪೂರ್ಣತೆ ಮತ್ತು ವಿವಿಧ ಪ್ರಕಾರದ ಸಮಸ್ಯೆಗಳಿಂದ ಸುತ್ತುವರಿದ ಜೀವನದಲ್ಲಿ ಆಶ್ಚರ್ಯಪಡುವುದು ಬೇಡ !

– (ಪೂ.) ಡಾ. ಶಿವಕುಮಾರ ಓಝಾ. ಹಿರಿಯ ಸಂಶೋಧಕರ ಮತ್ತು ಭಾರತೀಯ ಸಂಸ್ಕೃತಿಯ ಅಧ್ಯಯನಕಾರರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?’)