|
ಮುಂಬಯಿ : ಬಿಜೆಪಿ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ ಠಾಕೂರ ಅವರ ಮುಖ್ಯ ಉಪಸ್ಥಿತಿಯಲ್ಲಿ ಮಾಲೆಗಾಂವದಲ್ಲಿ ಮಾರ್ಚ್ 30 ರಂದು ಯುಗಾದಿಯ ಸಂದರ್ಭದಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಂತ ಸಮ್ಮೇಳನಕ್ಕೆ ಮುಂಬಯಿ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ, ಕಾನೂನು – ಸುವ್ಯವಸ್ಥೆಯ ದೃಷ್ಟಿಯಿಂದ ಹೈಕೋರ್ಟ್ ಕೆಲವು ಷರತ್ತುಗಳನ್ನು ಸಹ ವಿಧಿಸಿದೆ. ಈ ಕಾರ್ಯಕ್ರಮದಲ್ಲಿ ಸಾಧ್ವಿ ಪ್ರಜ್ಞಾ ಅವರಿಗೆ ‘ಹಿಂದೂವೀರ’ ಪ್ರಶಸ್ತಿ ನೀಡಲಾಗುವುದು ಎಂದು ತಿಳಿದುಬಂದಿದೆ. ಕಾರ್ಯಕ್ರಮದಲ್ಲಿ ‘ಕಾನೂನು – ಸುವ್ಯವಸ್ಥೆಯ ಪ್ರಶ್ನೆ ಉದ್ಭವಿಸಬಾರದು. ಪ್ರಚೋದನಕಾರಿ ಭಾಷಣ ಮಾಡಬಾರದು ಮತ್ತು ಸಂಜೆ 5 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯವಾಗಬೇಕು’ ಎಂದು ಆಯೋಜಕರು ಪೊಲೀಸರಿಗೆ ಲಿಖಿತ ರೂಪದಲ್ಲಿ ಭರವಸೆ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಅನುಮತಿ ನಂತರ, ಈ ಕಾರ್ಯಕ್ರಮವು ಮಾರ್ಚ್ 30 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಇಂತಹ ಕಾರ್ಯಕ್ರಮಗಳಲ್ಲಿ ಅತಿ ಸೂಕ್ಷ್ಮವಾಗಿರಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ‘ಬಾಳಿ ಮತ್ತು ಬದುಕಲು ಬಿಡಿ’ ಎಂಬ ಧ್ಯೇಯವಾಕ್ಯವನ್ನು ಬೆಂಬಲಿಸುತ್ತದೆ. ಸಂವೇದನಾಶೀಲತೆಯು ಉಗ್ರರೂಪ ತಾಳುವಂತೆ ಅದರ ಪ್ರಚಾರ ಮಾಡಬೇಡಿ. ನಿಮ್ಮ ನೆರೆಹೊರೆಯವರು ಸಂತೋಷವಾಗಿದ್ದರೆ, ನೀವು ಸಹ ಸಂತೋಷವಾಗಿರುತ್ತೀರಿ ಎಂದು ನ್ಯಾಯಾಲಯ ಕಿವಿಮಾತು ಹೇಳಿದೆ.
ಏನಿದು ಪ್ರಕರಣ ?
ಮಾಲೆಗಾವ ತಹಶೀಲದಾರ ಮತ್ತು ಅಲ್ಲಿನ ಪೊಲೀಸ್ ಠಾಣೆಯಲ್ಲಿ ಮಾರ್ಚ್ 30 ರಂದು ಸಂಜೆ 6 ರಿಂದ ರಾತ್ರಿ 10 ರವರೆಗೆ ‘ಬೃಹತ್ ಹಿಂದೂ ಸಂತ ಸಮ್ಮೇಳನ’ ಆಯೋಜಿಸಲು ಫೆಬ್ರವರಿ 18 ರಂದು ಅನುಮತಿ ಕೋರಲಾಗಿತ್ತು. ಮಾರ್ಚ್ 25 ರಂದು, ನಾಸಿಕ್‌ನ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ ಅವರು ಸಾಧ್ವಿ ಪ್ರಜ್ಞಾ ಸಿಂಗ ಠಾಕೂರ ಮತ್ತು ಇತರ ಭಾಷಣಕಾರರು ಹಿಂದೆ ಮಾಡಿದ ಪ್ರಚೋದನಕಾರಿ ಹೇಳಿಕೆಗಳ ಕುರಿತು ಪೊಲೀಸ್ ವರದಿಗಳನ್ನು ಉಲ್ಲೇಖಿಸಿ ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದರು. ಬಳಿಕ ಕಾರ್ಯಕ್ರಮದ ಆಯೋಜಕರು ಅನುಮತಿ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.