ತಾಲಿಬಾನ್‌ನ ಸರ್ವೋಚ್ಚ ನಾಯಕ ಅಖುಂದಜಾದಾ ಮತ್ತು ಉಪಪ್ರಧಾನಿ ಬರಾದರ್ ನಾಪತ್ತೆ !

ಕಾಬುಲ್ (ಅಫಘಾನಿಸ್ತಾನ) – ಅಫಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ರಚನೆಯಾಗಿದ್ದರೂ ಅದರಲ್ಲಿಯ ಇಬ್ಬರು ಪ್ರಮುಖ ನಾಯಕರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್‌ನ ಸರ್ವೋಚ್ಚ ನಾಯಕ ಮುಲ್ಲಾ (ಇಸ್ಲಾಮಿಕ್ ವಿದ್ವಾಂಸ) ಹೈಬತುಲ್ಲಾಹ ಅಖುಂದಜಾದಾ ಮತ್ತು ಪ್ರಸ್ತುತ ಸರಕಾರದ ಉಪಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಇವರಿಬ್ಬರು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಅವರು ಎಲ್ಲಿಯೂ ಕಾಣಲಿಲ್ಲ. ಆದ್ದರಿಂದ ‘ಈ ನಾಯಕರು ಎಲ್ಲಿದ್ದಾರೆ ?’ ‘ಅವರ ಕೊಲೆಯಾಗಿದೆಯೇ ?’ ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಪ್ರಸಾರ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ.

೧. ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಸರ್ವೋಚ್ಚ ನಾಯಕ ಮುಲ್ಲಾ ಹೈಬತುಲ್ಲಾಹ ಅಖುಂದಜಾದಾ ನಾಪತ್ತೆಯಾಗಿದ್ದಾನೆ; ಆದರೆ ಹೊಸ ಸರಕಾರದ ಘೋಷಣೆಯ ನಂತರ, ಅಖುಂದಜಾದಾ ಪರವಾಗಿ ಸಾರ್ವಜನಿಕ ಮನವಿಯನ್ನು ನೀಡಲಾಗಿತ್ತು. ‘ಅಖುಂದಜಾದಾ ಶೀಘ್ರದಲ್ಲೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದ’, ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದನು. ಆದರೆ ಆತ ಇನ್ನೂ ಬೆಳಕಿಗೆ ಬಂದಿಲ್ಲ.

೨. ‘ಉಪಪ್ರಧಾನಿ ಮುಲ್ಲಾ ಘನಿ ಬರಾದಾರ್ ಕೊಲ್ಲಲ್ಪಟ್ಟರು ಅಥವಾ ಗಂಭೀರವಾಗಿ ಗಾಯಗೊಂಡಿದ್ದಾನೆ’, ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಬರಾದಾರ್ ಮತ್ತು ಭಯೋತ್ಪಾದಕ ಸಂಘಟನೆಯಾದ ಹಕ್ಕಾನಿ ನೆಟವರ್ಕ್ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿರುವ ವರದಿಗಳು ಬಂದಿದ್ದವು.
ಮತ್ತೊಂದೆಡೆ ಮುಲ್ಲಾ ಬರಾದಾರ್ ಒಂದು ಆಡಿಯೋ ಸಂದೇಶವನ್ನು ಜಾರಿಗೊಳಿಸಿ ‘ನಾನು ಚೆನ್ನಾಗಿದ್ದೇನೆ’, ಎಂದು ಹೇಳಿದ್ದನು.