ವಿಧಾನಸಭೆಯಲ್ಲಿ ಜನಪ್ರತಿನಿಧಿಗಳ ಆಚರಣೆ ಮತ್ತು ನ್ಯಾಯಾಂಗದ ಜಾಗರೂಕತೆ !

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಎರಡು ದಿನಗಳ ಮಳೆಗಾಲದ ಅಧಿವೇಶನ ನಡೆಯಿತು. ಅದರಲ್ಲಿಯೂ ವಿಪಕ್ಷ ಮತ್ತು ಆಡಳಿತ ಪಕ್ಷದವರಲ್ಲಿ ಬಹಳ ಕೋಲಾಹಲ ನಡೆಯಿತು ಹಾಗೂ ವಿಧಾನ ಮಂಡಲದಲ್ಲಿ ಸಭಾಪತಿಯವರಿಗೆ ಅವಾಚ್ಯವಾಗಿ ಬೈದಿದ್ದಾರೆ ಮತ್ತು ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ಸಭಾಪತಿಗಳು ವಿಪಕ್ಷದ ೧೨ ಶಾಸಕರ ಸದಸ್ಯತ್ವವನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಿದರು. ಈ ೧೨ ಶಾಸಕರು ಸಭಾಪತಿಗಳ ನಿರ್ಣಯದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದು, ಸದ್ಯ ಅವರು ಅಮಾನತುಗೊಂಡಿದ್ದಾರೆ. ಇದೇ ರೀತಿ ಮಾರ್ಚ್ ೨೦೧೫ ರಲ್ಲಿ ಕೇರಳದಲ್ಲಿ ಆರ್ಥಿಕ ಮುಂಗಡಪತ್ರದ ಅಧಿವೇಶನದ ಅವಧಿಯಲ್ಲಿ ವಿಧಾನಸಭೆಯಲ್ಲಿ ಕೋಲಾಹಲ ನಡೆದಿತ್ತು. ಆ ಪ್ರಕರಣದಲ್ಲಿಯಂತೂ ಎಲ್ಲ ಪಕ್ಷಗಳ ಶಾಸಕರ ಮೇಲೆ ದೂರು ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯವ್ಯವಸ್ಥೆಯು ತೋರಿಸಿದ ಜಾಗರೂಕತೆ ಮತ್ತು ನೀಡಿದ ತೀರ್ಪಿನ ಬಗ್ಗೆ ಮಾಹಿತಿ ನೀಡುವ ಈ ಲೇಖನ !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಕೇರಳ ವಿಧಾನಸಭೆಯಲ್ಲಿ ವಿಪಕ್ಷದವರು ಕೋಲಾಹಲ ಮಾಡಿ ಬೆಲೆಬಾಳುವ ವಸ್ತುಗಳನ್ನು ನಾಶ ಪಡಿಸುವುದು

‘ಮಾರ್ಚ್ ೨೦೧೫ ರಲ್ಲಿ ಕೇರಳ ರಾಜ್ಯದ ಆರ್ಥಿಕ ಮುಂಗಡಪತ್ರದ ಅಧಿವೇಶನದ ಕಾಲಾವಧಿಯಲ್ಲಿ ರಾಜ್ಯದ ಹಣಕಾಸು ಸಚಿವರು ೨೦೧೫-೧೬ ರ ಆರ್ಥಿಕ ವರ್ಷದ ಮುಂಗಡಪತ್ರವನ್ನು ಮಂಡಿಸುತ್ತಿದ್ದರು. ಅದನ್ನು ವಿಪಕ್ಷದವರು ತೀವ್ರವಾಗಿ ವಿರೋಧಿಸಿದರು. ಈ ವಿರೋಧ ಎಷ್ಟು ತೀವ್ರವಿತ್ತೆಂದರೆ ವಿಪಕ್ಷದ ಶಾಸಕರು ಸಭಾಪತಿಯವರ ಎದುರಿನ ಬಾವಿಯಲ್ಲಿ (ಖಾಲಿ ಜಾಗದಲ್ಲಿ) ಇಳಿದು ಕೂಗಾಡಿದರು. ತದನಂತರ ಅವರು ನೇರವಾಗಿ ಸಭಾಪತಿಯವರ ಡಯಾಸ್ ಏರಿದರು. ಕೆಲವು ಶಾಸಕರಂತೂ ತಮ್ಮ ಮೇಜಿನ ಮೇಲೆ ನಿಂತುಕೊಂಡರು. ಕೆಲವು ಶಾಸಕರು ಸದನದ ಗಣಕಯಂತ್ರ, ಧ್ವನಿವರ್ಧಕ (ಮೈಕ್), ಕುರ್ಚಿಗಳು ಮತ್ತು ಅನೇಕ ಬೆಲೆಬಾಳುವ ವಸ್ತುಗಳನ್ನು ಧ್ವಂಸ ಮಾಡಿದರು. ಈ ವೇಳೆ ವಿಪಕ್ಷದವರು ವಿಧಾನಸಭೆಯ ಕಾರ್ಯಕಲಾಪಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಇದರಲ್ಲಿ ಆಡಳಿತ ಪಕ್ಷದವರೂ ಹಿಂದೆ ಉಳಿಯದೇ ಅವರೂ ಅವರ ಶೈಲಿಯಲ್ಲಿ ಕೋಲಾಹಲವನ್ನುಂಟು ಮಾಡಿದರು.

೨. ವಿಧಾನಸಭೆಯಲ್ಲಿ ಕೋಲಾಹಲ ನಡೆಸಿದ ಪ್ರಕರಣದಲ್ಲಿ ಎಲ್ಲ ಪಕ್ಷದ ಶಾಸಕರ ಮೇಲೆ ಕ್ರಿಮಿನಲ್ ಅಪರಾಧವನ್ನು ದಾಖಲಿಸಲಾಯಿತು

ಸದನದಲ್ಲಿ ನಡೆದ ಕೋಲಾಹಲ ಮತ್ತು ವಸ್ತುಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಸಚಿವರು ಪೊಲೀಸರಲ್ಲಿ ದೂರು ದಾಖಲಿಸಿದರು. ಶಾಸಕರ ಮೇಲೆ ಭಾರತೀಯ ದಂಡ ಸಂಹಿತೆ ಕಾಯಿದೆ ಕಲಂ ೪೪೭, ೪೨೭, ಆಸ್ತಿಪಾಸ್ತಿ ನಾಶಪಡಿಸುವುದು, ಅಪರಾಧ ಇತ್ಯಾದಿ ಕಲಂಗಳನ್ನು ದಾಖಲಿಸಲಾಯಿತು. ಅಲ್ಲದೇ ‘ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರತಿಬಂಧಕ ಅಧಿನಿಯಮ’ ಎಂಬ ಹೊಸ ವಿಶೇಷ ಕಾನೂನು ರಚಿಸಲಾಯಿತು. ಆ ಕಾನೂನಿನ ಕಲಂಗಳ ಅಡಿಯಲ್ಲಿ ದೂರು ದಾಖಲಿಸಲಾಯಿತು.

೩. ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ೩೨೧’ ರಂತೆ ಸರಕಾರಿ ನ್ಯಾಯವಾದಿಯು ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿ ಖಟ್ಲೆಯನ್ನು ರದ್ದುಪಡಿಸಲು ಪ್ರಯತ್ನಿಸುವುದು

೩ ಅ. ಖಟ್ಲೆಯನ್ನು ರದ್ದುಗೊಳಿಸಲು ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ ೩೨೧’ ರ ಮಹತ್ವ : ಈ ಪ್ರಕರಣದ ತನಿಖೆ ಪೂರ್ಣವಾದ ಬಳಿಕ ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ’ಯಂತೆ (ಕ್ರಿಮಿನಲ್ ಪ್ರೊಸೀಜರ ಕೋಡ್‍ನಂತೆ) ೬೦ ಅಥವಾ ೯೦ ದಿನಗಳ ಒಳಗೆ ಆರೋಪಪತ್ರ ವನ್ನು ದಾಖಲಿಸುವುದು ಆವಶ್ಯಕವಿರುತ್ತದೆ. ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ ೩೨೧’ ಅಡಿಯಲ್ಲಿ ದಾಖಲಾಗಿರುವ ಈ ಖಟ್ಲೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸರಕಾರಿ ನ್ಯಾಯವಾದಿಗಳು ತಾಲೂಕುಮಟ್ಟದ ಕ್ರಿಮಿನಲ್ ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದರು. ಯಾವ ಪ್ರಕರಣಗಳ ಪುರಾವೆಗಳು ಲಭ್ಯವಿಲ್ಲವೋ ಮತ್ತು ಅಪರಾಧ ಸಾಬೀತಾಗುವ ಸಾಧ್ಯತೆ ಬಹಳ ಕಡಿಮೆ ಇರುವುದೋ ಅಂತಹ ಸಂದರ್ಭದಲ್ಲಿ ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ ೩೨೧ ರಂತೆ ಸರಕಾರಿ ನ್ಯಾಯವಾದಿಗಳು ಮನವಿ ಸಲ್ಲಿಸಿ ಖಟ್ಲೆಯನ್ನು ಸ್ಥಗಿತಗೊಳಿಸಬಹುದು. ಇದನ್ನು ಉಪಯೋಗಿಸಿ ಕಾನೂನು-ಸುವ್ಯವಸ್ಥೆಯನ್ನು ರಕ್ಷಿಸಬೇಕಾಗುತ್ತದೆ. ಸರಕಾರಿ ನ್ಯಾಯವಾದಿಗಳು ಈ ಮನವಿಯನ್ನು ಸದಭಿಪ್ರಾಯದಿಂದ ಜನರ ಹಿತಕ್ಕಾಗಿ ಮತ್ತು ಯಾರ ಒತ್ತಡಕ್ಕೂ ಒಳಗಾಗದೇ ಮಾಡುವ ಅವಶ್ಯಕತೆ ಇದೆ.

೩ ಆ. ಈ ಸಮಯದಲ್ಲಿ ಪಾಟೀಸವಾಲು ಮಾಡಲಾಯಿತು, ಸದನದಲ್ಲಿ ನಡೆಯುವ ಘಟನೆಗಳ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸದೇ, ಅಲ್ಲಿ ನಡೆದ ಅಶಿಸ್ತಿನ ವಿಷಯದಲ್ಲಿ ಸಭಾಪತಿಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಕ್ಕುಭಂಗದ ಕ್ರಮವನ್ನು ಜರುಗಿಸಬಹುದಾಗಿದೆ. ಈ ಪ್ರಕರಣದಲ್ಲಿ ವಿಧಾನಮಂಡಳದ ಶಾಸಕರು ದೂರು ದಾಖಲಿಸಿದ್ದರು. ಆದರೆ ಆ ಅಧಿಕಾರ ಕೇವಲ ಸಭಾಪತಿಗಳಿಗೆ ಇರುತ್ತದೆ. ಶಾಸಕರಿಗೆ ಇರುವುದಿಲ್ಲ. ಭಾರತೀಯ ರಾಜ್ಯ ಸಂವಿಧಾನ ಕಲಂ ೧೯೪ ಅಡಿ ವಿಶೇಷಾಧಿಕಾರವನ್ನು ನೀಡಲಾಗಿದೆ. ಹಾಗಾಗಿ ಅವರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ.

೩ಇ. ಒಂದು ಬಾರಿ ಸರಕಾರಿ ನ್ಯಾಯವಾದಿಗಳು ‘ಅಪರಾಧ ಪ್ರಕ್ರಿಯೆ ಸಂಹಿತೆ ಕಲಂ ೩೨೧’ ರಂತೆ ಮನವಿ ನೀಡಿದರೆ, ಅದರಲ್ಲಿ ನ್ಯಾಯಾಲಯಕ್ಕೆ ವಿಶೇಷ ಅಧಿಕಾರವಿರುವುದಿಲ್ಲ. ಅವರ ಪಾತ್ರ ಕೇವಲ ವೀಕ್ಷಣೆ ಮಾಡುವುದಾಗಿರುತ್ತದೆ. ಇದರಿಂದ ಮನವಿ ದಾಖಲಿಸಿದ ಬಳಿಕ ನ್ಯಾಯಾಲಯವು ಆ ಖಟ್ಲೆಯನ್ನು ರದ್ದುಗೊಳಿಸುವುದು ಸೂಕ್ತವಾಗಿರುತ್ತದೆ. `ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ ೩೨೧’ ರಂತೆ ಆರೋಪಪತ್ರವನ್ನು ದಾಖಲಿಸುವ ಮೊದಲು ಮನವಿ ಬಂದರೆ, ಖಟ್ಲೆ ಮುಂದುವರಿಯುವುದಿಲ್ಲ ಮತ್ತು ಆರೋಪಿ ದೋಷಮುಕ್ತನಾಗುತ್ತಾನೆ. ಆರೋಪಪತ್ರ ದಾಖಲಿಸಿದ ಬಳಿಕವೂ ಸರಕಾರಿ ನ್ಯಾಯವಾದಿಗಳು ಮನವಿ ದಾಖಲಿಸ ಬಹುದಾಗಿದೆ. ಆ ಸಮಯದಲ್ಲಿ ‘ಚಾರ್ಜ್ ಫ್ರೇಮ್’ ಆವಶ್ಯಕತೆ ಇರುವುದಿಲ್ಲ. ಅಂದರೆ ಅದರಿಂದ ಆರೋಪಿಗೆ ಲಾಭವಾಗುತ್ತದೆ.

೪. ಸರಕಾರಿ ನ್ಯಾಯವಾದಿಗಳು ಖಟ್ಲೆಯನ್ನು ಸ್ಥಗಿತಗೊಳಿಸಲು ಸಲ್ಲಿಸುವ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸುವುದು ಮತ್ತು ಅದರ ಹಿಂದಿನ ಕಾರಣಗಳು

ಖಟ್ಲೆಯನ್ನು ಸ್ಥಗಿತಗೊಳಿಸಲು ಸರಕಾರಿ ನ್ಯಾಯವಾದಿ ಸಲ್ಲಿಸಿದ್ದ ‘ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ಕಲಂ ೩೨೧’ ರಂತೆ ನೀಡಿರುವ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ಇದಕ್ಕಾಗಿ ನ್ಯಾಯಾಲಯ ನೀಡಿರುವ ಕಾರಣಗಳು ನಿಜವಾಗಿಯೂ ಅತ್ಯಂತ ಸೂಕ್ತ ವಾಗಿವೆ. ನ್ಯಾಯಾಲಯವು ಸರಕಾರದ ಆಸ್ತಿ-ಪಾಸ್ತಿಗಳ ರಕ್ಷಣೆಗಾಗಿ ವಿಶೇಷ ಕಾನೂನು ರಚಿಸಿದ್ದು, ಅದರಡಿಯಲ್ಲಿ ದೂರು ದಾಖಲಾಗಿದ್ದರೆ, ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ದಾಖಲಾಗಿದ್ದ ದೂರುಗಳನ್ನು ಅದರ ಪುರಾವೆಗಳ ಆಧಾರಗಳೊಂದಿಗೆ ನಡೆಸುವುದು ಸರಕಾರಿ ನ್ಯಾಯವಾದಿಯ ಕರ್ತವ್ಯವಾಗಿದೆ. ಅವರು ಸಾಕ್ಷೀದಾರರನ್ನು ಪರೀಕ್ಷಿಸಿ ಜನರಿಗೆ ನ್ಯಾಯ ದೊರೆಯುವ ದೃಷ್ಟಿಯಿಂದ ಪ್ರಯತ್ನಿಸುವುದು ಆವಶ್ಯಕವಾಗಿದೆ. ಆರೋಪಪತ್ರವನ್ನು ದಾಖಲಿಸದಿರಲು ಅವರ ಉದ್ದೇಶ ಒಳ್ಳೆಯದಿದೆ ಎಂದೆನಿಸುವುದಿಲ್ಲ.

೫. ‘ಸರಕಾರಿ ನ್ಯಾಯವಾದಿ ತನ್ನ ಮನಸ್ಸಿಗೆ ಬಂದಂತೆ ಖಟ್ಲೆಯನ್ನು ಸ್ಥಗಿತಗೊಳಿಸುವ ವಿಷಯದಲ್ಲಿ ಮನವಿ ಸಲ್ಲಿಸಲು ಸಾಧ್ಯವಿಲ್ಲ’, ಎಂದು ತಿಳಿಸುತ್ತಾ, ಉಚ್ಚ ನ್ಯಾಯಾಲಯವು ಪುನರ್‍ವಿಚಾರಣೆಯ ಮನವಿಯನ್ನು ತಿರಸ್ಕರಿಸುವುದು

ತಾಲೂಕು ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಕೇರಳ ಸರಕಾರ ಮತ್ತು ಅವರ ಪ್ರತಿವಾದಿಯಾಗಿರುವ ಶಾಸಕರು ಒಟ್ಟಿಗೆ ಸೇರಿ ಕೇರಳ ಉಚ್ಚ ನ್ಯಾಯಾಲಯದಲ್ಲಿ ‘ರಿವಿಜನ್’ (ಪುನರ್‍ವಿಚಾರಣೆ ಮನವಿ) ದಾಖಲಿಸಿದ್ದರು. ಆಗ ಈ ‘ಪುನರ್ ವಿಚಾರಣೆ’ ಮನವಿಯು ಕೇರಳ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ.ಜಿ. ಅರುಣ ಇವರ ಎದುರಿಗೆ ಬಂದಿತು, ಆಗ ಅವರು ‘ಪುನರ್‍ವಿಚಾರಣೆ’ ಮನವಿಯನ್ನು ತಿರಸ್ಕರಿಸಿದರು. ಅವರು ಈ ಬಗ್ಗೆ ಹೇಳುತ್ತಾ, ತಾಲೂಕು ನ್ಯಾಯಾಲಯ ನೀಡಿರುವ ತೀರ್ಪನ್ನು ಸರಕಾರ ಪ್ರಶ್ನಿಸುತ್ತಿದೆ. ಇದರರ್ಥ ಸರಕಾರಿ ನ್ಯಾಯವಾದಿಗಳ ಮೇಲೆ ಈ ಮನವಿಯನ್ನು ದಾಖಲಿಸಲು ಒತ್ತಡವನ್ನು ಹೇರಲಾಗಿದೆ. ಭಾರತೀಯ ಸಂವಿಧಾನದ ಕಲಂ ೧೯೪ ರ ಅರ್ಥವೆಂದರೆ ಅದರ ನಿಯಮಾವಳಿಗಳನ್ನು ಕಿತ್ತುಕೊಂಡು ಶಾಸಕರು  ಗದ್ದಲವೆಬ್ಬಿಸುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಕಾರ್ಯಕಲಾಪಗಳನ್ನು ತಡೆಯಲು ಪ್ರಯತ್ನಿಸುವುದು ಎಂದಲ್ಲ. ಸದನದಲ್ಲಿ ಕಾರ್ಯಕಲಾಪಗಳು ಕೇವಲ ಸಮರ್ಪಕವಾಗಿ ನಡೆಯಬೇಕು ಮತ್ತು ಶಾಸಕರು ಸಕ್ರಿಯರಾಗಿ ಸಹಭಾಗಿಗಳಾಗಬೇಕು ಎಂದು ಈ ನಿಯಮಾವಳಿಗಳನ್ನು ನೀಡಿರುತ್ತಾರೆ ಎಂದು ತಿಳಿಸಿದರು.

ಕೇರಳ ಉಚ್ಚ ನ್ಯಾಯಾಲಯವು ತನ್ನ ಟಿಪ್ಪಣಿಯಲ್ಲಿ ಇಂತಹ ಮನವಿಯನ್ನು ಸಲ್ಲಿಸದಿರಲು ಸರಕಾರಿ ನ್ಯಾಯವಾದಿಗಳ ಮೇಲೆ ಏನಾದರೂ ಒತ್ತಡವಿದ್ದರೆ, ಅವರಿಗೆ ಏನಾದರೂ ತೊಂದರೆಯಾಗಿದ್ದರೆ ಅಥವಾ ಅವರಿಗೆ ಯಾರಾದರೂ ಪೀಡಿಸಿದ್ದರೂ ಅವರು ದಾಖಲಾಗಿರುವ ದೂರಿನ ಪ್ರಕರಣವನ್ನು ಮುಂದುವರಿಸಬೇಕು. ವಿಧಾನಮಂಡಳದಲ್ಲಿ ತಮಾಷೆ ಮತ್ತು ಗೂಂಡಾಗಿರಿ ಮಾಡಿ ಸದನದ ಕಾರ್ಯಕಲಾಪಗಳನ್ನು ಕೆಡಿಸಲು ಸಂವಿಧಾನವು ಶಾಸಕರಿಗೆ ನಿಯಮಾವಳಿಗಳ ಸಂರಕ್ಷಣೆಯನ್ನು ನೀಡಿರುವುದಿಲ್ಲ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ಕೇರಳ ಉಚ್ಚ ನ್ಯಾಯಾಲಯವು ಸರ್ವೋಚ್ಚ ನ್ಯಾಯಾಲಯದ `ಡಾ. ಜಗನ್ನಾಥ ಮಿಶ್ರಾರ ವಿರುದ್ಧ ಬಿಹಾರ ಸರಕಾರ’ ಖಟ್ಲೆಯನ್ನು ಆಧಾರವಾಗಿಟ್ಟುಕೊಂಡು ವಿವರಿಸುತ್ತಾ, ಸರಕಾರಿ ನ್ಯಾಯವಾದಿಗಳು ತಮ್ಮ ಮನಸ್ಸಿಗೆ ತೋಚಿದಂತೆ ಮನವಿ ಸಲ್ಲಿಸಲು ಸಾಧ್ಯವಿಲ್ಲ. ಈ ಮನವಿಯನ್ನು `ಅಡ್ಮಿಮಿನಿಸ್ಟ್ರೇಷನ್ ಆಫ್ ಜಸ್ಟೀಸ್’ (ನ್ಯಾಯದಾನದ) ದೃಷ್ಟಿಯಿಂದಲೇ ಇರಬೇಕು. ಈ ಪ್ರಕರಣವನ್ನು ಪುನಃ ಹಿಂಪಡೆಯುವಲ್ಲಿ ಒಂದು ವೇಳೆ ಸದುದ್ದೇಶ ವಿದ್ದರೆ ಮಾತ್ರ ಮನವಿಯನ್ನು ಸಮ್ಮತಿಸಬೇಕು. ಇಲ್ಲವಾದರೆ ಅದನ್ನು ತಿರಸ್ಕರಿಸಬಹುದಾಗಿದೆ ಎಂದು ತಿಳಿಸಿದೆ. ಈ ಹಿಂದೆಯೂ ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಒಬ್ಬ ಶಾಸಕ ಸಭಾಪತಿಯ ದಿಕ್ಕಿನಲ್ಲಿ ಪೇಪರವೇಟ್ ಎಸೆದು ಹೊಡೆದಿದ್ದರು. ಆ ಪ್ರಕರಣದಲ್ಲಿ ಅವರನ್ನು ಕಾರಣವಿಲ್ಲದೇ ಅಮಾನತ್ತುಗೊಳಿಸಲಾಗಿರುವುದಿಲ್ಲ, ಅವರ ವಿರುದ್ಧ ಕ್ರಿಮಿನಲ್ ಅಪರಾಧ ದಾಖಲಾಗಿದ್ದ ಕಾರಣ ಅವರಿಗೆ ೬ ತಿಂಗಳ ವರೆಗೆ ಕಾರಾಗೃಹವಾಸವನ್ನು ಅನುಭವಿಸಬೇಕಾಗಿತ್ತು.

೬. ಕಲಂ ೩೨೧ ರ ಮತ್ತೊಂದು ಪ್ರಕರಣ 

ಕೇರಳದ ಒಬ್ಬ ಶಾಸಕನ ವಿರುದ್ಧ ಭಾರತೀಯ ಸಂವಿಧಾನ ಕಲಂ ೧೯೫ ಮತ್ತು ಕಲಂ ೫೦೬ ರಂತೆ ದೂರು ದಾಖಲಾಗಿತ್ತು ತದನಂತರ ಖಟ್ಲೆಯನ್ನು ಸ್ಥಗಿತಗೊಳಿಸಲು ಸರಕಾರಿ ನ್ಯಾಯವಾದಿಗಳು ಕಲಂ ೩೨೧ ರಂತೆ ಕೆಳನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದರು. ಆ ಮನವಿಯನ್ನು ಕೆಳ ನ್ಯಾಯಾಲಯವು ವಿಚಾರಣೆಗೆ ಸಮ್ಮತಿ ನೀಡಿದ್ದರಿಂದ ಆರೋಪಿಯ ವಿರುದ್ಧದ ಖಟ್ಲೆ ಮುಕ್ತಾಯವಾಯಿತು; ಆದರೆ ಈ ಸಂದರ್ಭದಲ್ಲಿ ಮೂರನೇ ವ್ಯಕ್ತಿಯೊಬ್ಬನು ಉಚ್ಚ ನ್ಯಾಯಾಲಯದಲ್ಲಿ ‘ರಿವಿಜನ್’ (`ಪುನರ್‍ವಿಚಾರಣೆಯ ಮನವಿ’) ದಾಖಲಿಸಿದನು. ಆಗ ‘ಅರ್ಜಿದಾರನು ಮೂರನೇ ವ್ಯಕ್ತಿಯಾಗಿರುವುದರಿಂದ ಅವನ ‘ರಿವಿಜನ್ ಮನವಿ’ಯನ್ನು ಆಲಿಸಲು ಸಾಧ್ಯವಿಲ್ಲ ಎಂದು ‘ರಿವಿಜನ್ ಮನವಿ’ಯನ್ನು ತಿರಸ್ಕರಿಸಲಾಯಿತು.

ಮುಂದೆ ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತು. ಸರ್ವೋಚ್ಚ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯಪೀಠವು ಮುಖ್ಯ ನ್ಯಾಯಾಧೀಶರಾದ ಮಿಶ್ರಾ ಮತ್ತು ನ್ಯಾಯಮೂರ್ತಿ ಚಂದ್ರಚೂಡ ಇವರು ಒಳ್ಳೆಯ ತೀರ್ಪನ್ನು ನೀಡಿದರು. ಈ ಸಂದರ್ಭದಲ್ಲಿ ಅವರು ತಾಲೂಕು ನ್ಯಾಯಾಲಯವು ಸರಕಾರಿ ನ್ಯಾಯವಾದಿಗಳ ಮನವಿಗೆ ಒಪ್ಪಿಗೆ ಸೂಚಿಸುತ್ತದೆ ಮತ್ತು ಉಚ್ಚ ನ್ಯಾಯಾಲಯ ‘ಪುನರ್ ವಿಚಾರಣೆಯ ಮನವಿ’ ಮೂರನೇ ವ್ಯಕ್ತಿಯದ್ದು ಆಗಿರುವುದರಿಂದ ಅದನ್ನು ತಿರಸ್ಕರಿಸಿರುವುದು ಸೂಕ್ತ ವಲ್ಲ. ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯವು ಪರಿಶೀಲಿಸಿ, ಉಚ್ಚ ನ್ಯಾಯಾಲಯದ ಆದೇಶವನ್ನು ರದ್ದು ಪಡಿಸಿತು. ಅಲ್ಲದೇ ಈ ಪ್ರಕರಣ ಮರಳಿ ತಾಲೂಕು ನ್ಯಾಯಾಲಯಕ್ಕೆ ಪರಿಶೀಲನೆಗೆ ಕಳುಹಿಸಿತು. ಈ ಕಾನೂನಿನ ವಿಷಯದಲ್ಲಿ ಕೆಲವೊಂದು ಅಂಶಗಳನ್ನು ಎತ್ತಿ ಹಿಡಿಯಲಾಯಿತು. ಅದರಂತೆ, ಸಂವಿಧಾನವು ಸಾರ್ವಜನಿಕರ ಕಲ್ಯಾಣಕ್ಕಾಗಿ ಜನಪ್ರತಿನಿಧಿಗಳಿಗೆ ಕಲಂ ೧೯೪ ಅಥವಾ ೧೦೫ ರ ಮೂಲಕ ವಿಶೇಷ ಅಧಿಕಾರದ ನಿಯಮಾವಳಿಗಳನ್ನು ನೀಡಿದೆ. ಇದರಿಂದ ಸರಕಾರಿ ನ್ಯಾಯವಾದಿಗಳು ಸದುದ್ದೇಶದಿಂದ ಮನವಿಯನ್ನು ಸಲ್ಲಿಸಿದ್ದರೆ, ಮಾತ್ರ ಅದನ್ನು ಸಮ್ಮತಿಸಬೇಕು. ಇಲ್ಲಿಯವರೆಗೆ ಈ ವಿಷಯದ ಮೇಲೆ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಸವಿಸ್ತಾರವಾಗಿ ವಿಚಾರ ಮಾಡಿ ಪ್ರಕರಣವನ್ನು ಒಪ್ಪಿಕೊಳ್ಳಲಾಯಿತು.

೭. ಕೇರಳ ಉಚ್ಚ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡು ಜಾಗರೂಕತೆಯನ್ನು ತೋರಿಸುವುದು

ಕೇರಳ ವಿಧಾನಮಂಡಳದಲ್ಲಿ ಅಸಭ್ಯ ವರ್ತನೆಯ ಪ್ರಕರಣದಲ್ಲಿ ಶಾಸಕರ ವಿರುದ್ಧ ದಾಖಲಾಗಿರುವ ಖಟ್ಲೆಯನ್ನು ರದ್ದುಗೊಳಿಸುವ ಸಂದರ್ಭದಲ್ಲಿ ‘ರಿವಿಜನ್’ ಮನವಿಯನ್ನು ಕೇರಳ ಉಚ್ಚ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಅದರ ವಿಚಾರಣೆ ದ್ವಿಸದಸ್ಯ ವಿಭಾಗೀಯಪೀಠ ನ್ಯಾಯಮೂರ್ತಿ ಚಂದ್ರಚೂಡ ಮತ್ತು ಎಮ್.ಆರ್.ಶಹಾ ಇವರೆದುರಿಗೆ ಬಂದಿತು. ನ್ಯಾಯಮೂರ್ತಿ ಚಂದ್ರಚೂಡರು ೨೦೧೮ ನೇ ಇಸವಿಯಲ್ಲಿ ನ್ಯಾಯಮೂರ್ತಿ ಮಿಶ್ರಾ ಇವರೊಂದಿಗೆ ಕೇರಳದ ಒಂದು ಖಟ್ಲೆಯಲ್ಲಿ ಭಾಗವಹಿಸಿದ್ದರು. ಆ ಸಮಯದಲ್ಲಿ ಅವರು ಶಾಸಕರ ಅಸಭ್ಯ ವರ್ತನೆಯನ್ನು ಸಹಿಸಿಕೊಂಡಿರಲಿಲ್ಲ ಮತ್ತು ಶಾಸಕರ ಮೇಲೆ ದಾಖಲಿಸಲಾಗಿದ್ದ ಖಟ್ಲೆಯನ್ನು ಮುಂದುವರಿಸುವಂತೆ ಆದೇಶಿಸಿದ್ದರು. ಇದರಿಂದ ಕೇರಳದ ಇತ್ತೀಚಿನ ಪ್ರಕರಣ ಅವರ ಎದುರಿಗೆ ಬಂದಾಗ ಅವರು, ನಾವು ಕೇರಳ ಉಚ್ಚ ನ್ಯಾಯಾಲಯದ ನಿರ್ಣಯವನ್ನು ರದ್ದುಗೊಳಿಸುವ ಮನಃಸ್ಥಿತಿಯಲ್ಲಿ ಇಲ್ಲ. ಆದುದರಿಂದ ನಾವು ಶಾಸಕರ ಇಂತಹ ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲವೆಂದು ತಿಳಿಸಿದರು.

‘ಪ್ರಿವೆನ್ಶನ್ ಆಫ್ ಪಬ್ಲಿಕ್ ಪ್ರಾಪರ್ಟಿ ಆ್ಯಕ್ಟ್’ (ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಪ್ರತಿಬಂಧಕ ಕಾನೂನು) ಈ ವಿಶೇಷ ಕಾನೂನಿನ ಅಡಿಯಲ್ಲಿ ಆಗಿರುವ ಅಪರಾಧವನ್ನು ಸರಕಾರಿ ನ್ಯಾಯವಾದಿಗಳಿಗೆ ಮನವಿಯನ್ನು ನೀಡಿ ಬಳಿಕ  ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಅಲ್ಲದೇ ಶಾಸಕರನ್ನು ರಕ್ಷಿಸಲು ಸರಕಾರದ ಪರವಾಗಿ ಯಾವ ಮನವಿಯನ್ನು ನೀಡಲಾಗುತ್ತಿದೆಯೋ, ಅದನ್ನೂ ಕೂಡ ಸ್ವೀಕರಿಸಲು ಸಾಧ್ಯವಿಲ್ಲ. ಈ ಎಲ್ಲ ಪ್ರಕರಣದಲ್ಲಿ ನಾವು ನಿಮ್ಮ ಪರವಾಗಿ ತೀರ್ಪು ನೀಡಲು ಉತ್ಸುಕರಾಗಿಲ್ಲ’ ಎಂದು ನ್ಯಾಯಮೂರ್ತಿಗಳು ಸ್ಪಷ್ಟವಾಗಿ ಹೇಳಿದರು ಮತ್ತು ೮ ದಿನಗಳ ಬಳಿಕ ಪ್ರಕರಣದ ಆಲಿಕೆಯನ್ನು ಇಡಲಾಯಿತು. `ಇವೆಲ್ಲ ಪ್ರಕಾರಗಳು ಜನತೆಗೆ ಅಪಮಾನಾಸ್ಪದವಾಗಿದೆ. ಶಾಸಕರು ತಮ್ಮ ಅಸಭ್ಯವರ್ತನೆಯಿಂದ ಸಮಾಜದ ಎದುರಿಗೆ ಯಾವ ಆದರ್ಶವನ್ನು ಇಡಲು ಇಚ್ಛಿಸುತ್ತಿದ್ದಾರೆ ?’, ಎನ್ನುವ ಪ್ರಶ್ನೆಯನ್ನು ನ್ಯಾಯಾಲಯವು ಶಾಸಕರ ಪರವಾಗಿರುವ ನ್ಯಾಯವಾದಿಗಳಿಗೆ ಕೇಳಿದರು. ಇತ್ತೀಚೆಗಷ್ಟೇ ಸರ್ವೋಚ್ಚ ನ್ಯಾಯಾಲಯವು ಕೇರಳ ಉಚ್ಚ ನ್ಯಾಯಾಲಯದ ನಿರ್ಣಯದ ವಿರುದ್ಧದ ಸರಕಾರದ ಮನವಿಯನ್ನು ತಿರಸ್ಕರಿಸಿತು.

೮. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನಡೆದುಕೊಂಡು ಸದನದಲ್ಲಿರುವ ಪ್ರತಿಯೊಂದು ಕ್ಷಣವನ್ನು ಜನತೆಯ ಹಿತಕ್ಕಾಗಿ ಉಪಯೋಗಿಸಬೇಕು !

ಕೇರಳದ ವಿಧಾನಮಂಡಳದಲ್ಲಿ ಜರುಗಿರುವುದೇ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಎಲ್ಲ ರಾಜ್ಯಗಳ ವಿಧಾನಮಂಡಳದಲ್ಲಿ ಜರುಗು ವುದನ್ನು ನೋಡಬಹುದಾಗಿದೆ. ವಿಧಾನಮಂಡಳದ ಅಧಿವೇಶನದ ಬಳಿಕ ಜನತೆಯ ಸಾವಿರಾರು ಕೋಟಿ ಹಣ ವ್ಯಯವಾಗುತ್ತಿರುತ್ತದೆ. ಇದನ್ನು ಜನಪ್ರತಿನಿಧಿಗಳು ವಿಚಾರ ಮಾಡಬೇಕು. ಆ ಕಾಲಾವಧಿಯಲ್ಲಿ ಸರಕಾರಿ ನೌಕರರಿಂದ ಸಚಿವರ ವರೆಗೆ ಎಲ್ಲ ಜನರು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದರಿಂದ ಯಾವ ಅಪೇಕ್ಷೆಯಿಂದ ಜನತೆಯು ಸರ್ವಪಕ್ಷೀಯ ಸಂಸದರು ಮತ್ತು ಶಾಸಕರನ್ನು ಪ್ರತಿನಿಧಿಯೆಂದು ವಿಧಾನಮಂಡಳಕ್ಕೆ ಕಳುಹಿಸಿರುತ್ತಾರೆ ಎನ್ನುವ ವಿಚಾರವನ್ನು ಮಾಡಿ ಅವರು ಸದನದಲ್ಲಿ ಪ್ರತಿಯೊಂದು ಕ್ಷಣವನ್ನು ಜನತೆಯ ಹಿತಕ್ಕಾಗಿ ಉಪಯೋಗಿಸಬೇಕು. ಹಾಗೆಯೇ ಜನತೆಗೆ ಉತ್ತಮ ಸಂದೇಶ ತಲುಪುವಂತೆ, ಜವಾಬ್ದಾರಿಯ ಅರಿವನ್ನು ಇಟ್ಟುಕೊಂಡು ನಡೆದುಕೊಳ್ಳಬೇಕು.

ಕಳೆದ ಕೆಲವು ವರ್ಷಗಳಲ್ಲಿ ಕಂಡು ಬಂದಿರುವುದೇನೆಂದರೆ, ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಮುಂಗಡಪತ್ರ ಕೂಡ ಗದ್ದಲದಲ್ಲಿಯೇ ಅನುಮೋದನೆಗೊಳ್ಳುತ್ತದೆ. ಈ ಹಿಂದೆ ಸರಕಾರವು ಸದನಕ್ಕೆ ಸಲ್ಲಿಸಿದ ಆರ್ಥಿಕ ಮುಂಗಡಪತ್ರದ ಮೇಲೆ ಸರಕಾರ ಮತ್ತು ವಿಪಕ್ಷಗಳ ಸಂಸದರಿಂದ ಮತ್ತು ಶಾಸಕರಿಂದ ಸದನದಲ್ಲಿ ಸೂಕ್ತ ಚರ್ಚೆಗಳು ನಡೆಯುತ್ತಿದ್ದವು. ಅಧಿವೇಶನದ ಕಾಲಾವಧಿಯಲ್ಲಿ೪-೪ ಗಂಟೆ ಸಚಿವರು ಮತ್ತು ವಿರೋಧಿ ಪಕ್ಷದ ಮುಖಂಡರು ಭಾಷಣ ಮಾಡುತ್ತಿದ್ದರು. ಅವರಿಗೆ ಜನತೆಯ ಹಿತದ ತಳಮಳವಿರುವುದು ಅರಿವಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಅಧಿವೇಶನವೆಂದರೆ ಒಂದು ಕುಸ್ತಿಯ ಅಖಾಡಾ ಆಗಿದೆ. ಸಭಾಪತಿಯ ಎದುರಿನ ಬಾವಿಯಲ್ಲಿ ಇಳಿಯುವುದು, ಅವರ ಮೈಮೇಲೆ ಕಾಗದಪತ್ರಗಳನ್ನು ಎಸೆಯುವುದು ಹಾಗೆಯೇ ಧ್ವನಿವರ್ಧಕ (ಮೈಕ್) ಕಿತ್ತೆಸೆಯುವುದು ಮತ್ತು ಕುರ್ಚಿಗಳನ್ನು ಮುರಿಯುವುದು, ಸಭಾಪತಿಯ ಎದುರಿನ ರಾಜದಂಡವನ್ನು ಕಸಿಯಲು  ಪ್ರಯತ್ನ ಮಾಡುವುದು ಇಷ್ಟೇ ಅಲ್ಲ, ಈಗ ಪರಸ್ಪರ ಹೊಡೆದಾಡುವ ಮಟ್ಟಿಗೆ ಜನಪ್ರತಿನಿಧಿಗಳು ತಲುಪಿದ್ದಾರೆ. ಈ ರೀತಿ ಅಸಭ್ಯವಾಗಿ ವರ್ತಿಸುವುದು ಮತ್ತು ತಮ್ಮ ವಿರುದ್ಧ ಖಟ್ಲೆಗಳು ನಡೆಯಬಾರದು. ಈ ಬಗ್ಗೆ ಸಭಾಪತಿಗಳು ಕೇವಲ ಹಕ್ಕುಭಂಗದ ಆದೇಶ ನೀಡಬೇಕು ಎಂದು ಸದ್ಯದ ಸಂಸದರ ಮತ್ತು ಶಾಸಕರ ಅಪೇಕ್ಷೆಯಿರುತ್ತದೆ.

ಭಾರತವು ಪ್ರಜಾಪ್ರಭುತ್ವವನ್ನು ಸ್ವೀಕರಿಸಿದೆ; ಆದರೆ ಅದರಲ್ಲಿ ಅತ್ಯಂತ ಮಹತ್ವದ ಅಂಗವಾಗಿರುವ ವಿಧಾನಮಂಡಳದಲ್ಲಿ ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ಜನತೆ ತಟಸ್ಥವಾಗಿ ನೋಡುತ್ತಿದೆ. ಆದುದರಿಂದ ನ್ಯಾಯೋಚಿತ ಮಾರ್ಗದಿಂದ ಕಾರ್ಯಪ್ರವೃತ್ತರಾಗಿ, ಇದರಲ್ಲಿ ಬದಲಾವಣೆ ತರುವುದು ಆವಶ್ಯಕವಾಗಿದೆ. ಜನತೆಯು ಜಾಗೃತವಾಗಿದ್ದು, ಇಂತಹ ಸಂಸದರು ಅಥವಾ ಶಾಸಕರಿಗೆ ಅವರು ಮಾಡಿರುವ ದುಷ್ಕತ್ಯಗಳ ವಿಷಯದಲ್ಲಿ ಅರಿವು ಮೂಡಿಸಿ ಅವರನ್ನು ಮನೆಯಲ್ಲಿಯೇ ಕುಳ್ಳಿರಿಸಿದರೆ ಅವರು ಮತದಾರರನ್ನು ಗೌರವಿಸುವರು ಮತ್ತು ಸಭ್ಯತೆಯನ್ನು ತೋರಿಸುವರು ಎನ್ನುವ ಆಸೆಯನ್ನು ಇಟ್ಟುಕೊಳ್ಳೋಣ. `ಇಂತಹ ಪರಿಸ್ಥಿತಿಯಲ್ಲಿ ಆದರ್ಶವಾಗಿರುವ `ಹಿಂದೂ ರಾಷ್ಟ್ರ’ ಅರ್ಥಾತ್ ರಾಮರಾಜ್ಯ ಸ್ಥಾಪನೆಯಾಗ ಬೇಕು’, ಎಂದು ಸಮಸ್ತ ಹಿಂದೂಗಳಿಗೆ ಎನಿಸಿದರೆ ಆಶ್ಚರ್ಯವೇನಿಲ್ಲ !’.

ಶ್ರೀಕೃಷ್ಣಾರ್ಪಣಮಸ್ತು |’

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಮತ್ತು ನ್ಯಾಯವಾದಿ, ಮುಂಬಯಿ ಉಚ್ಚ ನ್ಯಾಯಾಲಯ(೧೦.೭.೨೦೨೧)