ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಹರಕೆ ಮುಡಿ ವಿವಾದ ಪ್ರಕರಣ

  • ಶ್ರೀಕಂಠೇಶ್ವರ ದೇವಸ್ಥಾನ ಪರವಾಗಿ ೨೫ ವರ್ಷಗಳ ನಂತರ ಸಿವಿಲ್ ನ್ಯಾಯಾಲಯದ ತೀರ್ಪು !
  • ಹರಕೆ ಮುಡಿ ಕೂದಲಿನ ಸಂಪೂರ್ಣ ಹಕ್ಕು ದೇವಸ್ಥಾನಕ್ಕೆ ಸೇರಿದ್ದು, ಕ್ಷೌರದ ಕೆಲಸ ಮಾತ್ರ ನಯನಜ ಕ್ಷತ್ರಿಯ ಸಂಘಕ್ಕೆ ಸೇರಿದೆ !
  • ೨೫ ವರ್ಷಗಳ ನಂತರ ಈ ತೀರ್ಪು ಬರುವುದು ಇದು ಭಾರತೀಯ ನ್ಯಾಯಾಂಗಕ್ಕೆ ಪ್ರಶಂಸನೀಯವಲ್ಲ ಎಂದು ಜನರಿಗೆ ಅನಿಸುತ್ತದೆ !

ಬೆಂಗಳೂರು – ಕಳೆದ ೨೫ ವರ್ಷಗಳಿಂದ ನಡೆಯುತ್ತಿರುವ ಹರಕೆ ಮುಡಿ ಕೂದಲು ಪ್ರಕರಣದ ವಿವಾದ ಅಂತಿಮ ತೆರೆ ಬಿದ್ದಿದ್ದು ಕ್ಷೌರದ ಉತ್ಪನ್ನದ ಸಂಪೂರ್ಣ ಹಕ್ಕನ್ನು ದೇವಸ್ಥಾನಕ್ಕೆ ನೀಡಲಾಗಿದ್ದು, ಕ್ಷೌರವನ್ನು ಮಾತ್ರ ನಯನಜ ಕ್ಷತ್ರಿಯ ಸಂಘಕ್ಕೆ ನೀಡಲಾಗಿದೆ. ಇಲ್ಲಿನ ಸಿವಿಲ್ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.

ಶ್ರೀಕಂಠೇಶ್ವರ ಸ್ವಾಮಿಯ ಮುಡಿಕಟ್ಟೆಯಲ್ಲಿ ಮುಡಿ ತೆಗೆಯುವ ಕಾರ್ಯದಲ್ಲಿ ತೊಡಗಿರುವ ನಯನಜ ಕ್ಷತ್ರಿಯ ಸಂಘದ ಸದಸ್ಯರು ‘ತಾವು ವಂಶ ಪಾರಂಪರ್ಯ ಹರಕೆ ಮುಡಿ ಸೇವೆಯಲ್ಲಿ ತೊಡಗಿದ್ದೇವೆ. ಹಾಗಾಗಿ ಮುಡಿಕಟ್ಟೆಯ ಸಂಪೂರ್ಣ ಹಕ್ಕು ಸಂಘಕ್ಕೆ ಸೇರಿದೆ’ ಎಂದು ಪ್ರತಿಪಾದಿಸಿ ಮುಡಿಕಟ್ಟೆಯ ಸಂಪೂರ್ಣ ಆದಾಯವನ್ನು ಸಂಗದ ಸುರ್ಪದಿಗೆ ಪಡೆದಿದ್ದರು. ಇದರಿಂದ ದೇವಾಲಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿತ್ತು. ಹೀಗಾಗಿ ದೇವಸ್ಥಾನ ಆಡಳಿತ ಮುಡಿಸೇವೆಯನ್ನು ದೇವಾಲಯದ ವ್ಯಾಪ್ತಿಗೆ ತರಲು ಹೋರಾಡುತ್ತಿತ್ತು. ಈ ಸಂಬಂಧ ೨೫ ವರ್ಷಗಳ ಹಿಂದೆ ನರಸೀಪುರ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತ್ತು. ಇದೀಗ ಸುದೀರ್ಘ ವಾದ ವಿವಾದಗಳ ಬಳಿಕ ನ್ಯಾಯಾಲಯವು ಮೇಲಿನ ತೀರ್ಪನ್ನು ನೀಡಿತು.