ಮನುಷ್ಯನ ವಿವಿಧ ಕುಕರ್ಮಗಳು ಮತ್ತು ಅವುಗಳಿಗನುಸಾರ ಅವನಿಗಾಗುವ ನರಕಯಾತನೆ (ಶ್ರೀಮದ್ಭಾಗವತ)

ಅ. ಮನುಷ್ಯನಲ್ಲಿನ ತ್ರಿಗುಣಗಳಿಂದ ಅವನಿಂದ ಘಟಿಸುವ ಕೃತಿಗಳ ಫಲಗಳು

ಶುಕ್ರದೇವ ಗೋಸ್ವಾಮಿ ಮಹಾರಾಜರು ಪರೀಕ್ಷಿತನಿಗೆ ಹೇಳುತ್ತಾರೆ, ‘ಹೇ ರಾಜನೇ, ಈ ಜಗತ್ತು ೩ ರೀತಿಯ ಕೃತಿಗಳಿಂದ ತುಂಬಿಕೊಂಡಿದೆ. ಸತ್ತ್ವಗುಣ (ಒಳ್ಳೆಯ ಸ್ವಭಾವದಿಂದ ಆಗುವ ಕೃತಿಗಳು), ರಜೋಗುಣ (ವಾಸನೆಗಳಿಗೆ ಬಲಿಯಾಗಿ ಆಗುವ ಕೃತಿಗಳು) ಮತ್ತು ತಮೋಗುಣ (ಅಜ್ಞಾನದಿಂದ ಆಗುವ ಕೃತಿಗಳು). ಆದ್ದರಿಂದ ಅವರೆಲ್ಲ ೩ ವಿಭಿನ್ನ ರೀತಿಯ ಪರಿಣಾಮಗಳನ್ನು ಭೋಗಿಸಬೇಕಾಗುತ್ತದೆ. ಒಳ್ಳೆಯ ಕೃತಿಗಳನ್ನು ಮಾಡಿ ಮನುಷ್ಯನು ಸ್ವರ್ಗದಲ್ಲಿ ಆನಂದದಿಂದ ಇರಬಹುದು. ಕೆಟ್ಟ ಕೃತಿಗಳಿಂದ ಮತ್ತು ಅಜ್ಞಾನದಿಂದ ಅವನು ವಿಭಿನ್ನ ನರಕಯಾತನೆಗಳನ್ನು ಭೋಗಿಸಬೇಕಾಗುತ್ತದೆ. ಒಳ್ಳೆಯ ಮತ್ತು ಕೆಟ್ಟ ಇವುಗಳ ಭೇದವು ಗೊತ್ತಿದ್ದೂ ಯಾರು ಕೆಟ್ಟ ವರ್ತನೆಗಳನ್ನು ಮಾಡುತ್ತಾರೊ, ಅವರಿಗೆ ಮಾತ್ರ ಕಠೋರ ಯಾತನೆಗಳನ್ನು ಭೋಗಿಸಬೇಕಾಗುತ್ತದೆ.

ಆ. ಪಾಪಿ ಮನುಷ್ಯರಿಗೆ ಅವರ ಪಾಪಗಳಿಗನುಸಾರ ಆಗುವ ಶಿಕ್ಷೆ

ನರಕಲೋಕವು ಪಾತಾಳ ಲೋಕಗಳ ಕೆಳಗೆ ಮತ್ತು ಗರ್ಭೋದಕ್ ಸಾಗರದ ಸ್ವಲ್ಪ ಮೇಲಿದೆ. ಅದು ಯಮರಾಜನ ಅಧಿಪತ್ಯದಲ್ಲಿದೆ. ಮೃತ್ಯುವಿನ ನಂತರ ಯಮದೂತರು ಪಾಪಿ ಮನುಷ್ಯರನ್ನು ಅಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ಯಮರಾಜನು ಅವರ ವಿಶಿಷ್ಟ ಪಾಪಕೃತ್ಯಗಳಿಗನುಸಾರ ಅವರನ್ನು ಯೋಗ್ಯ ಶಿಕ್ಷೆಗಾಗಿ ನರಕಕ್ಕೆ ಕಳುಹಿಸುತ್ತಾನೆ.

೧. ಯಾವ ಮನುಷ್ಯನು ಇತರರ ಪತ್ನಿ, ಮಕ್ಕಳನ್ನು, ಹಣವನ್ನು ದೋಚುವನೋ, ಅವನನ್ನು ತಾಮಿಶ್ರವೆಂಬ ನರಕದಲ್ಲಿ ನೂಕಲಾಗುತ್ತದೆ. ಅಲ್ಲಿ ಅವನಿಗೆ ತಿನ್ನಲು ಕುಡಿಯಲು ಏನೂ ಸಿಗುವುದಿಲ್ಲ. ಅವನಿಗೆ ಯಮದೂತರಿಂದ ತೀವ್ರ ಹೊಡೆತಗಳು ಬೀಳುತ್ತವೆ.

೨. ಯಾವ ಮನುಷ್ಯನು ಇತರ ವ್ಯಕ್ತಿಯನ್ನು ಮೋಸ ಮಾಡುತ್ತಾನೆ, ಆತನ ಪತ್ನಿ, ಅವನ ಮಕ್ಕಳನ್ನು ಉಪಭೋಗಿಸುತ್ತಾನೆ, ಅವನನ್ನು ಅಂಧತಾ ಮಿಶ್ರ ನರಕದಲ್ಲಿ ನೂಕಲಾಗುತ್ತದೆ. ಅಲ್ಲಿ ಅವನಿಗೆ ತುಂಬಾ ತೊಂದರೆಗಳಾಗಿ, ಅವನು ತನ್ನ ಬುದ್ಧಿ ಮತ್ತು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ.

. ಯಾವ ಮನುಷ್ಯನು ಹಗಲುರಾತ್ರಿ ಕೆಲಸ ಮಾಡಿ ತನ್ನ ಕುಟುಂಬದವರ ಪಾಲನೆಪೋಷಣೆಗಾಗಿ ಕಾರಣವಿಲ್ಲದೇ ಹಿಂಸೆ ಯನ್ನು ಮಾಡುತ್ತಾನೋ, ಅವನನ್ನು ರೌರವ ನರಕದಲ್ಲಿ ನೂಕ ಲಾಗುತ್ತದೆ. ಅಲ್ಲಿ ಅವನು ಹತ್ಯೆ ಮಾಡಿದ ಪ್ರಾಣಿಗಳು ತಮ್ಮ ಸೇಡನ್ನು ತೀರಿಸಿಕೊಳ್ಳುತ್ತವೆ.

೪. ಇತರರಿಗೆ ದುಃಖಗಳನ್ನು ನೀಡಿ ಬದುಕುವ ಮನುಷ್ಯನನ್ನು ಮಹಾರೌರವ ನರಕದಲ್ಲಿ ನೂಕಲಾಗುತ್ತದೆ ಮತ್ತು ಕ್ರವ್ಯಾದ ಹೆಸರಿನ ಪ್ರಾಣಿಗಳು ಅವನನ್ನು ಹಿಂಸಿಸುತ್ತವೆ.

೫. ತನ್ನ ನಾಲಿಗೆಯ ಚಪಲವನ್ನು ಪೂರೈಸಲು ಮೂಕ ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಜೀವಂತ ಸುಟ್ಟು ತಿನ್ನುವ ಮನುಷ್ಯನನ್ನು ಕುಂಭಿಪಾಕವೆಂಬ ನರಕದಲ್ಲಿ ನೂಕಲಾಗುತ್ತದೆ. ಅಲ್ಲಿ ಅವನನ್ನು ಕುದಿಯುವ ಎಣ್ಣೆಯಲ್ಲಿ ಎಸೆಯಲಾಗುತ್ತದೆ.

. ಬ್ರಾಹ್ಮಣರ ಹತ್ಯೆಯನ್ನು ಮಾಡುವವರನ್ನು ಕಾಲಸೂತ್ರ ನರಕಕ್ಕೆ ಒಯ್ಯುತ್ತಾರೆ. ಅಲ್ಲಿ ಕೆಳಗಿನಿಂದ ಜ್ವಾಲೆ (ಬೆಂಕಿ)  ಮತ್ತು ಮೇಲಿನಿಂದ ತುಂಬಾ ಸುಡು ಬಿಸಿಲಿನಿಂದಾಗಿ ಆ ಮನುಷ್ಯನು ಅಲ್ಲಿಯೇ ಸುಟ್ಟು ಬೂದಿಯಾಗುತ್ತಾನೆ.

೭. ವೈದಿಕ ಮಾರ್ಗದಿಂದ ದೂರ ಹೋಗುವ ಮನುಷ್ಯನನ್ನು ಅಸಿಪತ್ರವನ ಎಂಬ ನರಕಕ್ಕೆ ಕಳುಹಿಸುತ್ತಾರೆ. ಅಲ್ಲಿ ಯಮದೂತರು ಅವನಿಗೆ ರಕ್ತ ಬರುವವವರೆಗೆ ಚಾಟಿಯಿಂದ ಹೊಡೆಯುತ್ತಾರೆ.

೮. ನಿರಪರಾಧಿ ನಾಗರಿಕರಿಗೆ ಶಿಕ್ಷೆಯನ್ನು ವಿಧಿಸುವ ಅತ್ಯಾಚಾರಿ ರಾಜರು ಮತ್ತು ಸರಕಾರಿ ಅಧಿಕಾರಿಗಳನ್ನು ಸೂಕರಮುಖ ಎಂಬ ನರಕದಲ್ಲಿ ನೂಕುತ್ತಾರೆ. ಅಲ್ಲಿ ಅವರನ್ನು ಕಬ್ಬಿನಂತೆ ಹಿಂಡಲಾಗುತ್ತದೆ.

. ಇತರರ ಹತ್ಯೆಯನ್ನು ಮಾಡುವ ಮತ್ತು ಪೀಡಿಸುವ ಮನುಷ್ಯನನ್ನು ಅಂಧಕೂಪ ನರಕದಲ್ಲಿ ನೂಕಲಾಗುತ್ತದೆ. ಅಲ್ಲಿ ಅವನ ಮೇಲೆ ಹಿಂಸಾತ್ಮಕ ಪ್ರಾಣಿ, ಪಕ್ಷಿ, ಸರ್ಪ ಮತ್ತು ಸೊಳ್ಳೆಗಳು ಆಕ್ರಮಣ ಮಾಡಿ, ಅವನಿಗೆ ಜೀವಿಸುವುದೇ ಬೇಡ ಎಂದು ಅನಿಸುವವರೆಗೆ ತೊಂದರೆಗಳನ್ನು ಕೊಡುತ್ತವೆ.

೧೦. ಮನೆಯಲ್ಲಿನ ವಯೋವೃದ್ಧರು, ಮಕ್ಕಳು ಮತ್ತು ಅತಿಥಿಗಳಿಗೆ ಭೋಜನವನ್ನು ನೀಡದೇ ಯಾರು ತಾವು ಮೊದಲು ಭೋಜನವನ್ನು ಮಾಡುತ್ತಾರೋ, ಅವರು ಕಾಗೆಯಂತಿರುತ್ತಾರೆ. ಇಂತಹ ಜನರನ್ನು  ಕ್ರಿಮಿಭೋಜನ ನರಕದಲ್ಲಿ ನೂಕಲಾಗುತ್ತದೆ. ಅಲ್ಲಿ ಅವರು ೧ ಲಕ್ಷ ವರ್ಷಗಳ ಕಾಲ ಕೊಳೆಯುತ್ತಾ ಬಿದ್ದಿ ರುತ್ತಾರೆ ಮತ್ತು ಕೊನೆಗೆ  ಕ್ರಿಮಿ-ಕೀಟಗಳಿಗೆ ಆಹಾರವಾಗುತ್ತಾರೆ (ಕ್ರಿಮಿ-ಕೀಟಗಳು ಅವರನ್ನು ತಿನ್ನುತ್ತವೆ).

೧೧. ಯಾವ ಮನುಷ್ಯನು ಇತರರ ಬಂಗಾರ, ವಜ್ರಾಭೂಷಣಗಳನ್ನು ಕಳ್ಳತನ ಮಾಡುತ್ತಾನೋ, ಅವನನ್ನು ಸಂದೇಶ ಎಂಬ ನರಕದಲ್ಲಿ ಎಸೆಯಲಾಗುತ್ತದೆ. ಅಲ್ಲಿ ಬಿಸಿ ತಾಮ್ರದ ಗೋಲಕಗಳಿಂದ (ಗೋಲಗಳಿಂದ) ಅವನ ಚರ್ಮ ಮತ್ತು ನಾಲಿಗೆಯನ್ನು ಸುಡಲಾಗುತ್ತದೆ.

೧೨. ಅಯೋಗ್ಯ-ಕೀಳು ಜಾತಿಯ ಸ್ತ್ರೀಯೊಂದಿಗೆ ಸಂಭೋಗ ಮಾಡುವವರನ್ನು ತಪ್ತಸೂರ್ಮಿ ಎಂಬ ನರಕದಲ್ಲಿ ಎಸೆಯಲಾಗುತ್ತದೆ. ಅಲ್ಲಿ ಅವರಿಗೆ ತಾಮ್ರದ ಬಿಸಿ ಮೂರ್ತಿಗಳನ್ನು ಆಲಂಗಿಸುವಂತೆ ಮಾಡುತ್ತಾರೆ.

೧೩. ಅನೈಸರ್ಗಿಕ ಸಂಭೋಗ ಮಾಡುವವರನ್ನು ವರ್ಜಕಂಟಕ ಶಾಲಮಲಿ ನರಕದಲ್ಲಿ ಎಸೆಯುತ್ತಾರೆ. ಅಲ್ಲಿ ಅವರನ್ನು  ಚೂಪಾದ ಮುಳ್ಳುಗಳಿರುವ ಗಿಡಗಳಿಗೆ ತೂಗು ಹಾಕಲಾಗುತ್ತದೆ .

೧೪. ಸುಳ್ಳು ಸಾಕ್ಷಿಗಳನ್ನು ನೀಡುವ ಮತ್ತು ವ್ಯಾಪಾರ-ವ್ಯವಹಾರದಲ್ಲಿ ಮೋಸ ಮಾಡುವ ಮನುಷ್ಯನನ್ನು ಎತ್ತರದ ಗುಡ್ಡದಿಂದ ನಿರ್ಜಲ ನರಕದಲ್ಲಿ ಎಸೆಯಲಾಗುತ್ತದೆ. ಅಲ್ಲಿ ಅವನಿಗೆ ತೀವ್ರ ಗಾಯಗಳಾಗುತ್ತವೆ.

೧೫. ಮದ್ಯಪಾನ ಮಾಡುವ ಬ್ರಾಹ್ಮಣ ಮತ್ತು ಅವನ ಪತ್ನಿಯನ್ನು ಅಯಃಪಾನ ನರಕಕ್ಕೆ ಒಯ್ಯಲಾಗುತ್ತದೆ. ಅಲ್ಲಿ ಯಮದೂತರು ಅವರ ಬಾಯಿಯಲ್ಲಿ ಲೋಹದ ಬಿಸಿ ರಸವನ್ನು ಹಾಕುತ್ತಾರೆ.

೧೬. ದೇವಿ ಭದ್ರಕಾಳಿಗೆ ಮನುಷ್ಯಬಲಿಯನ್ನು ನೀಡಿ ಮಾಂಸವನ್ನು ತಿನ್ನುವವರನ್ನು ರಕ್ಷೋಗಣ ಭೋಜನ ನರಕದಲ್ಲಿ ಎಸೆಯಲಾಗುತ್ತದೆ. ಅಲ್ಲಿ ಅವರಿಗೆ ಬಲಿಯಾದವರು ರಾಕ್ಷಸರ ರೂಪವನ್ನು ತಾಳಿ ಅವರನ್ನು ಹರಿದು-ತುಂಡುಗಳನ್ನು ಮಾಡುತ್ತಾರೆ (ತುಂಬಾ ತೊಂದರೆಗಳನ್ನು ಕೊಡುತ್ತಾರೆ).

೧೭. ಯಾವ ಮನುಷ್ಯರು ಸರ್ಪದಂತೆ ದ್ವೇಷಬುದ್ಧಿಯ ಮತ್ತು ಸಿಟ್ಟಿನ ಸ್ವರೂಪದವರಾಗಿರುವರೋ, ಅವರನ್ನು ದಂದಶೂಕ ನರಕದಲ್ಲಿ ಎಸೆಯಲಾಗುತ್ತದೆ. ಅಲ್ಲಿ ಏಳು ಹೆಡೆಗಳ ನಾಗಗಳು ಅವರನ್ನು ಇಲಿಯನ್ನು ತಿನ್ನುವಂತೆ ತಿನ್ನುತ್ತವೆ.

೧೮. ಪಾಪಮಾರ್ಗದಿಂದ ಹಣವನ್ನುಗಳಿಸಿ ಸೊಕ್ಕಿನಿಂದ ಮೆರೆಯುವವರನ್ನು ಸೂಚಿಮುಖ ನರಕದಲ್ಲಿ ಎಸೆಯಲಾಗುತ್ತದೆ. ಅಲ್ಲಿ ಯಮದೂತರು ಅವನ ದೇಹವನ್ನು ಕಡಿದು ತುಂಡುಗಳನ್ನಾಗಿ ಮಾಡುತ್ತಾರೆ. ಶಿಕ್ಷೆಯನ್ನು ಭೋಗಿಸಿದ ನಂತರ ಎಲ್ಲ ಪಾಪಿಗಳು ಪೃಥ್ವಿಯ ಮೇಲೆ ಪುನಃ ಜನ್ಮ ಪಡೆಯುತ್ತಾರೆ.

ಇ. ನರಕದಿಂದ ಪಾರಾಗಲು ಸತತವಾಗಿ ಭಗವಂತನ ನಾಮಸ್ಮರಣೆ ಮಾಡುವುದೇ ಮುಕ್ತಿಯ ಸವೋತ್ತಮ ಮಾರ್ಗ !

ಮಹಾರಾಜ ಪರೀಕ್ಷಿತನು ಶುಕ್ರದೇವರಿಗೆ ನರಕದಿಂದ ಪಾರಾಗಲು ಮನುಷ್ಯನು ನಿರ್ದಿಷ್ಟವಾಗಿ ಹೇಗೆ ವರ್ತಿಸಬೇಕು ?, ಎಂಬ ಪ್ರಶ್ನೆಯನ್ನು ಕೇಳಿದನು. ಅದಕ್ಕೆ ಶುಕ್ರದೇವ ಗೋಸ್ವಾಮಿಯವರು, ಮೃತ್ಯು ಬರುವ ಮೊದಲು ಮನುಷ್ಯನು ಕಾಯಾ, ವಾಚಾ, ಮನಸ್ಸು ಶುದ್ಧವಿರದಿದ್ದರೆ, ಅವನು ನರಕದಲ್ಲಿ ಇಂತಹ ಯಾತನೆಗಳನ್ನು ಭೋಗಿಸಬೇಕಾಗುತ್ತದೆ. ಆದ್ದರಿಂದ ಮನುಷ್ಯನು ಯಾವಾಗಲೂ ಶಾಸ್ತ್ರಾನುಸಾರ ವರ್ತಿಸಬೇಕು. ಪಾಪಕರ್ಮಗಳನ್ನು ಮಾಡುವುದು ಮತ್ತು ನಂತರ ಪಶ್ಚಾತ್ತಾಪ ಪಟ್ಟು ಕ್ಷಾಲನೆ ಮಾಡಿಕೊಳ್ಳುವುದು, ಈ ಪ್ರಕ್ರಿಯೆಯು ಯಾವುದಾದರೊಂದು ಆನೆಗೆ ಸ್ನಾನ ಹಾಕಿದಂತಾಗುತ್ತದೆ. ಮನುಷ್ಯನ ಅಜ್ಞಾನವು ಇವೆಲ್ಲ ಪಾಪಗಳ ಮೂಲವಾಗಿದ್ದು ಎಲ್ಲಿಯವರೆಗೆ ಅದನ್ನು ದೂರಗೊಳಿಸಲು ಪ್ರಯತ್ನವಾಗುವುದಿಲ್ಲವೋ, ಅಲ್ಲಿಯವರೆಗೆ ಅವನ ಪಾಪಗಳು ನಡೆಯುತ್ತಲೇ ಇರುತ್ತವೆ.  ಮನುಷ್ಯನು ಪ್ರಾಮಾಣಿಕ, ಸ್ವಚ್ಛ ಚಾರಿತ್ರ್ಯವಂತ, ಅಹಿಂಸಕ ಮತ್ತು ದಾನಿಯಾಗಿದ್ದರೆ ಅವನ ಎಲ್ಲ ಪಾಪಗಳು ತನ್ನಿಂದ ತಾನೇ ನಾಶವಾಗುತ್ತವೆ. ಅವನ ಎಲ್ಲ ಪಾಪಗಳು ತೊಳೆದು ಹೋಗುತ್ತವೆ. ಭಗವಾನ ಶ್ರೀಕೃಷ್ಣನಿಗೆ ಶರಣಾದರೆ ವ್ಯಕ್ತಿಯ ಎಲ್ಲ ಪಾಪಕರ್ಮಗಳು ನಿಶ್ಚಿತವಾಗಿಯೂ ನಿಧಾನವಾಗಿ ಕಡಿಮೆಯಾಗುತ್ತವೆ. ಅದಕ್ಕಾಗಿ ಸತತವಾಗಿ ಭಗವಂತನ ನಾಮಸ್ಮರಣೆಯನ್ನು ಮಾಡುವುದು, ಮುಕ್ತಿಯ ಸರ್ವೋತ್ತಮ ಮಾರ್ಗವಾಗಿದೆ. ಭಗವಂತನ ಚಿಂತನೆಯಲ್ಲಿ ಸುಖಪಡುವ ಮನುಷ್ಯರು ಸಾಮಾನ್ಯವಾಗಿ ಪಾಪಕರ್ಮಗಳನ್ನು ಮಾಡುವುದಿಲ್ಲ; ಆದರೆ ಅವರಿಂದ ತಪ್ಪಿ ಪಾಪಕರ್ಮಗಳಾದರೂ, ಭಗವಂತನು ಅವರ ರಕ್ಷಣೆಯನ್ನು ಮಾಡುತ್ತಾನೆ. ಭಗವಂತನ ಯಾವುದೇ ಹೆಸರನ್ನು ಹೇಗೆ ತೆಗೆದುಕೊಂಡರೂ ಇದೇ ಫಲ ಸಿಗುತ್ತದೆ, ಇದರಲ್ಲಿ ಸಂದೇಹವೇ ಇಲ್ಲ.’

– ದಿವಂಗತ ಶಾಮ ಲಕ್ಷ್ಮಣ ತೆಂಡೋಲಕರ, ಬೊರಿವಲಿ (ಪೂ.) ಮುಂಬೈ

(ಆಧಾರ : ಗುರುಪೂರ್ಣಿಮೆ ವಿಶೇಷಾಂಕ, ೨೦೧೫)