ವಿದೇಶಗಳಲ್ಲಿರುವ ಶ್ರೀಗಣೇಶನ ದೇವಸ್ಥಾನಗಳು ಮತ್ತು ಅವುಗಳ ವೈಶಿಷ್ಟ್ಯ !

ಸದ್ಯ ನಡೆಯುತ್ತಿರುವ ಗಣೇಶೋತ್ಸವದ ನಿಮಿತ್ತ…

ಭಾರತದ ಹಾಗೆಯೇ ಜಗತ್ತಿನ ಇತರ ಕೆಲವು ದೇಶಗಳಲ್ಲಿ ಶ್ರೀ ಗಣೇಶನ ಉಪಾಸನೆಯನ್ನು ಮಾಡಲಾಗುತ್ತದೆ ಹಾಗೂ ಅಲ್ಲಿಯೂ ಗಣೇಶನ ಮಂದಿರಗಳಿವೆ.

೧. ನೇಪಾಳ

ನೇಪಾಳದಲ್ಲಿನ ಸೂರ್ಯವಿನಾಯಕನ ಮೂರ್ತಿ

ನೇಪಾಳದಲ್ಲಿ ನಟರಾಜನು ನೃತ್ಯಮುದ್ರೆಯಲ್ಲಿ, ಹಾಗೂ ಕೆಲವು ಗಣೇಶಮೂರ್ತಿಗಳ ಮೇಲೆ ನಾಗ ಹೆಡೆ ಬಿಚ್ಚಿರುವ ಮೂರ್ತಿಗಳಿವೆ. ಕೆಲವು ಗಣೇಶಮೂರ್ತಿಗಳ ತಲೆಯ ಮೇಲೆ ಕಿರೀಟ ಹಾಗೂ ಅರ್ಧಚಂದ್ರವಿದೆ. ಬೌದ್ಧಮಠಗಳ ಪ್ರವೇಶದ್ವಾರದಲ್ಲಿ ದ್ವಾರಪಾಲಕ ಗಣೇಶನ ಹಾಗೂ ಅವನ ಬಲಬದಿಗೆ ಮಹಾಕಾಲನ ಮೂರ್ತಿ ಇರುತ್ತದೆ. ಶಂಕೂ ಎಂಬ ಸಣ್ಣ ಒಂದು ಊರಿನಲ್ಲಿ ಸಿದ್ಧಿವಿನಾಯಕನ ಮಂದಿರವಿದೆ.

ಭಕ್ತಪುರ ಜಿಲ್ಲೆಯ ಉತ್ತರದಿಕ್ಕಿನಲ್ಲಿ ಒಂದು ಸಣ್ಣ ಪರ್ವತದ ಮೇಲಿನ ಮಂದಿರದಲ್ಲಿ ಗಣೇಶಮೂರ್ತಿ ಇದೆ. ‘ನೇಪಾಳದಲ್ಲಿ ಸ್ವಯಂಭೂ ಗಣಪತಿ ಇದ್ದು ಅದು ಸೂರ್ಯಕಿರಣಗಳಿಂದ ಪ್ರಕಟವಾಗಿದೆ’, ಎಂಬ ನಂಬಿಕೆ ಇದೆ. ಆದ್ದರಿಂದ ಅದಕ್ಕೆ ‘ಸೂರ್ಯವಿನಾಯಕ’ ಎಂಬ ಹೆಸರು ಬಂದಿದೆ. ಈ ಮೂರ್ತಿಗೆ ೪ ತಲೆ ಮತ್ತು ೪ ಕೈಗಳಿವೆ. ಒಂದು ಕೈಯಲ್ಲಿ ಪರಶು, ಇನ್ನೊಂದು ಕೈಯಲ್ಲಿ ಮೋದಕ ಪಾತ್ರೆ, ಮೂರನೆಯದ್ದು ಅಭಯಹಸ್ತವಾಗಿದ್ದು ನಾಲ್ಕನೆ ಕೈಯಲ್ಲಿ ಜಪಮಾಲೆ ಇದ್ದು ಅವನು ಮೂಷಕನ ಮೇಲೆ ನಿಂತಿದ್ದಾನೆ. ಮಂದಿರದ ಎದುರಿನ ಸಮಾಧಿ ಆಕಾರದ ಸ್ಮಾರಕದ ಮೇಲೆ ಕಮಲದ ಆಕೃತಿ ಇದ್ದು ಅದರ ಮೇಲೆ ಮೂಷಕದ ಮೂರ್ತಿ ಇದೆ. ಕಾಠ್ಮಂಡುವಿನಲ್ಲಿ ಗಣಪತಿಯ ಎರಡು ಭಿನ್ನ ಪ್ರಕಾರದ ಶಿಲಾ ಮೂರ್ತಿ ಗಳಿವೆ. ಅವುಗಳ ಪ್ರತಿಯೊಂದು ಕಾಲಿನ ಕೆಳಗೆ ಇಲಿ ಇದೆ.

೨. ಚೀನಾ

ಚೀನಾದಲ್ಲಿ ಗಣೇಶನ ಎರಡು ಪ್ರಾಚೀನ ಮೂರ್ತಿಗಳು ಕಂಡುಬರುತ್ತವೆ. ತುನಹಾಂಗ್‌ನಲ್ಲಿ ಒಂದನ್ನು ಗುಹೆಯ ಗೋಡೆಯ ಮೇಲೆ ಕೆತ್ತಲಾಗಿದೆ ಹಾಗೂ ಇನ್ನೊಂದು ಕುಂಗ್‌-ಹಿರ ವೇನದಲ್ಲಿ ಬಂಡೆಯನ್ನು ಒಡೆದು ನಿರ್ಮಿಸಿದ ಮಂದಿರದಲ್ಲಿನ ಶಿಲಾಪ್ರತಿಮೆಯಾಗಿದೆ. ‘ಈ ಪ್ರತಿಮೆಗಳು ಆರನೇ ಶತಮಾನದ್ದಾಗಿರಬಹುದು’, ಎಂದು ಅಂದಾಜಿಸಲಾಗುತ್ತದೆ. ಚೀನಾದಲ್ಲಿ ‘ನವಾಯತನ’ದಲ್ಲಿ (ಒಂಬತ್ತು ದೇವರ ಸಮೂಹದಲ್ಲಿ) ಗಣಪತಿಯ ಮೂರ್ತಿ
ಇದೆ. ಚೀನೀ ತುರ್ಕಸ್ತಾನದ ಎಂದೆರದಲ್ಲಿನ ಗಣೇಶನಚಿತ್ರ ಹಾಗೂ ತುನಹಾಂಗ್‌ನಲ್ಲಿನ ಭಿತ್ರಿಚಿತ್ರದಲ್ಲಿ ಬಹಳಷ್ಟು ಹೋಲಿಕೆ ಇದೆ, ತುನಹಾಂಗನಲ್ಲಿನ ಗಣಪತಿಯ ಎಡಗೈಯಲ್ಲಿ ಎದೆಗೆ ಸಮಾಂತರವಾಗಿ ಗಜದಂತವನ್ನು ಹಿಡಿಯಲಾಗಿದೆ. ಎಂದೆರದಲ್ಲಿನ ಗಣಪತಿಯ ಸೊಂಡಿಲು ಎಡಬದಿಗೆ ತಿರುಗಿದೆ. ಎರಡೂ ಗಣೇಶಮೂರ್ತಿಗಳಲ್ಲಿ ಇಷ್ಟು ವ್ಯತ್ಯಾಸವಿದೆ.

೩. ಮ್ಯಾನ್ಮಾರ

ಮ್ಯಾನ್ಮಾರದಲ್ಲಿ ನದಿಯ ಮುಖದ ಸಮೀಪ ಅನೇಕ ಸಣ್ಣ ಗಣೇಶಮೂರ್ತಿಗಳು ಸಿಕ್ಕಿವೆ. ಅದರಿಂದ ‘ಅಲ್ಲಿ ಗಣೇಶೋಪಾಸನೆ ನಡೆಯುತ್ತಿತ್ತು’, ಎಂಬುದು ತಿಳಿಯುತ್ತದೆ. ಇಲ್ಲಿನ ಗಣೇಶಮೂರ್ತಿಗಳು ಒರಟಾಗಿದ್ದರೂ (ರಫ್) ಹಿಂದೂ ಪದ್ಧತಿಯದ್ದಾಗಿವೆ. ಪಾಗಾನದಲ್ಲಿ ಒಂದು ಭಗ್ನವಾಗಿರುವ ವೈದಿಕ ಮಂದಿರದಲ್ಲಿನ ಮೂರ್ತಿ ಮಾತ್ರ ಸ್ವಲ್ಪ ವಿಶೇಷವಾಗಿದೆ. ಇದು ಉಚ್ಚಾಸನದಲ್ಲಿರುವ ಗಣಪತಿಯಾಗಿದ್ದು ಅದರ ಶರೀರ ನೆಟ್ಟಗಿದೆ. ಅದರ ಸೊಂಟದ ವರೆಗಿನ ಭಾಗ ನಗ್ನವಾಗಿದೆ. ಅವನು ಸರ್ಪದ ಯಜ್ಞೋಪವಿತ (ಜನಿವಾರ) ಧಾರಣೆ ಮಾಡಿದ್ದಾನೆ. ಇದು ಪಂಚಧಾತುವಿನ ಮೂರ್ತಿಯಾಗಿದೆ.

೪. ಜಾವಾ (ಇಂಡೋನೇಷ್ಯಾ)

ಜಾವಾದಲ್ಲಿನ ಶ್ರೀ ಗಣೇಶನ ಶಿಲಾಮೂರ್ತಿ

ಜಾವಾವನ್ನು ಸಂಸ್ಕೃತದಲ್ಲಿ ‘ಯವದ್ವೀಪ’ ಎನ್ನುತ್ತಾರೆ. ಚಂತಾಲ ದಲ್ಲಿ ೭೩೨ ನೆ ಇಸವಿಯ ಒಂದು ಶಿಲಾಲೇಖನ ಸಿಕ್ಕಿದ್ದು ಅದರಲ್ಲಿ ಒಂದು ಶಿವಲಿಂಗ ಸ್ಥಾಪನೆಯ ಉಲ್ಲೇಖ ಹಾಗೂ ಶಿವ, ಬ್ರಹ್ಮ ಮತ್ತು ವಿಷ್ಣು ಈ ಹೆಸರು ಕೂಡ ಇವೆ, ಅಂದರೆ ಪ್ರಾಚೀನ ಕಾಲದಲ್ಲಿ ಇಲ್ಲಿ ಶಿವಪೂಜೆ ರೂಢಿಯಲ್ಲಿತ್ತು; ಆದರೆ ಇಲ್ಲಿ ಸ್ವತಂತ್ರ ಗಣೇಶ ಮಂದಿರಗಳಿಲ್ಲ; ಆದರೆ ಶಿವಮಂದಿರದ ಆವರಣದಲ್ಲಿ ಗಣೇಶನ ಮೂರ್ತಿಗಳು ಕಂಡುಬರುತ್ತವೆ.

ಪಶ್ಚಿಮ ಜಾವಾದಲ್ಲಿ ನಿಂತ ಭಂಗಿಯ ಶ್ರೀ ಗಣೇಶಮೂರ್ತಿ

ಜಾವಾದಲ್ಲಿನ ದಿಆಂಗ ಎಂಬ ಪ್ರಸ್ಥಭೂಮಿಯಲ್ಲಿ ಕಂಡು ಬಂದಿರುವ ಗಣೇಶನ ಶಿಲಾಮೂರ್ತಿಯನ್ನು ಅಲ್ಲಿನ ಅತೀ ಪ್ರಾಚೀನ ಮೂರ್ತಿಯೆಂದು ಪರಿಗಣಿಸಲಾಗಿದೆ. ಮೂರ್ತಿಯು ಕುಳಿತ ಭಂಗಿಯಲ್ಲಿದ್ದು ಚತುರ್ಭುಜವಾಗಿದೆ. ಮುಂದಿನ ಎರಡು ಕೈಗಳನ್ನು ಮೊಣಕಾಲಿನ ಮೇಲೆ ಇಟ್ಟಿದ್ದು ಅದರಲ್ಲಿ ಬಲಗೈಯಲ್ಲಿ ತುಂಡಾದ ದಂತ ಹಾಗೂ ಎಡಗೈಯಲ್ಲಿ ಮೋದಕ ಪಾತ್ರೆ ಇದೆ. ಹಿಂದಿನ ಎರಡು ಕೈಗಳ ಪೈಕಿ ಒಂದರಲ್ಲಿ ಪರಶು, ಇನ್ನೊಂದು ಕೈಯಲ್ಲಿ ಜಪಮಾಲೆ ಇದೆ. ಸೊಂಡಿಲು ಸರಳವಾಗಿದ್ದು ಅದು ಕೈಯಲ್ಲಿನ ಪಾತ್ರೆಯ ಸಮೀಪ ತಿರುಗಿರುವ ಹಾಗಿದೆ. ಮೈಮೇಲೆ ಆಭರಣಗಳಿವೆ; ಆದರೆ ಕಿರೀಟ ಅಥವಾ ಮುಕುಟ ಇಲ್ಲ. ಇದೇ ಪ್ರಸ್ಥಭೂಮಿಯಲ್ಲಿ ತಿಜಂಡಿ ಪರೀಕ್ಷಿತದಲ್ಲಿ ಕಂಡುಬಂದಿರುವ ಗಣೇಶಮೂರ್ತಿಯು ಕಮಲಾಸನಾರೂಢವಾಗಿದ್ದು ಅದಕ್ಕೆ ಕೆಳಗಿನಿಂದ ಎರಡು ಪಕ್ಷಿಗಳು ತಮ್ಮ ಕೈಗಳಿಂದ ಆಧಾರ ನೀಡಿವೆ. ಈ ಮೂರ್ತಿಯ ಹಣೆಯಲ್ಲಿ ತ್ರಿನೇತ್ರವಿದೆ ಹಾಗೂ ತಲೆಯ ಮೇಲೆ ಕಿರೀಟದ ಬದಲು ಕಮಲಪುಷ್ಪ ಇದೆ. ಪಶ್ಚಿಮ ಜಾವಾದಲ್ಲಿನ ಒಂದು ನದಿಯ ತೀರದಲ್ಲಿ ಕರಂಗ ಕೇಟ್ಸ್‌ನಲ್ಲಿ ಕಂಡುಬಂದಿರುವ ಗಣೇಶಮೂರ್ತಿ ನಿಂತಭಂಗಿಯಲ್ಲಿದೆ. ಮೂರ್ತಿಯ ಅಗಲ ಎತ್ತರಕ್ಕಿಂತ ಹೆಚ್ಚಾಗಿದೆ. ಇದು ಚತುರ್ಭುಜ ಮೂರ್ತಿ ಯಾಗಿದ್ದು ಮೇಲಿನ ಎರಡು ಕೈಗಳಲ್ಲಿ ಪರಶು ಮತ್ತು ಜಪಮಾಲೆ ಇವೆ. ಕೆಳಗಿನ ಎರಡೂ ಕೈಗಳಲ್ಲಿ ಒಂದೊಂದು ಮೋದಕ ಪಾತ್ರೆಗಳಿವೆ. ೮ ನೇ ಶತಮಾನದ ಹಿಂದೆ ನಿಸರ್ಗರಮ್ಯ ಬಾಲಿ ದ್ವೀಪದಲ್ಲಿ ಶಿವ, ದುರ್ಗಾ, ವಿಷ್ಣು, ಸೂರ್ಯ ಹಾಗೂ ಗಣೇಶ ಈ ಪಂಚಾಯತನದ ಉಪಾಸನೆ ಮಾಡಲಾಗುತ್ತಿತ್ತು. ಬಾಲಿಯಲ್ಲಿ ಸಿಕ್ಕಿದ ಹಾಗೂ ಸದ್ಯ ಲಂಡನ್‌ನಲ್ಲಿನ ಒಂದು ಇನ್ಸ್ಟಿಟ್ಯೂಟ್‌ನಲ್ಲಿರುವ ಪಂಚ ಧಾತುವಿನ ಗಣೇಶಮೂರ್ತಿ ಎಂಟನೇ ಶತಮಾನದಲ್ಲಿನದ್ದಾಗಿರಬಹುದು, ಎಂದು ಅಂದಾಜಿಸಲಾಗಿದೆ. ಈ ಮೂರ್ತಿ ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಈ ಮೂರ್ತಿಗೆ ೪ ಭುಜಗಳಿದ್ದವು; ಆದರೆ ಈಗ ಅದರಲ್ಲಿನ ಒಂದೇ ಭುಜ ಉಳಿದಿದೆ. ಈ ಮೂರ್ತಿ ಮೊಣಕಾಲುಗಳನ್ನು ಮಡಿಚಿಕೊಂಡಿದೆ.

೫. ಥಾಯಲ್ಯಾಂಡ್‌

ಬ್ಯಾಂಕಾಕ್‌ನಲ್ಲಿನ ಶ್ರೀ ಗಣಪತಿಯ ಪಂಚಧಾತುವಿನ ಮೂರ್ತಿ

ಥಾಯಲ್ಯಾಂಡ್‌ನ ಜನರು ಮಂಗೋಲ್‌ನ ವಂಶದವರಾಗಿದ್ದಾರೆ ಹಾಗೂ ಅವರ ಸಂಸ್ಕೃತಿ ಆರ್ಯಸಂಸ್ಕೃತಿಯುಕ್ತವಾಗಿದೆ. ಪ್ರಾಚೀನ ಕಾಲದಲ್ಲಿ ವೈದಿಕ ಧರ್ಮವೇ ಅಲ್ಲಿನ ರಾಜಧರ್ಮವಾಗಿತ್ತು; ಆದರೆ ಇಂದು ಅಲ್ಲಿ ಬೌದ್ಧ ಧರ್ಮವಿದ್ದರೂ ರಾಜ್ಯಾಭಿಷೇಕ ಮತ್ತು ಇತರ ಅನೇಕ ಧಾರ್ಮಿಕ ಕೃತಿಗಳನ್ನು ವೈದಿಕ ಪದ್ಧತಿಗನುಸಾರವೇ ಮಾಡಲಾಗುತ್ತದೆ. ಅಲ್ಲಿ ಅನೇಕ ಸಣ್ಣ ಸಣ್ಣ ಗಣೇಶಮೂರ್ತಿಗಳಿವೆ. ಬ್ಯಾಂಕಾಕ್‌ನಲ್ಲಿನ ಹಿಂದೂ ಮಂದಿರದಲ್ಲಿ ಗಣಪತಿಯ ಪಂಚ ಧಾತುವಿನ ವೈಶಿಷ್ಟ್ಯಪೂರ್ಣವಾದ ಮೂರ್ತಿ ಇದೆ. ಈ ಗಣಪತಿ ಕಾಲುಗಳನ್ನು ಮಡಿಚಿಕೊಂಡು ಕುಳಿತಿದ್ದಾನೆ. ಅವನು ಸರ್ಪದ ಯಜ್ಞೋಪವಿತ (ಜನಿವಾರ) ಧಾರಣೆ ಮಾಡಿದ್ದಾನೆ. ಕೈಗಳು ತೊಡೆಗಳ ಮೇಲಿವೆ. ಬಲಗೈಯಲ್ಲಿ ದಂತದ ತುಂಡು ಇದೆ.

ಬಾಝಾಕ್ಲಿಕ್‌ನಲ್ಲಿನ ಗುಹೆಗಳ ಗೋಡೆಯ ಮೇಲೆ ಅನೇಕ ಚಿತ್ರಗಳನ್ನು ಕೆತ್ತಲಾಗಿದ್ದು ಅವುಗಳಲ್ಲಿ ಒಂದು ಗಣೇಶನ ಚಿತ್ರವೂ ಇದೆ. ಈ ಚಿತ್ರದಲ್ಲಿನ ಗಣಪತಿ ಕುಳಿತುಕೊಂಡಿದ್ದು ಅವನು ಸೂರ್ಯ, ಚಂದ್ರ, ಪತಾಕೆ ಮತ್ತು ಮೋದಕ ಧಾರಣೆ ಮಾಡಿದ್ದಾನೆ. ಶರೀರವು ರತ್ನಖಚಿತವಾಗಿದ್ದು ತಲೆಯ ಹಿಂದೆ ತೇಜೋವಲಯವಿದೆ.

ಖೋತಾನಾದಿಂದ ಸುಮಾರು ೧೨೦ ಕಿ.ಮೀ. ದೂರದಲ್ಲಿ ಖಾಡಲಿಕ ಎಂಬ ಊರಿನಲ್ಲಿ ಗೋಡೆಯ ಮೇಲೆ ಮತ್ತು ಇನ್ನೊಂದು ಹಲಗೆಯ ಮೇಲೆ ಚಿತ್ರಿಸಿರುವ ಒಂದು ಚಿತ್ರ ಸಿಕ್ಕಿದೆ. ನಶ್ಯದಂತಹ ಅಂಚಿನ ನಿಸ್ತೇಜ ಹಸಿರು ಲಂಬವರ್ತುಲಾಕಾರದ ಚಿತ್ರ ಅರ್ಧವಾಗಿದೆ. ಕೊರಳಿನಲ್ಲಿ ಮಾಲೆ ಮತ್ತು ೩ ಕೈಗಳು ಸ್ಪಷ್ಟ ಕಾಣಿಸುತ್ತವೆ. ಅವುಗಳಲ್ಲಿ ಒಂದು ಕೈಯಲ್ಲಿ ಮೋದಕಪಾತ್ರ್ರೆ, ಇನ್ನೊಂದು ಕೈಯಲ್ಲಿ ಅಂಕುಶ ಮತ್ತು ಮೂರನೇ ಕೈಯಲ್ಲಿ ಆನೆದಂತ ಇದೆ. ಮೇಲಿನ ಎಡಗೈ ಇಲ್ಲದಂತಾಗಿದೆ. ಇನ್ನೊಂದು ಚಿತ್ರ ಹಾಸಿಗೆಯ ಮೇಲೆ ಸುಖವಾಗಿ ಕಾಲು ಮಡಿಚಿ ಕುಳಿತಿರುವ ಗಣಪತಿಯದ್ದಾಗಿದೆ. ನೀಲವರ್ಣದ ಮಸ್ತಕ, ಎರಡೂ ದಂತಗಳು ಸರಳ, ಬಲಗಡೆಗೆ ತಿರುಗಿದ ಸಣ್ಣ ಸೊಂಡಿಲು, ಭುಜದ ವರೆಗೆ ಬಂದಿರುವ ಕಿವಿಗಳು, ನೀಲಬಣ್ಣದ ಪಂಚೆ, ಅದರ ಮೇಲೆ ಬಿಳಿಬಣ್ಣದ ಪಟ್ಟಿ, ಈ ಮೂರ್ತಿ ಚತುರ್ಭುಜದ್ದಾಗಿದೆ.

೬. ಬೋರ್ನಿಯೊ

ಬೋರ್ನಿಯೋದಲ್ಲಿ ಕುಳಿತ ಭಂಗಿಯಲ್ಲಿರುವ ಗಣೇಶ ಮೂರ್ತಿಯು ಕಂಡುಬಂದಿದ್ದು ಅದು ಚತುರ್ಭುಜವಾಗಿದೆ. ಪಾದಗಳನ್ನು ಜೋಡಿಸಲಾಗಿದೆ. ಸೊಂಡಿಲು ಸರಳ ಹಾಗೂ ಕಿವಿಗಳು ಪಂಖಾಕೃತಿಯಾಗಿದ್ದು ತುಂಬಾ ಉದ್ದವಾಗಿವೆ, ಹಣೆಯ ಮೇಲ್ಭಾಗ ದಲ್ಲಿ ಒಂದು ಕಿರೀಟ ಮತ್ತು ಅದರ ಹಿಂದೆ ಕೂದಲು ಮತ್ತು ಅರ್ಧಚಂದ್ರನಿಂದ ಅಲಂಕರಿಸಲಾಗಿದೆ. ಕೋಂಭೇಂಗ್‌ನಲ್ಲಿನ ಒಂದು ಗುಹೆಯಲ್ಲಿ ಈ ಮೂರ್ತಿ ಕಂಡುಬಂದಿದೆ. ಇಲ್ಲಿ ಸಾರ್ವಜನಿಕ ಗಣೇಶೋಪಾಸನೆ ನಡೆಯುತ್ತದೆ. ‘ಬೋರ್ನಿಯಾದಲ್ಲಿ ವೈದಿಕ ಧರ್ಮವಿತ್ತು’, ಎಂಬುದನ್ನು ಸಿದ್ಧಪಡಿಸುವ ಒಂದು ಶಿಲಾಲೇಖನ ಕೋಟೇಯಿಯಲ್ಲಿ ಸಿಕ್ಕಿದೆ

೭. ಮೆಕ್ಸಿಕೊ

ಮೆಕ್ಸಿಕೋದಲ್ಲಿ (ದಕ್ಷಿಣ ಅಮೇರಿಕಾ) ರೆಡ್‌ ಇಂಡಿಯನ್ಸ್ ಆನೆಯ ತಲೆ ಮತ್ತು ಮನುಷ್ಯ ದೇಹಧಾರಿ ಮೂರ್ತಿಯನ್ನು ಇಂದು ಕೂಡ ಪೂಜಿಸುತ್ತಾರೆ. ‘ಅಝಟೆಕ್’ ಈ ಮಯಸಂಸ್ಕೃತಿಯಲ್ಲಿನ ಪೂಜನೀಯ ದೇವತೆ ಮತ್ತು ಗಣೇಶನಿಗೆ ಬಹಳಷ್ಟು ಹೋಲಿಕೆ ಕಂಡುಬರುತ್ತದೆ. ಗ್ರೀಕ್‌ ಪುರಾಣದಲ್ಲಿ ‘ಜನಸ’ ಎಂಬ ಹೆಸರಿನ ಒಂದು ಬುದ್ಧ ದೇವತೆಯನ್ನು ನಂಬಿದ್ದು ಅದು ಗಜಮುಖಿ ಅಥವಾ ದ್ವಿಮುಖಿಯಾಗಿದೆ. ಎಲ್ಲ ಶುಭಕಾರ್ಯಗಳ ಆರಂಭದಲ್ಲಿ ತಪ್ಪದೇ ಪೂಜಿಸಲಾಗುತ್ತದೆ. ವರ್ಷದ ಮೊದಲ ತಿಂಗಳು ಜನವರಿ ಈ ದೇವತೆಯ ಹೆಸರಿನಲ್ಲಿದೆ. ಜೆನಸ್‌ ಮತ್ತು ಗಣೇಶ ಇವರಲ್ಲಿಯೂ ಬಹಳ ಹೋಲಿಕೆ ಕಂಡುಬರುತ್ತದೆ.

೮. ಶ್ರೀಲಂಕಾ

೧೯೩೪-೩೫ ರ ಅವಧಿಯಲ್ಲಿ ಶ್ರೀಲಂಕಾ (ಸಿಲೋನ್‌)ದಲ್ಲಿನ ಮಿಹಿಂತಲೆ ಪ್ರದೇಶದಲ್ಲಾದ ಉತ್ಖನನದಲ್ಲಿ ಒಂದು ಗಜಮುಖ ಗಣೇಶನ ಮೂರ್ತಿ ಸಿಕ್ಕಿದೆ. ಈ ಗಣಪತಿ ಏಕದಂತ ಆಗಿದ್ದು ಅವನ ಪಕ್ಕದಲ್ಲಿ ಸೇವಕಗಣಗಳಿದ್ದಾರೆ. ಅವನಿಗೆ ಎರಡು ಕೈಗಳಿವೆ. ಈ ಗಣಗಳೆಂದರೆ ಗಣೇಶ ಶಿಲ್ಪದ ಅತೀಪ್ರಾಚೀನ ಮೂಲ ರೂಪ ಆಗಿದೆಯೆಂಬುದು ಸಂಶೋಧನಕಾರರ ತರ್ಕವಾಗಿದೆ.

ಕದರಗಾಮದಲ್ಲಿನ ಸುಬ್ರಹಣ್ಯಮ್‌ (ಕಾರ್ತಿಕಸ್ವಾಮಿ) ಮಂದಿರದಲ್ಲಿಯೂ ಗಣೇಶಮೂರ್ತಿ ಇದ್ದು ಇಂದಿಗೂ ಅದಕ್ಕೆ ವೈದಿಕ ಪದ್ಧತಿಯಲ್ಲಿ ಪೂಜೆಯನ್ನು ಮಾಡಲಾಗುತ್ತದೆ. ಈ ಗಣೇಶಮೂರ್ತಿ ಕಪ್ಪು ಶಿಲೆಯದ್ದಾಗಿದ್ದು ಚತರ್ಭುಜವಾಗಿದೆ. ಈ ಮೂರ್ತಿ ಸುಮಾರು ೩ ಅಡಿ ಎತ್ತರವಿದೆ. ಈ ಮೂರ್ತಿಯ ಪಕ್ಕದಲ್ಲಿ ಶ್ವೇತಮಂದಾರದ ಸುಮಾರು ೬ ಇಂಚಿನ ಒಂದು ಗಣೇಶಮೂರ್ತಿ ಇದೆ. ಸುಬ್ರಹ್ಮಣ್ಯಮ್‌ ಮತ್ತು ಗಣೇಶ ಈ ಎರಡೂ ದೇವತೆಗಳು ಜಾಗೃತವಾಗಿವೆ.

– ಕೃಷ್ಣಾಜಿ ಕೋಟಿ