ಅಮೇರಿಕಾದ ನ್ಯಾಯಾಲಯದಿಂದ ಭಾರತ ಸರಕಾರಕ್ಕೆ ಸಮನ್ಸ್ ಜಾರಿ

(ಸಮನ್ಸ್ ಎಂದರೆ ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೀಡಲಾಗುವ ಸೂಚನೆ)

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ನ್ಯಾಯಾಲಯವು ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್‌ಸಿಂಗ ಪನ್ನು ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ, ‘ರಾ’ ಮಾಜಿ ಮುಖ್ಯಸ್ಥ ಸಾಮಂತ ಗೋಯಲ ಮತ್ತು ‘ರಾ’ ಎಜೆಂಟ್ ವಿಕ್ರಮ ಯಾದವ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಈ ಸಮನ್ಸ್‌ಗೆ 21 ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ಪನ್ನು ಹತ್ಯೆಗೆ ಭಾರತ ಸಂಚು ರೂಪಿಸಿದೆ ಎಂದು ಕಳೆದ ವರ್ಷ ಅಮೇರಿಕಾ ಆರೋಪಿಸಿತ್ತು. ಈ ಷಡ್ಯಂತ್ರವನ್ನು ವಿಫಲಗೊಳಿಸಿರುವುದಾಗಿ ಅಮೇರಿಕಾ ಹೇಳಿಕೊಂಡಿದೆ.

ಸಮನ್ಸ್ ಸಂಪೂರ್ಣ ಅಯೋಗ್ಯ ! – ಭಾರತ

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ಈ ಸಮನ್ಸ್ ಕುರಿತು ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಇವರು, ಈ ಸಮನ್ಸ್ ಸಂಪೂರ್ಣವಾಗಿ ಅಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಷಡ್ಯಂತ್ರದ ಬಗ್ಗೆ ನಮ್ಮ ಗಮನಕ್ಕೆ ಬಂದಾಗ ನಾವು ಕ್ರಮ ಕೈಗೊಂಡಿದ್ದೇವೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ ಎಂದು ಹೇಳಿದರು.

ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರನ್ನು ಜೂನ್ 30, 2023 ರಂದು ಯುರೋಪ್‌ನ ಚೆಕ್ ರಿಪಬ್ಲಿಕ್ ದೇಶದ ಪೊಲೀಸರು ಪನ್ನುವನ್ನು ಕೊಲ್ಲಲು ಸಂಚು ರೂಪಿಸಿದ್ದಕ್ಕಾಗಿ ಬಂಧಿಸಿದ್ದರು. 14 ಜೂನ್ 2024 ರಂದು ನಿಖಿಲ ಅವರನ್ನು ಅಮೇರಿಕಾಗೆ ಹಸ್ತಾಂತರಿಸಲಾಯಿತು.

ಸಂಪಾದಕೀಯ ನಿಲುವು

ಈಗ ಭಾರತವೂ ಖಲಿಸ್ತಾನಿ ಭಯೋತ್ಪಾದಕನಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಅಮೇರಿಕಕ್ಕೆ ಸಮನ್ಸ್ ಜಾರಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದು ಅಪೇಕ್ಷಿತವಾಗಿದೆ ‌!