ಪಂಜಾಬ್‌ ಅರ್ಬುದರೋಗಯುಕ್ತ ಕೃಷಿ ಉತ್ಪಾದನೆಗಳಿಗೆ ಕುಪ್ರಸಿದ್ಧ : ನಿಯಂತ್ರಣ ಮಾಡದಿದ್ದರೆ ಸಂಪೂರ್ಣ ಭಾರತದಲ್ಲಿ ಅರ್ಬುದರೋಗ ಹರಡುವ ಅಪಾಯ !

ಪಂಜಾಬದ ‘ಮಾಳವಾ’ ಪ್ರದೇಶದಿಂದ ರಾಜಸ್ಥಾನಕ್ಕೆ ಪ್ರತಿದಿನ ಸಂಚರಿಸುವ ‘ಬಠಿಂಡಾ-ಬಿಕಾನೇರ ಪ್ಯಾಸೆಂಜರ್‌ ರೈಲು’ ‘ಕ್ಯಾನ್ಸರ್‌ (ಅರ್ಬುದರೋಗ) ಎಕ್ಸ್‌ಪ್ರೆಸ್’ ಎಂಬ ಹೆಸರಿನಿಂದ ಕುಪ್ರಸಿದ್ಧವಾಗಿದೆ. ಈ ರೈಲು ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಅರ್ಬುದರೋಗದ ರೋಗಿ ಗಳನ್ನು ರಾಜಸ್ಥಾನದ ಉಪಚಾರ ಕೇಂದ್ರಗಳ ವರೆಗೆ ಒಯ್ಯುತ್ತದೆ. ವಿಶೇಷವೆಂದರೆ ಬಠಿಂಡಾ ಜಿಲ್ಲೆ ಅರ್ಬುದರೋಗದ ಉಚ್ಚ ಪ್ರಮಾಣಕ್ಕಾಗಿ ಗುರುತಿಸಲ್ಪಡುತ್ತದೆ. ಒಟ್ಟಿನಲ್ಲಿ ಪಂಜಾಬಿನ ಭೂಮಿ ಮತ್ತು ಭೂಜಲ ಕೀಟನಾಶಕಗಳ ಅತಿರೇಕದ ಉಪಯೋಗದಿಂದ ವಿಷಯುಕ್ತವಾಗಿದ್ದು ಈ ಭಯಾನಕ ಪರಿಸ್ಥಿತಿಗೆ ಅದು ಮುಖ್ಯ ಕಾರಣವಾಗಿದೆ.

ಶ್ರೀ. ನಾರಾಯಣ ನಾಡಕರ್ಣಿ

೧. ಕೀಟನಾಶಕಗಳ ಅತಿ ಬಳಕೆಯಿಂದ ಜನಸಾಮಾನ್ಯರ ಆರೋಗ್ಯದ ಮೇಲಾಗುವ ಗಂಭೀರ ಪರಿಣಾಮಗಳು

ಕೀಟನಾಶಕಗಳನ್ನು ಅತಿಯಾಗಿ ಬಳಸುವುದರಿಂದ ಭೂಮಿ ಮತ್ತು ನೀರು ಮಲಿನವಾಗಿವೆ. ಈ ಮಲಿನ ಭೂಮಿಯಲ್ಲಿ ಬೆಳೆಸಿದ ಬೆಳೆ ಮತ್ತು ಮಲಿನವಾದ ನೀರನ್ನು ಸೇವಿಸುವುದರಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮವಾಗುತ್ತಿದೆ. ಕೀಟನಾಶಕ ಮತ್ತು ಇತರ ರಾಸಾಯನಿಕ ಪದಾರ್ಥಗಳ ಸತತ ಸಂಪರ್ಕದಿಂದ ಅರ್ಬುದರೋಗ ಮಾತ್ರವಲ್ಲ, ಇನ್ನೂ ಅನೇಕ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತಿವೆ. ಈ ವಿಷಯುಕ್ತ ಆಹಾರ ಮತ್ತು ನೀರಿನಿಂದ ಅರ್ಬುದ ರೋಗ ಮಾತ್ರವಲ್ಲ. ರಾಸಾಯನಿಕ ಮಾಲಿನ್ಯದಿಂದ ಮಂದಬುದ್ಧಿಯ ಮಕ್ಕಳ ಪ್ರಮಾಣವೂ ಹೆಚ್ಚುತ್ತಿದೆ.

೨. ಆರೋಗ್ಯ ಸಮಸ್ಯೆ ದೇಶಾದ್ಯಂತ ಹರಡುವ ಅಪಾಯ

ಪಂಜಾಬ ಇದು ಭಾರತದ ಪ್ರಮುಖ ಆಹಾರಧಾನ್ಯ ಉತ್ಪಾದಿಸುವ ರಾಜ್ಯವಾಗಿದೆ. ಇಲ್ಲಿ ಉತ್ಪಾದನೆಯಾಗುವ ಗೋದಿ ಮತ್ತು ಅಕ್ಕಿ ದೇಶಾದ್ಯಂತ ವಿತರಣೆಯಾಗುತ್ತದೆ. ಈ ಮಲಿನ ಭೂಮಿಯಲ್ಲಿ ಬೆಳೆಸಿದ ಧಾನ್ಯ ಇಡೀ ದೇಶಕ್ಕೆ ತಲುಪುತ್ತದೆ, ಆದ್ದರಿಂದ ಈ ಸಮಸ್ಯೆ ಕೇವಲ ಪಂಜಾಬ್‌ಗೆ ಸೀಮಿತವಾಗಿಲ್ಲ. ಇಂತಹ ಪಂಜಾಬಿ ಗೋದಿ, ಅಕ್ಕಿ ಭಾರತದಲ್ಲಿ ಎಲ್ಲೆಡೆ ನ್ಯಾಯಬೆಲೆಯ ಧಾನ್ಯದ ಅಂಗಡಿಗಳಿಗೆ ತಲುಪುತ್ತವೆ, ಅದು ಆರೋಗ್ಯಕ್ಕೆ ದೊಡ್ಡ ಅಪಾಯಕಾರಿ ನಿಲುವಾಗಿರಬಹುದು.

೩. ಜಾಗರೂಕತೆಯ ಅಭಾವದಿಂದ ಕೀಟನಾಶಕಗಳ ದುಷ್ಪರಿಣಾಮದೆಡೆಗೆ ರೈತರ ದುರ್ಲಕ್ಷ

ಈ ಪರಿಸ್ಥಿತಿಯಲ್ಲಿ ರೈತರಿಂದ ಕೀಟನಾಶಕಗಳ ಮೂಲಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕಡೆಗೆ ದುರ್ಲಕ್ಷವಾಗುತ್ತಿರುವುದು ಚಿಂತಾಜನಕವಾಗಿದೆ ! ರೈತರು ಪ್ರಾಮುಖ್ಯ ವಾಗಿ ಉತ್ಪಾದನೆ ಹೆಚ್ಚಿಸುವ ಹಾಗೂ ಆರ್ಥಿಕ ಲಾಭದ ಮೇಲೆ ಗಮನ ಹರಿಸುತ್ತಾರೆ. ಅಲ್ಪಾವಧಿಯಲ್ಲಿ ಹೆಚ್ಚೆಚ್ಚು ಬೆಳೆ ಬೆಳೆಸುವ ಇಚ್ಛೆ ಹಾಗೂ ರಾಸಾಯನಿಕ ಗೊಬ್ಬರವನ್ನೇ ಅವಲಂಬಿಸಿರುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯದ ಅಪಾಯದ ಕಡೆಗೆ ಅವರ ದುರ್ಲಕ್ಷವಾಗುತ್ತದೆ. ಈ ಅಪಾಯದ ವಿಷಯದಲ್ಲಿ ಜಾಗರೂಕತೆಯ ಅಭಾವವು ದೊಡ್ಡ ಸವಾಲಾಗಿದೆ.

ಅರ್ಬುದರೋಗ ಹೆಚ್ಚುತ್ತಿರುವುದರ ಪರಿಣಾಮವು ಕೇವಲ ಆರೋಗ್ಯದ ಮೇಲಲ್ಲ, ಅದು ಸಮಾಜದ ಮೇಲೆ ಕೂಡ ಆಗುತ್ತಿದೆ. ಅರ್ಬುದರೋಗದ ಚಿಕಿತ್ಸೆಗಾಗಿ ಆಗುವ ಖರ್ಚು ಮತ್ತು ಅದರ ಸಾಮಾಜಿಕ ಪ್ರಭಾವ ಕುಟುಂಬದ ಮೇಲೆ ದೊಡ್ಡ ಆರ್ಥಿಕ ಅಡಚಣೆಯನ್ನುಂಟು ಮಾಡುತ್ತದೆ. ಅನೇಕ ಕುಟುಂಬಗಳು ಈ ಕಾಯಿಲೆಯಿಂದ ಆರ್ಥಿಕ ಸಂಕಟಕ್ಕೀಡಾಗುತ್ತವೆ, ಅದರಿಂದ ಅವರ ಜೀವಮಾನದಲ್ಲಿ ದೀರ್ಘಕಾಲೀನ ಪರಿಣಾಮವಾಗುತ್ತದೆ.

೪. ಪರಿಸರಸ್ನೇಹಿ ನಿವಾರಣೋಪಾಯದ ಆವಶ್ಯಕ !

ಈ ಗಂಭೀರ ಸಮಸ್ಯೆಯನ್ನು ಜಯಿಸಲು ಅನೇಕ ಪರಿಸರ ಸ್ನೇಹಿ ಉಪಾಯಗಳ ಅವಶ್ಯಕತೆಯಿದೆ. ನೈಸರ್ಗಿಕ ಗೊಬ್ಬರವನ್ನು ಉಪಯೋಗಿಸುವುದು, ಇದೊಂದು ಮಹತ್ವದ ಪರ್ಯಾಯವಾಗಿದೆ. ಸಾವಯವ ಪದ್ಧತಿಯನ್ನು ಉಪಯೋಗಿಸಿದರೆ ಮಣ್ಣಿನ ಆರೋಗ್ಯ ಸುಧಾರಣೆಯಾಗಲು ಸಹಾಯವಾಗುವುದು. ಅದರ ಜೊತೆಗೆ ವನಸ್ಪತಿಜನ್ಯ ಕೀಟನಾಶಕಗಳ ಉಪಯೋಗವನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಉದಾಹರಣೆಗಾಗಿ ಕಹಿಬೇವಿನಿಂದಾಗುವ ಕೀಟನಾಶಕಗಳು ಕಡಿಮೆ ಹಾನಿಕರವಾಗಿದ್ದು ಪರಿಸರಪೂರಕ ವಾಗಿವೆ. ಹೊಲದಲ್ಲಿನ ರಾಸಾಯನಿಕ ಪದಾರ್ಥಗಳ ಉಪ ಯೋಗವನ್ನು ಕಠೋರವಾಗಿ ನಿಯಂತ್ರಿಸುವ ಅವಶ್ಯಕತೆಯಿದೆ. ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಾರ್ವಜನಿಕರ ಆರೋಗ್ಯ ಸುಧಾರಣೆ ಮಾಡುವುದು, ಸಾವಯವ ಕೃಷಿಗೆ ಪ್ರೋತ್ಸಾಹ ನೀಡುವುದು, ನೀರಿನ ಶುದ್ಧೀಕರಣ ಯೋಜನೆಯನ್ನು ಹಮ್ಮಿಕೊಳ್ಳುವುದು ಮತ್ತು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಇತ್ಯಾದಿ ವಿಷಯ ಗಳನ್ನು ತಕ್ಷಣ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ.

೫. ಸರಕಾರ, ರೈತರು, ಆರೋಗ್ಯತಜ್ಞರು ಮತ್ತು ನಾಗರಿಕರು ಒಟ್ಟಿಗೆ ಬರುವುದು ಆವಶ್ಯಕವಿದೆ !

ಈ ಸಮಸ್ಯೆಯನ್ನು ನಿವಾರಿಸಲು ಸಾಮೂಹಿಕ ಪ್ರಯತ್ನಗಳ ಅವಶ್ಯಕತೆಯಿದೆ. ಸರಕಾರ, ರೈತರು, ಆರೋಗ್ಯ ತಜ್ಞರು ಮತ್ತು ನಾಗರಿಕರು ಒಟ್ಟಾಗಿ ಕಾರ್ಯ ಮಾಡಬೇಕು. ದೀರ್ಘಕಾಲಿಕ ಧೋರಣೆಯನ್ನು ಆಯ್ದುಕೊಂಡು ಶಾಶ್ವತ ಕೃಷಿಪದ್ದತಿಯನ್ನು ಅವಲಂಬಿಸುವುದು ಮಹತ್ವದ್ದಾಗಿದೆ. ರೈತರಿಗೆ ಪರಿಸರಸ್ನೇಹಿ ಕೃಷಿಪದ್ಧತಿಯ ವಿಷಯದಲ್ಲಿ ತರಬೇತಿ ನೀಡುವುದು ಹಾಗೂ ಅವರಿಗೆ ಈ ಪದ್ಧತಿ ಅವಲಂಬಿಸಲು ಪ್ರೋತ್ಸಾಹಿಸುವುದು ಆವಶ್ಯಕವಾಗಿದೆ.

೬. ನಿಷ್ಕರ್ಷ

ಪಂಜಾಬಿನ ಈ ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದ್ದು ಅದಕ್ಕೆ ತಕ್ಷಣ ಪರಿಹಾರವನ್ನು ಕಂಡು ಹಿಡಿಯುವ ಅವಶ್ಯಕತೆಯಿದೆ. ಕೇವಲ ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸದೆ ಪರಿಸರ ಹಾಗೂ ಮಾನವನ ಆರೋಗ್ಯವನ್ನು ಸಮತೋಲನದಲ್ಲಿಡುವುದು ಮಹತ್ವದ್ದಾಗಿದೆ. ಶಾಶ್ವತ ವಿಕಾಸದ ದೃಷ್ಟಿಕೋನದಿಂದ ಈ ಸಮಸ್ಯೆಯತ್ತ ನೋಡಿ ದೀರ್ಘಕಾಲಿಕ ಉಪಾಯಯೋಜನೆಯನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ. ನಾವು ಕೇವಲ ಈ ರೀತಿಯಲ್ಲಿ ಪಂಜಾಬಿನ ಅರ್ಬುದರೋಗದ ಭಯಾನಕ ಸಮಸ್ಯೆಯನ್ನು ಪರಿಹರಿಸಬಹುದು ಹಾಗೂ ಮುಂದಿನ ಪೀಳಿಗೆಗಾಗಿ ಒಂದು ನಿರೋಗಿ ಹಾಗೂ ಸುರಕ್ಷಿತ ಭವಿಷ್ಯವನ್ನು ನಿರ್ಮಿಸಬಹುದು.

– ಶ್ರೀ. ನಾರಾಯಣ ನಾಡಕರ್ಣಿ, ಫೋಂಡಾ ಗೋವಾ.