ಛತ್ತೀಸ್‌ಗಢದಲ್ಲಿನ ಧರ್ಮಕಾರ್ಯಕ್ಕೆ ಆಧ್ಯಾತ್ಮಿಕ ದಿಕ್ಕನ್ನು ನೀಡಿದ ಸದ್ಗುರುದ್ವಯರ ಭೇಟಿ!

ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಅವರನ್ನು ಭೇಟಿಯಾಗಲು ತೆರಳಿದ್ದ ಶಿಷ್ಟಮಂಡಳದಲ್ಲಿ ಭಾಗವಹಿಸಿದ್ದ ಸಂತರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ಹಾಗೂ ಹಿಂದುತ್ವನಿಷ್ಠರು!

೧. ಶ್ರೀ. ಕಮಲ್ ಬಿಸ್ವಾಸ್ ಅವರಿಗೆ ಸಂತರ ಪ್ರವಾಸದ ಕುರಿತು ಕನಸಿನಲ್ಲಿ ಸಿಕ್ಕ ಮುನ್ಸೂಚನೆ

ಛತ್ತೀಸ್‌ಗಢದ ಸನಾತನ ಸಂಸ್ಥೆಯ ಕಾರ್ಯದೊಂದಿಗೆ ಹೊಸದಾಗಿ ಜೋಡಿಸಲ್ಪಟ್ಟ ಧರ್ಮಪ್ರೇಮಿ ಶ್ರೀ. ಕಮಲ್ ಬಿಸ್ವಾಸ್ ಅವರಿಗೆ ಈ ದೈವಿ ಪ್ರವಾಸಕ್ಕಿಂತ ೮ ದಿನಗಳ ಮುಂಚೆಯೇ ಕನಸಿನಲ್ಲಿ ಒಂದು ದೃಶ್ಯ ಕಾಣಿಸಿತು. ಕನಸಿನಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾತಾಯಿ ಅವರು ಎಲ್ಲಾ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ “ಛತ್ತೀಸ್‌ಗಢದಲ್ಲಿ ಧರ್ಮಕಾರ್ಯವನ್ನು ಹೇಗೆ ಬೆಳೆಸಬೇಕು ಮತ್ತು ಸಾಧನೆಯನ್ನು ಹೇಗೆ ಮಾಡಬೇಕು” ಎಂಬುದರ ಕುರಿತು ಮಾರ್ಗದರ್ಶನ ಮಾಡುತ್ತಿರುವುದು ಕಾಣಿಸಿತು. ಅವರು ಈ ಕನಸಿನ ಬಗ್ಗೆ ತಿಳಿಸಿದಾಗ, ಈ ಪ್ರವಾಸ ಇನ್ನೂ ಅಧಿಕೃತವಾಗಿ ನಿಗದಿಯಾಗಿರಲಿಲ್ಲ; ಆದರೆ, ಅದಾದ ೨ ದಿನಗಳಲ್ಲೇ ಪ.ಪೂ. ಡಾ. ಯುಧಿಷ್ಠಿರಲಾಲ್ ಮಹಾರಾಜರ ಆಹ್ವಾನದ ಮೇರೆಗೆ ಈ ಪ್ರವಾಸ ನಿಗದಿಯಾಯಿತು. ಇದರಿಂದ ಈಶ್ವರನ ಸೂಕ್ಷ್ಮ ಯೋಜನೆ ಹೇಗಿರುತ್ತದೆ ಮತ್ತು ಸಾಧಕರು ಹಾಗೂ ಧರ್ಮಪ್ರೇಮಿಗಳಿಗೆ ಮುಂಚಿತವಾಗಿಯೇ ಮುನ್ಸೂಚನೆ ಹೇಗೆ ಸಿಗುತ್ತದೆ ಎಂಬುದು ಎಲ್ಲರ ಗಮನಕ್ಕೆ ಬಂದಿತು.

ನೂರಾರು ಕಿಲೋಮೀಟರ್ ದೂರದಲ್ಲಿರುವ ಸಂತರಿಗೆ ಸೂಕ್ಷ್ಮದಿಂದ ಜ್ಞಾನ ದೊರೆತು, ಅವರು ತಮ್ಮ ಶಿಷ್ಯ ವಕೀಲ ಆಶಿಶ್ ಶರ್ಮಾ ಅವರಿಗೆ ಸದ್ಗುರುದ್ವಯರ ಸಾನ್ನಿಧ್ಯದಲ್ಲಿ ಇರಲು ಹೇಳುವುದು

ಭಿಲಾಯಿಯ ವಕೀಲ ಆಶಿಶ್ ಶರ್ಮಾ ಅವರು ಈ ಪ್ರವಾಸದಲ್ಲಿ ಸದ್ಗುರುದ್ವಯರ ಜೊತೆಗಿದ್ದರು. ಹಿಂಗಣಘಾಟ್‌ನಲ್ಲಿದ್ದ (ವರ್ಧಾ ಜಿಲ್ಲೆ) ಅವರ ಗುರುಗಳು ಆಶಿಶ್ ಶರ್ಮಾ ಅವರಿಗೆ ದೂರವಾಣಿ ಕರೆ ಮಾಡಿ, “ಈಗ ನಿಮ್ಮೊಂದಿಗಿರುವ ಇಬ್ಬರು ಮಹಾನ್ ವಿಭೂತಿಗಳು ಸಾಕ್ಷಾತ್ ಶ್ರೀ ಸರಸ್ವತಿ ಮಾತೆ ಮತ್ತು ಶ್ರೀ ಮಹಾಲಕ್ಷ್ಮಿ ಮಾತೆಯಾಗಿದ್ದಾರೆ. ಅವರ ಕೃಪಾಶೀರ್ವಾದ ನಿಮಗೆ ದೊರೆಯಲಿ, ನೀವು ಹೆಚ್ಚೆಚ್ಚು ಅವರ ಸಾನ್ನಿಧ್ಯದಲ್ಲಿ ಇರಿ” ಎಂದು ತಿಳಿಸಿದರು. ‘ನೂರಾರು ಕಿಲೋಮೀಟರ್ ದೂರದಲ್ಲಿರುವ ಸಂತರಿಗೆ ಸೂಕ್ಷ್ಮದಿಂದ ಈ ಜ್ಞಾನ ದೊರೆಯುವುದು ಮತ್ತು ಅವರು ಶಿಷ್ಯನಿಗೆ (ವಕೀಲ ಆಶಿಶ್ ಶರ್ಮಾ ಅವರಿಗೆ) ಇದನ್ನು ತಿಳಿಸುವುದು’ ದೈವಿ ಯೋಜನೆಯ ಭಾಗವೇ ಆಗಿದೆ ಎಂಬುದು ಅರಿವಾಯಿತು. ಮರುದಿನ ವಕೀಲ ಆಶಿಶ್ ಶರ್ಮಾ ಅವರಿಗೆ ಅವರ ಗುರುಗಳು ದೂರವಾಣಿಯ ಮೂಲಕ ಮತ್ತೆ, “ಹಿಮಾಲಯದ ಒಬ್ಬ ಮಹಾನ್ ಸದ್ಗುರುಗಳಿದ್ದು, ಈ ಇಬ್ಬರೂ ಮಾತಾಜಿಗಳು ಅವರ ಶಿಷ್ಯೆಯರಾಗಿದ್ದಾರೆ ಎಂಬುದು ನನಗೆ ಕಾಣಿಸುತ್ತಿದೆ. ಈ ಇಬ್ಬರೂ ಮಾತಾಜಿಗಳು ದೇವಿಯ ಸ್ವರೂಪವೇ ಆಗಿದ್ದು, ಅವರ ಆಧ್ಯಾತ್ಮಿಕ ಶಕ್ತಿಯು ಬಹಳ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿದೆ,” ಎಂದು ಹೇಳಿದರು.

೨. ಸಂತರ ಚೈತನ್ಯದಿಂದ ಪ್ರಭಾವಿತರಾದ ಗಣ್ಯ ಉದ್ಯಮಿಗಳು

ವಕೀಲ ಆಶಿಶ್ ಶರ್ಮಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಅನೇಕ ಉದ್ಯಮಿಗಳನ್ನು ಸದ್ಗುರುದ್ವಯರ ದರ್ಶನಕ್ಕಾಗಿ ಆಹ್ವಾನಿಸಿದ್ದರು. ಸದ್ಗುರುದ್ವಯರ ಸಾನ್ನಿಧ್ಯಕ್ಕೆ ಬಂದ ನಂತರ ಎಲ್ಲಾ ಉದ್ಯಮಿಗಳು ಕೃತಜ್ಞತೆ ವ್ಯಕ್ತಪಡಿಸುತ್ತಾ, “ಇಲ್ಲಿಗೆ ಬಂದು ನಮ್ಮ ಭಾಗ್ಯವೇ ಬೆಳಗಿತು. ಇನ್ಮುಂದೆ ನಾವು ಈ ಈಶ್ವರೀಯ ಕಾರ್ಯದೊಂದಿಗೆ ನಿರಂತರವಾಗಿ ಜೋಡಿಸಿಕೊಂಡಿರುತ್ತೇವೆ” ಎಂದು ಹೇಳಿದರು. ‘ಬಿಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಷನಲ್’ ಈ ಉದ್ಯಮಿಗಳ ಸಂಘಟನೆಯ ಉಪಾಧ್ಯಕ್ಷರು ಮತ್ತು ಅವರ ಸಹೋದ್ಯೋಗಿಗಳು ಮೊದಲ ಬಾರಿಗೆ ಸದ್ಗುರುದ್ವಯರ ದರ್ಶನಕ್ಕಾಗಿ ಬಂದಿದ್ದರು. ಸದ್ಗುರುದ್ವಯರ ಉಪಸ್ಥಿತಿ ಮತ್ತು ಸಹಜ ಮಾತುಗಳಿಂದ ಅವರು ಎಷ್ಟರಮಟ್ಟಿಗೆ ಪ್ರಭಾವಿತರಾದರೆಂದರೆ, ಅತ್ಯಂತ ನಮ್ರತೆಯಿಂದ ಚರಣಗಳಿಗೆ ಶಿರಬಾಗಿ ನಮಸ್ಕರಿಸಿ ದರ್ಶನ ಪಡೆದರು. “ಇಂತಹ ಸಂತರ ಆಶೀರ್ವಾದ ಸಿಗುವುದು ನಮ್ಮ ಭಾಗ್ಯವೇ ಆಗಿದೆ. ಇನ್ಮುಂದೆ ಸಂಸ್ಥೆಯ ಧರ್ಮಕಾರ್ಯಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ” ಎಂದು ಹೇಳಿದರು. ಅಲ್ಲದೆ, ಗೋವಾದಲ್ಲಿ ಮುಂಬರುವ ಉದ್ಯಮಿಗಳ ಪರಿಷತ್ತಿನ ಶಿಬಿರದ ಸಮಯದಲ್ಲಿ ಆಶ್ರಮಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.

೩. ಸಾಧನೆಯ ಕುರಿತು ಮಾರ್ಗದರ್ಶನ ಪಡೆಯಲು ಬಂದ ಛತ್ತೀಸ್‌ಗಢದ ಉನ್ನತಾಧಿಕಾರಿಗಳು!

ಛತ್ತೀಸ್‌ಗಢದ ಒಬ್ಬ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯು ಸ್ವತಃ ಅತ್ಯಂತ ಸರಳ ಮತ್ತು ಆಧ್ಯಾತ್ಮಿಕ ವೃತ್ತಿಯವರಾಗಿದ್ದಾರೆ. ಅವರು ಬೆಳಿಗ್ಗೆಯೇ ಸದ್ಗುರುದ್ವಯರನ್ನು ಭೇಟಿಯಾಗಲು ಬಂದಿದ್ದರು. ಅವರು ‘ಸಾಧನೆಯನ್ನು ಹೇಗೆ ಮಾಡಬೇಕು ಮತ್ತು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಹೇಗೆ ಅಳವಡಿಸಿಕೊಳ್ಳಬೇಕು’ ಎಂಬುದನ್ನು ಆತ್ಮೀಯತೆಯಿಂದ ತಿಳಿದುಕೊಂಡರು. ಸದ್ಗುರುದ್ವಯರ ಮಾರ್ಗದರ್ಶನದಂತೆ ನಿಯಮಿತವಾಗಿ ಸಾಧನೆ ಮಾಡುವ ನಿಶ್ಚಯ ಮಾಡಿದರು.

೪. ಯಾವುದೇ ಪೂರ್ವಯೋಜನೆ ಇಲ್ಲದಿದ್ದರೂ ಛತ್ತೀಸ್‌ಗಢದ ಮುಖ್ಯಮಂತ್ರಿಗಳೊಂದಿಗೆ ಅತ್ಯಂತ ಭಾವಪೂರ್ಣ ಹಾಗೂ ಸಕಾರಾತ್ಮಕ ವಾತಾವರಣದಲ್ಲಿ ನಡೆದ ಭೇಟಿ!

ಛತ್ತೀಸ್‌ಗಢದ ‘ಅಖಿಲ ಭಾರತೀಯ ಘರ್ ವಾಪಸಿ ಅಭಿಯಾನ’ದ ಪ್ರಮುಖರು ಹಾಗೂ ಭಾಜಪ ರಾಜ್ಯ ಉಪಾಧ್ಯಕ್ಷರಾದ ಶ್ರೀ. ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರ ನೇತೃತ್ವದಲ್ಲಿ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ವಿಷ್ಣುದೇವ ಸಾಯ ಅವರೊಂದಿಗೆ ಸದ್ಗುರುದ್ವಯರ ಭೇಟಿಯಾಯಿತು. ಈ ಭೇಟಿಯಲ್ಲಿ ಮುಖ್ಯಮಂತ್ರಿಗಳು ಸುಮಾರು ೧ ಗಂಟೆಯ ಸಮಯವನ್ನು ನೀಡಿ ಸದ್ಗುರುದ್ವಯರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದರು. ಛತ್ತೀಸ್‌ಗಢದ ಸಾಂಸ್ಕೃತಿಕ ಪರಂಪರೆ, ಅಲ್ಲಿನ ಪ್ರಾಚೀನ ದೇವಾಲಯಗಳು, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಚರ್ಚೆಯಾಯಿತು. “ಸನಾತನ ಸಂಸ್ಥೆಯು ಆಧ್ಯಾತ್ಮಿಕ ಸಂಶೋಧನೆ ಮಾಡುತ್ತಿರುವ ರೀತಿ ಮತ್ತು ಪ್ರವಾಸಗಳನ್ನು ಮಾಡಿ ಆಧ್ಯಾತ್ಮಿಕ ಮಹತ್ವವು ಮುಂದಿನ ಪೀಳಿಗೆಗೆ ತಿಳಿಯುವಂತಾಗಲು ವಸ್ತುಗಳ ಸಂರಕ್ಷಣೆ ಮತ್ತು ಜತನ ಮಾಡುತ್ತಿರುವುದಕ್ಕೆ ಸರಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು” ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಭೇಟಿಯ ನಂತರ ಶ್ರೀ. ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರೊಂದಿಗೆ ಮಾತನಾಡುತ್ತಾ ಸ್ವತಃ ಮುಖ್ಯಮಂತ್ರಿಗಳು, “ಈ ಭೇಟಿಯಿಂದ ನನಗೆ ಬಹಳ ದೊಡ್ಡ ಪ್ರಮಾಣದ ಸಕಾರಾತ್ಮಕ ಶಕ್ತಿ ಸಿಕ್ಕಿತು ಮತ್ತು ಈ ಭೇಟಿ ಅತ್ಯಂತ ಉತ್ತಮವಾಗಿತ್ತು” ಎಂದು ಹೇಳಿದರು.

ಸನ್ಮಾನ್ಯ ಮುಖ್ಯಮಂತ್ರಿಗಳು ಇಬ್ಬರೂ ಸದ್ಗುರುದ್ವಯರ ಸಂತತ್ವವನ್ನು ಗುರುತಿಸಿ, ಸ್ವಯಂಪ್ರೇರಿತರಾಗಿ ಛತ್ತೀಸ್‌ಗಢದ ಸಾಂಪ್ರದಾಯಿಕ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಇದನ್ನೂ ಓದಿರಿ –  ಛತ್ತೀಸ್‌ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ

೫. ಶ್ರೀ. ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರಿಗೆ ಸದ್ಗುರುದ್ವಯರ ಕುರಿತು ಆದ ಅನುಭೂತಿ

ಮುಖ್ಯಮಂತ್ರಿಗಳ ಭೇಟಿಯ ನಂತರ ಶ್ರೀ. ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ದೂರವಾಣಿಯಲ್ಲಿ, “ಮುಖ್ಯಮಂತ್ರಿಗಳ ಭೇಟಿಗಿಂತ ಮುಂಚೆ ನಾನು ತುಂಬಾ ದಣಿದಿದ್ದೆ; ಆದರೆ ಈ ಭೇಟಿಯ ನಂತರ ಸದ್ಗುರುದ್ವಯರ ಮಾಧ್ಯಮದಿಂದ ನಮಗೆ ಅಪಾರ ಪ್ರಮಾಣದ ಆಧ್ಯಾತ್ಮಿಕ ಶಕ್ತಿ ದೊರೆಯಿತು. ಧರ್ಮಕಾರ್ಯ ಮಾಡಲು ಮತ್ತು ಮುಖ್ಯಮಂತ್ರಿಗಳ ಭೇಟಿಯ ಸಮಯದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಸಕಾರಾತ್ಮಕ ಶಕ್ತಿ ಹಾಗೂ ಒಂದು ವಿಶಿಷ್ಟ ಅನುಭೂತಿ ಸಿಕ್ಕಿತು. ಅವರ ಈ ಪ್ರವಾಸದ ಅವಧಿಯಲ್ಲಿ ಇಂತಹ ಸಂತರ ಸಹವಾಸ ದೊರೆತಿರುವುದು ನಮ್ಮ ಪರಮ ಭಾಗ್ಯವಾಗಿದೆ” ಎಂದು ತಿಳಿಸಿದರು.

ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ್ ಅವರಿಗೆ ‘ಘರ್ ವಾಪಸಿ’ ಕಾರ್ಯಕ್ರಮದ ಆಹ್ವಾನ ನೀಡಿದ ಶ್ರೀ. ಪ್ರಬಲ್ ಪ್ರತಾಪ್ ಸಿಂಗ್ ಜುದೇವ್

೬. ‘ಘರ್ ವಾಪಸಿ’ ಮಹಾಅನುಷ್ಠಾನಕ್ಕಾಗಿ ಸದ್ಗುರುದ್ವಯರಿಗೆ ಭಾವಪೂರ್ಣ ಆಹ್ವಾನ

ಶ್ರೀ. ಪ್ರಬಲ್ ಪ್ರತಾಪ್ ಸಿಂಗ್ ಜುದೇವ್ ಅವರು ಛತ್ತೀಸ್‌ಗಢದಲ್ಲಿ ಸಾವಿರಾರು ಹಿಂದೂಗಳ ‘ಘರ್ ವಾಪಸಿ’ (ಇತರ ಧರ್ಮಗಳಿಂದ ಮರಳಿ ಹಿಂದೂ ಧರ್ಮಕ್ಕೆ ಕರೆತರುವುದು) ಮಾಡಿದ್ದಾರೆ. ಬಸ್ತರ್ ಮತ್ತು ದಂತೇವಾಡ ಪ್ರದೇಶಗಳಲ್ಲಿ ೨ ತಿಂಗಳ ನಂತರ ಘರ್ ವಾಪಸಿಯ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆ ಕಾರ್ಯಕ್ರಮಕ್ಕಾಗಿ ಅವರು ಸದ್ಗುರುದ್ವಯರನ್ನು ಅತ್ಯಂತ ಆದರಪೂರ್ವಕವಾಗಿ ಆಹ್ವಾನಿಸಿದರು. ‘ಸದ್ಗುರುದ್ವಯರ ಪಾವನ ಉಪಸ್ಥಿತಿಯಲ್ಲಿ ಈ ಧರ್ಮಕಾರ್ಯ ನೆರವೇರಬೇಕು’ ಎಂಬುದು ಅವರ ಭಾವವಾಗಿತ್ತು.

೭. ಧರ್ಮಪ್ರೇಮಿಗಳು ಮತ್ತು ಸಾಧಕರು ಅನುಭವಿಸಿದ ಉನ್ನತ ಮಟ್ಟದ ಭಾವ ಸಮಾರಂಭ !

ಛತ್ತೀಸ್‌ಗಢ ರಾಜ್ಯದಲ್ಲಿ ಸನಾತನ ಸಂಸ್ಥೆಯ ಸದ್ಗುರುದ್ವಯರ ಇಂತಹ ಪ್ರವಾಸವು ಮೊದಲ ಬಾರಿಗೆ ಆಯೋಜನೆಗೊಂಡಿತ್ತು. ಸಾಧಕರು ಮತ್ತು ಧರ್ಮಪ್ರೇಮಿಗಳಿಗಾಗಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಮಾರ್ಗದರ್ಶನವು ಒಂದು ಉನ್ನತ ಮಟ್ಟದ ‘ಭಾವಮಯ ಕಾರ್ಯಕ್ರಮ’ವೇ ಆಗಿತ್ತು. ಪ್ರತಿಯೊಬ್ಬ ಧರ್ಮಪ್ರೇಮಿಯೂ ತಮ್ಮ ಮನೋಭಾವನೆಯನ್ನು ವ್ಯಕ್ತಪಡಿಸುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ್ ಅವರನ್ನು ‘ಗುರುಮಾತಾ’ ಎಂಬ ಭಾವಪೂರ್ಣ ಪದಗಳಿಂದ ಸಂಬೋಧಿಸುತ್ತಿದ್ದರು. ಈ ಪದವನ್ನು ಉಚ್ಚರಿಸುತ್ತಿದ್ದಂತೆಯೇ ಎಲ್ಲರಲ್ಲೂ ಭಾವಜಾಗೃತಿಯಾಗುತ್ತಿತ್ತು. ‘ಸಾಕ್ಷಾತ್ ಸದ್ಗುರುಮಾತೆ ಮತ್ತು ದೇವಿಯ ಪ್ರತ್ಯಕ್ಷ ದರ್ಶನ ದೊರೆಯುತ್ತಿದ್ದು, ನಾವು ದೇವಿಯ ಮುಂದೆಯೇ ಆತ್ಮನಿವೇದನೆ ಮಾಡುತ್ತಿದ್ದೇವೆ’ ಎಂಬ ಭಾವದಿಂದ ಎಲ್ಲರೂ ಸಾಧನೆ, ಅದರಲ್ಲಿನ ತೊಂದರೆಗಳು ಮತ್ತು ಪ್ರಶ್ನೆಗಳನ್ನು ಮುಕ್ತವಾಗಿ ಕೇಳುತ್ತಿದ್ದರು. ಈ ಕಾರ್ಯಕ್ರಮದ ನಂತರ ೨ ದಿನಗಳ ಕಾಲ ಎಲ್ಲಾ ಸಾಧಕರು ಮತ್ತು ಧರ್ಮಪ್ರೇಮಿಗಳು ಒಂದು ವಿಭಿನ್ನ ಭಾವಾವಸ್ಥೆಯಲ್ಲಿದ್ದರು. “ಗುರುಪೂರ್ಣಿಮೆಗೆ ಮುಂಚಿತವಾಗಿಯೇ ಗುರುಗಳು ಈ ದೊಡ್ಡ ಕೃಪಾಪ್ರಸಾದದ ಶಕ್ತಿಯನ್ನು ಕರುಣಿಸಿದ್ದಾರೆ” ಎಂದು ಪ್ರತಿಯೊಬ್ಬರೂ ಕೃತಜ್ಞತೆ ವ್ಯಕ್ತಪಡಿಸಿದರು.

೮. “ಛತ್ತೀಸ್‌ಗಢದಲ್ಲಿ ಧರ್ಮಕಾರ್ಯ ವಿಸ್ತರಣೆಯ ಈಶ್ವರೀಯ ಕಾಲ ಬಂದಿದೆ” ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಹೇಳುವುದು

ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಮಾರ್ಗದರ್ಶನ ಮಾಡುತ್ತಾ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಅವರು, “ಈ ಪ್ರವಾಸವು ಸಂಪೂರ್ಣವಾಗಿ ಈಶ್ವರೀಯ ಯೋಜನೆಯಂತೆಯೇ ನಡೆದಿದೆ. ಛತ್ತೀಸ್‌ಗಢದಲ್ಲಿ ತಯಾರಾಗಿರುವ ಹೊಸ ಸಾಧಕರು ಮತ್ತು ಧರ್ಮಪ್ರೇಮಿಗಳು, ಹಾಗೂ ಬೆಳೆದಿರುವ ಹಿಂದೂ ಸಂಘಟನೆಯ ಕಾರ್ಯವನ್ನು ನೋಡಿದರೆ, ಈಗ ಈ ಪ್ರದೇಶದಲ್ಲಿ ಧರ್ಮಕಾರ್ಯವು ವ್ಯಾಪಕವಾಗಿ ಬೆಳೆಯಲು ಈಶ್ವರನೇ ಈ ಸಮಯವನ್ನು ನಿಶ್ಚಯಿಸಿದ್ದಾನೆ ಎಂಬುದು ಅರಿವಾಗುತ್ತದೆ” ಎಂದು ಹೇಳಿದರು. ಅವರ ಈ ಆಶೀರ್ವಾದದಿಂದ ಒಂದು ರೀತಿಯಲ್ಲಿ ಛತ್ತೀಸ್‌ಗಢದಲ್ಲಿ ಧರ್ಮಕಾರ್ಯದ ಸಂಕಲ್ಪವಾಯಿತು ಎಂದೆನಿಸಿತು.

‘ಈ ಸಂಪೂರ್ಣ ಪ್ರವಾಸವು ಛತ್ತೀಸ್‌ಗಢದ ಭೂಮಿಯಲ್ಲಿ ಈಶ್ವರೀಯ ಚೈತನ್ಯದ ಮಹಾವರ್ಷವೇ ಆಗಿತ್ತು’, ಇದಕ್ಕಾಗಿ ಎಲ್ಲಾ ಸಾಧಕರು ಮತ್ತು ಧರ್ಮಪ್ರೇಮಿಗಳು ಸದ್ಗುರುದ್ವಯರ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ!

– ಶ್ರೀ. ಸುನೀಲ್ ಘನವಟ್, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರು, ಹಿಂದೂ ಜಾಗೃತಿ ಸಮಿತಿ. (೨೪.೭.೨೦೨೬)