‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ

ನವದೆಹಲಿ – ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಳೆದ 36 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ‘ಕಾಕ್ರೋಚ್ ಜನತಾ ಪಕ್ಷ’ (CJP) ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ನಂತರ ಸಂಭ್ರಮಾಚರಣೆ ಮಾಡಿತು. ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ‘ಸಿಜೆಪಿ’ ಸಂಸ್ಥಾಪಕ ಅಭಿಜಿತ್ ದೀಪಕೆ , “ಅವರು (ಸರಕಾರ) ‘ಈ ಸರಕಾರದಲ್ಲಿ ರಾಜೀನಾಮೆಗಳನ್ನು ನೀಡಲಾಗುವುದಿಲ್ಲ’ ಎಂದು ಹೇಳುತ್ತಿದ್ದರು; ಆದರೆ ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ,” ಎಂದು ಹೇಳಿಕೆ ನೀಡಿದರು.

ನಮ್ಮ ಇನ್ನುಳಿದ ಎರಡು ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಯುತ್ತದೆ! – ದೀಪಕೆ

ಅಭಿಜಿತ್ ದೀಪಕೆ ಮಾತನಾಡುತ್ತಾ, “ಸಚಿವರು ರಾಜೀನಾಮೆ ನೀಡಿದ್ದಾರೆ; ಆದರೆ ನಮ್ಮ ಇನ್ನೂ ಎರಡು ಬೇಡಿಕೆಗಳಿವೆ. ನಾವು ಜಂತರ್ ಮಂತರ್‌ನಿಂದ ಸುಮ್ಮನೆ ಹೋಗುವುದಿಲ್ಲ. ಒಮ್ಮೆ ‘ಕಾಕ್ರೋಚ್’ ಒಳಗೆ ಹೊಕ್ಕರೆ, ಅದು ಸುಲಭವಾಗಿ ಹೊರಗೆ ಬರುವುದಿಲ್ಲ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ಸಿಗಬೇಕು ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ‘ಕಾಕ್ರೋಚ್‌’ಗಳ ಜೊತೆ ಹಗೆತನ ಮಾಡುತ್ತಿದ್ದಾರೆ ಎಂಬುದನ್ನು ದೆಹಲಿ ಪೊಲೀಸ್ ಅಧಿಕಾರಿಗಳು ನೆನಪಿಡಬೇಕು. ನಾವು ಒಬ್ಬ ಕೇಂದ್ರ ಸಚಿವರನ್ನೇ ರಾಜೀನಾಮೆ ನೀಡುವಂತೆ ಮಾಡಿದ್ದೇವೆ, ಹಾಗಿರುವಾಗ ನೀವ್ಯಾರು? (ಕಾಕ್ರೋಚ್ ತಲೆಗೆ ಗಾಳಿ ಹೊಕ್ಕಿದೆ! ಜನರು ಇವೆಲ್ಲವನ್ನೂ ಗಮನಿಸುತ್ತಿದ್ದಾರೆ! – ಸಂಪಾದಕರು) ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು. ಸಹೋದರರೇ, ಇದು ಪ್ರಜಾಪ್ರಭುತ್ವ. ‘ನೀವೇನು ಮಾಡುತ್ತಿದ್ದೀರಿ? ಇನ್ನು ಎಷ್ಟು ಕಾಲ ಇಲ್ಲಿ ಕುಳಿತುಕೊಳ್ಳುತ್ತೀರಿ? ಅವರು ರಾಜೀನಾಮೆ ನೀಡುವುದಿಲ್ಲ, ಇದೊಂದು ಸರ್ವಾಧಿಕಾರಿ ಸರಕಾರ’ ಎಂದು ತಿಂಗಳಿನಿಂದ ಜನರು ನನ್ನನ್ನು ಕೇಳುತ್ತಿದ್ದರು. ಆದರೆ ನಾವು ಅದನ್ನು ಮಾಡಿ ತೋರಿಸಿದ್ದೇವೆ,” ಎಂದು ದೀಪಕೆ ಹೇಳಿದರು.

ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ನಾವು ಮನೆಗೆ ಹಿಂತಿರುಗುತ್ತೇವೆ! – ಆಶುತೋಷ್ ರಾಂಕಾ

ಕಾಕ್ರೋಚ್ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರ ಆಶುತೋಷ್ ರಾಂಕಾ ಮಾತನಾಡಿ, “ಸರಕಾರವು ನಮ್ಮ ಮೂರು ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಅಂಗೀಕರಿಸಿದರೆ, ನಾವು ಮನೆಗೆ ಹಿಂತಿರುಗುತ್ತೇವೆ,” ಎಂದರು.

ಇದು ಪ್ರಜಾಪ್ರಭುತ್ವದ ಗೆಲುವು! – ಸೋನಮ್ ವಾಂಗ್ಚುಕ್

ಸೋನಮ್ ವಾಂಗ್ಚುಕ್ ಮಾತನಾಡಿ, “ಬೀದಿಗಳಿಂದ ಉದಯಿಸಿದ ಈ ಪ್ರತ್ಯಕ್ಷ ಪ್ರಜಾಪ್ರಭುತ್ವವು ಶಾಂತಿ, ಸಂಯಮ ಮತ್ತು ಸತತ ಪ್ರಯತ್ನದ ಗೆಲುವಾಗಿದೆ. ‘ಸಿಜೆಪಿ’ ಮತ್ತು ದೇಶದ ಯುವ ಪೀಳಿಗೆಗೆ ಅಭಿನಂದನೆಗಳು. ಭಯ ಹಾಗೂ ಬೆದರಿಕೆಗಳನ್ನು ಮೆಟ್ಟಿ ನಿಂತು ದೇಶದ ಮೂಲೆ ಮೂಲೆಗಳಿಂದ ಧ್ವನಿ ಎತ್ತಿದ ಎಲ್ಲಾ ನಾಗರಿಕರಿಗೂ ಧನ್ಯವಾದಗಳು,” ಎಂದರು.

‘ಈಗ ಪ್ರತಿಯೊಂದು ಸರಕಾರವೂ ಜನರ ಮಾತು ಕೇಳಲೇಬೇಕಂತೆ!’

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಮಾತನಾಡಿ, “ಇಂದಿನಿಂದ ಈ ದೇಶದ ಪ್ರತಿಯೊಬ್ಬ ಆಡಳಿತಗಾರನೂ ಜನರ ಮಾತುಗಳನ್ನು ಕೇಳಲೇಬೇಕು ಎಂಬುದನ್ನು ನೆನಪಿಟ್ಟುಕೊಳ್ಳುತ್ತಾನೆ. (ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಎಷ್ಟು ಬಾರಿ ಜನರ ಮಾತು ಕೇಳಿತ್ತು ಎಂಬುದನ್ನು ಪ್ರಿಯಾಂಕಾ ವಾದ್ರಾ ಹೇಳಬೇಕು! ದೇಶದಲ್ಲಿ ತುರ್ತು ಪರಿಸ್ಥಿತಿ (ಎಮರ್ಜೆನ್ಸಿ) ಹೇರಿ ಜನರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ ಕಾಂಗ್ರೆಸ್ ಇಂತಹ ಹೇಳಿಕೆಗಳನ್ನು ನೀಡದಿರುವುದೇ ಒಳ್ಳೆಯದು! – ಸಂಪಾದಕರು) ದೇಶಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ, ಇದು ಅವರ ಗೆಲುವು. ಇಂದು ಆರ್‌ಎಸ್‌ಎಸ್ (RSS) ಭಾರತದ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಧ್ವಂಸಗೊಳಿಸಿದೆ,” ಎಂದು ಆರೋಪಿಸಿದರು.

29 ವರ್ಷಗಳ ಹಿಂದೆ ಧರ್ಮೇಂದ್ರ ಪ್ರಧಾನ್ ಕೂಡ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಪ್ರತಿಭಟಿಸಿದ್ದರು!

ಧರ್ಮೇಂದ್ರ ಪ್ರಧಾನ್ ಅವರ ಮಾಜಿ ಸಹೋದ್ಯೋಗಿ ಪ್ರಶಾಂತ್ ರಾವತ್ ಮಾತನಾಡಿ, “1997 ರಲ್ಲಿ ಒಡಿಶಾದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಸುದ್ದಿ ಬಂದಾಗ, ಧರ್ಮೇಂದ್ರ ಪ್ರಧಾನ್ ಅವರೇ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಆಗ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದರು. ಧರ್ಮೇಂದ್ರ ಪ್ರಧಾನ್ ಅವರಿಗೆ ಹಲವು ತೀವ್ರ ಗಾಯಗಳಾಗಿದ್ದವು ಹಾಗೂ ಅವರ ಮೂಳೆ ಮುರಿತವೂ (ಫ್ರ್ಯಾಕ್ಚರ್) ಆಗಿತ್ತು,” ಎಂದು ನೆನಪಿಸಿಕೊಂಡರು.

ಸಂಪಾದಕೀಯ ನಿಲುವು

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಅಭಿಜಿತ್ ದೀಪಕೆ ಅವರ ಅಹಂಕಾರದ ಹೇಳಿಕೆ!