ನಿಮ್ಮಿಂದಾಗಿ ದೇಶದ ಅಪಕೀರ್ತಿಯಾಯಿತು, ಕೋಟ್ಯಂತರ ರೂಪಾಯಿ ನಷ್ಟವಾಯಿತು !

‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ಮುಖ್ಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಾಗ ನ್ಯಾಯಾಲಯದಿಂದ ತರಾಟೆ !

ಆರೋಪಿ ಡಾ. ಮನೋಜ್ ಶಿರೂರೆ

ನವ ದೆಹಲಿ – ನಿಮ್ಮ ನಿಂದನೀಯ ಮತ್ತು ಅಕ್ರಮ ಕೃತ್ಯಗಳಿಂದಾಗಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನಂಬಿಕೆದ್ರೋಹವಾಗಿದೆ. ರಾತ್ರಿ-ಹಗಲು ಶ್ರಮಿಸಿ, ಹಾಗೆಯೇ ಪ್ರಾಮಾಣಿಕವಾಗಿ ಅಭ್ಯಾಸ ಮಾಡಿ ಈ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ನೀವು ದುರಾಸೆ ಮತ್ತು ಅಕ್ರಮ ಸಂಪತ್ತಿಗಾಗಿ ಸಂಪೂರ್ಣ ಪರೀಕ್ಷೆಯನ್ನೇ ಹಾಳುಮಾಡಿದಿರಿ. ನಿಮ್ಮಿಂದಾಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದಷ್ಟೇ ಅಲ್ಲದೆ, ದೇಶದ ಅಪಕೀರ್ತಿಯೂ ಆಯಿತು. ಪ್ರಶ್ನೆಪತ್ರಿಕೆ ಸೋರಿಕೆಯ ಗುಂಪಿನ ಇವರೆಲ್ಲರೂ ಸಕ್ರಿಯ ಸದಸ್ಯರಾಗಿದ್ದರು, ಎಂದು ತರಾಟೆಗೆ ತೆಗೆದುಕೊಳ್ಳುತ್ತಾ ದೆಹಲಿಯ ವಿಶೇಷ ನ್ಯಾಯಾಲಯವು ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿ ಡಾ. ಮನೋಜ ಶಿರೂರೆ ಅವನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ೧೩ ಆರೋಪಿಗಳ ನ್ಯಾಯಾಂಗ ಬಂಧನವನ್ನು ಆಗಸ್ಟ್ ೬ ರವರೆಗೆ ವಿಸ್ತರಿಸಿದೆ.

ಡಾ. ಶಿರೂರೆ ಒಬ್ಬ ವಿದ್ಯಾರ್ಥಿಯಿಂದ ೫ ಲಕ್ಷ ರೂಪಾಯಿ ತೆಗೆದುಕೊಂಡು ಏಪ್ರಿಲ್ ತಿಂಗಳಲ್ಲಿ ಸೋರಿಕೆಯಾಗಿದ್ದ ರಸಾಯನಶಾಸ್ತ್ರದ ಪ್ರಶ್ನೆಪತ್ರಿಕೆಯನ್ನು ತನ್ನ ಆಸ್ಪತ್ರೆಯಲ್ಲೇ ಲಭ್ಯವಾಗುವಂತೆ ಮಾಡಿಕೊಟ್ಟಿದ್ದನೆಂಬ ಆರೋಪ ಅವನ ಮೇಲಿದೆ.