ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk

ಉಪವಾಸ ಸತ್ಯಾಗ್ರಹ ಹಿಂಪಡೆಯುವ ಹಿಂದೆ ‘ರಾಜಿ’ ಮಾಡಿಕೊಳ್ಳಲಾಗಿದೆ ಎಂಬ ಆರೋಪಕ್ಕೆ ಸೋನಮ್ ವಾಂಗ್‌ಚುಕ್ ಪ್ರತ್ಯುತ್ತರ

ಸೋನಮ್ ವಾಂಗ್‌ಚುಕ್

ನವದೆಹಲಿ – ನನ್ನ ಉಪವಾಸ ಸತ್ಯಾಗ್ರಹ ಪ್ರಾಮಾಣಿಕವಾಗಿತ್ತು ಎಂಬುದನ್ನು ನಿರೂಪಿಸುವ ಅಥವಾ ಚಾರಿತ್ರ್ಯ ಪ್ರಮಾಣಪತ್ರ ನೀಡುವ ಅಗತ್ಯವಿದೆಯೇ? ಉಪವಾಸ ಸತ್ಯಾಗ್ರಹವನ್ನು ಮುಕ್ತಾಯಗೊಳಿಸಿದಾಗಿನಿಂದ, “ನಾನು ಯಾರ ಪ್ರಭಾವಕ್ಕೆ ಒಳಗಾಗಿ ಹೀಗೆ ಮಾಡಿದೆ? ಕೇಂದ್ರ ಸಚಿವರಿಂದಲೇ ಸತ್ಯಾಗ್ರಹ ಯಾಕೆ ಮುಕ್ತಾಯಗೊಳಿಸಿದೆ? ಇದರ ಹಿಂದೆ ಏನು ‘ರಾಜಿ’ ನಡೆದಿದೆ?” ಎಂದು ಹಲವರು ನನ್ನನ್ನು ಕೇಳುತ್ತಿದ್ದಾರೆ. ೨೬ ದಿನಗಳ ಉಪವಾಸ ಸತ್ಯಾಗ್ರಹದ ನಂತರವೂ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿ ಬಂದಿದೆ. ನನಗೆ ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವೇ ಇರಲಿಲ್ಲ. ಈ ಹಿಂದೆ ಅನೇಕರು ರಾಜಿ ಮಾಡಿಕೊಂಡಿದ್ದಾರೆ; ಆದರೆ ಅವರು ಈ ರೀತಿ ಉಪವಾಸ ಸತ್ಯಾಗ್ರಹ ಮಾಡಿದ್ದರೆ?, ಎಂದು ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸೋನಮ್ ವಾಂಗ್‌ಚುಕ್ ಅವರು ಸತ್ಯಾಗ್ರಹ ಹಿಂಪಡೆದ ನಂತರ ತಮ್ಮ ಮೇಲೆ ಬರುತ್ತಿರುವ ಟೀಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲೇಬೇಕಾಗುತ್ತದೆ!

ವಾಂಗ್‌ಚುಕ್ ಅವರು ವೀಡಿಯೊ ಒಂದನ್ನು ಹಂಚಿಕೊಂಡು, ಧರ್ಮೇಂದ್ರ ಪ್ರಧಾನ್ ಅವರು ಇಂದು ಅಥವಾ ನಾಳೆ ರಾಜೀನಾಮೆ ನೀಡಲೇಬೇಕಾಗುತ್ತದೆ ಎಂದು ಹೇಳಿದರು. ಕೇಂದ್ರ ಸರಕಾರವು ಅವರ ರಾಜೀನಾಮೆಯನ್ನು ಪಡೆಯದಿದ್ದರೆ, ಸರಕಾರಕ್ಕೇ ಕೆಟ್ಟ ಹೆಸರು ಬರಲಿದೆ. ಆದ್ದರಿಂದ ನಾನು ಈ ಬೇಡಿಕೆಗೆ ಪಟ್ಟು ಹಿಡಿಯಲಿಲ್ಲ. ನನ್ನ ದೃಷ್ಟಿಯಲ್ಲಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಸುರಕ್ಷತೆಯೇ ಅತ್ಯಂತ ಮುಖ್ಯವಾಗಿದೆ.