ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !

ಭಾರತದಿಂದ ಚೀನಾಗೆ ತರಾಟೆ!

​ನವದೆಹಲಿ – ಭಾರತವು ಯಾವಾಗಲೂ ಚೀನಾದ ಸಾರ್ವಭೌಮತ್ವವನ್ನು ಗೌರವಿಸಿದೆ; ಆದರೆ ಗಡಿಯಲ್ಲಿ ಚೀನಾ ವ್ಯವಹಾರದ ಕುರಿತು ಹಾಗೆ ಹೇಳಲಾಗುವುದಿಲ್ಲ. ಸಾರ್ವಭೌಮತ್ವದ ವಿಷಯ ಬಂದಾಗ, ವಾಸ್ತವವಾಗಿ ಭಾರತವೇ ಈ ವಿಷಯಗಳನ್ನು ಮಂಡಿಸುತ್ತಾ ಬಂದಿದೆ. ಭಾರತವು ಯಾವುದೇ ರೀತಿಯಲ್ಲಿ ಚೀನಾದ ಸಾರ್ವಭೌಮತ್ವವನ್ನು ಉಲ್ಲಂಘಿಸುವುದಿಲ್ಲ. ಈ ವಿಷಯದಲ್ಲಿ ನಮ್ಮ ನಿಲುವು ಯಾವಾಗಲೂ ಒಂದೇ ರೀತಿಯಾಗಿದೆ. ೧೯೬೩ರಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ನ ಕೆಲವು ಭಾಗಗಳ ಮೇಲೆ ಚೀನಾ ಅಕ್ರಮವಾಗಿ ನಿಯಂತ್ರಣ ಸಾಧಿಸಿದೆ. ಈ ಭಾಗಗಳ ಮೇಲೆ ಭಾರತದ ಹಕ್ಕಿದೆ ಎಂಬುದನ್ನು ಸ್ವತಃ ಚೀನಾ ಕೂಡ ಅಧಿಕೃತವಾಗಿ ಒಪ್ಪಿಕೊಳ್ಳುತ್ತದೆ. ಜಮ್ಮು-ಕಾಶ್ಮೀರದಲ್ಲಿನ ಭಾರತದ ಒಡೆತನದ ಪ್ರದೇಶದಲ್ಲಿ ಚೀನಾದ ಯೋಜನೆಗಳೂ ನಡೆಯುತ್ತಿದ್ದು, ನಾವು ಅದನ್ನು ವಿರೋಧಿಸುತ್ತೇವೆ, ಎಂದು ಭಾರತದ ವಿದೇಶಾಂಗ ಸಚಿವಾಲಯವು ಚೀನಾಗೆ ಚುರುಕು ಮುಟ್ಟಿಸಿತು. ಭಾರತವು ಚೀನಾದ ಭಾಗಗಳ ಮೇಲೆ ನಿಯಂತ್ರಣ ಸಾಧಿಸಿದೆ ಮತ್ತು ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿತ್ತು. ಅದಕ್ಕೆ ಸರಕಾರ ಈ ಮೇಲಿನಂತೆ ಪ್ರತ್ಯುತ್ತರ ನೀಡಿದೆ.

​ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವಿನ ಸಭೆಯ ಅಧಿಕೃತ ವಿವರಗಳನ್ನು ಚೀನಾ ಪ್ರಕಟಿಸಿದ ನಂತರ ಈ ಹೇಳಿಕೆ ಬಂದಿದೆ. ತೈವಾನ್ ಮತ್ತು ಟಿಬೆಟ್ ಕುರಿತು ಭಾರತದ ನಿಲುವು ಮುಂಚಿನಂತೆಯೇ ಇದ್ದು, ಭಾರತವು ಚೀನಾದ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಎಂದು ಜೈಶಂಕರ್ ಹೇಳಿದ್ದಾರೆಂದು ಚೀನಾ ಹೇಳಿತ್ತು.

ಸಂಪಾದಕೀಯ ನಿಲುವು

ಬರಿ ಚುರುಕು ಮುಟ್ಟಿಸಿದರೆ ಏನು ಪ್ರಯೋಜನ? ಆ ಭೂ ಭಾಗಗಳನ್ನು ಖಾಲಿ ಮಾಡಿ ಮರಳಿ ನೀಡುವಂತೆ ಚೀನಾಗೆ ಭಾರತ ಯಾಕೆ ಆಗ್ರಹಿಸುತ್ತಿಲ್ಲ? ಚೀನಾ ಈ ಬೇಡಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದು ಸ್ಪಷ್ಟವಾಗಿದೆ; ಹಾಗಿರುವಾಗ ಭಾರತವು ಚೀನಾದೊಂದಿಗೆ ಮುಖಾಮುಖಿ ಹೋರಾಟ ನಡೆಸಿ ಆ ಪ್ರದೇಶವನ್ನು ಮರಳಿ ಪಡೆಯುವ ಧೈರ್ಯ ತೋರಿಸುವುದೇ? ಎನ್ನುವುದೇ ಮೂಲ ಪ್ರಶ್ನೆಯಾಗಿದೆ!