ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !

ನಾಡಿಶುದ್ಧಿ : ಯೋಗಶಾಸ್ತ್ರದ ಪ್ರಕಾರ ಶರೀರದ ಬಲಭಾಗ ಮತ್ತು ಎಡಭಾಗ ಅನುಕ್ರಮವಾಗಿ ಸೂರ್ಯ ತತ್ತ್ವ ಮತ್ತು ಚಂದ್ರ ತತ್ತ್ವಕ್ಕೆ ಸಂಬಂಧಿಸಿವೆ ಎಂದು ನಂಬಲಾಗುತ್ತದೆ. ನಮ್ಮ ಶರೀರದಲ್ಲಿ ೭೨ ಸಾವಿರ ನಾಡಿಗಳಿವೆ. ಅವುಗಳಲ್ಲಿ ಅತ್ಯಂತ ಪ್ರಮುಖ ೩ ನಾಡಿಗಳೆಂದರೆ ಇಡಾ, ಪಿಂಗಳಾ ಮತ್ತು ಸುಷಮ್ನಾ. ಈ ನಾಡಿಗಳಲ್ಲಿ ಕಲ್ಮಶ (ಅಶುದ್ಧಿ) ಜಮೆಯಾದರೆ, ಈ ನಾಡಿಗಳ ಮೂಲಕ ಪ್ರಾಣಶಕ್ತಿ ಪ್ರವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ರೋಗಗಳಾಗುತ್ತವೆ. ಈ ಅಡಚಣೆಯನ್ನು ದೂರ ಮಾಡುವುದೆಂದರೆ  ನಾಡಿಶುದ್ಧಿ ಮಾಡುವುದು. ಪ್ರಾಣಾಯಾಮದಿಂದ ಈ ನಾಡಿಶುದ್ಧಿಯನ್ನು ಮಾಡಬಹುದು.

ಶುದ್ಧಿಕ್ರಿಯೆ (ಧೌತಿ, ಬಸ್ತಿ, ನೇತಿ, ತ್ರಾಟಕ, ನೌಲಿ ಮತ್ತು ಕಪಾಲಭಾತಿ ಎಂಬ ಷಟ್ಕರ್ಮಗಳು) ನಿತ್ಯನೇಮದಿಂದ ಮಾಡುತ್ತಿದ್ದರೆ ನಾಡಿಶುದ್ಧಿ ಆಗುತ್ತದೆ.

ಪ್ರಾಣಾಯಾಮ ಎಂಬ ಪದವು ಪ್ರಾಣ ಮತ್ತು ಆಯಾಮ ಎಂಬ ೨ ಶಬ್ದಗಳಿಂದ ನಿರ್ಮಾಣವಾಗಿದೆ. ಪ್ರಾಣ ಎಂದರೆ ನಮ್ಮ ಜೀವನಶಕ್ತಿ ಮತ್ತು ಆಯಾಮ ಎಂದರೆ ವಿಸ್ತರಿಸುವುದು. ಮನಸ್ಸಿನ ನಿಯಂತ್ರಣವೇ ಪ್ರಾಣಾಯಾಮದ ಉದ್ದೇಶವಾಗಿದೆ. (ಆಧಾರ : ಸಮಯ ನಿರಾಮಯ ಪಂಚಾಂಗ)

ಪ್ರಾಣಾಯಾಮದ ಲಾಭಗಳು !

೧. ನಿತ್ಯ ಪ್ರಾಣಾಯಾಮದಿಂದ ಶರೀರದಲ್ಲಿನ ೭೨ ಸಾವಿರ ನಾಡಿಗಳ ಶುದ್ಧಿಯಾಗುತ್ತದೆ.

೨. ಪ್ರಾಣಾಯಾಮದಿಂದ ಮನಃಶಾಂತಿ ದೊರೆಯುವುದರಿಂದ ದೇಹಪ್ರಲೋಭನೆ ಕಡಿಮೆ ಯಾಗಿ ಆತ್ಮದ ಚೈತನ್ಯದ ಅನುಭವವಾಗುತ್ತದೆ.

೩. ಪ್ರಾಣಾಯಾಮದ ಜೊತೆಗೆ ಆಹಾರ-ವಿಹಾರಗಳಲ್ಲಿ ಕಾಲಕಾಲಕ್ಕೆ ವಿವೇಕಬುದ್ಧಿಯಿಂದ ಮನಸ್ಸನ್ನು ಸಂಯಮದಲ್ಲಿಟ್ಟರೆ ಇಂದ್ರಿಯಗಳೂ ಸಂಯಮಗೊಳ್ಳುತ್ತವೆ. ಈ ವಿವೇಕಬುದ್ಧಿಗೆ ದೃಢ ಇಚ್ಛಾಶಕ್ತಿಯ ಪ್ರೇರಣೆ ಸಿಗುತ್ತದೆ.

೪. ಪ್ರಾಣಾಯಾಮವು ಶರೀರದ ಮೂಲಕ ಆಚಾರ-ವಿಚಾರಗಳಲ್ಲಿ ಆಮೂಲಾಗ್ರವಾದ ಬದಲಾವಣೆಯ ತಾನಾಗಿಯೇ ಘಟಿಸುತ್ತದೆ. ನಿತ್ಯ ಪ್ರಾಣಾಯಾಮದಿಂದ ಅಜ್ಞಾನರೂಪಿ ಅಂಧಕಾರವು ದೂರವಾಗಿ ಜ್ಞಾನರೂಪಿ ಪ್ರಕಾಶದ ಅನುಭೂತಿ ಬರುತ್ತದೆ.

ಪ್ರಾಣಾಯಾಮದ ಇತರ ಲಾಭಗಳು !

೧. ಶ್ವಾಸೋಚ್ಛ್ವಾಸ ನಿಯಂತ್ರಿಸಲು ಸಹಾಯಕ.

೨. ಶ್ವಾಸಕೋಶಗಳ (ಪುಫ್ಫುಸಗಳ) ಕ್ಷಮತೆ ಮತ್ತು ಸ್ಥಿತಿಸ್ಥಾಪಕತ್ವ (ಮಿದವುತನ) ಹೆಚ್ಚುತ್ತದೆ.

೩. ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

೪. ಹಠಯೋಗಕ್ಕನುಸಾರ ಯೋಗ್ಯ ರೀತಿಯಲ್ಲಿ ಪ್ರಾಣಾಯಾಮ ಮಾಡಿದರೆ ಅನೇಕ ರೋಗಗಳು ಇಲ್ಲವಾಗುತ್ತವೆ.

೫. ಪ್ರಾಣಶಕ್ತಿ (ಊರ್ಜೆ) ಹೆಚ್ಚಾಗಿ ವ್ಯಕ್ತಿಯು ಹೆಚ್ಚು ಉತ್ಸಾಹಿ ಮತ್ತು ಗಟ್ಟಿಮುಟ್ಟಾಗುತ್ತಾನೆ.

೬. ಮಾನಸಿಕ ಸ್ವಾಸ್ಥ್ಯವು ಉತ್ತಮಗೊಳ್ಳುತ್ತದೆ. ಮನಸ್ಸು ಮತ್ತು ಚಿತ್ತವೃತ್ತಿಯ ಮೇಲೆ ನಿಯಂತ್ರಣ ಸಿಗುತ್ತದೆ. ಇದರಿಂದಾಗಿ ಒತ್ತಡ ಮತ್ತು ಚಿಂತೆಗಳು ಕಡಿಮೆಯಾಗಿ ಮಾನಸಿಕ ಶಾಂತಿ, ಸಮತೋಲನ ಹಾಗೂ ಸ್ಥಿರತೆ ಪ್ರಾಪ್ತವಾಗುತ್ತದೆ.

ಯೋಗಾಭ್ಯಾಸ ಅಥವಾ ಪ್ರಾಣಾಯಾಮ ಮಾಡುವಾಗ ಬಳಸಲಾಗುವ ಸಂಜ್ಞೆಗಳು ಮತ್ತು ಕೃತಿಗಳು !

೧. ಪೂರಕ : ಶ್ವಾಸ ತೆಗೆದುಕೊಳ್ಳುವುದು – ಪ್ರಾಣಾಯಾಮ ಮಾಡಲು ಅರಿವಿನಿಂದ, ಸುನಿಯಂತ್ರಿತವಾಗಿ, ದೀರ್ಘವಾಗಿ; ಆದರೆ ಯೋಗ್ಯ ಪ್ರಮಾಣದಲ್ಲಿ (ನಿಶ್ಚಿತ ಕಾಲಾವಧಿಯಲ್ಲಿ) ಶ್ವಾಸವನ್ನು ತೆಗೆದುಕೊಳ್ಳಲಾಗುತ್ತದೆ. ಅದಕ್ಕೆ ಪೂರಕ ಎಂದು ಹೇಳುತ್ತಾರೆ.

೨. ರೇಚಕ : ಎಂದರೆ ಶ್ವಾಸವನ್ನು ಬಿಡುವುದು – ಪ್ರಾಣಾಯಾಮ ಮಾಡಲು ಅರಿವಿನಿಂದ, ಸುನಿಯಂತ್ರಿತವಾಗಿ, ದೀರ್ಘವಾಗಿ; ಆದರೆ ಯೋಗ್ಯ ಪ್ರಮಾಣದಲ್ಲಿ (ನಿಶ್ಚಿತ ಕಾಲಾವಧಿಯಲ್ಲಿ) ಶ್ವಾಸವನ್ನು ಬಿಡಲಾಗುತ್ತದೆ. ಅದಕ್ಕೆ ರೇಚಕ ಎಂಬ ಸಂಜ್ಞೆ ಇದೆ. ಯೋಗಾಭ್ಯಾಸ ಮಾಡುವಾಗ ಯಾವಾಗಲೂ ಪೂರಕ ಕ್ರಿಯೆಯ ದುಪ್ಪಟ್ಟು ಸಮಯ ರೇಚಕ ಮಾಡಲು ಇರಬೇಕು.

೩. ಕುಂಭಕ : ಎಂದರೆ ಶ್ವಾಸವನ್ನು ತಡೆದು ಹಿಡಿಯುವುದು – ಪೂರಕ ಅಥವಾ ರೇಚಕ ಮಾಡಿದ ನಂತರ ಕೆಲವು ಕ್ಷಣ ಶ್ವಾಸವನ್ನು ತಡೆದು ಹಿಡಿಯಲಾಗುತ್ತದೆ. ಅದಕ್ಕೆ ಕುಂಭಕ ಎನ್ನಲಾಗುತ್ತದೆ. ಶ್ವಾಸವನ್ನು ತೆಗೆದುಕೊಂಡು ಅದನ್ನು ತಡೆದು ಹಿಡಿಯುವುದು ಅಂತಕುಂಭಕ ಮತ್ತು ಶ್ವಾಸವನ್ನು ಬಿಟ್ಟ ನಂತರ ಅದನ್ನು ಹೊರಗಡೆಯೇ ತಡೆದು ಹಿಡಿಯುವುದು ಬಾಹ್ಯಕುಂಭಕ.

೪. ಬಂಧಗಳನ್ನು ಹಚ್ಚುವುದು : ಮೂಲಬಂಧ (ಗುದದ್ವಾರವನ್ನು ಆಕುಂಚನಗೊಳಿಸುವುದು), ಉಡ್ಡಿಯಾನ ಬಂಧ (ನಾಭಿಯ ಬಳಿಯ ಹೊಟ್ಟೆಯ ಕೆಳಭಾಗವನ್ನು ಒಳಕ್ಕೆ ಎಳೆಯುವುದು) ಮತ್ತು ಜಾಲಂಧರ ಬಂಧ (ಗದ್ದವನ್ನು ಕುತ್ತಿಗೆಯ ಕೆಳಗಿನ ಭಾಗದ ತಗ್ಗಿಗೆ ತಗಲಿಸಿ ನಾಲಿಗೆಯನ್ನು ಮೇಲೆತ್ತಿ ನೆತ್ತಿಗೆ ತಾಗಿಸುವುದು) ಇವು ಮೂರು ಬಂಧಗಳಾಗಿವೆ.

(ಆಧಾರ : ಸಮಯ ನಿರಾಮಯ ಪಂಚಾಂಗ)