ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ

ತೀರ್ಪು ತನ್ನ ಪರವಾಗಿ ಬರಲೆಂದು ಮಾಡಿದ ಕೃತ್ಯ

ಚಿಕ್ಕಬಳ್ಳಾಪುರ – ತೀರ್ಪು ತನ್ನ ಪರವಾಗಿ ಬರಲೆಂದು ಮಹಿಳೆಯೊಬ್ಬಳು ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಮಂಜುಳಾ (65 ವರ್ಷ) ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ವಲಸಣ್ಣ ಗಲ್ಲಿಯಲ್ಲಿ ವಾಸಿಸುವ ಮಂಜುಳಾ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಕುರ್ಚಿಯ ಮೇಲೆ ಮಂತ್ರೋಚ್ಚಾರಣೆಯೊಂದಿಗೆ ಬಿಳಿ ಸಾಸಿವೆ ಹಾಕಿ ಮಾಟಮಂತ್ರ ಮಾಡಿದ ಆರೋಪ ಎದುರಿಸುತ್ತಿದ್ದರು. ಈ ಇಡೀ ಘಟನೆಯು ನ್ಯಾಯಾಲಯದ ‘ಸಿಸಿಟಿವಿ’ (CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ ಅವರು ನೀಡಿದ ದೂರಿನ ಮೇರೆಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ‘ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಮತ್ತು ಮಾಟಮಂತ್ರ ತಡೆ ಕಾಯ್ದೆ-2017’ ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಮಂಜುಳಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಂಪಾದಕೀಯ ನಿಲುವು

ಈ ಬಗ್ಗೆ ಮೂಢನಂಬಿಕೆ ನಿರ್ಮೂಲನಕಾರರು ಏನು ಹೇಳುತ್ತಾರೆ?