ಉತ್ತರ ಪ್ರದೇಶದ ಮಥುರಾದಲ್ಲಿ ‘ಹೃದಯದಲ್ಲಿ ಬಾಬರ್, ಮುಖದಲ್ಲಿ ರಾಮ’ ಎಂಬ ಫಲಕ ಅಳವಡಿಸಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕರು ಆಕ್ರೋಶ! : UP Poster Row

ಫಲಕದಲ್ಲಿ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಅವರ ಚಿತ್ರ!

ಮಥುರಾ (ಉತ್ತರ ಪ್ರದೇಶ) – ಇಲ್ಲಿನ ಗೋವರ್ಧನ್ ವೃತ್ತದ ಸಮೀಪ ಫಲಕವೊಂದರಲ್ಲಿ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ದುಂಡು ಟೋಪಿ ಧರಿಸಿರುವಂತೆ ತೋರಿಸಿ, ‘ಹೃದಯದಲ್ಲಿ ಬಾಬರ್, ಮುಖದಲ್ಲಿ ರಾಮ’ ಎಂದು ಬರೆಯಲಾದ ಫಲಕ ಕಂಡುಬಂದಿದೆ. ಇದರಿಂದ ಸಮಾಜವಾದಿ ಪಕ್ಷದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ, ಈ ಫಲಕದ ಮೇಲೆ ಅಖಿಲೇಶ್ ಯಾದವ್ ಅವರು ಈ ಹಿಂದೆ ಹೇಳಿದ್ದ ‘ಅಯೋಧ್ಯೆಯಲ್ಲಿ ರಾತ್ರಿಯ ಕತ್ತಲಿನಲ್ಲಿ ಮೂರ್ತಿಗಳನ್ನು ಇಡಲಾಗಿತ್ತು’ ಎಂಬ ವಾಕ್ಯವನ್ನು ಮುದ್ರಿಸಲಾಗಿದೆ. ಇದಲ್ಲದೆ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಹಿಂದೆ ನೀಡಿದ್ದ ‘ಬಾಬರಿಗಾಗಿ ಅಯೋಧ್ಯೆಯಲ್ಲಿ ಇನ್ನು ಹೆಚ್ಚಿನ ಕರ ಸೇವಕರನ್ನು ಕೊಲ್ಲಬೇಕಾಗಿದ್ದರೂ ಕೊಲ್ಲುತ್ತಿದ್ದೆವು,’ ಎಂಬ ಹೇಳಿಕೆಯನ್ನೂ ಮುದ್ರಿಸಲಾಗಿದೆ. ಅಖಿಲೇಶ್ ಯಾದವ್ ಅವರು ರಾಮಮಂದಿರದಲ್ಲಿ ದಾನದ ಹಣ ಕಳ್ಳತನವಾಗಿದೆ ಎಂದು ಮೊದಲು ಆರೋಪಿಸಿದ್ದರು. ಆ ಬಗ್ಗೆ ಅವರು ಸತತವಾಗಿ ಆರೋಪ ಮಾಡುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರತ್ಯುತ್ತರ ನೀಡಲು ಈ ಫಲಕವನ್ನು ಅಳವಡಿಸಲಾಗಿದೆ.

ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ವೀರೇಂದ್ರ ಯಾದವ್ ಅವರು, ಈ ಪ್ರಕರಣದಲ್ಲಿ ನಾವು ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಿದ್ದೇವೆ, ಎಂದು ಹೇಳಿದ್ದಾರೆ.