ಶ್ರೀಕೃಷ್ಣ ಜನ್ಮಭೂಮಿ ಮುಕ್ತಿಗಾಗಿ ಆಗಸ್ಟ್ 9 ರಂದು ಕರಸೇವೆ !

  • ​‘ಈಗಲ್ಲದಿದ್ದರೆ, ಇನ್ನೆಂದಿಗೂ ಇಲ್ಲ !’ - ಹರಿದ್ವಾರದಲ್ಲಿ 600 ರಿಂದ 700 ಸಂತರ ಸಭೆಯಲ್ಲಿ ಘೋಷಣೆ

  • ಪ್ರಕರಣವು ನ್ಯಾಯಾಲಯದಲ್ಲಿದೆ ಎಂದು ಹೇಳಿ ಕರಸೇವೆಯಿಂದ ದೂರ ಸರಿದ ವಿಶ್ವಹಿಂದೂ ಪರಿಷತ್ತು

  • ಉತ್ತರ ಪ್ರದೇಶ ಸರಕಾರದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಇಲ್ಲ

​(‘ಕರಸೇವೆ’ ಎಂದರೆ ಶ್ರೀಕೃಷ್ಣ ಜನ್ಮಭೂಮಿಯನ್ನು ಪಡೆದುಕೊಳ್ಳುವುದಕ್ಕಾಗಿ ನಡೆಯುವ ಹೋರಾಟ)

ಮಥುರಾ (ಉತ್ತರ ಪ್ರದೇಶ) – ಇಲ್ಲಿನ ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸಂತರು ಮುಂಬರುವ ಆಗಸ್ಟ್ 9 ರಂದು ಇಲ್ಲಿ ಕರಸೇವೆ ನಡೆಸುವುದಾಗಿ ಘೋಷಿಸಿದ್ದಾರೆ. ಇಲ್ಲಿ ಶ್ರೀಕೃಷ್ಣನ ಜನ್ಮ ಸ್ಥಳದಲ್ಲಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ. ಸಂತರ ಈ ಕರೆಗೆ ವಿಶ್ವ ಹಿಂದೂ ಪರಿಷತ್ ಅಧಿಕೃತವಾಗಿ ದೂರ ಉಳಿದಿದೆ. ವಿಶ್ವ ಹಿಂದೂ ಪರಿಷತ್ ಬ್ರಜ್ ಪ್ರಾಂತ ಅಧ್ಯಕ್ಷ ಕನ್ಹಯ್ಯಾಲಾಲ್ ಅಗರವಾಲ್ ಅವರು, ಈ ಪ್ರಕರಣವು ಸದ್ಯ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀನವಾಗಿದೆ, ಆದ್ದರಿಂದ ಸಂತರು ಕಾನೂನು ಪ್ರಕ್ರಿಯೆಯನ್ನು ಗೌರವಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ. (ಶ್ರೀರಾಮಜನ್ಮಭೂಮಿಯ ಪ್ರಕರಣವು ನ್ಯಾಯಾಲಯದಲ್ಲಿದ್ದಾಗಲೂ ವಿಶ್ವ ಹಿಂದೂ ಪರಿಷತ್ ಅಲ್ಲಿ ಕರಸೇವೆ ಮಾಡುವುದಾಗಿ ಘೋಷಿಸಿತ್ತು. ಆದ್ದರಿಂದ ಶ್ರೀಕೃಷ್ಣ ಜನ್ಮಭೂಮಿಯ ಕುರಿತಾದ ಅವರ ನಿಲುವು ಯಾರಿಗಾದರೂ ಭಿನ್ನವಾಗಿ ಕಂಡುಬಂದರೆ, ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ! – ಸಂಪಾದಕರು) ಭಾಜಪದಿಂದ ಈ ಕರೆಯ ಕುರಿತು ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಹಾಗೆಯೇ ಉತ್ತರ ಪ್ರದೇಶ ಸರಕಾರ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಚಿತ್ರಗುಪ್ತ ಪೀಠಾಧೀಶ್ವರ ಸ್ವಾಮಿ ಸಚ್ಚಿದಾನಂದ ಮಹಾರಾಜ್ ಅವರು ಈ ಕರಸೇವೆಯಲ್ಲಿ ಭಾಗವಹಿಸಲು ವಿವಿಧ ರಾಜಕೀಯ ಪಕ್ಷಗಳೂ ಒಟ್ಟಾಗಬೇಕು ಎಂದು ಕರೆ ನೀಡಿದ್ದಾರೆ. ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಮಹಂತ್ ರವೀಂದ್ರ ಪುರಿ ಅವರು ಈ ಕರಸೇವೆಗೆ ಬೆಂಬಲ ನೀಡಿದ್ದು, ಎಲ್ಲಾ ಭಕ್ತರಿಗೆ ‘ಮಥುರೆಗೆ ನಡೆಯಿರಿ’ ಎಂದು ಕರೆ ನೀಡಿದ್ದಾರೆ. ಕಾಳಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಆನಂದ ಸ್ವರೂಪ ಅವರು ಆಗಸ್ಟ್ 9 ರ ಕರಸೇವೆಯ ಬೆಂಬಲಕ್ಕಾಗಿ ದೇಶಾದ್ಯಂತದ ಸಂತರನ್ನು ಒಗ್ಗೂಡಲು ಕರೆ ನೀಡಿದ್ದಾರೆ. ಹರಿದ್ವಾರದಲ್ಲಿ ನಡೆದ ಪ್ರಮುಖ ಸಭೆಯ ನಂತರ ಸಂತರು ‘ಈಗಲ್ಲದಿದ್ದರೆ, ಇನ್ನೆಂದಿಗೂ ಇಲ್ಲ’ ಎಂದು ಘೋಷಿಸಿದರು. ಈ ಸಭೆಯಲ್ಲಿ ಮಹಂತ ರವೀಂದ್ರ ಪುರಿ, ಆನಂದ ಅಖಾಡದ ಮಹಾಮಂಡಲೇಶ್ವರ ಜಗದ್ಗುರು ಸ್ವಾಮಿ ಸಚ್ಚಿದಾನಂದ ಮತ್ತು ಸ್ವಾಮಿ ಬಾಲಕಾನಂದ ಪ್ರಮುಖವಾಗಿ ಉಪಸ್ಥಿತರಿದ್ದರು.

ಸ್ವಾಮಿ ಸಚ್ಚಿದಾನಂದ ಮಹಾರಾಜ್ ಅವರು ಮಥುರೆಯ ನಿರ್ಮೋಹಿ ಅಖಾಡದಲ್ಲಿ ಸಂತರೊಂದಿಗೆ ಸಭೆ ನಡೆಸಿ ಕರಸೇವೆಯ ಕಾರ್ಯತಂತ್ರವನ್ನು ಸಿದ್ಧಪಡಿಸಿದ್ದಾರೆ. ನಿರ್ಮೋಹಿ ಅಖಾಡದ ಸಂತರೂ ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಈ ಸಭೆಯ ನಂತರ ಕರಸೇವೆಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನೂ ಪ್ರಸಾರ ಮಾಡಲಾಗಿದೆ. ಸ್ವಾಮಿ ಸಚ್ಚಿದಾನಂದ ಮಹಾರಾಜರು ಮಾತನಾಡಿ, ಆಗಸ್ಟ್ ಕ್ರಾಂತಿಯ ತಿಂಗಳು ನಾವು 1990 ರಲ್ಲಿ ಭಗವಾನ ಶ್ರೀ ರಾಮಲಲ್ಲಾಗಾಗಿ ನಡೆದ ಕರಸೇವೆಯ ಮಾದರಿಯಲ್ಲೇ ಶ್ರೀಕೃಷ್ಣನ ಮುಕ್ತಿಗಾಗಿ ಆಂದೋಲನದ ಸಿದ್ಧತೆ ಮಾಡಿಕೊಂಡಿದ್ದೇವೆ. ಆರಂಭದಲ್ಲಿ ‘ಬೃಜವಾಸಿ ಕರಸೇವೆ’ ನಡೆಯಲಿದೆ. ಬ್ರಜ್‌ ನ ಜನರು ಬಾಂಕೆ ಬಿಹಾರಿಗಾಗಿ ಒಂದಾಗುತ್ತಾರೆ ಮತ್ತು ಅದರ ನಂತರ ಇತರ ಸ್ಥಳಗಳ ಜನರು ಬಂದು ಶ್ರೀಕೃಷ್ಣ ಜನ್ಮಭೂಮಿಯನ್ನು ಮುಕ್ತಗೊಳಿಸುತ್ತಾರೆ ಎಂದು ಹೇಳಿದರು.

ಅಖಿಲೇಶ ಯಾದವ ಅವರೂ ಆಂದೋಲನದ ಭಾಗವಾಗಬೇಕು! – ಸೀತಾರಾಮ ದಾಸ ಮಹಾರಾಜ

ನಿರ್ಮೋಹಿ ಅಖಾಡದ ರಾಷ್ಟ್ರೀಯ ವಕ್ತಾರ ಸಂತ ಸೀತಾರಾಮ ದಾಸ ಮಹಾರಾಜ್ ಅವರು, ಶ್ರೀಕೃಷ್ಣ ಜನ್ಮಭೂಮಿಯ ಮುಕ್ತಿಗಾಗಿ ಎಲ್ಲಾ ಸನಾತನ ಹಿಂದೂಗಳು ಒಂದಾಗಬೇಕು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ ಅವರು ಶ್ರೀಕೃಷ್ಣನ ವಂಶಸ್ಥರಾಗಿದ್ದಾರೆ. ಆದ್ದರಿಂದ ಅವರೂ ಈ ಆಂದೋಲನದ ಭಾಗವಾಗಬೇಕು ಎಂದು ಹೇಳಿದರು.

ಮಥುರೆಯ ಕರಸೇವೆಯ ಘೋಷಣೆಗೆ ಅಯೋಧ್ಯೆಯ ಸಂತ ಸಮಾಜದ ಬೆಂಬಲ

ಅಯೋಧ್ಯೆಯ ಸಂತ ಸಮಾಜವು ಕರಸೇವೆಯ ಘೋಷಣೆಯನ್ನು ಸ್ವಾಗತಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣವಾದ ಮಾದರಿಯಲ್ಲೇ, ಶ್ರೀಕೃಷ್ಣ ಜನ್ಮಭೂಮಿಯಲ್ಲೂ ಭವ್ಯ ಮಂದಿರ ನಿರ್ಮಾಣವಾಗಲಿದೆ ಎಂಬ ವಿಶ್ವಾಸವನ್ನು ಸಾಧು-ಸಂತರು ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ಸಾಕೇತ ಭವನದ ಮಹಂತ ಸೀತಾರಾಮ ದಾಸ ಮಾತನಾಡಿ, ಕರಸೇವಕರು ಮತ್ತು ಸಂತರು ಅಯೋಧ್ಯೆಯಲ್ಲಿ ಕರಸೇವೆ ನಡೆಸಿ ವಿವಾದಿತ ಕಟ್ಟಡವನ್ನು ಉರುಳಿಸಿದ ಮಾದರಿಯಲ್ಲೇ, ಅಂತಹದೇ ಆದ ಆಂದೋಲನದ ಸಮಯ ಈಗ ಬಂದಿದೆ. ಇದು ಸನಾತನಗಳ ಶ್ರದ್ಧೆಯ ವಿಷಯವಾಗಿದೆ ಎಂದು ಹೇಳಿದರು.

ಶ್ರೀರಾಮ ಜನ್ಮಭೂಮಿಯ ಮುಖ್ಯ ಅರ್ಚಕ ಮಹಂತ ಸತ್ಯೇಂದ್ರ ದಾಸ ಜಿ ಮಹಾರಾಜರು ಮಾತನಾಡಿ, ಸಂತರು ಹೇಗೆ ಶ್ರೀರಾಮ ಜನ್ಮಭೂಮಿ ಆಂದೋಲನವನ್ನು ಪ್ರಾರಂಭಿಸಿದ್ದರು ಮತ್ತು ಇಂದು 500 ವರ್ಷಗಳ ಕಳಂಕವನ್ನು ಅಳಿಸಿ ಅಯೋಧ್ಯೆಯಲ್ಲಿ ಭವ್ಯ ಮಂದಿರ ಸಾಕಾರಗೊಂಡಿದೆಯೋ, ಅದೇ ಭಾವನೆಯಿಂದ ಅಯೋಧ್ಯೆಯ ಸಂತರು ದೇಶಾದ್ಯಂತದ ಸಂತರೊಂದಿಗೆ ಮಥುರೆಗಾಗಿಯೂ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.
ಪ್ರಸಿದ್ಧ ಕಥಾವಾಚಕ ಚಂದ್ರಾಂಶು ಮಹಾರಾಜರು ಮಾತನಾಡಿ, ನಾವು ಯಾವಾಗಲೂ ‘ಅಯೋಧ್ಯಾ ತೋ ಕೇವಲ ಝಾಂಕಿ ಹೈ, ಕಾಶಿ-ಮಥುರಾ ಬಾಕಿ ಹೈ’ ಎಂದು ಘೋಷಣೆಗಳನ್ನು ಕೂಗುತ್ತಾ ಬಂದಿದ್ದೇವೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಿದೆ ಮತ್ತು ಈಗ ಮುಂದಿನ ಹೆಜ್ಜೆ ಪುರುಷೋತ್ತಮ ಶ್ರೀಕೃಷ್ಣನ ಜನ್ಮಭೂಮಿಗಾಗಿ ಆಗಿದೆ ಎಂದರು.

ಸರಕಾರವು ಮಂದಿರ ನಿರ್ಮಾಣದ ಘೋಷಣೆ ಮಾಡಿದರೆ ಕರಸೇವೆಯ ಅಗತ್ಯವಿರುವುದಿಲ್ಲ!

ಸ್ವಾಮಿ ಆನಂದ ಸ್ವರೂಪ ಅವರು, ಆಗಸ್ಟ್ 9 ನೇ ತಾರೀಖನ್ನು ದೇಶದಲ್ಲಿ ‘ಕ್ರಾಂತಿ ದಿನ’ ಎಂದು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನ ಅತ್ಯಂತ ಪ್ರಮುಖವಾಗಿದೆ. ಒಂದು ವೇಳೆ ಸರಕಾರವು ಇದಕ್ಕೂ ಮುನ್ನವೇ ಮಂದಿರ ನಿರ್ಮಾಣದ ಅಧಿಕೃತ ಘೋಷಣೆ ಮಾಡಿದರೆ ಕರಸೇವೆಯ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈಗಾಗಲೇ ಶ್ರೀಕೃಷ್ಣ ಮಂದಿರ ಖಂಡಿತವಾಗಿಯೂ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಆಗಸ್ಟ್ 9 ಕ್ಕೂ ಮುನ್ನ ಇದರ ದಿನಾಂಕ ಘೋಷಣೆಯಾಗದಿದ್ದರೆ, ಸಂತ ಸಮಾಜವು ಕರಸೇವೆಯ ಮಾಧ್ಯಮದ ಮೂಲಕ ಶಾಂತಿಯುತ ಮಾರ್ಗದಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಲಿದೆ. ಈ ಕರಸೇವೆಗಾಗಿ ಕೇವಲ ಹರಿದ್ವಾರದಿಂದಲೇ 600 ರಿಂದ 700 ಸಂತರು ಮಥುರೆಗೆ ತೆರಳಲಿದ್ದಾರೆ.

ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ನ್ಯಾಯಾಧೀನ

​ಶ್ರೀಕೃಷ್ಣ ಜನ್ಮಭೂಮಿ ವಿವಾದವು ಸದ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ 18 ಮೊಕದ್ದಮೆಗಳ ವಿಚಾರಣೆಯು ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿಯೂ ನಡೆಯುತ್ತಿದ್ದು, ಇದರಲ್ಲಿ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸಲು ಮತ್ತು ಮಂದಿರದ ಪುನರ್ ಸ್ಥಾಪನೆಗೆ ಬೇಡಿಕೆ ಇಡಲಾಗಿದೆ.