3 ವರ್ಷದ ಮಗುವಿನ ಮೇಲಿನ ಅತ್ಯಾಚಾರ ಪ್ರಕರಣ; ದಂಡದ ಬಳಿಕ ಬಿಡುಗಡೆ : Child Abuse Verdict

ಜಾರ್ಖಂಡ್‌: ಗ್ರಾಮ ಪಂಚಾಯಿತಿಯೊಂದರ ಆಘಾತಕಾರಿ ನಿರ್ಧಾರ

ರಾಂಚಿ (ಜಾರ್ಖಂಡ್): ಗುಮ್ಲಾ ಜಿಲ್ಲೆಯಲ್ಲಿ ಕೇವಲ ೩ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ನಂತರ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸುವ ಬದಲು ಗ್ರಾಮದ ಪಂಚಾಯಿತಿಯು ಆತನಿಂದ ೧ ಲಕ್ಷ ರೂಪಾಯಿ ದಂಡ ವಸೂಲಿ ಮಾಡಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನಿಸಿದೆ. ಅಷ್ಟೇ ಅಲ್ಲದೆ, ಈ ಹಣದ ಕೆಲವು ಭಾಗವನ್ನು ಮದ್ಯ ಮತ್ತು ಚಿಕನ್ ಪಾರ್ಟಿಗಾಗಿ ಖರ್ಚು ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಆರೋಪಿಗೆ ಬೇಡಿ ತೊಡಸಿದ್ದಾರೆ.

೧. ಆರೋಪಿ ಸುನಿಲ್ ಲೋಹ್ರಾ ಮಧ್ಯಾಹ್ನ ಸುಮಾರು ೪ ಗಂಟೆಗೆ ಸಂತ್ರಸ್ತ ಬಾಲಕಿಯ ಮನೆಗೆ ತಲುಪಿದ್ದನು. ಆ ಸಮಯದಲ್ಲಿ ಮಗು ತನ್ನ ತಾಯಿಯೊಂದಿಗಿದ್ದಳು. ‘ಮನೆಯ ಕೆಲಸ ಮುಗಿಯುವವರೆಗೆ ಮಗುವನ್ನು ನೋಡಿಕೊಳ್ಳುತ್ತೇನೆ’ ಎಂದು ಹೇಳಿ ಆರೋಪಿ ಮಗುವನ್ನು ಕೋಣೆಯೊಂದಕ್ಕೆ ಕರೆದೊಯ್ದನು.

೨. ಸ್ವಲ್ಪ ಸಮಯದ ನಂತರ ಮಗುವಿನ ಅಳುವ ಧ್ವನಿ ಕೇಳಿ ತಾಯಿ ಸ್ಥಳಕ್ಕೆ ಧಾವಿಸಿದಾಗ, ಮಗು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಲೈಂಗಿಕ ದೌರ್ಜನ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳೆ ಕಿರುಚಾಡಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ.

೩. ತದನಂತರ, ಗ್ರಾಮದ ಕೆಲವು ನಿವಾಸಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಸಂತ್ರಸ್ತೆಯ ಕುಟುಂಬದ ಮೇಲೆ ಒತ್ತಡ ಹೇರಿದರು. ಈ ಸಂಬಂಧ ಗ್ರಾಮ ಪಂಚಾಯಿತಿಯ ಸಭೆ ಕರೆಯಲಾಗಿತ್ತು.

೪. ಈ ಸಭೆಯಲ್ಲಿ ಆರೋಪಿಗೆ ೧ ಲಕ್ಷ ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಯಿತು. ಇದಾದ ಬಳಿಕ ಆರೋಪಿ ಗ್ರಾಮ ಪಂಚಾಯಿತಿಗೆ ೨೦,೦೦೦ ರೂಪಾಯಿ ಪಾವತಿಸಿದ್ದು, ‘ಉಳಿದ ೮೦,೦೦೦ ರೂಪಾಯಿಗಳನ್ನು ಒಂದು ವಾರದಲ್ಲಿ ಪಾವತಿಸುತ್ತೇನೆ’ ಎಂದು ಹೇಳಿದನು.

೫. ಗ್ರಾಮ ಪಂಚಾಯಿತಿಯು ಈ ಹಣದ ಕೆಲವು ಭಾಗವನ್ನು ಮದ್ಯ ಮತ್ತು ಚಿಕನ್ ಪಾರ್ಟಿಗಾಗಿ ಖರ್ಚು ಮಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

೬. ಗ್ರಾಮದ ವ್ಯಕ್ತಿಯೊಬ್ಬರು ಈ ಇಡೀ ಘಟನೆಯನ್ನು ಸ್ಥಳೀಯ ಪೊಲೀಸರ ಗಮನಕ್ಕೆ ತಂದರು. ತಕ್ಷಣ ಪೊಲೀಸರು ಗ್ರಾಮಕ್ಕೆ ಧಾವಿಸಿ ಸಂತ್ರಸ್ತ ಮಗುವಿನ ತಾಯಿಯ ದೂರನ್ನು ದಾಖಲಿಸಿಕೊಂಡರು. ತಾಯಿಯ ಹೇಳಿಕೆಯ ಆಧಾರದ ಮೇಲೆ ಆರೋಪಿ ಸುನಿಲ್ ಲೋಹ್ರಾ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಕಾಮುಕ ಆರೋಪಿ ಹಾಗೂ ಆತನನ್ನು ಮುಕ್ತವಾಗಿ ಬಿಟ್ಟ ಗ್ರಾಮ ಪಂಚಾಯಿತಿಯ ಸಂಬಂಧಿತರಿಗೂ ಕೂಡ ಕಠಿಣ ಶಿಕ್ಷೆಯಾಗುವುದು ಅತ್ಯಗತ್ಯ!