ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡಿ! – ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ದಿಂದ ಅಂಚೆ ಕಚೇರಿಗೆ ಆದೇಶ : Postal Parcel Stolen

ಅಂಚೆ ಪಾರ್ಸೆಲ್ ಹರಿದು ಒಳಗಿದ್ದ ವಸ್ತುಗಳು ನಾಪತ್ತೆಯಾದ ಪ್ರಕರಣ

ಪ್ರತಿನಿಧಿಕ ಚಿತ್ರ

ಫಿರೋಜ್‌ಪುರ (ಪಂಜಾಬ್) – ಅಂಚೆ ಪಾರ್ಸೆಲ್ ಹರಿದು ಒಳಗಿದ್ದ ವಸ್ತುಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ‘ಫಿರೋಜ್‌ಪುರ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ’ವು ಸಂಬಂಧಪಟ್ಟ ಗ್ರಾಹಕನಿಗೆ 40 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಅಂಚೆ ಇಲಾಖೆಗೆ ಆದೇಶಿಸಿದೆ. ಇದರಲ್ಲಿ ನಾಪತ್ತೆಯಾದ ಬಟ್ಟೆಗಳ ಬೆಲೆ 35,360 ರೂಪಾಯಿ ಮತ್ತು ಕಾನೂನು ವೆಚ್ಚದ ಬಾಬ್ತು 5 ಸಾವಿರ ರೂಪಾಯಿಗಳು ಸೇರಿವೆ.

‘ಫಿರೋಜ್‌ಪುರ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗ’ವು, “ಅಂಚೆ ಪಾರ್ಸೆಲ್ ತೊಂದರೆಗೊಳಗಾಗುವುದು ಸೇವೆಯಲ್ಲಿನ ದೊಡ್ಡ ನ್ಯೂನತೆಯಾಗಿದೆ. ಇದರಿಂದ ದೂರುದಾರರಿಗೆ ಮಾನಸಿಕ ಕಿರಿಕಿರಿ ಉಂಟಾಗಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಆದ್ದರಿಂದ ದೂರುದಾರರ ಮಾನಸಿಕ ತೊಂದರೆ ಮತ್ತು ನ್ಯಾಯಾಲಯದ ವೆಚ್ಚಕ್ಕೆ ಸೂಕ್ತ ಪರಿಹಾರವನ್ನು ನೀಡಲು ಅಂಚೆ ಇಲಾಖೆಯೇ ಜವಾಬ್ದಾರಿಯಾಗಿದೆ” ಎಂದು ಹೇಳಿದೆ.

ಏನಿದು ಘಟನೆ?

ದೂರುದಾರರ ಪ್ರಕಾರ, ಅವರ ಮಗ ಫಿರೋಜ್‌ಪುರ ಕ್ಯಾಂಟೋನ್ಮೆಂಟ್‌ನ ಮುಖ್ಯ ಅಂಚೆ ಕಚೇರಿಯಿಂದ ಬೀದರ್‌ನ ಅಂಚೆ ಕಚೇರಿಗೆ ಪಾರ್ಸೆಲ್ ಒಂದನ್ನು ಕಳುಹಿಸಿದ್ದನು. ಕಳುಹಿಸುವಾಗ ಈ ಪಾರ್ಸೆಲ್‌ನ ತೂಕ 17.2 ಕೆ.ಜಿ ಇತ್ತು ಮತ್ತು ಅದರಲ್ಲಿ 35,360 ರೂಪಾಯಿ ಮೌಲ್ಯದ ಬಟ್ಟೆಗಳಿದ್ದವು. ಆದರೆ, ಈ ಪಾರ್ಸೆಲ್ ಬೀದರ್ ಅಂಚೆ ಕಚೇರಿಗೆ ತಲುಪಿದಾಗ ಅದು ಸಂಪೂರ್ಣವಾಗಿ ಹರಿದ ಸ್ಥಿತಿಯಲ್ಲಿತ್ತು ಮತ್ತು ಅದರ ತೂಕ ಕೇವಲ 8.39 ಕೆ.ಜಿ ಇತ್ತು. ಇದರಿಂದಾಗಿ ಸಂಬಂಧಪಟ್ಟ ವ್ಯಕ್ತಿಯು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು.

ನಾಪತ್ತೆಯಾದ ವಸ್ತುಗಳ ಹುಡುಕಾಟಕ್ಕಾಗಿ ಮತ್ತು ಪರಿಹಾರಕ್ಕಾಗಿ ದೂರುದಾರರು ಅಂಚೆ ಇಲಾಖೆಗೆ ಹಲವು ಬಾರಿ ಅಲೆದಾಡಿದರೂ ಯಾವುದೇ ಪ್ರಯೋಜನಕಾರಿಯಾದ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ. ದೂರುದಾರರು ಬಟ್ಟೆಯ ಮೌಲ್ಯವನ್ನು ಮರಳಿ ಪಡೆಯುವುದರ ಜೊತೆಗೆ ಮಾನಸಿಕ ಕಿರಿಕಿರಿಗಾಗಿ 1 ಲಕ್ಷ ರೂಪಾಯಿ ಮತ್ತು ಕಾನೂನು ವೆಚ್ಚವನ್ನು ಭರಿಸುವಂತೆ ಒತ್ತಾಯಿಸಿದ್ದರು.