ಗಾಂಧಿವಾದದ ಮುಖವಾಡ ಕಳಚಿದ ಭಾರತ !

ಭಾರತದ ಸ್ವಾತಂತ್ರ್ಯದ ನಂತರ ಸುಮಾರು ೭ ದಶಕಗಳ ಕಾಲ ‘ಜಗತ್ತಿನ ಅತ್ಯಂತ ದೊಡ್ಡ ಶಸ್ತ್ರಾಸ್ತ್ರ ಆಮದುದಾರ ದೇಶ ಎಂಬ ಮುದ್ರೆ ಹೊತ್ತಿದ್ದ, ‘ಗಾಂಧಿವಾದಿ, ‘ಅಹಿಂಸಾವಾದಿ, ‘ಬುದ್ಧನ ದೇಶ ಈ ದೇಶವು ಇಂದು ದೊಡ್ಡ ಬದಲಾವಣೆಯ ಹೊಸ್ತಿಲಲ್ಲಿ ಬಂದು ನಿಂತಿದೆ. ಭಾರತದ ಭದ್ರತಾ ವ್ಯವಸ್ಥೆಯು ಪ್ರಮುಖವಾಗಿ ‘ಆಮದುಆಧಾರಿತ ಗ್ರಾಹಕ ಸಂಸ್ಕೃತಿಯ ಸರಪಳಿಯಲ್ಲಿ ಸಿಲುಕಿಕೊಂಡಿತ್ತು. ರಷ್ಯಾ ನಿರ್ಮಿತ ವಿಮಾನಗಳು, ಬ್ರಿಟಿಷ್ ಮಾದರಿಯ ಫಿರಂಗಿಗಳು ಮತ್ತು ಅಮೆರಿಕ ನಿರ್ಮಿತ ರಡಾರ್ ವ್ಯವಸ್ಥೆಗಳ ಮಿಶ್ರಣದಿಂದಾಗಿ ಭಾರತೀಯ ಸೇನೆಯ ಹೋರಾಟದ ಸಾಮರ್ಥ್ಯವು ಒಂದು ರೀತಿಯ ‘ಖಿಚಡಿಯಂತಾಗಿತ್ತು. ವಿದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಎಂದರೆ ಕೇವಲ ವ್ಯಾಪಾರವಾಗಿರಲಿಲ್ಲ, ಬದಲಿಗೆ ಅದೊಂದು ರೀತಿಯ ‘ರಾಜಕೀಯ ಶರಣಾಗತಿಯಾಗಿತ್ತು. ಅಲ್ಲಿ ನಮ್ಮ ಅಗತ್ಯತೆಗಳಿಗಾಗಿ ನಾವು ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಒಳಗಾಗಬೇಕಾಗುತ್ತಿತ್ತು.

ವರ್ಷ ೧೯೭೧ ರ ಯುದ್ಧದಿಂದ ಹಿಡಿದು ಕಾರ್ಗಿಲ್ ಯುದ್ಧದ ವರೆಗೆ, ಭಾರತವು ಪ್ರತಿ ಬಾರಿಯೂ ಶಸ್ತ್ರಾಸ್ತ್ರಗಳ ಬಿಡಿಭಾಗಗಳಿಗಾಗಿ ಆಮದಿನ ಮೇಲೆಯೇ ಅವಲಂಬಿತವಾಗಬೇಕಾಯಿತು. ಇದರ ಲಾಭವನ್ನು ಪಡೆದುಕೊಂಡು ಸರಬರಾಜುದಾರ ದೇಶಗಳು ಹಲವು ಬಾರಿ ಭಾರತದ ಮೇಲೆ ಕಠಿಣ ಷರತ್ತುಗಳನ್ನು ಹೇರುತ್ತಿದ್ದವು. ‘ಡಿ.ಆರ್.ಡಿ.ಒ. (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಬಳಿ ತಂತ್ರಜ್ಞಾನವಿದ್ದರೂ, ಅದನ್ನು ಉತ್ಪಾದನೆಯಾಗಿ ಪರಿವರ್ತಿಸುವ ರಾಜಕೀಯ ಇಚ್ಛಾಶಕ್ತಿ ಅಂದಿನ ಸರಕಾರಗಳಿಗೆ ಇರಲಿಲ್ಲ. ೧೯೯೦ ರ ದಶಕದ ಆರ್ಥಿಕ ಉದಾರೀಕರಣದ ನಂತರವೂ ರಕ್ಷಣಾಕ್ಷೇತ್ರವು ‘ಸರಕಾರಿ ಏಕಸ್ವಾಮ್ಯದ ಹಿಡಿತ ದಲ್ಲಿತ್ತು. ‘ಖಾಸಗಿ ಉದ್ಯಮಗಳು ರಕ್ಷಣಾ ಉತ್ಪಾದನೆಯಲ್ಲಿ ತೊಡಗಿಸಿಕೊಂಡರೆ ಹಗರಣಗಳು ನಡೆಯುತ್ತವೆ ಎಂಬ ಭಯವು ಭಾರತವನ್ನು ದಶಕಗಳ ಕಾಲ ಹಿಂದಕ್ಕೆ ತಳ್ಳಿತು. ಬೋಫೋರ್ಸ್ ಪ್ರಕರಣವು ಇದಕ್ಕೆ ಅತ್ಯಂತ ದೊಡ್ಡ ಉದಾಹರಣೆ !

ಇಂದು ಭಾರತವು ಈ ಮಾನಸಿಕ ಗುಲಾಮಗಿರಿಯಿಂದ ಹೊರಬಂದು ಕೇವಲ ಉತ್ಪಾದಕನಷ್ಟೇ ಅಲ್ಲ, ಜಾಗತಿಕ ರಕ್ಷಣಾ ಪೂರೈಕೆ ಸರಪಳಿಯ ಒಂದು ಅನಿವಾರ್ಯ ಭಾಗವಾಗುವ ಹಾದಿಯಲ್ಲಿದೆ. ಒಂದು ಕಡೆ ಶತ್ರು ರಾಷ್ಟ್ರಗಳ ಕುತಂತ್ರಗಳು ಮತ್ತು ಇನ್ನೊಂದು ಕಡೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಕನಸು, ಈ ಸಂಘರ್ಷದ ನಡುವೆ ಭಾರತವು ತನಗಾಗಿ ಒಂದು ಹೊಸ ಗುರುತನ್ನು ನಿರ್ಮಿಸಿಕೊಂಡಿದೆ. ಇಂದು ಭಾರತವು ಕೇವಲ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಮಾತ್ರವಲ್ಲ. ಜಗತ್ತಿನ ೧೦೦ ಕ್ಕೂ ಹೆಚ್ಚು ದೇಶಗಳಿಗೆ ‘ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಜಾಗತಿಕ ರಕ್ಷಣಾ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ವರ್ಷ ೧೯೪೭ ರಿಂದ ೨೦೧೪ ರ ಸುದೀರ್ಘ ಅವಧಿಯಲ್ಲಿ ಭಾರತೀಯ ರಕ್ಷಣಾ ಪಡೆಗಳ ಮಾನಸಿಕತೆಯು ಪ್ರಮುಖವಾಗಿ ‘ಆಮದಿನ ಮೇಲೆಯೇ ಆಧಾರಿತವಾಗಿತ್ತು. ಸೋವಿಯತ್ ಯೂನಿಯನ್ ಅಥವಾ ಪಾಶ್ಚಿಮಾತ್ಯ ದೇಶಗಳು ತಿರಸ್ಕರಿಸಿದ ಅಥವಾ ಹಳೆಯದಾದ ತಂತ್ರಜ್ಞಾನದ ವ್ಯವಸ್ಥೆಯನ್ನು ಖರೀದಿಸುವುದು ಭಾರತದ ಅನಿವಾರ್ಯತೆಯಾಗಿತ್ತು. ‘ನಮಗೆ ಉತ್ತಮ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಸಾಧ್ಯವಿಲ್ಲ ಎನ್ನುವ ಕೀಳರಿಮೆಯ ಮಾನಸಿಕತೆಯು ಅಂದಿನ ಸರಕಾರಿ ನೀತಿಗಳಲ್ಲೂ ಪ್ರತಿಫಲಿಸುತ್ತಿತ್ತು. ಇದರ ಪರಿಣಾಮವಾಗಿ ಪ್ರತಿ ಸಣ್ಣದೊಡ್ಡ ಶಸ್ತ್ರಾಸ್ತ್ರಕ್ಕಾಗಿ ವಿದೇಶಿ ಸಂಸ್ಥೆಗಳ ಮೇಲೆ ಅವಲಂಬಿತವಾಗಿದ್ದರಿಂದ ದೇಶದ ಖಜಾನೆ ಖಾಲಿಯಾಗುತ್ತಿತ್ತು ಮತ್ತು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವೂ ಸೀಮಿತವಾಗಿತ್ತು.

ವರ್ಷ ೨೦೧೪ ರ ನಂತರ ಚಿತ್ರಣ ಬದಲಾಯಿತು. ‘ಮೇಕ್ ಇನ್ ಇಂಡಿಯಾ ಅಭಿಯಾನದ ಅಡಿಯಲ್ಲಿ ರಕ್ಷಣಾ ಕ್ಷೇತ್ರದಲ್ಲಿ ನೇರ ವಿದೇಶಿ ಹೂಡಿಕೆಯ ನಿಯಮಗಳನ್ನು ಸರಳ ಗೊಳಿಸಲಾಯಿತು. ಖಾಸಗಿ ವಲಯವನ್ನು ರಕ್ಷಣಾ ಉತ್ಪಾದನೆಯಲ್ಲಿ ಸೇರಿಸಿಕೊಳ್ಳಲಾಯಿತು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ‘ಆಮದು ನಿಷೇಧದ ನೀತಿಗಳನ್ನು ರೂಪಿಸಲಾಯಿತು. ರಕ್ಷಣಾ ಸಚಿವಾಲಯವು ಶಸ್ತ್ರಾಸ್ತ್ರಗಳ ಕೆಲವು ಪಟ್ಟಿಗಳನ್ನು ಪ್ರಕಟಿಸಿತು, ಇವುಗಳ ಆಮದನ್ನು ಈಗ ಸಂಪೂರ್ಣವಾಗಿ ನಿಲ್ಲಿಸಲಾಗಿದೆ ಮತ್ತು ಅವುಗಳ ಉತ್ಪಾದನೆಯನ್ನು ಭಾರತದಲ್ಲೇ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿರ್ಧಾರವು ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ಒಂದು ಹೊಸ ದಿಕ್ಕನ್ನು ನೀಡಿತು.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಅಂದಿನ ಪ್ರಧಾನಿ ನೆಹರೂ ಅವರು ‘ಭಾರತಕ್ಕೆ ಸೈನ್ಯವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂಬ ಹಾಸ್ಯಾಸ್ಪದ ಹೇಳಿಕೆಯನ್ನು ನೀಡಿದ್ದರು. ನೆಹರೂ ಅವರ ಇದೇ ಮಾನಸಿಕತೆಯಿಂದಾಗಿ ಭಾರತವು ಚೀನಾದಿಂದ ದೊಡ್ಡ ಸೋಲನ್ನು ಅನುಭವಿಸಬೇಕಾಯಿತು. ಆ ಸಮಯದಲ್ಲಿ ಹೋರಾಡುತ್ತಿದ್ದ ಸೈನಿಕರ ಬಳಿ ಅಗತ್ಯ ಸಲಕರಣೆಗಳಾಗಲಿ ಅಥವಾ ಶಸ್ತ್ರಾಸ್ತ್ರಗಳಾಗಲಿ ಇರಲಿಲ್ಲ. ಆಗ ನೆಹರೂ ಅವರು ಅನಿವಾರ್ಯವಾಗಿ ಅಮೆರಿಕದ ಅಧ್ಯಕ್ಷರಿಗೆ ಪತ್ರ ಬರೆದು ಶಸ್ತ್ರಾಸ್ತ್ರಗಳನ್ನು ನೀಡುವಂತೆ ವಿನಂತಿಸಬೇಕಾಯಿತು, ಇದು ಭಾರತದ ಇತಿಹಾಸ. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಅಂದಿನ ಕಾಂಗ್ರೆಸ್‌ನ ರಾಷ್ಟ್ರವಿರೋಧಿ ಮಾನಸಿಕತೆ ಯಿಂದಾಗಿ ಭಾರತವು ಎಷ್ಟು ಅಧೋಗತಿಗೆ ತಲುಪಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಅಂಕಿಅಂಶಗಳಿಂದ ಸ್ಪಷ್ಟವಾಗುತ್ತಿರುವ ಭಾರತದ ಪ್ರಗತಿ !

ಭಾರತದ ಈ ಪ್ರಗತಿಯು ಕೇವಲ ಘೋಷಣೆಗಳಿಗೆ ಸೀಮಿತವಾಗಿರದೆ, ಅಂಕಿಅಂಶಗಳಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ವರ್ಷ ೨೦೧೩-೧೪ ರಲ್ಲಿ ಭಾರತದ ರಕ್ಷಣಾ ರಫ್ತು ಕೇವಲ ೬೮೬ ಕೋಟಿ ರೂಪಾಯಿಗಳಾಗಿತ್ತು, ಅದು ೨೦೨೩-೨೪ ರ ಆರ್ಥಿಕ ವರ್ಷದಲ್ಲಿ ೨೧ ಸಾವಿರದ ೮೩ ಕೋಟಿ ರೂಪಾಯಿಗಳಿಗೆ ತಲುಪಿದೆ. ಅಂದರೆ ಕಳೆದ ೧೦ ವರ್ಷಗಳಲ್ಲಿ ಭಾರತವು ತನ್ನ ಶಸ್ತ್ರಾಸ್ತ್ರ ರಫ್ತಿನಲ್ಲಿ ಬರೋಬ್ಬರಿ ೩೦ ಪಟ್ಟು ಹೆಚ್ಚಳವನ್ನು ಮಾಡಿದೆ.

ಇಂದು ಭಾರತವು ೧೦೦ ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುತ್ತಿದೆ. ಇದರಲ್ಲಿ ಅಮೆರಿಕ, ಸೌದಿ ಅರೇಬಿಯಾ, ಫಿಲಿಪೈನ್ಸ್, ಇಂಡೋನೇಷ್ಯಾ ಮತ್ತು ಆಫ್ರಿಕಾದ ಹಲವು ದೇಶಗಳು ಸೇರಿವೆ. ಶಸ್ತ್ರಾಸ್ತ್ರಗಳಲ್ಲಿ ಪ್ರಮುಖವಾಗಿ ‘ಬ್ರಹ್ಮೋಸ್ ಕ್ಷಿಪಣಿ, ‘ತೇಜಸ್ ಯುದ್ಧ ವಿಮಾನ, ‘ಆಕಾಶ ಕ್ಷಿಪಣಿ ವ್ಯವಸ್ಥೆ, ಆರ್ಟಿಲರಿ ಗನ್ಸ್ (ಫಿರಂಗಿಗಳು), ಪಿನಾಕಾ ರಾಕೆಟ್ ಲಾಂಚರ್ ಮತ್ತು ಅತ್ಯಾಧುನಿಕ ಹಗುರ ಹೆಲಿಕಾಪ್ಟರ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ದೊಡ್ಡ ಪ್ರಭಾವ ಬೀರಲಿವೆ.

ಇಂದು ಭಾರತವು ಕೇವಲ ಗ್ರಾಹಕನಾಗಿ ಉಳಿದಿಲ್ಲ, ಬದಲಿಗೆ ಅದೊಂದು ‘ಭದ್ರತಾ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ. ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಜಾಗತಿಕ ಪೂರೈಕೆ ಸರಪಳಿ ಹದಗೆಟ್ಟಾಗ, ಭಾರತೀಯ ಶಸ್ತ್ರಾಸ್ತ್ರಗಳ ವಿಶ್ವಾಸಾರ್ಹತೆಯನ್ನು ಜಗತ್ತು ಅನುಭವಿಸಿತು. ‘ಬ್ರಹ್ಮೋಸ್ನಂತಹ ಕ್ಷಿಪಣಿಗಳು ಭಾರತವು ಜಾಗತಿಕ ಮಟ್ಟದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಲ್ಲದು ಎಂಬುದನ್ನು ಸಾಬೀತು ಪಡಿಸಿದವು, ಇವು ಪಾಶ್ಚಿಮಾತ್ಯ ದೇಶಗಳ ಉತ್ಪನ್ನಗಳಿಗಿಂತ ಹೆಚ್ಚು ಸುಧಾರಿತ ಮತ್ತು ಆರ್ಥಿಕವಾಗಿ ಕೈಗೆಟುಕುವಂತಿವೆ. ಭಾರತೀಯ ಶಸ್ತ್ರಾಸ್ತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಕೇವಲ ವ್ಯಾಪಾರದ್ದಲ್ಲ, ಬದಲಿಗೆ ಅದು ಭಾರತದ ಹೆಚ್ಚುತ್ತಿರುವ ಸಾಮರಿಕ ಪ್ರಭಾವದ ಸಂಕೇತವಾಗಿದೆ.

ಭವಿಷ್ಯದ ಸವಾಲುಗಳು

ನಾವು ರಫ್ತಿನಲ್ಲಿ ಯಶಸ್ಸನ್ನು ಸಾಧಿಸಿದ್ದರೂ, ಕೆಲವು ಸವಾಲುಗಳು ಇಂದಿಗೂ ಎದುರಾಗಿವೆ. ನಾವಿನ್ನೂ ಜಾಗತಿಕ ಮಟ್ಟದ ಜೆಟ್ ಇಂಜಿನ್ (ಯುದ್ಧ ವಿಮಾನಗಳ ಇಂಜಿನ್) ತಯಾರಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಈ ತಂತ್ರಜ್ಞಾನವು ಸಿಕ್ಕರೆ ಭಾರತದ ರಕ್ಷಣಾ ಕ್ಷೇತ್ರವು ಸಂಪೂರ್ಣ ಸ್ವಾವಲಂಬಿಯಾಗಲಿದೆ. ಭಾರತಕ್ಕೆ ಇನ್ನು ೫ ನೇ ತಲೆಮಾರಿನ ಯುದ್ಧ ವಿಮಾನವನ್ನು ತಯಾರಿಸಲು ಸಾಧ್ಯವಾಗಿಲ್ಲ, ಹಾಗೆಯೇ ಚೀನಾಕ್ಕೆ ಹೋಲಿಸಿದರೆ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಜಾಗತಿಕ ಪೇಟೆಂಟ್‌ಗಳ ಪ್ರಮಾಣ ತುಂಬಾ ಕಡಿಮೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ ಮತ್ತು ಜರ್ಮನಿ ಎಂಬ ೫ ದೇಶಗಳ ಏಕಸ್ವಾಮ್ಯವನ್ನು ಮುರಿಯುವುದು ಒಂದು ದೊಡ್ಡ ಹೋರಾಟವಾಗಿದೆ. ಮುಂಬರುವ ದಿನಗಳಲ್ಲಿ ಭಾರತ ಸರಕಾರದ ಗುರಿ ರಕ್ಷಣಾ ರಫ್ತಿನ ಅಂಕಿಅಂಶವನ್ನು ೩೫ ಸಾವಿರ ಕೋಟಿ ರೂಪಾಯಿಗಳ ಗಡಿ ದಾಟಿಸುವುದಾಗಿದೆ.

ಶಸ್ತ್ರಾಸ್ತ್ರ ರಫ್ತಿನಲ್ಲಿನ ಈ ಜಿಗಿತವು ಭಾರತದ ಆತ್ಮಗೌರವದ ಕಥೆಯಾಗಿದೆ. ಒಂದೊಮ್ಮೆ ಇತರರ ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತವಾಗಿದ್ದ ದೇಶ, ಇಂದು ತನ್ನದೇ ಆದ ಶಕ್ತಿಯ ಬಲದ ಮೇಲೆ ಮಿತ್ರರಾಷ್ಟ್ರಗಳಿಗೆ ಭದ್ರತಾ ಕವಚವನ್ನು ಒದಗಿಸುತ್ತಿದೆ. ಇದು ‘ಆತ್ಮನಿರ್ಭರ ಭಾರತದ ಯಶಸ್ಸಿನ ಮುನ್ನುಡಿಯಾಗಿದೆ. ಭಾರತದ ಈ ಶಸ್ತ್ರಾಸ್ತ್ರ ರಫ್ತಿನಿಂದಾಗಿ ‘ವಸುಧೈವ ಕುಟುಂಬಕಮ್ ಎಂಬ ಭಾವನೆಯೊಂದಿಗೆ ಜಗತ್ತು ಸುರಕ್ಷಿತವಾಗಿರಲು ಸಹಾಯ ಆಗುತ್ತದೆ ಮತ್ತು ಭಾರತವು ‘ಗ್ಲೋಬಲ್ ಪವರ್ (ಜಾಗತಿಕ ಶಕ್ತಿ) ಆಗಿ ಹೊರಹೊಮ್ಮುವುದನ್ನು ಈಗ ಯಾರೂ ತಡೆಯಲು ಸಾಧ್ಯವಿಲ್ಲ. ಈ ಸಾಮರ್ಥ್ಯವು ಕೇವಲ ದೇಶದ ಆರ್ಥಿಕತೆಗೆ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಅತ್ಯಂತ ಅಮೂಲ್ಯವಾಗಿದೆ.

ಶಸ್ತ್ರಾಸ್ತ್ರ ನಿರ್ಮಾಣದಲ್ಲಿ ಭಾರತ ಇನ್ನಷ್ಟು ದೊಡ್ಡ ಮಟ್ಟ ತಲುಪಲು ಮತ್ತು ಸಂಪೂರ್ಣ ಸ್ವಾವಲಂಬಿಯಾಗಲು ಕಠಿಣ ಪರಿಶ್ರಮ ಅಗತ್ಯ!