ಸ್ವಪ್ನನಗರಿಯ ಅಸುರಕ್ಷಿತತೆ ?

ಭಾರತದಂತಹ ಏಷ್ಯಾದ ದೇಶಗಳಿಗಷ್ಟೇ ಅಲ್ಲ, ವಿಶ್ವದ ಅನೇಕ ದೇಶಗಳ ದೃಷ್ಟಿಯಲ್ಲಿ ‘ಯುನೈಟೆಡ್ ಅರಬ್ ಎಮಿರೇಟ್ಸ್’ (ಯುಎಇ) ದೇಶದ ಪ್ರಮುಖ ಭಾಗವಾಗಿರುವ ದುಬೈ ನಗರವು ಒಂದು ಸ್ವಪ್ನನಗರಿಯಂತಿದೆ. ಅಲ್ಲಿನ ರೋಚಕ ಕಥೆಗಳನ್ನು ಕೇಳಲು ಇಂದಿಗೂ ಅನೇಕರು ಉತ್ಸುಕರಾಗಿರುತ್ತಾರೆ. ಭಾರತದ ವಿಶೇಷವಾಗಿ ಚಿತ್ರರಂಗದ ಪ್ರಸಿದ್ಧ ವ್ಯಕ್ತಿಗಳು, ನಾಯಕರು, ಉದ್ಯಮಿಗಳು ಅಥವಾ ಕುಖ್ಯಾತ ಗೂಂಡಾಗಳಿಗೆ ದುಬೈ ಎಂದರೆ ಔತಣಕೂಟಗಳನ್ನು ನಡೆಸುವ ಮತ್ತು ವ್ಯವಹಾರಿಕ ಮಾತುಕತೆ ನಡೆಸುವ ತಾಣವಾಗಿದೆ. ದುಬೈನ ವಿಶ್ವದ ಅತಿ ಎತ್ತರದ ‘ಬುರ್ಜ್ ಖಲೀಫಾ’ ಕಟ್ಟಡದಲ್ಲಿರುವ ಭಾರತೀಯ ಶ್ರೀಮಂತರ ಮನೆಗಳು ವಿಶೇಷವಾಗಿ ಚರ್ಚೆಯ ವಿಷಯವಾಗಿರುತ್ತವೆ. ‘ಯುಎಇ’ ಸೇರಿದಂತೆ ದುಬೈನಲ್ಲಿ ಉನ್ನತ ಶ್ರೇಣಿಯ ಉದ್ಯೋಗಗಳು, ವ್ಯವಹಾರಗಳಿಂದ ಹಿಡಿದು ಕಾರ್ಮಿಕರ ವರೆಗೆ ಭಾರತೀಯರ ಸಂಖ್ಯೆ ಅಗಾಧವಾಗಿದೆ. ದುಬೈನಲ್ಲಿ ೧೫ ರಿಂದ ೨೦ ಲಕ್ಷ, ಅಂದರೆ ಜನಸಂಖ್ಯೆಯ ಶೇಕಡಾ ೪೦ ರಷ್ಟು ಜನರು ಭಾರತೀಯರಿದ್ದಾರೆ.

ಖಂಡಿತವಾಗಿಯೂ ಈ ಸ್ವಪ್ನನಗರಿ ದುಬೈ ಅನ್ನು ನಿರ್ಮಿಸುವಲ್ಲಿ ಅಲ್ಲಿನ ದೂರದೃಷ್ಟಿಯುಳ್ಳ ಅಂದಿನ ದುಬೈ ಆಡಳಿತಗಾರ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಕ್ತೂಮ್ ಅವರು ೧೯೬೦ ರಿಂದ ೧೯೯೦ ರ ಅವಧಿಯಲ್ಲಿ ಅಪಾರ ಶ್ರಮವಹಿಸಿದ್ದರು. ಯೋಜನಾಬದ್ಧವಾಗಿ ದುಬೈಅನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿದರು. ಪ್ರವಾಸೋದ್ಯಮದ ಆದರ್ಶವನ್ನು ನಿರ್ಮಿಸಲು ಏನೇನು ಬೇಕೋ, ಅದೆಲ್ಲವೂ ಅಲ್ಲಿದೆ. ವಿಶೇಷವಾಗಿ ಅಲ್ಲಿನ ಪೊಲೀಸ್ ಆಡಳಿತ ಮತ್ತು ಕಾನೂನು ಹಾಗೂ ಸುವ್ಯವಸ್ಥೆ ! ದುಬೈನಲ್ಲಿ ಕಳ್ಳತನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಅತ್ಯಂತ ಕಡಿಮೆ; ಏಕೆಂದರೆ ಇಂತಹ ಪ್ರಕರಣಗಳಲ್ಲಿ ಅಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿನ ಈ ಸುರಕ್ಷಿತತೆಯು ದುಬೈ ಅನ್ನು ಸ್ವಪ್ನನಗರಿ ಎಂದು ಕರೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತೆರಿಗೆ ಮುಕ್ತವಾಗಿದ್ದರೂ ದುಬೈ ಒಂದು ಸ್ಥಿರ ಆರ್ಥಿಕತೆಯ ಕೇಂದ್ರವಾಗಿ ಹೊರಹೊಮ್ಮಿತು. ಇತರ ಇಸ್ಲಾಮಿಕ್ ದೇಶಗಳಲ್ಲಿ ಯಾವುದೋ ಒಂದು ಕಾರಣದಿಂದ ಅಶಾಂತಿ ಇದ್ದರೂ, ದುಬೈ ತನ್ನನ್ನು ಅದರಿಂದ ದೂರವಿರಿಸಿಕೊಂಡಿತು. ಈ ತಟಸ್ಥತೆಯಿಂದಾಗಿ ಅದು ಯಶಸ್ವಿಯಾಯಿತು. ಮರುಭೂಮಿಯಂತಹ ಸ್ಥಳದಲ್ಲಿ ಅಮೆರಿಕದ ನಗರಗಳಿಗೆ ಸರಿಸಾಟಿಯಾದ ನಗರವನ್ನು ನಿಲ್ಲಿಸುವುದು ಸುಲಭದ ಕೆಲಸವಾಗಿರಲಿಲ್ಲ; ಆದರೆ ಶೇಖ್ ಅವರು ಬಂದರುಗಳು, ಸೇತುವೆಗಳು, ರಸ್ತೆಗಳು, ಎತ್ತರದ ಕಟ್ಟಡಗಳು ಇತ್ಯಾದಿಗಳನ್ನು ನಿರ್ಮಿಸುವ ಮೂಲಕ ದುಬೈ ಅನ್ನು ಒಂದು ಜಾಗತಿಕ ಪ್ರವಾಸೋದ್ಯಮ ಮತ್ತು ವ್ಯಾಪಾರ ಕೇಂದ್ರ ಹಾಗೂ ಮಾಯಾನಗರಿಯನ್ನಾಗಿ ಮಾಡಿದರು. ಅವರ ಮಗ ಮೊಹಮ್ಮದ್ ಬಿನ್ ರಶೀದ್ ಅವರು ಸಹ ತಂದೆಯ ಹೆಜ್ಜೆಯಲ್ಲೇ ಹೆಜ್ಜೆ ಹಾಕುತ್ತಾ ಅದನ್ನು ಅತ್ಯಾಧುನಿಕ ಜಾಗತಿಕ ನಗರವನ್ನಾಗಿ ಬೆಳೆಸಿದರು. ಪ್ರಪಂಚದಾದ್ಯಂತ ಹೂಡಿಕೆಯನ್ನು ಆಕರ್ಷಿಸಲು ತಂದೆ ರೂಪಿಸಿದ ನೀತಿಗಳನ್ನು ಅಭಿವೃದ್ಧಿಪಡಿಸಿದರು. ಇಲ್ಲಿನ ಗಗನಚುಂಬಿ ಕಟ್ಟಡಗಳು ವಾಸ್ತುಶಿಲ್ಪದೊಂದಿಗೆ ಮರುಭೂಮಿಯ ಅದಮ್ಯ ಇಚ್ಛಾಶಕ್ತಿಯ ವಿಜಯವೆಂದು ಮೆರೆಯುತ್ತವೆ. ೧೯೯೦ ರ ಕೊಲ್ಲಿ ಯುದ್ಧ ಅಥವಾ ಕೊರೊನಾ ಸಾಂಕ್ರಾಮಿಕದ ನಂತರ ಜಗತ್ತಿನ ಮೇಲೆ ಬಂದ ಆರ್ಥಿಕ ಬಿಕ್ಕಟ್ಟನ್ನು ದುಬೈ ಲೀಲಾಜಾಲವಾಗಿ ಎದುರಿಸಿತು; ಆದರೆ ತನ್ನ ಮೇಲೆ ಅದರ ಪರಿಣಾಮ ಬೀರಲು ಬಿಡಲಿಲ್ಲ.

ಯುದ್ಧದ ದೂರಗಾಮಿ ಪರಿಣಾಮಗಳು !

ಆದರೆ ಈಗ ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ಯುದ್ಧದ ದೊಡ್ಡ ಪರಿಣಾಮವು ಇಡೀ ಜಗತ್ತಿನಂತೆಯೇ ಗಗನಚುಂಬಿ ಕಟ್ಟಡಗಳ ಈ ನಗರಿ ಮತ್ತು ಜಾಗತಿಕ ವ್ಯಾಪಾರ ಕೇಂದ್ರವಾದ ದುಬೈನ ಮೇಲೂ ಆಗಿದೆ. ಅಮೆರಿಕದ ಆಸ್ತಿ ಮತ್ತು ನೆಲೆಗಳಿರುವ ದುಬೈನ ಸ್ಥಾನಗಳ ಮೇಲೆ ಇರಾನ್ ಡ್ರೋನ್ ದಾಳಿಗಳನ್ನು ಮಾಡಿದೆ. ದುಬೈನಲ್ಲಿರುವ ಭಾರತೀಯರು ಅಥವಾ ಪ್ರವಾಸಿಗರ ಮೇಲೆ ಇದರಿಂದ ವಿಶೇಷ ಪರಿಣಾಮವೇನೂ ಆಗಿಲ್ಲ. ಭಾರತೀಯರು ಅಲ್ಲಿರುವ ತಮ್ಮ ಆತ್ಮೀಯರನ್ನು ಸಂಪರ್ಕಿಸಿದಾಗ, ತಾವು ಸುರಕ್ಷಿತವಾಗಿರುವುದಾಗಿ ಮತ್ತು ಆನಂದದಲ್ಲಿರುವುದಾಗಿ ಚಿತ್ರಗಳನ್ನು ಕಳುಹಿಸಿದ್ದು ನಿಜ; ಆದರೆ ಈಗ ಸುಮಾರು ಒಂದೂವರೆ ತಿಂಗಳು ಕಳೆದ ನಂತರ ಈ ಯುದ್ಧದ ದೂರಗಾಮಿ ಪರಿಣಾಮಗಳು ದುಬೈ ಮೇಲೆ ಗೋಚರಿಸತೊಡಗಿವೆ. ಅವು ಎಷ್ಟು ಗಂಭೀರವಾಗಿರಬಹುದು ಎಂದರೆ, ಯುದ್ಧ ಹೀಗೆಯೇ ಮುಂದುವರಿದರೆ ಮತ್ತೆ ಅಲ್ಲಿ ಒಂಟೆಯ ಮೇಲೆ ತಿರುಗುವ ಕಾಲ ಬಾರದಿರಲಿ ಅಷ್ಟೇ !

ವಿಶ್ವದ ಅತ್ಯಂತ ಜನನಿಬಿಡವಾಗಿರುವ ಇಲ್ಲಿನ ವಿಮಾನ ನಿಲ್ದಾಣದ ವಿಮಾನಗಳು ದೂರದ ಪರ್ಯಾಯ ಮಾರ್ಗವನ್ನು ಹುಡುಕಬೇಕಾಗಿದೆ. ಅನೇಕ ವಿಮಾನ ಹಾರಾಟಗಳನ್ನು ರದ್ದು ಗೊಳಿಸಬೇಕಾಯಿತು. ಯುದ್ಧದಿಂದ ಇಂಧನದರ ಏರಿಕೆಯಾಗಿ ಟಿಕೆಟ್ ದರಗಳೂ ಹೆಚ್ಚಿವೆ, ಹಾಗೆಯೇ ಯುದ್ಧವು ಒಂದು ರೀತಿಯ ಭಯ ಮತ್ತು ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ಎರಡೂ ಕಾರಣಗಳಿಂದಾಗಿ ಪ್ರವಾಸಿಗರ ಸಂಖ್ಯೆ ನೇರವಾಗಿ ಶೇಕಡಾ ೧೫ ರಿಂದ ೫೦ ರಷ್ಟು ಇಳಿಕೆಯಾಗಿದೆ. ಪ್ರವಾಸೋದ್ಯಮ ವ್ಯವಹಾರದಲ್ಲಿ ಪ್ರತಿದಿನ ಅಂದಾಜು ಐದೂವರೆ ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ ಪ್ರವಾಸಿಗರ ಬರುವಿಕೆ ಬಹುತೇಕ ನಿಂತೇ ಹೋಗಿದೆ, ಇನ್ನು ಕೆಲವರ ಪ್ರಕಾರ ಇದು ಯುದ್ಧದ ತಾತ್ಕಾಲಿಕ ಪರಿಣಾಮವಾಗಿರಬಹುದು; ಆದರೆ ಯುದ್ಧ ನಿಲ್ಲುವ ಹೆಸರೇ ಎತ್ತುತ್ತಿಲ್ಲ, ಇದು ಸದ್ಯದ ಪರಿಸ್ಥಿತಿ. ಇದರಿಂದಾಗಿ ಇಲ್ಲಿ ನಡೆಯುವ ಕೆಲವು ಅಂತಾರಾಷ್ಟ್ರೀಯ ಮಹೋತ್ಸವಗಳು ಅಥವಾ ಔತಣಕೂಟಗಳು, ಸಮಾರಂಭಗಳು ಇತ್ಯಾದಿ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರು ಬರದಂತಾಗಿದ್ದಾರೆ. ದುಬಾರಿ ಹೋಟೆಲ್‌ಗಳು, ಅಲ್ಲಿನ ಕಾರ್ಮಿಕರು, ‘ಮಾಲ್’, ಮನೋರಂಜನೆ, ಸ್ಥಳೀಯ ಮಾರುಕಟ್ಟೆ ಇತ್ಯಾದಿ ವ್ಯವಹಾರಗಳ ಮೇಲೆ ಪ್ರವಾಸಿಗರ ಕೊರತೆ ಹಾಗೂ ಕಚ್ಚಾ ವಸ್ತುಗಳ ಅಭಾವದಿಂದ ಪರಿಣಾಮ ಬೀರಿದೆ. ಹೋಟೆಲ್ ವ್ಯವಹಾರವು ಶೇಕಡಾ ೭೦ ರಿಂದ ೮೦ ರಷ್ಟು ಸ್ಥಗಿತಗೊಂಡಿದೆ ಎಂಬ ವರದಿಗಳು ಬರುತ್ತಿವೆ. ಬಿಲಿಯನ್‌ಗಟ್ಟಲೆ ಹೂಡಿಕೆ ಮುಳುಗುತ್ತಿರುವುದರಿಂದ ಷೇರು ಮಾರುಕಟ್ಟೆಯ ಹೂಡಿಕೆದಾರರ ವಿಶ್ವಾಸ ಕಡಿಮೆಯಾಗುತ್ತಿದೆ. ಹಾರ್ಮುಜ್‌ನಂತಹ ಜಲಸಂಧಿಯ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ ಆಮದು-ರಫ್ತು ದುಬಾರಿ ಮತ್ತು ಕಷ್ಟಕರವಾಗಿದೆ. ರಷ್ಯಾ, ಚೀನಾಗಳಂತಹ ದೇಶಗಳೊಂದಿಗೆ ಸಂಪರ್ಕ ಹೊಂದಿರುವ ಇಲ್ಲಿನ ಬಂದರಿನ ಆಮದು-ರಫ್ತು ಕೇಂದ್ರಗಳು ನಿಷ್ಕ್ರಿಯವಾಗುತ್ತಿವೆ. ಯುದ್ಧದಿಂದಾಗಿ ಹಡಗುಗಳ ಮಾರ್ಗಗಳು ಮತ್ತು ಸರಕು ಪೂರೈಕೆಯ ಸರಪಳಿ (ಸಪ್ಲೈ ಚೈನ್) ಮೇಲೆ ಮಿತಿಗಳು ಬಂದಿವೆ. ತೈಲ ಬೆಲೆಗಳು ಜಗತ್ತಿನಾದ್ಯಂತ ಏರಿಕೆಯಾಗಿರುವುದರಿಂದ ಅದರ ಪರಿಣಾಮ ಜಾಗತಿಕ ಆರ್ಥಿಕತೆ ಮಂದಗತಿಯಲ್ಲಿ ಸಾಗಲು ಕಾರಣವಾಗಬಹುದು ಮತ್ತು ಅದರ ಪರಿಣಾಮವು ಪ್ರವಾಸೋದ್ಯಮದ ಮೇಲೆ ಬೀರಬಹುದು. ಯುದ್ಧಪೀಡಿತ ಪ್ರದೇಶಗಳಿಂದ ಜನರು ಆಶ್ರಯಕ್ಕಾಗಿ ದುಬೈ ಕಡೆಗೆ ವಾಲುತ್ತಿದ್ದಾರೆ. ಇದರಿಂದಾಗಿ ದುಬೈನ ಜನಸಂಖ್ಯೆ ಹೆಚ್ಚಾಗಿ ಅಲ್ಲಿನ ಮೂಲಸೌಕರ್ಯಗಳ ಮೇಲೆ ಒತ್ತಡ ಉಂಟಾಗುವ ಸಾಧ್ಯತೆಯನ್ನೂ ವರ್ತಿಸಲಾಗುತ್ತಿದೆ. ಈ ಎಲ್ಲವುಗಳಿಂದಾಗಿ ‘ಪ್ರವಾಸೋದ್ಯಮ ಕೇಂದ್ರ ದುಬೈ ಈಗ ಸುರಕ್ಷಿತವಾಗಿದೆಯೇ ?’ ಎಂಬ ಪ್ರಶ್ನೆ ಉದ್ಭವಿಸಿದೆ. ಯುದ್ಧದ ಪರೋಕ್ಷ ಪರಿಣಾಮಗಳಿಂದಾಗಿ ದುಬೈನ ಅಂತಾರಾಷ್ಟ್ರೀಯ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಹಾರ್ಮುಜ್ ಜಲಸಂಧಿಯ ಮಾರ್ಗ ಯುದ್ಧದಿಂದಾಗಿ ಮುಚ್ಚಿರುವುದರಿಂದ ಅನೇಕ ದೊಡ್ಡ ಅಂತಾರಾಷ್ಟ್ರೀಯ ಹೂಡಿಕೆದಾರರು ಅಲ್ಲಿನ ಹೂಡಿಕೆಯನ್ನು ಹಿಂಪಡೆಯುತ್ತಾರೆಯೇ ? ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಕಚೇರಿಗಳನ್ನು ಭಾರತ ಅಥವಾ ಇತರ ದೇಶಗಳಿಗೆ ಸ್ಥಳಾಂತರಿಸುವ ಲಕ್ಷಣಗಳು ಕಾಣುತ್ತಿವೆ. ಯುದ್ಧದ ಕಾರಣದಿಂದ ಕಾರ್ಮಿಕರು ತಮ್ಮ ದೇಶಗಳಿಗೆ ಮರಳಲು ತೊಡಗಿರುವುದು ಮತ್ತು ಕಚ್ಚಾ ವಸ್ತುಗಳ ಪೂರೈಕೆಯಲ್ಲಿನ ಅಡಚಣೆಗಳಿಂದಾಗಿ ಕಟ್ಟಡ ನಿರ್ಮಾಣ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಯುರೋಪ್ ಅಥವಾ ಭಾರತದ ಶ್ರೀಮಂತ ಜನರು ದುಬೈನಲ್ಲಿ ಆಸ್ತಿ ಖರೀದಿಸುತ್ತಾರೆ; ಅವರು ಈ ಯುದ್ಧದಿಂದಾಗಿ ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ ಸ್ಥಿರಾಸ್ತಿ ಖರೀದಿ-ಮಾರಾಟ ವ್ಯವಹಾರವು, ದುಬೈ ಆರ್ಥಿಕತೆಯ ಒಂದು ಭಾಗವಾಗಿದ್ದು, ಅದು ತತ್ತರಿಸುವ ಲಕ್ಷಣಗಳು ಕಾಣುತ್ತಿವೆ. ಹೊಸ ಗೃಹ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿರುವುದರಿಂದ ಶೇಕಡಾ ೩೦ ರಷ್ಟು ಮಂದಗತಿ ಬಂದಿರುವ ವರದಿಗಳಿವೆ. ಆಸ್ತಿಗಳ ಬೆಲೆ ಶೇಕಡಾ ೧೦ ರಷ್ಟು ಕುಸಿದಿದೆ. ಸಾಮಾನ್ಯರಿಗಾಗಿ ವಿದ್ಯುತ್ ಮತ್ತು ನೀರಿನ ದರ ದುಪ್ಪಟ್ಟಾಗಿದೆ. ಮರುಭೂಮಿ ಪ್ರದೇಶವಾಗಿರುವ ಮತ್ತು ಪ್ರವಾಸೋದ್ಯಮವನ್ನೇ ನಂಬಿರುವ ಈ ನಗರದಲ್ಲಿ ಧಾನ್ಯ, ತರಕಾರಿ, ಹಣ್ಣುಗಳನ್ನು ಶೇಕಡಾ ೯೦ ರಷ್ಟು ಆಮದು ಮಾಡಿಕೊಳ್ಳಬೇಕಾಗಿರುವುದರಿಂದ ಸಾಮಾನ್ಯ ಉದ್ಯೋಗಿಗಳಿಗೆ ಅವುಗಳನ್ನು ಭರಿಸುವುದು ಅಸಾಧ್ಯವಾಗುತ್ತಿದೆ. ಅತ್ಯಂತ ಕಷ್ಟಪಟ್ಟು ನಿರ್ಮಿಸಿದ ನಗರವನ್ನು ಯುದ್ಧವು ಯಾವ ಸ್ಥಿತಿಗೆ ತರಬಲ್ಲದು ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಜಗತ್ತಿಗೆ ಸ್ವರ್ಗದಂತೆ ಕಂಡ ದುಬೈನ ಈ ಸ್ಥಿತಿ ಯುದ್ಧದ ಆರಂಭದಲ್ಲೇ ನಿರ್ಮಾಣವಾಗಿದೆ. ಯುದ್ಧವು ದೀರ್ಘಕಾಲ ಮುಂದುವರಿದರೆ ಜಗತ್ತಿನ ಮೇಲೆ ಅದರ ಪರಿಣಾಮಗಳು ಎಷ್ಟು ಗಂಭೀರವಾಗಿರಬಹುದು ಎಂಬುದನ್ನು ನಾವು ಇದರಿಂದ ಊಹಿಸಬಹುದು !

ಜಗತ್ತಿನ ಯಾವುದೇ ಮಾಯಾನಗರಿಯ ಜೀವನವು ಶಾಶ್ವತವಲ್ಲ ಎಂಬ ಅರಿವನ್ನು ಮೂಡಿಸುವ ಯುದ್ಧವು ಮನುಷ್ಯನನ್ನು ಅಂತರ್ಮುಖಿಯನ್ನಾಗಿ ಮಾಡಿದರೆ, ಅದೇ ಸುದಿನ !