ಸಂಪಾದಕೀಯ : ‘ಜೈ’ಶಂಕರ್ !

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ತಮ್ಮ ಯುರೋಪ್ ಪ್ರವಾಸದ ಸಮಯದಲ್ಲಿ ರಾಜತಾಂತ್ರಿಕವಾಗಿ ತಕ್ಕ ಪ್ರತ್ಯುತ್ತರ ನೀಡುವುದು ಎಂದರೆ ಏನು ಎಂಬುದನ್ನು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವಾಗ ತೋರಿಸಿಕೊಟ್ಟಿದ್ದಾರೆ. ‘ಕೆಲವು ದೇಶಗಳು ಯುರೋಪ್‌ನಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಭಾರತದ ಮೇಲೆ ಆಕ್ರಮಣ ಮಾಡುತ್ತವೆ. ಭಾರತದಿಂದ ಎಂದಾದರೂ ಹೀಗಾಗಿದೆಯೇ ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಇದು ನೈತಿಕವಾಗಿ ಸರಿಯೇ ?, ಎಂದು ಪತ್ರಕರ್ತನಿಗೆ ಮರು ಪ್ರಶ್ನೆ ಹಾಕುವ ಮೂಲಕ ಅವರ ಮತ್ತು ಇತರರ ಬಾಯಿ ಮುಚ್ಚಿಸಿದರು. ಫಿನ್‌ಲ್ಯಾಂಡ್‌ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಪತ್ರಕರ್ತರೊಬ್ಬರು ಎಸ್. ಜೈಶಂಕರ್ ಅವರನ್ನು ಕೆದಕಿ ಕೆದಕಿ ಪ್ರಶ್ನಿಸುತ್ತಿದ್ದರು, ‘ನೀವು ರಷ್ಯಾದೊಂದಿಗೆ ಸಹಾನುಭೂತಿ ಹೊಂದಿದ್ದೀರಿ, ಇದು ನಮಗೆ ಯುರೋಪಿಯನ್ನರಿಗೆ ಬೇಸರ ತರಿಸುತ್ತದೆ. ನೈತಿಕವಾಗಿ ಸರಿಯಾಗಿ ಕಾಣಿಸುತ್ತಿಲ್ಲ. ತೈಲ ಖರೀದಿಸುತ್ತಿರುವುದು ಸರಿಯೇ ? ‘ಭಾರತವು ರಷ್ಯಾದಿಂದ ತೈಲ ಖರೀದಿಸುವುದು ಎಂಬ ವಿಷಯದ ಮೇಲೆ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮತ್ತು ಭಾರತದ ನೈತಿಕತೆಯನ್ನು ಪ್ರಶ್ನಿಸಲಾಗುತ್ತದೆ. ಇದರಿಂದ ಸಹಜವಾಗಿಯೇ ಭಾರತದ ಅಪಕೀರ್ತಿಯಾಗುತ್ತದೆ. ಹೀಗಿದ್ದರೂ, ಪ್ರಶ್ನೆ ಕೇಳುವವರ ದೇಶಗಳು ಯಾವ ನೈತಿಕತೆಯನ್ನು ಕಾಪಾಡಿಕೊಳ್ಳುತ್ತಿವೆ ? ಎಂಬುದು ಕೂಡ ಒಂದು ಪ್ರಶ್ನೆಯಾಗಿದೆ.

ಇದೇ ವಿಷಯದ ಬಗ್ಗೆ ಕಳೆದ ಬಾರಿಯೂ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದ್ದರು, ‘ಯುರೋಪ್ ದೇಶಗಳು ರಷ್ಯಾದ ತೈಲ ಖರೀದಿಸುವುದರ ಅಂಕಿ-ಅಂಶಗಳನ್ನು ನೋಡಿದರೆ, ಯುರೋಪ್ ಒಂದು ದಿನ ಮಧ್ಯಾಹ್ನದೊಳಗೆ ಎಷ್ಟು ತೈಲವನ್ನು ಖರೀದಿಸುತ್ತದೆಯೋ, ಅಷ್ಟನ್ನು ಭಾರತ ಒಂದು ತಿಂಗಳಲ್ಲೂ ಖರೀದಿಸುವುದಿಲ್ಲ. ನನ್ನ ದೇಶದ ಆದಾಯ ಸೀಮಿತವಾಗಿದೆ ಮತ್ತು ನನ್ನ ದೇಶದ ನಾಗರಿಕರಿಗೆ ಕಡಿಮೆ ದರದಲ್ಲಿ ಇಂಧನವನ್ನು ನೀಡುವುದು ನನ್ನ ಕರ್ತವ್ಯವಾಗಿದೆ, ಎಂದು ದಿಟ್ಟವಾಗಿ ಹೇಳಿದರು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಶ್ಚಿಮಾತ್ಯ ದೇಶಗಳ ಇಬ್ಬಗೆ ನೀತಿಯನ್ನು ಬಯಲಿಗೆಳೆಯುವುದಾಗಲಿ ಅಥವಾ ಭಾರತದ ಪರವಾಗಿ ದಿಟ್ಟ ನಿಲುವು ಮಂಡಿಸುವುದಾಗಲಿ, ಡಾ. ಎಸ್. ಜೈಶಂಕರ್ ಅವರ ಮಾತುಗಳಲ್ಲಿ ಅದ್ಭುತ ಆತ್ಮವಿಶ್ವಾಸ ಮತ್ತು ರಾಜತಾಂತ್ರಿಕತೆ ಕಂಡುಬರುತ್ತದೆ.

ಭಾರತದ ಆಕ್ರಮಣಕಾರಿ ನೀತಿ

ಕಾಂಗ್ರೆಸ್ ಸರಕಾರದ ಕಾಲದ ವರೆಗೆ ಭಾರತದ ಮೇಲೆ ಅಮೆರಿಕ, ಯುರೋಪ್ ಖಂಡದ ದೇಶಗಳು, ರಷ್ಯಾ, ಚೀನಾ ಮುಂತಾದ ಹಲವು ದೇಶಗಳ ಲಿಖಿತ ಮತ್ತು ಅಲಿಖಿತ ಒತ್ತಡವಿತ್ತು. ಅದರಲ್ಲೂ ವಿಶೇಷವಾಗಿ ಜಗತ್ತಿನ ಮಹಾಶಕ್ತಿಗಳಾದ ಅಮೆರಿಕ ಹಾಗೂ ಫ್ರಾನ್ಸ್, ಇಟಲಿ, ಜರ್ಮನಿಯಂತಹ ಪ್ರಭಾವಿ ದೇಶಗಳ ಅನುಕೂಲಕ್ಕೆ ತಕ್ಕಂತೆ ವರ್ತಿಸಬೇಕಾದ ಒತ್ತಡವೂ ಇತ್ತ್ತು. ಇದರಿಂದ ಪಾಕಿಸ್ತಾನದಿಂದ ಭಾರತದ ಮೇಲೆ ಎಷ್ಟೇ ಭಯೋತ್ಪಾದಕ ದಾಳಿಗಳಾದರೂ, ಅಮೆರಿಕ ಒಮ್ಮೆ ‘ಬೇಡ ಎಂದರೆ, ಭಾರತೀಯ ಆಡಳಿತಗಾರರು ಅದಕ್ಕೆ ತಲೆಬಾಗಿ ಪ್ರತಿ-ದಾಳಿ ಮಾಡುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಕಾಲ ಬದಲಾಯಿತು. ಭಾರತವು ಯಾರದೇ ಅಥವಾ ಯಾವುದೇ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿಯದೆ ಪಾಕಿಸ್ತಾನದ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಪ್ರಾರಂಭಿಸಿತು. ಕೆನಡಾ, ಚೀನಾ ಸೇರಿದಂತೆ ವಿಶ್ವದ ಪ್ರಭಾವಿ ದೇಶಗಳಿಗೆ ತಕ್ಕ ರಾಜತಾಂತ್ರಿಕ ಪ್ರತ್ಯುತ್ತರ ನೀಡಲಾರಂಭಿಸಿತು.

ವಿದೇಶಾಂಗ ಇಲಾಖೆಯಲ್ಲಿ ಸುದೀರ್ಘ ಕಾರ್ಯ ನಿರ್ವಹಿಸಿದ ಮತ್ತು ಅಪಾರ ಅನುಭವ ಹೊಂದಿದ್ದ ವಿದೇಶಾಂಗ ಕಾರ್ಯದರ್ಶಿ ಡಾ. ಎಸ್. ಜೈಶಂಕರರು ವಿದೇಶಾಂಗ ಸಚಿವರಾದರು. ಈ ಇಲಾಖೆಯಲ್ಲಿ ಅವರಿಗಿದ್ದ ಅಪಾರ ಅನುಭವ ಮತ್ತು ಅತ್ಯುತ್ತಮ ಸಂವಹನ ಕೌಶಲ್ಯಗಳಿಂದ ವಿದೇಶಾಂಗ ಇಲಾಖೆಯು ಅತ್ಯಂತ ಬಲಿಷ್ಠ ಸ್ಥಿತಿಗೆ ತಲುಪಿತು. ಗಲ್ಫ್ ದೇಶದಲ್ಲಿ ಮರಣ ದಂಡನೆಗೆ ಒಳಗಾಗಿದ್ದ ೮ ಭಾರತೀಯರ ಶಿಕ್ಷೆಯನ್ನು ರದ್ದುಗೊಳಿಸಿ ಅವರನ್ನು ಗೌರವದಿಂದ ಭಾರತಕ್ಕೆ ಮರಳಿ ತರುವ ವಿಷಯವಿರಲಿ, ಭಾರತದೊಂದಿಗೆ ಪೂರ್ವಗ್ರಹದಿಂದ ವರ್ತಿಸುವ ಕೆನಡಾದಂತಹ ದೇಶಕ್ಕೆ ಎಚ್ಚರಿಕೆ ನೀಡಿ ಅವರ ರಾಜತಾಂತ್ರಿಕರನ್ನು ದೇಶದಿಂದ ಉಚ್ಚಾಟಿಸುವ ವಿಷಯವಿರಲಿ ಅಥವಾ ಒಂದೇ ಸಮಯದಲ್ಲಿ ವಿಶ್ವದ ಅಮೆರಿಕ ಮತ್ತು ರಷ್ಯಾ, ಇರಾನ್, ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನ ಹಾಗೂ ಗಲ್ಫ್ ದೇಶಗಳೊಂದಿಗೆ ಸೌಹಾರ್ದಯುತ ಮತ್ತು ವ್ಯಾಪಾರ ಸಂಬಂಧಗಳನ್ನು ಕಾಯ್ದುಕೊಳ್ಳುವ ವಿಷಯವಿರಲಿ; ಭಾರತದ ವಿದೇಶಾಂಗ ಇಲಾಖೆಯು ತನ್ನ ಬುದ್ಧಿವಂತಿಕೆ ಮತ್ತು ರಾಜತಾಂತ್ರಿಕ ಕೌಶಲ್ಯದ ತುಣುಕನ್ನು ತೋರಿಸಿದೆ. ಎರಡು ದೇಶಗಳ ನಡುವಿನ ಯುದ್ಧದ ಪರಿಸ್ಥಿತಿಯಲ್ಲೂ ಭಾರತವು ಅವರೊಂದಿಗೆ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಮುಂದುವರಿಸಿ ಜಗತ್ತಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಧಾರ್ಮಿಕತೆಯೊಂದಿಗೆ ಆಳವಾದ ಬೇರುಗಳು

ಈ ಎಲ್ಲಾ ಬದಲಾವಣೆಗಳ ಕೇಂದ್ರಬಿಂದು ಡಾ. ಎಸ್. ಜೈಶಂಕರ್ ! ಭಾರತದ ಪ್ರಸ್ತುತ ವಿದೇಶಾಂಗ ನೀತಿಯು ರಾಮಾಯಣ ಮತ್ತು ಮಹಾಭಾರತವನ್ನು ಆಧರಿಸಿದೆ ಎಂಬುದನ್ನು ಅವರು ತಮ್ಮ ಪುಸ್ತಕದಲ್ಲಿ ಮತ್ತು ಭಾರತದ ಹಲವು ವೇದಿಕೆಗಳಲ್ಲಿ ಒಪ್ಪಿಕೊಂಡಿದ್ದಾರೆ. ಹನುಮಂತ ಮತ್ತು ಶ್ರೀಕೃಷ್ಣ ಭಾರತದ ವಿದೇಶಾಂಗ ನೀತಿಯ ಆದರ್ಶಗಳಾಗಿದ್ದಾರೆ. ಇದರನ್ವಯ ಎಸ್. ಜೈಶಂಕರ್ ಅವರು ಹಲವು ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕೇಳಿಬಂದ ಆಕ್ಷೇಪಗಳನ್ನು ತಮ್ಮ ತೀಕ್ಷ್ಣ ವಾದಗಳ ಮೂಲಕ ಧೂಳೀಪಟ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಯುರೋಪ್‌ನಲ್ಲಾದ ಸಾರ್ವಜನಿಕ ಸಂವಾದ ಕಾರ್ಯಕ್ರಮವೊಂದರಲ್ಲಿ, ‘ಭಾರತ ಯಾವ ಕಡೆಗೆ ಹೋಗಲಿದೆ ? ಭಾರತ ಎಂದಾದರೂ ಜಾಗತಿಕ ರಾಜಕೀಯಕ್ಕೆ ಪ್ರವೇಶಿಸುತ್ತದೆಯೇ ಅಥವಾ ಕೇವಲ ತಟಸ್ಥವಾಗಿ ನೋಡುತ್ತಿರುತ್ತದೆಯೇ ? ಎಂಬಂತಹ ಹಲವು ಮಾರ್ಮಿಕ ಪ್ರಶ್ನೆಗಳನ್ನು ಕೇಳಲಾಗಿತ್ತು. ಆಗ ಜೈಶಂಕರ್ ಅವರು, ‘ಯುರೋಪ್ ಇಂದಿಗೂ ಹಳೆಯ ಮನಸ್ಥಿತಿಯಲ್ಲೇ ಇದೆ. ಯುರೋಪ್‌ಗೆ ತನ್ನ ಸಮಸ್ಯೆಗಳೇ ಇಡೀ ಜಗತ್ತಿನ ಸಮಸ್ಯೆಗಳೆಂದು ಅನಿಸುತ್ತದೆ; ಆದರೆ ವಾಸ್ತವದಲ್ಲಿ ಜಗತ್ತಿನ ಸಮಸ್ಯೆಗಳೇ ಬೇರೆ ಇವೆ. ಯುರೋಪ್ ತನ್ನ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಖಂಡತುಂಡವಾಗಿ ಹೇಳಿದರು. ಹಾಗೆಯೇ ಅವರು ಮುಂದುವರಿದು, ‘ಭಾರತ ಈ ದೇಶಗಳೊಂದಿಗೆ ಹೋಗಬೇಕು ಅಥವಾ ಆ ದೇಶಗಳೊಂದಿಗೆ ಹೋಗಬೇಕು ಎಂಬ ಯಾವುದೇ ಅಗತ್ಯ ನಮಗಿಲ್ಲ. ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ, ನಮ್ಮಲ್ಲಿ ಸಾಮರ್ಥ್ಯವಿದೆ. ನಮ್ಮ ನೀತಿಗಳನ್ನು, ಗುರಿಗಳನ್ನು ನಾವೇ ಏಕೆ ನಿರ್ಧರಿಸಬಾರದು ? ಎಂದರು. ಅವರ ಈ ಉತ್ತರಗಳು ಹಲವು ದಶಕಗಳಿಂದ ನಡೆದುಬಂದಿದ್ದ ಪಾಶ್ಚಿಮಾತ್ಯ ದೇಶಗಳ ಪ್ರಭುತ್ವದ ಮನಸ್ಥಿತಿಯ ಮೇಲೆ ನೇರ ಪ್ರಹಾರ ನಡೆಸಿ ಭಾರತದ ಅಸ್ತಿತ್ವವನ್ನು ಎತ್ತಿಹಿಡಿದವು.

೨೦೨೨ ನೇ ಸಾಲಿನಲ್ಲಿ ವಾಷಿಂಗ್ಟನ್‌ನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಸಚಿವ ಮಟ್ಟದ ಸಭೆ ನಡೆಯಿತು. ತದನಂತರ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕೆನ್ ಅವರು, ‘ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರ ಕುರಿತು ಅಮೆರಿಕ ನಿಗಾ ಇಟ್ಟಿದೆ ಎಂದು ಹೇಳಿದ್ದರು. ಇದಕ್ಕೆ ಜೈಶಂಕರ್ ಅವರು ಮರುದಿನವೇ ಅಮೆರಿಕದ ನೆಲದಲ್ಲೇ ದಿಟ್ಟತನದಿಂದ, ‘ಜನರಿಗೆ ನಮ್ಮ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಂಪೂರ್ಣ ಹಕ್ಕಿದೆ; ಆದರೆ ಅವರ ಈ ಅಭಿಪ್ರಾಯಗಳ ಹಿಂದೆ ಯಾವ ಹಿತಾಸಕ್ತಿಗಳು, ಯಾವ ‘ಲಾಬಿಗಳು ಮತ್ತು ಯಾವ ‘ವೋಟ್ ಬ್ಯಾಂಕ್ ಕೆಲಸ ಮಾಡುತ್ತಿದೆ ಎಂಬುದರ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಸಮಾನ ಹಕ್ಕು ನಮಗೂ ಇದೆ. ಮಾನವ ಹಕ್ಕುಗಳ ಬಗ್ಗೆ ಚರ್ಚೆ ಬಂದಾಗ ಭಾರತ ಎಂದಿಗೂ ಹಿಂದೆ ಸರಿಯುವುದಿಲ್ಲ. ಅಮೆರಿಕದಲ್ಲೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಮತ್ತು ನಾವು ಈ ವಿಷಯವನ್ನು ಇಲ್ಲೂ ಪ್ರಸ್ತಾಪಿಸುತ್ತೇವೆ ಎಂದರು. ಬಲಿಷ್ಠ ಅಮೆರಿಕಕ್ಕೆ ಅದರದ್ದೇ ನೆಲದಲ್ಲಿ ಎಚ್ಚರಿಕೆ ನೀಡಿದ ಜೈಶಂಕರ್ ಬಹುಶಃ ಮೊದಲ ವಿದೇಶಾಂಗ ಸಚಿವರಾಗಿದ್ದಾರೆ. ಇದರಿಂದಾಗಿ ಭಾರತದ ರಾಜತಾಂತ್ರಿಕ ಶಕ್ತಿ ಮತ್ತು ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಜಗತ್ತು ನೋಡುವಂತಾಯಿತು. ಅಮೆರಿಕದ ಭಾರತದ್ವೇಷಿ ಉದ್ಯಮಿ ಜಾರ್ಜ್ ಸೊರೊಸ್ ಅವರ ಭಾರತ ವಿರೋಧಿ ಮನಸ್ಥಿತಿ ಮತ್ತು ಹೇಳಿಕೆಗಳ ಮೇಲೆ ಕಠಿಣ ಪ್ರಹಾರ ನಡೆಸಿ ಸೊರೊಸ್ ಅವರ ಸಂಸ್ಥೆ ಮತ್ತು ಅವರ ದೇಣಿಗೆಯ ಕಾರ್ಯವನ್ನೇ ಪ್ರಶ್ನಿಸಿ ಅವರ ಯೋಗ್ಯತೆಯನ್ನು ತೋರಿಸಿಕೊಟ್ಟರು.

ಜೈಶಂಕರರು ಅಮೆರಿಕಕ್ಕೆ, ‘ಭಾರತವು ಅಮೆರಿಕದ ‘ಪಾಲುದಾರನೇ ಹೊರತು, ‘ಅನುಯಾಯಿ ಅಲ್ಲ ಎಂದು ಸ್ಪಷ್ಟಪಡಿಸಿ ದ್ದಾರೆ. ಅವರು ಅಮೆರಿಕದೊಂದಿಗೆ ಸ್ನೇಹಸಂಬಂಧವನ್ನು ಕಾಯ್ದುಕೊಳ್ಳುವಾಗ ಭಾರತದ ಸಾರ್ವಭೌಮತ್ವಕ್ಕೆ ಅತ್ಯುನ್ನತ ಸ್ಥಾನ ನೀಡುತ್ತಾರೆ. ಭಾರತವು ಅಮೆರಿಕದ ಹಂಗಿನಲ್ಲಿಲ್ಲ ಮತ್ತು ಹೆದರುವುದೂ ಇಲ್ಲ ಎಂಬುದನ್ನು, ಅಮೆರಿಕವು ಭಾರತದ ಮೇಲೆ ಶೇ. ೫೦ ರಷ್ಟು ಆಮದು ಸುಂಕವನ್ನು ಹೇರಿದಾಗ, ಭಾರತವು ಯುರೋಪ್‌ನೊಂದಿಗೆ ಅತಿ ದೊಡ್ಡ ವ್ಯಾಪಾರ ಒಪ್ಪಂದವನ್ನು ಮಾಡಿ ಅಮೆರಿಕಕ್ಕೆ ಭಾರಿ ಆಘಾತ ನೀಡಿ ತೋರಿಸಿಕೊಟ್ಟಿತು. ಇದು ಅಮೆರಿಕದ ವಿರುದ್ಧ ಎಸ್. ಜೈಶಂಕರ್ ಅವರ ದೊಡ್ಡ ತಂತ್ರವಾಗಿತ್ತು. ಒಟ್ಟಾರೆಯಾಗಿ ಜಗತ್ತಿನಲ್ಲಿ ಭಾರತದ ಪ್ರಭಾವ ಹೆಚ್ಚಾಗಲು ‘ಜೈಶಂಕರ್ ಅವರೇ ಕಾರಣ ಮತ್ತು ಈ ಬಗ್ಗೆ ಭಾರತಕ್ಕೆ ಸಾರ್ಥಕ ಹೆಮ್ಮೆಯಿದೆ ಎಂಬುದನ್ನು ಜಗತ್ತು ನೆನಪಿನಲ್ಲಿಡಬೇಕು !

ಭಾರತದ ವಿದೇಶಾಂಗ ನೀತಿ ಎಸ್. ಜೈಶಂಕರ್ ಅವರ ಎಂತಹ ಪ್ರದರ್ಶನ!