ಇರಾನ್‌ ಅಥವಾ ‘ಜಿಹಾದ್‌’; ಸಹಾಯ ಯಾರಿಗೆ ?

ಯುದ್ಧದಲ್ಲಿ ಇರಾನ್‌  ಅನುಭವಿಸುತ್ತಿರುವ ಭಾರಿ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಭಾರತದ ಮುಸಲ್ಮಾನರು ಇರಾನ್‌ಗೆ ಸಹಾಯ ಮಾಡುತ್ತಿದ್ದಾರೆ. ಪ್ರಸ್ತುತ ಇರಾನ್‌ ಹಾಗೂ ಅಮೆರಿಕ-ಇಸ್ರೇಲ್‌ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಇರಾನ್‌ನ ಸೈನ್ಯದ ನೆಲೆಗಳು ಮತ್ತು ರಕ್ಷಣಾ ವ್ಯವಸ್ಥೆಯ ಸಾಮಗ್ರಿಗಳನ್ನು ನಾಶಪಡಿಸುವುದರ ಜೊತೆಗೆ, ಈಗ ಇರಾನಿನ ತೈಲ ಸಂಸ್ಕರಣಾ ಘಟಕಗಳು ಮತ್ತು ತೈಲ ಸಂಗ್ರಹಣಾ ಟ್ಯಾಂಕ್‌ಗಳನ್ನು ಗುರಿಯಾಗಿಸಿವೆ. ಯುದ್ಧದಲ್ಲಿ ಇರಾನ್‌ನ ನೂರಾರು ನಾಗರಿಕರು ಹತರಾಗಿದ್ದಾರೆ ಮತ್ತು ಆ ದೇಶಕ್ಕೆ ಭಾರಿ ಆರ್ಥಿಕ ನಷ್ಟ ಉಂಟಾಗಿದೆ. ಇದರಿಂದಾಗಿ ಭಾರತದ ಮುಸಲ್ಮಾನ ಸಮುದಾಯದ ಮನಸ್ಸು ಇರಾನ್‌ ಪರವಾಗಿ ಮಿಡಿದಿದ್ದು, ಅವರು ಹಣ, ಚಿನ್ನಾಭರಣ ಮತ್ತು ಇತರ ಸಾಮಗ್ರಿಗಳನ್ನು ಇರಾನ್‌ಗೆ ಸಹಾಯವಾಗಿ ಕಳುಹಿಸಲು ಪ್ರಾರಂಭಿಸಿದ್ದಾರೆ. ಕೆಲವರು ಗುಂಪುಗಳಾಗಿ ಈ ಸಹಾಯವನ್ನು ಸಂಗ್ರಹಿಸಿದ್ದರೆ, ಇನ್ನು ಕೆಲವರು ನೇರವಾಗಿ ಇರಾನ್‌ ಸರಕಾರಕ್ಕೆ ಹಣವನ್ನು ಕಳುಹಿಸಿದ್ದಾರೆ. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ ಸಮಾಜದ ಮೇಲೆ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸಂಕಷ್ಟಗಳು ಬಂದಿವೆ. ಇಂತಹ ಸಮಯದಲ್ಲಿ ಭಾರತೀಯ ಮುಸಲ್ಮಾನರು ಸಹಾಯ ಮಾಡಲು ಮುಂದೆ ಬಂದಿರುವುದನ್ನು ಎಂದಾದರೂ ನೋಡಿದ್ದೀರಾ ?

ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣ ಸಂಗ್ರಹ !

ಕಾಶ್ಮೀರ ಕಣಿವೆಯಿಂದ ೧೭ ಕೋಟಿ ೯೧ ಲಕ್ಷ ರೂಪಾಯಿಗಳ ಸಹಾಯವನ್ನು ಇರಾನ್‌ಗೆ ಕಳುಹಿಸಲಾಗಿದೆ, ಅದರಲ್ಲಿ ೯೫ ಲಕ್ಷ ರೂಪಾಯಿಗಳು ಕೇವಲ ಬುಡ್ಗಾಮ್‌ ಜಿಲ್ಲೆಯೊಂದರಿಂದಲೇ ಬಂದಿವೆ. ಮಾನವೀಯ ಸಹಾಯದ ಹೆಸರಿನಲ್ಲಿ ಸಂಗ್ರಹಿಸಲಾದ ಈ ಹಣವನ್ನು ಭಾರತವಿರೋಧಿ ಚಟುವಟಿಕೆಗಳು ಮತ್ತು ಪ್ರತ್ಯೇಕತಾವಾದವನ್ನು ಪೋಷಿಸಲು ಬಳಸಬಹುದು ಎಂಬ ಭೀತಿ ವ್ಯಕ್ತವಾಗುತ್ತಿದೆ. ಸ್ಥಳೀಯ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿರುವ ಮಾಹಿತಿಯಂತೆ, ಜಕಾತ್‌ ಮತ್ತು ದೇಣಿಗೆಯ ಹೆಸರಿನಲ್ಲಿ ಸಂಗ್ರಹಿಸಲಾಗುತ್ತಿರುವ ಹಣದ ಬಹುಪಾಲು ಹಣವನ್ನು ಸಂಗ್ರಹಕಾರರೇ ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಮೌಲ್ವಿ ಬರ್ಕಾತಿ ಎಂಬುವವರು ಕೂಡ ಜನರಿಂದ ದೇಣಿಗೆ ಪಡೆದು ಸುಮಾರು ಒಂದೂವರೆ ಕೋಟಿ ರೂಪಾಯಿಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಮತ್ತು ‘ಮನಿ ಲಾಂಡ್ರಿಂಗ್‌’ಗಾಗಿ ಬಳಸಿದ್ದರು. ಭಾರತ ಸರಕಾರವು ಇರಾನ್‌ಗೆ ಸಹಾಯ ಮಾಡುವುದು ದೇಶದ ವಿಶಾಲ ವಿದೇಶಾಂಗ ನೀತಿಯ ಭಾಗವಾಗಿರಬಹುದು; ಆದರೆ ಇಲ್ಲಿನ ಮುಸಲ್ಮಾನರು ಅದಕ್ಕಾಗಿ ಮುಂದಾಳತ್ವ ವಹಿಸುವುದು ಮತ್ತು ಸಹಾಯದ ಹೆಸರಿನಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಹಣವನ್ನು ವರ್ಗಾಯಿಸುವುದು ಮುಸಲ್ಮಾನರು ಮತ್ತು ದೇಶ ಇಬ್ಬರಿಗೂ ಮಾಡುವ ದ್ರೋಹವಾಗಿದೆ. ಹಿಂದೆ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ನೇರವಾಗಿ ಪಾಕಿಸ್ತಾನದಿಂದ ಹಣ ನೀಡಲಾಗುತ್ತಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳು ಕಣಿವೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದವು. ಕಳೆದ ೩-೪ ವರ್ಷಗಳಿಂದ ಅದರ ಪ್ರಮಾಣ ಕಡಿಮೆಯಾಗಿದ್ದರೂ, ಅದಕ್ಕೂ ಮೊದಲು ಕಾಶ್ಮೀರ ಕಣಿವೆಯು ಭಯಾನಕ ಭಯೋತ್ಪಾದನೆಯನ್ನು ಅನುಭವಿಸಿದೆ. ಕಾಶ್ಮೀರಿ ಹಿಂದೂಗಳನ್ನು ಅವರ ಮನೆಗಳಿಂದ ಹೊರಹಾಕಲಾಯಿತು, ಕೆಲವರನ್ನು ಪರಿಚಿತ ಮುಸಲ್ಮಾನರೇ ಕೊಂದರು, ಅನೇಕ ಕಾಶ್ಮೀರಿ ಹೆಣ್ಣುಮಕ್ಕಳ ಮೇಲೆ ನೆರೆಯ ಮುಸಲ್ಮಾನರೇ ಸಾಮೂಹಿಕ ಅತ್ಯಾಚಾರ ಮಾಡಿ ಅವರ ಹತ್ಯೆ ಮಾಡಿದರು. ಆ ಸಮಯದಲ್ಲಿ ಇತರ ಮುಸಲ್ಮಾನರು ಅವರನ್ನು ತಡೆಯಲು ಏಕೆ ಪ್ರಯತ್ನಿಸಲಿಲ್ಲ ? ಇದರ ಕಾರಣವೆಂದರೆ, ಮತಾಂಧರ ದೃಷ್ಟಿಯಲ್ಲಿ ಹಿಂದೂಗಳು ‘ಕಾಫಿರ್’ ಆಗಿದ್ದಾರೆ.

ಕೇವಲ ಧರ್ಮಬಾಂಧವರಿಗಷ್ಟೇ ಸಹಾಯ !

ಇಲ್ಲಿ ಪ್ರಶ್ನೆ ಇರುವುದು ಮನಸ್ಥಿತಿ ಮತ್ತು ಸಿದ್ಧಾಂತದ ಬಗ್ಗೆ. ಯಾವ ದೇಶವು ತಮ್ಮ ಧರ್ಮಬಾಂಧವರದ್ದಾಗಿದೆಯೋ, ಯಾವ ದೇಶವು ಅವರ ಧರ್ಮವನ್ನು ನಂಬುತ್ತದೆಯೋ ಅಂತಹವರಿಗೇ ಸಹಾಯ ಮಾಡಲಾಗುತ್ತದೆ. ಅದೇ ರೀತಿ ತಮ್ಮ ಧರ್ಮದ ವ್ಯಕ್ತಿ ಎಷ್ಟೇ ಕ್ರೂರಿ, ಅತ್ಯಾಚಾರಿ ಅಥವಾ ಅನ್ಯಧರ್ಮೀಯರ ಮೇಲೆ ದೌರ್ಜನ್ಯ ಎಸಗುವವನಾಗಿದ್ದರೂ, ಆತ ಸಂಕಷ್ಟದಲ್ಲಿದ್ದಾಗ ಆತನಿಗೆ ಸಹಾಯ ಮಾಡುವುದು ಇವರ ಧರ್ಮಬಾಂಧವ್ಯದ ಸಂಕೇತ ! ಇದೇ ಕಾರಣದಿಂದಾಗಿ ಕಾಶ್ಮೀರದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದರೂ, ಸೈನ್ಯವು ಶೋಧ ಕಾರ್ಯಾಚರಣೆ ನಡೆಸಿದರೂ ಭಯೋತ್ಪಾದಕರು ಸಿಗುತ್ತಿಲ್ಲ; ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಅಥವಾ ದೀರ್ಘಕಾಲದವರೆಗೆ ಯಾರದ್ದೋ ಮನೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ. ಈ ಕಾರಣದಿಂದಲೇ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ದಶಕಗಳೇ ಬೇಕಾದವು.

ಕಾಶ್ಮೀರದಲ್ಲಿ ಸ್ಥಳೀಯರಿಗೆ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಬೆಂಬಲ ನೀಡುತ್ತಿದ್ದ ಪಾಕಿಸ್ತಾನದ ‘ಕಮಾಂಡರ್‌ಗಳು’ ಈಗ ಹತರಾಗುತ್ತಿದ್ದಾರೆ ಮತ್ತು ಗಡಿಗಳು ಹೆಚ್ಚು ಭದ್ರವಾಗಿವೆ. ಇದರಿಂದಾಗಿ ಪಾಕಿಸ್ತಾನಕ್ಕೆ ಹಣ ಮತ್ತು ಜಿಹಾದಿಗಳನ್ನು ಪೂರೈಸುವುದು ಕಷ್ಟಕರವಾಗಿದೆ. ಭಯೋತ್ಪಾದಕರ ಆರ್ಥಿಕ ಮೂಲಗಳು ಬತ್ತಿ ಹೋಗುತ್ತಿರುವುದರಿಂದ, ಅವರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇಂತಹ ಹಣ ಸಂಗ್ರಹದ ಮೂಲಕ ಆ ಪರ್ಯಾಯ ಮಾರ್ಗಗಳು ಬಯಲಿಗೆ ಬರುತ್ತಿವೆ.

ಇರಾನ್‌ನಿಂದ ಇಬ್ಬಗೆಯ ಆಟ ?

ಇರಾನ್‌ನ ವಿಷಯಕ್ಕೆ ಬರುವುದಾದರೆ, ಇರಾನ್‌ ಇಸ್ರೇಲ್‌ ಮೇಲೆ ಹಾರಿಸಿದ ಕ್ಷಿಪಣಿಗಳ ಮೇಲೆ ಭಾರತಕ್ಕೆ ಧನ್ಯವಾದ ಅರ್ಪಿಸುವ ಬರಹಗಳಿದ್ದವು. ಭಾರತ ಮತ್ತು ಇಸ್ರೇಲ್‌ ನಡುವೆ ಉತ್ತಮ ಸಂಬಂಧವಿದೆ. ಹಾಗಿದ್ದಲ್ಲಿ, ಇದು ಭಾರತ ಮತ್ತು ಇಸ್ರೇಲ್‌ ನಡುವಿನ ಸಂಬಂಧವನ್ನು ಕೆಡಿಸಲು ಇರಾನ್‌ ಮಾಡಿದ ಪ್ರಯತ್ನವಲ್ಲವೇ ? ಹೋರ್ಮುಜ್‌ ಜಲಸಂಧಿಯಲ್ಲಿ ಬಂದ ವ್ಯಾಪಾರಿ ನೌಕೆಗಳನ್ನು ಇರಾನ್‌ ಸುತ್ತುವರಿಯಲು ಪ್ರಯತ್ನಿಸಿತ್ತು, ಅದರಲ್ಲಿ ಭಾರತೀಯ ನೌಕೆಗಳೂ ಇದ್ದವು. ಅಮೆರಿಕ ಈ ಜಲಸಂಧಿಯಲ್ಲಿ ಭದ್ರತೆ ನೀಡಲು ನಿರಾಕರಿಸಿದಾಗ ಮತ್ತು ಶಕ್ತಿಶಾಲಿ ಪಾಶ್ಚಿಮಾತ್ಯ ದೇಶಗಳೂ ತಮ್ಮ ಯುದ್ಧನೌಕೆಗಳನ್ನು ಕಳುಹಿಸಲು ಸಿದ್ಧರಿಲ್ಲದಿದ್ದಾಗ, ಇರಾನ್‌ ಇದರ ಲಾಭ ಪಡೆದು ಅಲ್ಲಿಂದ ಹಾದುಹೋಗುವ ನೌಕೆಗಳಿಂದ ಸುಲಿಗೆ ವಸೂಲಿ ಮಾಡಲು ಪ್ರಾರಂಭಿಸಿತು. ಭಾರತವು ರಾಜತಾಂತ್ರಿಕವಾಗಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿತು; ಆದರೆ ಇರಾನ್‌ ಅದಕ್ಕೆ ಬಗ್ಗಲಿಲ್ಲ. ಯಾವಾಗ ಭಾರತದ ಬಲಿಷ್ಠ ಯುದ್ಧನೌಕೆಯು ಭಾರತೀಯ ನೌಕೆಗಳ ರಕ್ಷಣೆಗಾಗಿ ಅಲ್ಲಿಗೆ ಧಾವಿಸಿತೋ, ಆಗ ಇರಾನ್‌ ದಾರಿಗೆ ಬಂದು ಭಾರತೀಯ ನೌಕೆಗಳಿಗೆ ದಾರಿ ಮಾಡಿಕೊಟ್ಟಿತು. ಅಂದರೆ, ಭಾರತವು ತನ್ನ ಶಕ್ತಿಯನ್ನು ತೋರಿಸುವವರೆಗೂ, ಭಾರತವು ಎಷ್ಟೇ ಸಹಾಯ ಮಾಡಿದರೂ ಇರಾನ್‌ ಅದಕ್ಕೆ ಬೆಲೆ ನೀಡಿರಲಿಲ್ಲ. ಇದು ಕೂಡ ಇರಾನ್‌ನ ಮತಾಂಧ ವೃತ್ತಿಯಲ್ಲವೇ ?ಭಾರತ ಸರಕಾರ ಇರಾನ್‌ಗೆ ಸಹಾಯ ಮಾಡಿದರೂ, ಅನೇಕ ಭಾರತೀಯರ ಮನಸ್ಸಿನಲ್ಲಿ ಒಂದು ಪ್ರಶ್ನೆ ಉಳಿದಿದೆ: ಯಾವ ದೇಶವು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆಯೋ, ಕೊಲ್ಲಿ ರಾಷ್ಟ್ರಗಳಲ್ಲಿ ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸಿ ಭಯವನ್ನು ಸೃಷ್ಟಿಸುತ್ತದೆಯೋ, ಅಂತಹ ದೇಶಕ್ಕೆ ನಿಜವಾಗಿಯೂ ಸಹಾಯ ಮಾಡಬೇಕೇ ? ತನ್ನ ಪ್ರದೇಶದಲ್ಲಿ ಇತರರ ಮೇಲೆ ದಬ್ಬಾಳಿಕೆ ನಡೆಸುವ ದೇಶಕ್ಕೆ ಸಹಾಯ ಮಾಡುವುದು ಭಯೋತ್ಪಾದನೆಗೆ ಸಹಾಯ ಮಾಡಿದಂತೆ ಅಲ್ಲವೇ ?

ಏನೇ ಇರಲಿ, ಭಾರತದ ದೃಷ್ಟಿಯಿಂದ ಇರಾನ್‌ಗೆ ಸಹಾಯವು ಸ್ಥಳೀಯ ಗುಂಪುಗಳಿಂದಲ್ಲದೆ, ಕೇವಲ ಸರಕಾರದ ನಿಯಂತ್ರಣದಲ್ಲಿ ಮಾತ್ರ ಸಂಗ್ರಹವಾಗುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ‘ಭಯೋತ್ಪಾದನೆಯ ಪೆಡಂಭೂತ’ ಮತ್ತೆ ಜಾಗೃತಗೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ !