ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪಾಟಲೀಪುತ್ರದಲ್ಲಿ (ಬಿಹಾರ) ‘ಅಂತರರಾಷ್ಟ್ರೀಯ ಜ್ಯೋತಿಷ್ಯ, ವಾಸ್ತು ಮತ್ತು ತಂತ್ರ ಸಮ್ಮೇಳನ’ದಲ್ಲಿ ಸನ್ಮಾನ

  • ಧರ್ಮ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿನ ಅಸಾಧಾರಣ ಕೊಡುಗೆಗಾಗಿ ಗೌರವ!

  • ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಅವರಿಂದ ಸನ್ಮಾನ ಸ್ವೀಕಾರ!

ಸದ್ಗುರು ನೀಲೇಶ ಸಿಂಗಬಾಳ ಅವರಿಗೆ ಸನ್ಮಾನಚಿಹ್ನೆಯನ್ನು ಪ್ರದಾನ ಮಾಡುತ್ತಿರುವ ವಿಶ್ವ ಜ್ಯೋತಿಷ್ಯ ಮಹಾಸಂಘದ ಅಧ್ಯಕ್ಷರಾದ ಡಾ. ಲೋಕರಾಜ ಪೌಡೇಲ್, ಸುಪ್ರಸಿದ್ಧ ಜ್ಯೋತಿಷಾಚಾರ್ಯ ಡಾ. ಎಚ್.ಎಸ್. ರಾವತ ಮತ್ತು ವಿಶ್ವ ಜ್ಯೋತಿಷ್ಯ ಮಹಾಸಂಘದ ಸಭಾಪತಿಗಳಾದ ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ.

ಪಾಟಲೀಪುತ್ರ (ಬಿಹಾರ), ಏಪ್ರಿಲ್ ೭ (ಸುದ್ದಿ) – ಏಪ್ರಿಲ್ ೪ ರಿಂದ ೬ ರವರೆಗೆ ಆಯೋಜಿಸಲಾಗಿದ್ದ ‘ಅಂತರರಾಷ್ಟ್ರೀಯ ಜ್ಯೋತಿಷ್ಯ, ವಾಸ್ತು ಮತ್ತು ತಂತ್ರ ಸಮ್ಮೇಳನ’ದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಧರ್ಮ ಹಾಗೂ ಅಧ್ಯಾತ್ಮ ಕ್ಷೇತ್ರದಲ್ಲಿನ ಅವರ ಅಸಾಧಾರಣ ಕೊಡುಗೆಗಾಗಿ ‘ಧರ್ಮ ಅಲಂಕಾರ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಪುರಸ್ಕಾರದ ಅಂಗವಾಗಿ ಸನ್ಮಾನ ಚಿಹ್ನೆ, ಮಾ ಪಟನ ದೇವಿ ಸನ್ಮಾನ ಪದಕ ಮತ್ತು ಪ್ರಮಾಣಪತ್ರವನ್ನು ಪ್ರದಾನ ಮಾಡಲಾಯಿತು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈ ಸಮ್ಮೇಳನವನ್ನು ‘ವರ್ಲ್ಡ್ ಅಸ್ಟ್ರೋ ಫೆಡರೇಶನ್’, ‘ಸೌತ್ ಏಷ್ಯನ್ ಅಸ್ಟ್ರೋ ಫೆಡರೇಶನ್’ ಮತ್ತು ‘ಅಸ್ಟ್ರೋ, ವಾಸ್ತು ಅಂಡ್ ವೇದಿಕ್ ಸೈನ್ಸಸ್’ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬಿಹಾರದ ಗ್ರಾಮೀಣ ಕಾರ್ಯ ವಿಭಾಗದ ಸಚಿವರಾದ ಶ್ರೀ ಅಶೋಕ ಚೌಧರಿ, ನೇಪಾಳದ ರಾಜ ಗುರುಗಳಾದ ಶ್ರೀ ಮಾಧವ ಭಟ್ಟಾರಾಯ, ಅಲ್ಲದೇ ಬಂಗಾಳದ ಕಲೆ ಮತ್ತು ಸಂಸ್ಕೃತಿ ರಾಯಭಾರಿಗಳಾದ ಶ್ರೀ ಅನುಪ ಕುಮಾರ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಸನ್ಮಾನಚಿಹ್ನೆ, ಪದಕ ಹಾಗೂ ಪ್ರಮಾಣಪತ್ರ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಿಂದ ಸಂಶೋಧನೆ ಮಂಡನೆ!

ಈ ಸಮ್ಮೇಳನದಲ್ಲಿ ಗೋವಾದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ವಿವಿಧ ಸಂಶೋಧನೆಗಳನ್ನು ಮಂಡಿಸಲಾಯಿತು. ವಾಸ್ತುವಿನಲ್ಲಿ ನಾಮಜಪ ಮಾಡುವುದರಿಂದ ಆಗುವ ಸಕಾರಾತ್ಮಕ ಪರಿಣಾಮಗಳು, ಅಯೋಧ್ಯೆಯ ಶ್ರೀರಾಮಮಂದಿರ, ಭಾರತೀಯ ಗೋಮಾತೆ, ಭಾರತೀಯ ಶಾಸ್ತ್ರೀಯ ಸಂಗೀತ ಮುಂತಾದ ವಿವಿಧ ವಿಷಯಗಳ ಮೇಲೆ ಮತ್ತು ‘ಔರಾ’ (ಪ್ರಭಾವಳಿ) ಹಾಗೂ ‘ಎನರ್ಜಿ ಸ್ಕ್ಯಾನರ್ಸ್’ ಮೂಲಕ ನಡೆಸಲಾದ ಸಂಶೋಧನಾ ಕಾರ್ಯವನ್ನು ಮಂಡಿಸಲಾಯಿತು. ಇದರಿಂದ ಸನಾತನ ಧರ್ಮದ ವೈಜ್ಞಾನಿಕತೆಯು ಸಾಬೀತಾಯಿತು, ಹಾಗೆಯೇ ‘ಧರ್ಮದ ಪಾಲನೆ ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿಯು ಹೇಗೆ ಹೆಚ್ಚಾಗುತ್ತದೆ?’ ಎಂಬುದು ಎಲ್ಲರಿಗೂ ಸ್ಪಷ್ಟವಾಯಿತು.

೧೯೯೮ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರು ಭಾರತವು ವಿಶ್ವಗುರುವಾಗುವ ಬಗ್ಗೆ ನುಡಿದ ಭವಿಷ್ಯವಾಣಿ

ಸಂಶೋಧನೆಯನ್ನು ಮಂಡಿಸುತ್ತಿರುವಾಗ ಎಡಭಾಗದಲ್ಲಿ ಸದ್ಗುರು ನೀಲೇಶ ಸಿಂಗಬಾಳ ಮತ್ತು ವೇದಿಕೆಯ ಮೇಲೆ ಉಪಸ್ಥಿತರಿರುವ ಸಂತರು ಹಾಗೂ ಗಣ್ಯರು.

ಈ ಸಮ್ಮೇಳನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸದ್ಗುರು ನೀಲೇಶ ಸಿಂಗಬಾಳ ಅವರು ‘ಭಾರತ ಭೂಮಿಯ ಆಧ್ಯಾತ್ಮಿಕ ಶುದ್ಧತೆ ಹಾಗೂ ಅದರ ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಗತಿಯ ಪ್ರಮಾಣ ಹೇಗಿದೆ?’ ಎಂಬ ವಿಷಯದ ಕುರಿತು ಸಂಶೋಧನೆಯನ್ನು ಮಂಡಿಸಿದರು. ಅವರು ಮಾತನಾಡುತ್ತಾ, ೧೯೯೮ ರಲ್ಲೇ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು, ಭಾರತವು ಅಂತಹ ಒಂದು ರಾಷ್ಟ್ರವಾಗಿ ಉದಯಿಸಲಿದೆ, ಸನಾತನ ಧರ್ಮವೇ ಕೇಂದ್ರ ಸ್ಥಾನದಲ್ಲಿರಲಿದೆ ಮತ್ತು ಭಾರತವು ವಿಶ್ವಗುರುವಿನ ಸ್ಥಾನವನ್ನು ಅಲಂಕರಿಸಲಿದೆ ಎಂದು ಭವಿಷ್ಯ ನುಡಿದಿದ್ದರು, ಎಂದು ತಿಳಿಸಿದರು.