ವಾಸ್ತು ಪದವಿನ್ಯಾಸ

ವಾಸ್ತುಶಾಸ್ತ್ರ ವಿಷಯದ ಲೇಖನಮಾಲೆ : ಲೇಖನ ಕ್ರ. ೧೩

ವಾಸ್ತುಶಾಸ್ತ್ರದಲ್ಲಿ ‘ವಾಸ್ತು ಪದವಿನ್ಯಾಸ’ವು ಒಂದು ಮಹತ್ವದ ವಿಷಯವಾಗಿದೆ. ಹಿಂದಿನ ಲೇಖನಗಳಲ್ಲಿ ನಾವು ಭೂಮಿಯ ಶುಭಾಶುಭ ಫಲಗಳು, ವಿಧಗಳು, ವರ್ಣ ಮುಂತಾದ ವಿಷಯಗಳನ್ನು ತಿಳಿದುಕೊಂಡಿದ್ದೇವೆ. ಈಗ ಕಟ್ಟಡವನ್ನು ನಿರ್ಮಿಸುವ ಮೊದಲು ಆ ಭೂಮಿಯ ರೇಖಾಚಿತ್ರವನ್ನು ಮಾಡಬೇಕಾಗುತ್ತದೆ. ಆ ಭಾಗವನ್ನು ನಾವು ಈಗ ತಿಳಿದುಕೊಳ್ಳೋಣ. ಒಂದು ಭೂಖಂಡವನ್ನು ವಿಶಿಷ್ಟ ಪದ್ಧತಿಯಲ್ಲಿ ವಿಭಜಿಸುವುದಕ್ಕೆ ‘ವಾಸ್ತು ಪದವಿನ್ಯಾಸ’ ಎಂದು ಹೇಳುತ್ತಾರೆ. ‘ಪದ’ ಎಂದರೆ ಭಾಗ ಮತ್ತು ವಿನ್ಯಾಸ ಎಂದರೆ ಕ್ರಮದಿಂದ ರಚನೆಯನ್ನು ಮಾಡುವುದು. ಯಾವ ಜಾಗದಲ್ಲಿ ಕಟ್ಟಡವನ್ನು ನಿರ್ಮಿಸಬೇಕಾಗಿದೆಯೋ, ಆ ಜಾಗವನ್ನು ವಿವಿಧ ‘ಪದ’ಗಳಲ್ಲಿ ವಿಭಜನೆಯನ್ನು ಮಾಡಿ ಯೋಗ್ಯ ರಚನೆಯನ್ನು ಮಾಡಬೇಕಾಗುತ್ತದೆ. ‘ಮಾನಸಾರ’ ಎಂಬ ವಾಸ್ತು ಗ್ರಂಥದಲ್ಲಿ ವಿವಿಧ ಪದಗಳ ವಾಸ್ತುಮಂಡಲದ ಉಲ್ಲೇಖವಿದೆ. ಅದರಲ್ಲಿ ೧೦೨೪ ಪದಗಳ ವರೆಗಿನ (ರೂಮ್) ವಾಸ್ತು ಪದವಿನ್ಯಾಸದ ಬಗ್ಗೆ ಮಾಹಿತಿ ನೀಡಲಾಗಿದೆ.

ಶತವೇಶಮಿನಿ ದೇಶಾಂಶ್ಚ ಗೃಹಾದೀನಾಂ ನಿವರ್ತನಮ್‌ |
ಏಕಾಶೀತಿಪದೇನೈವ ಸರ್ವಂ ಸ್ಥಾನಂ ಮಾಪಯೇತ್‌ ||
– ವಿಶ್ವಕರ್ಮಪ್ರಕಾಶ, ಅಧ್ಯಾಯ ೪, ಶ್ಲೋಕ ೩೯

ಅರ್ಥ : ಯಾವ ಸ್ಥಳದಲ್ಲಿ ೧೦೦ ಅಥವಾ ಅದಕ್ಕಿಂತ ಹೆಚ್ಚು ಮನೆಗಳಿವೆಯೋ, ಅಂತಹ ನಿವರ್ತನ (ಅಂದಾಜು ೪ ಸಾವಿರ ಚದರ ಹಸ್ತಗಳಷ್ಟು ಭೂಮಿ) ಪ್ರದೇಶದ ನಿಯೋಜನೆ ಮತ್ತು ಮನೆಗಳ ರಚನೆಯನ್ನು ಎಕಾಶೀತಿಪದ (೮೧ ಪದಗಳ) ವಾಸ್ತುಮಂಡಲಕ್ಕನುಸಾರ ಮಾಡಬೇಕು.

ಶ್ರೀ. ಶ್ರೇಯಸ್ ಪಿಸೋಳಕರ

೧. ‘ಏಕಾಶೀತಿಪದ’ ಮತ್ತು ವಾಸ್ತುಪದಮಂಡಲದ ಪ್ರಕಾರ ಪದಗಳ ಹೆಸರುಗಳು

ನಿವಾಸಿ ವಾಸ್ತು (ಮನೆಗಳು) ಮತ್ತು ಕಚೇರಿಗಳ ದೃಷ್ಟಿಯಿಂದ ನಾವು ‘ಏಕಾಶೀತಿಪದ (೮೧ ಪದಗಳ) ವಾಸ್ತುಮಂಡಲ’ದ ಅಧ್ಯಯನ ಮಾಡೋಣ. ಭೂಮಿಯನ್ನು ಸಮಾನವಾಗಿ ೯ ೯ ಹೀಗೆ ಭಾಗಗಳಾಗಿ ವಿಭಜಿಸುವುದಕ್ಕೆ ‘ಏಕಾಶೀತಿವಾಸ್ತೂಪದ’ವೆಂದು ಕರೆಯುತ್ತಾರೆ. ಈ ಪದಗಳಿಗೆ ಶಾಸ್ತ್ರದಲ್ಲಿ ಅವುಗಳ ವೈಶಿಷ್ಟ್ಯ ಮತ್ತು ಅಲ್ಲಿ ಕಾರ್ಯನಿರ್ವಹಿಸುವ ಶಕ್ತಿಯ ಆಧಾರದ ಮೇಲೆ ನಿರ್ದಿಷ್ಟ ಹೆಸರುಗಳನ್ನು ನೀಡಲಾಗಿದೆ. ವಾಸ್ತುಪುರುಷನ ಜನ್ಮಕಥೆಯಲ್ಲಿ ನಾವು ಓದಿರುವಂತೆ, ೪೫ ದೇವತೆಗಳು ಮತ್ತು ಅಸುರರು ಸೇರಿ ವಾಸ್ತುಪುರುಷನನ್ನು ಕೆಳಮುಖವಾಗಿ ಮಲಗಿಸಿ ಅವನ ಮೇಲೆ ಕುಳಿತರು. ಅವರು ಯಾವ ಸ್ಥಳಗಳಲ್ಲಿ ಸ್ಥಿರವಾದರೋ, ಆ ಭಾಗಗಳು ಆಯಾ ದೇವತೆಗಳ ಅಥವಾ ಅವರ ಶಕ್ತಿಯ ರೂಪದಲ್ಲಿ ಗುರುತಿಸಲ್ಪಟ್ಟವು. ಈ ಬಗ್ಗೆ ಈಗ ತಿಳಿದುಕೊಳ್ಳೋಣ.

ಚತುಶ್ರೀಕೃತೇ ಕ್ಷೇತ್ರೇ ವಿಭಕ್ತೇ ನವಧಾ ತತಃ |
ಮಧ್ಯೇ ಮಹಾದ್ಯುತಿರ್ಬ್ರಹ್ಮಾ ವಿಧೇಯೋ ನವಭಿಃ ಪದೈಃ ||

ತಸ್ಮಾದನಂತರಂ ಪ್ರಾಚ್ಯಾಂ ಷಟ್ಪದಃ ಕೀರ್ತಿತೋಽರ್ಯಮಾ |
ಆಗ್ನೇಯಕರ್ಣೇ ಸವಿತೃಸಾವಿತ್ರೌ ಪದಿಕಾವುಭೌ ||

ಬ್ರಹ್ಮಣೋಽನಂತರಂ ಯಾಮ್ಯೇ ವಿವಸ್ವಾನ್‌ ಷಟ್ಪದಾಶ್ರಿತಃ |
ನೈಋತೇ ಪಿದಕೋಕರ್ಣೇ ಜಯೇಂದ್ರೌ ಕಥಿತಾವುಭೌ ||

ಷಟ್ಪದಃಸ್ಯಾತ್‌ ತತೋ ಮಿತ್ರಃ ಕಾಷ್ಠಾಯಾಂ ಪತ್ಯುರಮ್ಭಸಃ |
ಕರ್ಣೇಽಪರೋತ್ತರೇ ಯಕ್ಷ್ಮಾ ರುದ್ರಶ್ಚ ಪದಿಕಾವುಭೌ ||

ಷಡ್ಭಿಃ ಪದೈಃತತಃ ಸೌಮ್ಯೇ ನಿಶ್ಚಲಃ ಪೃಥಿವೀಧರಃ |
ಆಪಸ್ತಥಾಪವತ್ಸಶ್ಚ ಪದಿಕಾವೀಶದಿಗ್ಗತೌ ||

ಅಗ್ನಿಸ್ತದನು ಪರ್ಜನ್ಯೋ ಜಯಂತಶ್ಚೇಂದ್ರ ಏವ ಚ |
ರವಿಃ ಸತ್ಯೋ ಭೃಶಶ್ಚೇತಿ ನಭಸ್ತಸ್ಮಾತ್‌ ತತೋಽನಿಲಃ ||

ಪೂಷಾಖ್ಯೋ ವಿತಥಾಖ್ಯಶ್ಚ ಗೃಹಕ್ಷತಯಮಾವಥ |
ಗಂಧರ್ವೊ ಭೃರಾಜಶ್ಚ ಮೃಗಃ ಪಿತೃಗಣಸ್ತತಃ ||

ದೌವಾರಿಕೋಽಥ ಸುಗ್ರೀವಃ ಪುಷ್ಪದಂತೋ ಜಲೇಶ್ವರಃ |
ಅಸುರಃ ಶೋಷನಾಮಾ ಚ ಪಾಪಯಕ್ಷ್ಮಾ ತತಃ ಪರಮ್‌ ||

ರೋಗೋ ನಾಗಶ್ಚ ಮುಖ್ಯಶ್ಚ ಭಲ್ಲಾಟಃ ಸೋಮ ಏವ ಚ |
ಚರಕೋಽಥದಿತಿರ್ದೈತ್ಯಮಾತೇತಿ ಪದದೇವತಾಃ ||- ಸಮರಾಙ್ಗಣಸೂತ್ರಧಾರ, ಅಧ್ಯಾಯ ೧೪, ಶ್ಲೋಕ ೧ ರಿಂದ ೧೦

ಮೇಲಿನ ಸಂಸ್ಕೃತ ಶ್ಲೋಕಗಳ ಪ್ರಕಾರ ೮೧ ಪದಗಳಿಗೆ ವಿವಿಧ ಹೆಸರುಗಳನ್ನು ನೀಡಲಾಗಿದೆ. ಮಧ್ಯಭಾಗದ ೯ ಪದಗಳಲ್ಲಿ ಬ್ರಹ್ಮನ ಸ್ಥಾನವಿರುತ್ತದೆ. ಇದಕ್ಕೇ ನಾವು ‘ಬ್ರಹ್ಮಮಂಡಲ’ ಎಂದು ಕರೆಯುತ್ತೇವೆ. ಬ್ರಹ್ಮಮಂಡಲದ ಪೂರ್ವಕ್ಕೆ ೬ ಪದಗಳಲ್ಲಿ ‘ಅರ್ಯಮಾ’ನ ಸ್ಥಾನವಿರುತ್ತದೆ. ಆಗ್ನೇಯ ದಿಕ್ಕಿನ ಕರ್ಣರೇಖೆಯಿಂದ ವಿಭಾಗಿಸಲ್ಪಟ್ಟ ಪದಗಳಲ್ಲಿ ‘ಸವಿತೃ’ ಮತ್ತು ‘ಸಾವಿತ್ರ’ ಎಂಬ ದೇವತೆಗಳ ಸ್ಥಾನವಿರುತ್ತದೆ ಮತ್ತು ಬ್ರಹ್ಮಮಂಡಲದ ದಕ್ಷಿಣ ದಿಕ್ಕಿನಲ್ಲಿ ೬ ಪದಗಳ ವಿಸ್ತೀರ್ಣದಲ್ಲಿ ‘ವಿವಸ್ವಾನ್’ ಎಂಬ ದೇವತೆಯು ನೆಲೆಸಿರುತ್ತಾಳೆ. ನೈಋತ್ಯ ಮೂಲೆಯ ಕರ್ಣರೇಖೆಯಿಂದ ವಿಭಾಗಿಸಲ್ಪಟ್ಟ ಪದಗಳಲ್ಲಿ ‘ಜಯ’ ಮತ್ತು ‘ಇಂದ್ರ’ ಎಂಬ ದೇವತೆಗಳ ಸ್ಥಾನವಿರುತ್ತದೆ. ಬ್ರಹ್ಮಮಂಡಲದ ಪಶ್ಚಿಮ ದಿಕ್ಕಿನಲ್ಲಿ ಆರು ಪದಗಳ ವಿಸ್ತೀರ್ಣದಲ್ಲಿ ‘ಮಿತ್ರ’ ಎಂಬ ದೇವತೆಯ ಸ್ಥಾನವಿರುತ್ತದೆ. ವಾಯವ್ಯ ದಿಕ್ಕಿನ ಕರ್ಣರೇಖೆಯ ಮೇಲಿನ ಪದಗಳಲ್ಲಿ ‘ಯಕ್ಷ್ಮಾ’ ಮತ್ತು ‘ರುದ್ರ’ ಎಂಬ ದೇವತೆಗಳು ನೆಲೆಸಿರುತ್ತಾರೆ. ಬ್ರಹ್ಮಮಂಡಲದ ಉತ್ತರ ದಿಕ್ಕಿನಲ್ಲಿ ಆರು ಪದಗಳಲ್ಲಿ ‘ಪೃಥ್ವೀಧರ’ನ ಸ್ಥಾನವಿದ್ದರೆ, ಈಶಾನ್ಯ ಮೂಲೆಯ ಕರ್ಣರೇಖೆಯಿಂದ ವಿಭಾಗಿಸಲ್ಪಟ್ಟ ಎರಡು ಪದಗಳಲ್ಲಿ ‘ಆಪ’ ಮತ್ತು ‘ಆಪವತ್ಸ’ ಎಂಬ ದೇವತೆಗಳ ಸ್ಥಾನವಿರುತ್ತದೆ. ಇವು ವಾಸ್ತುಮಂಡಲದ ಒಳಗಿನ ಭಾಗದ ದೇವತೆಗಳಾಗಿದ್ದಾರೆ. ಮೇಲಿನ ಶ್ಲೋಕಗಳಲ್ಲಿ ವಾಸ್ತುಪದಮಂಡಲದ ಹೊರಭಾಗದಲ್ಲಿರುವ ೩೨ ಪದಗಳ ಹೆಸರುಗಳೂ ಇವೆ. ಮೊದಲಿನ ೧೩ ಪದಗಳು ಮತ್ತು ೩೨ ಹೀಗೆ ಒಟ್ಟು ೪೫ ದೇವತೆಗಳನ್ನು ೮೧ ಪದಗಳಲ್ಲಿ ವಿಭಜಿಸಲಾಗಿದೆ. ಮೇಲಿನ ದೇವತೆಗಳ ಪೈಕಿ ಜಯಂತ, ಭೃಂಶ, ವಿತಥ, ಭೃಂಗರಾಜ, ಸುಗ್ರೀವ, ಶೋಷ, ಮುಖ್ಯ, ಅದಿತಿ ಈ ಪದಗಳಿಗೆ ಪ್ರತ್ಯೇಕ ೨ ಪದಗಳನ್ನು ನೀಡಲಾಗಿದೆ, ಹಾಗೆಯೇ ಈಶಾನ್ಯ ದಿಕ್ಕಿಗೆ, ಚರಕಿ, ಆಗ್ನೇಯ ದಿಶೆಗೆ ವಿದಾರಿ, ನೈಋತ್ಯ ದಿಕ್ಕಿಗೆ ಪುತನಾ, ವಾಯವ್ಯ ದಿಕ್ಕಿಗೆ ಪಾಪರಾಕ್ಷಸಿ,ಪೂರ್ವ ದಿಕ್ಕಿಗೆ ಸ್ಕಂದ, ದಕ್ಷಿಣ ದಿಕ್ಕಿಗೆ ವಿಕಟ, ಪಶ್ಚಿಮ ದಿಕ್ಕಿಗೆ ಜೃಂಭಕ ಮತ್ತು ಉತ್ತರ ದಿಕ್ಕಿಗೆ ಪಿಲಿಪಿಚ್ಛ ಇವರು ಹೊರಗಿನಿಂದ ರಕ್ಷಣೆ ಮಾಡುವ ದೇವತೆಗಳಾಗಿದ್ದಾರೆ.

೨. ಘಟಬಿಂಬ ಸಿದ್ಧಾಂತ

ಈ ವಾಸ್ತುಮಂಡಲವು ಎಲ್ಲಾ ಆಕಾರದ ಭೂಮಿಗಳಿಗೂ ಅನ್ವಯಿಸುತ್ತದೆ. ದೊಡ್ಡ ವಾಸ್ತುವಿಗೆ ಅನ್ವಯಿಸುವ ನಿಯಮವೇ ಸಣ್ಣ ವಾಸ್ತುವಿಗೂ ಅನ್ವಯಿಸುತ್ತದೆ. ಹೇಗೆ ಚಂದ್ರನ ಪ್ರತಿಬಿಂಬವು ಸರೋವರದಂತಹ ದೊಡ್ಡ ಕ್ಷೇತ್ರದಲ್ಲಿ ಬೀಳುತ್ತದೆಯೋ, ಅದೇ ರೀತಿ ಸಣ್ಣ ಪಾತ್ರೆಯ ನೀರಿನಲ್ಲೂ ಬೀಳುತ್ತದೆ, ಆದರೆ ಅದು ಆ ಪಾತ್ರೆಯಲ್ಲಿ ಸಂಕುಚಿತವಾಗಿ ಕಾಣಿಸುತ್ತದೆ. ಹಾಗೆಯೇ ದೊಡ್ಡ ಕಟ್ಟಡಗಳಂತೆ ಸಣ್ಣ ಮನೆಗಳಲ್ಲೂ ಸಮಾನವಾಗಿ ೮೧ ಪದಗಳು ಇರುತ್ತವೆ. ಕೇವಲ ಅವುಗಳ ಗಾತ್ರವು ಚಿಕ್ಕದಾಗಿರುತ್ತದೆ. ಇದನ್ನು ವಾಸ್ತುಶಾಸ್ತ್ರದಲ್ಲಿ ನಾವು ‘ಘಟಬಿಂಬ ಸಿದ್ಧಾಂತ’ ಎಂದು ಹೇಳುತ್ತೇವೆ.

೩. ವಾಸ್ತುಶಾಸ್ತ್ರದ ನಿಯಮಗಳಲ್ಲಿ ಪದಗಳ ಬಳಕೆಯ ಬಗ್ಗೆ ಮಾಡಿದ ವಿಚಾರ

ಈ ವಾಸ್ತುಮಂಡಲದ ಪ್ರತಿಯೊಬ್ಬ ದೇವತೆಯ ಶಕ್ತಿ, ಕಾರ್ಯ ಹಾಗೆಯೇ ಶುಭ-ಅಶುಭ ಫಲಗಳಿಗೆ ಅನುಗುಣವಾಗಿ, ಯಾವ ಪದದಲ್ಲಿ ಏನನ್ನು ಮಾಡಬೇಕು ಮತ್ತು ವಾಸ್ತುವಿನ ಯಾವ ಭಾಗವು ಎಲ್ಲಿರಬೇಕು ಎಂಬ ಬಗ್ಗೆ ವಾಸ್ತುಶಾಸ್ತ್ರದ ನಿಯಮಗಳಲ್ಲಿ ನಿರ್ಧರಿಸಲ್ಪಟ್ಟಿದೆ. ಪ್ರವೇಶದ್ವಾರ ಮತ್ತು ದೇವರಕೋಣೆ ಯಾವ ಸ್ಥಾನದಲ್ಲಿರಬೇಕು, ಇತ್ಯಾದಿಗಳ ಬಗ್ಗೆ ಅಧ್ಯಯನ ಮಾಡುವಾಗ ‘ಪದ’ಗಳ ವಿಚಾರ ಬಹಳ ಮುಖ್ಯವಾಗಿರುತ್ತದೆ; ಏಕೆಂದರೆ ಯಾವ ಪದದಲ್ಲಿ ಪ್ರವೇಶದ್ವಾರವಿದೆ ಎಂಬುದರ ಆಧಾರದ ಮೇಲೆ, ಶಾಸ್ತ್ರಗಳಲ್ಲಿ ವಿವಿಧ ಶುಭ-ಅಶುಭ ಫಲಗಳನ್ನು ಹೇಳಲಾಗಿದೆ; ಆದುದರಿಂದ ಸರಿಯಾದ ಸ್ಥಾನದಲ್ಲಿ ಪ್ರವೇಶದ್ವಾರವನ್ನು ನಿರ್ಮಿಸಲು ಇದು ಪ್ರಯೋಜನಕಾರಿಯಾಗಿದೆ. ವಾಸ್ತುಶಾಂತಿ ವಿಧಿಯನ್ನು ಮಾಡುವಾಗ ನಾವು ಇದೇ ದೇವತೆಗಳನ್ನು ಆವಾಹನೆ ಮಾಡಿ ಪೂಜಿಸಿ ಅವರಿಗೆ ಆಹುತಿಯನ್ನು ಅರ್ಪಿಸುತ್ತೇವೆ. ಹೆಚ್ಚಿನ ಬಾರಿ ನಾವು ಪೂರ್ವ-ಉತ್ತರ ಇವು ಶುಭ ದಿಕ್ಕು, ಮತ್ತು ದಕ್ಷಿಣ-ಪಶ್ಚಿಮ ಅಶುಭ ದಿಕ್ಕು ಎಂದು ಹೇಳುತ್ತೇವೆ; ಆದರೆ ಪದಗಳ ಆಧಾರದ ಮೇಲೆ ಅಭ್ಯಾಸ ಮಾಡಿದಾಗ ನಿರ್ದಿಷ್ಟವಾಗಿ ಆ ದಿಕ್ಕುಗಳಲ್ಲಿ ಯಾವ ಪದವು ಶುಭವಾಗಿದೆ ಅಥವಾ ಯಾವುದು ಅಶುಭವಾಗಿದೆ ಎಂಬುದು ನಮಗೆ ತಿಳಿಯುತ್ತದೆ. ವಾಸ್ತುವಿನಲ್ಲಿ ಸಮತೋಲನವನ್ನು ಸಾಧಿಸಲು ದೇವತೆಗಳ ಜೊತೆಗೆ ಕೆಲವು ಅಸುರರ ಸ್ಥಾನಗಳೂ ಇರುತ್ತವೆ. ವಾಸ್ತು ನಿರ್ಮಾಣದ ಸಮಯದಲ್ಲಿ ಇವೆಲ್ಲವನ್ನೂ ಆಳವಾಗಿ ಯೋಚಿಸಿ ಮತ್ತು ಯಾವ ಸ್ಥಳದಲ್ಲಿ ಏನು ಇರಬೇಕು, ಎಂಬುದರ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
(ಆಧಾರ ಗ್ರಂಥ : ಸಮರಾಂಗಣ ಸೂತ್ರಧಾರ, ವಿಶ್ವಕರ್ಮಪ್ರಕಾಶ, ಮಯಮತಮ್)

– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಫೋಂಡಾ, ಗೋವಾ.)