ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ

‘ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಪರಿಸ್ಥಿತಿ ಇದೆ. ಜಾಗತಿಕ ವ್ಯವಸ್ಥೆಯು (world order) ಬದಲಾಗುತ್ತಿದೆ. ಜಾಗತಿಕ ವ್ಯವಸ್ಥೆಯ ಈ ಬದಲಾವಣೆಯು ಕೇವಲ ಕಾಕತಾಳೀಯವಲ್ಲ, ಬದಲಾಗಿ ಇದು ಸಮಾಜದ ಚೇತನದಲ್ಲಿ (ಜಾಗೃತಿಯಲ್ಲಿ) ಉಂಟಾಗುತ್ತಿರುವ ಬದಲಾವಣೆಗಳ ದೃಶ್ಯ ಪರಿಣಾಮವಾಗಿದೆ. ಸಮಾಜದ ಚೇತನದಲ್ಲಿ ಆಗುತ್ತಿರುವ ಪರಿವರ್ತನೆ ಮತ್ತು ಮುಂಬರುವ ಕಾಲದಲ್ಲಿ ಅದರಿಂದ ಉಂಟಾಗಬಹುದಾದ ಪರಿಣಾಮಗಳನ್ನು ಜ್ಯೋತಿಷ್ಯಶಾಸ್ತ್ರದ ದೃಷ್ಟಿಕೋನದಿಂದ ಈ ಲೇಖನದಲ್ಲಿ ವಿಶ್ಲೇಷಿಸಲಾಗಿದೆ. ಹಿಂದಿನ ವಾರದ ಲೇಖನದಲ್ಲಿ ನಾವು ‘ಸಮಾಜದ ಚೇತನದ ತಾತ್ವಿಕ ವಿಶ್ಲೇಷಣೆ’ಯ ಬಗ್ಗೆ ತಿಳಿದುಕೊಂಡಿದ್ದೆವು. ಈ ವಾರದ ಅದರ ಅಂತಿಮ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.                                     (ಉತ್ತರಾರ್ಧ)

 ಈ ಲೇಖನದ ಹಿಂದ ಭಾಗ ಓದಲು ಇಲ್ಲಿ ಲಿಂಕ್ ಮೇಲೆ ಕ್ಲಿಕ್‌ ಮಾಡಿ : https://sanatanprabhat.org/kannada/182982.html

ಭಾರತಕ್ಕೆ ಸವಾಲಾತ್ಮಕ ಕಾಲ

ಮುಂದಿನ ೫-೬ ವರ್ಷಗಳು ಭಾರತಕ್ಕೆ ಸವಾಲಾತ್ಮಕವಾಗಿರಲಿವೆ. ಅಮೆರಿಕ, ಚೀನಾ ಮುಂತಾದ ಜಾಗತಿಕ ಶಕ್ತಿಗಳು ಭಾರತದ ಮೇಲೆ ಒತ್ತಡ ಹೇರಿ ಅದನ್ನು ಬಳಸಲು ಪ್ರಯತ್ನಿಸುವವು. ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿ ಅದರ ಅಭಿವೃದ್ಧಿಗೆ ಅಡ್ಡಿ ಪಡಿಸಬಹುದು. ಜಾಗತಿಕ ಶಕ್ತಿಗಳು ಪಾಕಿಸ್ತಾನವನ್ನು ಮಾಧ್ಯಮವನ್ನಾಗಿಸಿ ಭಾರತದ ಮೇಲೆ ಯುದ್ಧವನ್ನು ಹೇರಲು ಪ್ರಯತ್ನಿಸಬಹುದು. ಮತ್ತೊಂದೆಡೆ ಭಾರತದಲ್ಲಿ ಆಂತರಿಕ ಕೆಡಕು ಮಾಡುವ ಶಕ್ತಿಗಳು ದೇಶದಲ್ಲಿ ಅಂತರ್ಯುದ್ಧವನ್ನು ಸೃಷ್ಟಿಸಲು ಪ್ರಯತ್ನಿಸಬಹುದು. ಆದ್ದರಿಂದ ಭಾರತವು ಮುಂದಿನ ಕಾಲದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡುವುದು ಮಹತ್ವದ್ದಾಗಿದೆ, ಹಾಗೆಯೇ ದೇಶದ ಜನತೆಯೂ ಜಾಗರೂಕರಾಗಿ ಮತ್ತು ಸಂಘಟಿತರಾಗಿ ಇರಬೇಕಾಗುತ್ತದೆ.

– ಶ್ರೀ. ರಾಜ ಕರ್ವೆ

೨. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಸಮಾಜದ ಚೇತನೆಯ ಪ್ರವಾಸ ಮತ್ತು ಮುಂಬರುವ ಕಾಲದ ವಿಶ್ಲೇಷಣೆ

‘ಸಾಮಾಜಿಕ ಚೇತನೆಯ ಪ್ರವಾಸವು ಕಾಲದ ಚೌಕಟ್ಟಿನಲ್ಲಿ ನಡೆಯುತ್ತಿರುತ್ತದೆ. ಗ್ರಹಗಳು ಕಾಲದ ದರ್ಶಕಗಳಾಗಿವೆ. ಗ್ರಹಗಳಲ್ಲಿ ಗುರು, ಶನಿ, ಹರ್ಷಲ್ (ಯುರೇನಸ್) ಮತ್ತು ನೆಪ್ಚೂನ್ ಇವು ಮಂದಗತಿಯ ಗ್ರಹಗಳಾಗಿರುವುದರಿಂದ, ಅವುಗಳಲ್ಲಿ ಯೋಗಗಳು ಅನೇಕ ವರ್ಷಗಳ ನಂತರ ಸಂಭವಿಸುತ್ತವೆ. ಆದ್ದರಿಂದ ಆ ಯೋಗಗಳು ಸಾಮಾಜಿಕ ಚೇತನೆಯಲ್ಲಿನ ಪರಿವರ್ತನೆಗಳನ್ನು ದರ್ಶಿಸುತ್ತವೆ. ಇದರ ವಿಶ್ಲೇಷಣೆಯನ್ನು ಈಗ ನೋಡೋಣ. ಈ ವಿಶ್ಲೇಷಣೆಯನ್ನು ಸಾಯನ ಜ್ಯೋತಿಷ್ಯ ಪದ್ಧತಿಗೆ ಅನುಸಾರ (ಟಿಪ್ಪಣಿ) ಮಾಡಲಾಗಿದೆ.

ಟಿಪ್ಪಣಿ – ಸಾಯನ ಜ್ಯೋತಿಷ್ಯ ಪದ್ಧತಿ : ಸಾಯನ ಜ್ಯೋತಿಷ್ಯ ಪದ್ಧತಿಯಲ್ಲಿ ರಾಶಿಚಕ್ರದ ಆರಂಭವನ್ನು ‘ವಸಂತಸಂಪಾತ’ ಎಂಬ ಅಯನ ಬಿಂದುವಿನಿಂದ ಮಾಡಲಾಗುತ್ತದೆ. ಪೃಥ್ವಿಯ  ಸೂರ್ಯನ ಸುತ್ತಲಿನ ಭ್ರಮಣ ಮಾರ್ಗ (ecliptic) ಮತ್ತು ಪೃಥ್ವಿಯ ಸಮಭಾಜಕ ವೃತ್ತ (equator) ಇವು ಪರಸ್ಪರ ೨ ಸ್ಥಳಗಳಲ್ಲಿ ಛೇದಿಸುವ ಬಿಂದುಗಳ ಪೈಕಿ ಒಂದು ಬಿಂದುವನ್ನು ‘ವಸಂತಸಂಪಾತ’ ಎನ್ನುತ್ತಾರೆ. ಸಂಪಾತಬಿಂದುವು ಪೃಥ್ವಿಗೆ ಸಾಪೇಕ್ಷ ವಾಗಿರುವುದರಿಂದ ಮೇದಿನಿಯ (ರಾಷ್ಟ್ರೀಯ) ಜ್ಯೋತಿಷ್ಯವನ್ನು ಅಧ್ಯಯನಕ್ಕೆ ಸಾಯನ ಜ್ಯೋತಿಷ್ಯ ಪದ್ಧತಿಯು ಉಪಯುಕ್ತವಾಗಿರುತ್ತದೆ.

೨ ಅ. ಗುರು ಮತ್ತು ಶನಿ ಈ ಗ್ರಹಗಳ ಸಂಯೋಗ ಚಕ್ರ : ಗುರು ಗ್ರಹವು ಸುಮಾರು ೧೨ ವರ್ಷಗಳಲ್ಲಿ ಮತ್ತು ಶನಿ ಗ್ರಹವು ಸುಮಾರು ೩೦ ವರ್ಷಗಳಲ್ಲಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆಯನ್ನು ಪೂರ್ಣಗೊಳಿಸುತ್ತವೆ. ಗುರು ಮತ್ತು ಶನಿ ಗ್ರಹಗಳ ಸಂಯೋಗವು ಪ್ರತಿ ೨೦ ವರ್ಷಗಳಿಗೊಮ್ಮೆ ಆಗುತ್ತದೆ, ಅಂದರೆ ಅವು ಒಟ್ಟಿಗೆ ಬರುತ್ತವೆ. ಗುರು ಮತ್ತು ಶನಿ ಗ್ರಹಗಳ ಸಂಯೋಗವು ಒಂದು ಮಹತ್ವದ ಖಗೋಳ ಘಟನೆಯಾಗಿದೆ. ಈ ಸಂಯೋಗವು ಸಮಾಜದ ವಿಚಾರಧಾರೆ, ಮೌಲ್ಯ, ಧಾರಣೆ, ಚೇತನದ ಸ್ತರ ಇತ್ಯಾದಿಗಳಲ್ಲಿನ ಬದಲಾವಣೆಗಳನ್ನು ದರ್ಶಿಸುತ್ತದೆ, ಅಂದರೆ ಅದು ಸಮಾಜದ ಆಂತರಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಪರಿಣಾಮವು ಕೂಡಲೇ ಕಣ್ಣಿಗೆ ಕಾಣಿಸುವುದಿಲ್ಲ; ಆದರೆ ಅದು ಸೂಕ್ಷ್ಮವಾಗಿರುವುದರಿಂದ ಪ್ರಭಾವಿ ಆಗಿರುತ್ತದೆ ಮತ್ತು ದೀರ್ಘಕಾಲದ ವರೆಗೆ ಉಳಿಯುತ್ತದೆ.

ಶ್ರೀ. ರಾಜ ಕರ್ವೆ

೨ ಅ ೧. ೧೮೦೦ ರಿಂದ ೧೯೮೦ ರ ಕಾಲಾವಧಿಯಲ್ಲಿ ಗುರು ಮತ್ತು ಶನಿ ಈ ಗ್ರಹಗಳ ಸಂಯೋಗವು ‘ಪೃಥ್ವಿ ತತ್ತ್ವ್ವ’ದ ರಾಶಿಯಲ್ಲಿ ಆಗಿತ್ತು : ಗುರು ಮತ್ತು ಶನಿ ಈ ಗ್ರಹಗಳ ಸಂಯೋಗವು ಸುಮಾರು ೧೮೦ ವರ್ಷಗಳ ಕಾಲ ಒಂದೇ ತತ್ತ್ವ್ವದ ರಾಶಿಯಲ್ಲಿ ಆಗುತ್ತಿರುತ್ತದೆ, ಉದಾ. ೧೮೦೦ ರಿಂದ ೧೯೮೦ ರ ವರೆಗಿನ ೧೮೦ ವರ್ಷಗಳ ಕಾಲಾವಧಿಯಲ್ಲಿ ಗುರು ಮತ್ತು ಶನಿಯ ಸಂಯೋಗವು ಸಾಯನ ‘ವೃಷಭ’, ‘ಕನ್ಯಾ’ ಮತ್ತು ‘ಮಕರ’ ರಾಶಿಗಳಲ್ಲಿ ಆಯಿತು. ಈ ಮೂರೂ ರಾಶಿಗಳು ‘ಪೃಥ್ವಿ ತತ್ತ್ವ್ವ’ದ್ದಾಗಿವೆ. ಪೃಥ್ವಿ ತತ್ತ್ವವು ಜಡತ್ವ, ಸಂಕೋಚ, ಸ್ಥೂಲತೆ, ಕಠೋರತೆ (rigidity) ಮುಂತಾದ ಗುಣಗಳಿಂದ ಕೂಡಿದೆ. ಆದ್ದರಿಂದ ೧೮೦೦ ರಿಂದ ೧೯೮೦ ರ ಕಾಲಾವಧಿಯಲ್ಲಿ ಭೌತಿಕವಾದವು ಪ್ರಧಾನವಾಗಿತ್ತು.  ಔದ್ಯೋಗಿಕರಣ, ನಗರೀಕರಣ ಮತ್ತು ತಂತ್ರಜ್ಞಾನದ ಪ್ರಗತಿಯಾಗಿ ಭೌತಿಕ ಅಭಿವೃದ್ಧಿಯನ್ನು ಸಾಧಿಸಲಾಯಿತು. ಈ ಅವಧಿಯಲ್ಲಿ ಜಗತ್ತಿನಾದ್ಯಂತ ಬ್ರಿಟನ್‌ನಂತಹ ಸಾಮ್ರಾಜ್ಯವಾದಿ ಶಕ್ತಿಗಳ ವರ್ಚಸ್ಸು ಇತ್ತು. ಅರ್ಥಕಾರಣವು ಜಗತ್ತಿನ ಕೇಂದ್ರಸ್ಥಾನದಲ್ಲಿ ಇತ್ತು; ಆದರೆ ಉಪಭೋಗವಾದ  ಹೆಚ್ಚಾಗಿ ಮನುಷ್ಯನ ಪ್ರವೃತ್ತಿ ಆತ್ಮಕೇಂದ್ರಿತವಾಯಿತು. ಸಮಾಜದ ನೈತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ವಿಕಾಸವು ಹಿಂದೆ ಬಿದ್ದಿತು.

೨ ಅ ೨. ೧೯೮೦ ರಿಂದ ೨೧೬೦ ರ ಕಾಲಾವಧಿಯಲ್ಲಿ ಗುರು ಮತ್ತು ಶನಿ ಈ ಗ್ರಹಗಳ ಸಂಯೋಗವು ‘ವಾಯು ತತ್ತ್ವ್ವ’ದ ರಾಶಿಯಲ್ಲಿ ಆಗುವುದು : ೧೯೮೦ ರಲ್ಲಿ ಗುರು ಮತ್ತು ಶನಿಯ ಸಂಯೋಗವು ಸಾಯನ ತುಲಾ ರಾಶಿಯಲ್ಲಿ ಆಯಿತು. ಅಲ್ಲಿಂದ ಮುಂದಿನ ೧೮೦ ವರ್ಷಗಳು ಅಂದರೆ ವರ್ಷ ೨೧೬೦ ರ ವರೆಗೆ ಗುರು ಮತ್ತು ಶನಿಯ ಸಂಯೋಗವು ಸಾಯನ ‘ಮಿಥುನ’, ‘ತುಲಾ’ ಮತ್ತು ‘ಕುಂಭ’ ರಾಶಿಗಳಲ್ಲಿ ಆಗಲಿದೆ. ಈ ಮೂರೂ ‘ವಾಯು ತತ್ತ್ವ’ದ ರಾಶಿಗಳಾಗಿವೆ. ವಾಯು ತತ್ತ್ವವು ಸೂಕ್ಷ್ಮತೆ, ಪಾರದರ್ಶಕತೆ, ವಿರಳತೆ, ಹಗುರತನ ಮುಂತಾದ ಗುಣಗಳಿಂದ ಕೂಡಿದೆ. ಆದ್ದರಿಂದ ೨೦ ನೇ ಶತಮಾನದ ಕೊನೆಯ ಅವಧಿಯಲ್ಲಿ ಸಾಮಾಜಿಕ ಚೇತನದಲ್ಲಿ ಬದಲಾವಣೆ ಕಂಡುಬಂದಿತು. ‘ಜಾಲತಾಣದ’ ಉದಯದಿಂದಾಗಿ ಜಾಗತೀಕರಣವಾಯಿತು. ಮಾಹಿತಿ-ತಂತ್ರಜ್ಞಾನದ ಕ್ಷೇತ್ರದಲ್ಲಿ ಕ್ರಾಂತಿ ಯಾಯಿತು. ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಹೆಚ್ಚಾಗಿ ಅನೇಕ ಚಳುವಳಿಗಳು ತಲೆ ಎತ್ತಿದವು. ಭೌತಿಕವಾದದ ಪ್ರಭಾವ ಕಡಿಮೆಯಾಗಿ ಅಧ್ಯಾತ್ಮಕ್ಕೆ ಪುನಶ್ಚೇತನ ಪ್ರಾಪ್ತವಾಗುತ್ತಿದೆ. ಮಾನಸಿಕ ಶಾಂತಿ, ಸಮಾಧಾನ, ಅರ್ಥಪೂರ್ಣ ಜೀವನ ಇವುಗಳತ್ತ ಜನರ ಗಮನ ಸೆಳೆಯಲ್ಪಟ್ಟಿದೆ. ಮುಂದಿನ ಕೆಲವು ದಶಕಗಳಲ್ಲಿ ಜಗತ್ತಿನಾದ್ಯಂತ ಈ ಕೆಳಗಿನಂತೆ ಪರಿವರ್ತನೆಯಾಗಬಹುದು:

ಅ. ಸಮಾಜಮನಸ್ಸಿನ ಜಾಗರೂಕತೆ ಮತ್ತು ಸಂವೇದನಾಶೀಲತೆ ಹೆಚ್ಚುತ್ತಾ ಹೋಗುವುದು. ಆತ್ಮಕೇಂದ್ರಿತತನ ಕಡಿಮೆಯಾಗಿ ಸುಸಂವಾದ, ಸದ್ಭಾವನೆ ಮತ್ತು ಒಗ್ಗಟ್ಟಿನ ಭಾವನೆ ಹೆಚ್ಚುತ್ತಾ ಹೋಗುವುದು. ‘ವಸುಧೈವ ಕುಟುಂಬಕಮ್’ (ಅರ್ಥ : ಜಗತ್ತೇ ಒಂದು ಕುಟುಂಬ) ಎಂಬ ಉಪನಿಷತ್ತಿನ ಘೋಷಣೆಯತ್ತ ಜಗತ್ತು ಹೆಜ್ಜೆ ಹಾಕಲಿದೆ. ‘ಪ್ರೇಮ’ ಎಂಬ ಮೌಲ್ಯಕ್ಕೆ ಹೆಚ್ಚಿನ ಮಹತ್ವ ಸಿಗುವುದು. ಸಾಮಾಜಿಕ ಚೇತನವು ಪ್ರಾಣಮಯ ಸ್ತರದಿಂದ ಮನೋಮಯ ಸ್ತರದ ಕಡೆಗೆ ಮಾರ್ಗಕ್ರಮಣ ಮಾಡಬಹುದು.

ಆ. ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಿ, ನೈತಿಕ ವಿಕಾಸವನ್ನು ಸಾಧಿಸುವ ಮತ್ತು ಜೀವನಮೌಲ್ಯಗಳ ಜ್ಞಾನವನ್ನು ನೀಡುವ ಜೀವನಾಭಿಮುಖ ಶಿಕ್ಷಣ ಸಿಗುವುದು. ಸ್ವೇಚ್ಛಾಚಾರ ಮತ್ತು ಸ್ವಚ್ಛಂದತೆ ಕಡಿಮೆಯಾಗಿ ವಿವೇಕ ಹಾಗೂ ಜಾಗರೂಕತೆ ಹೆಚ್ಚಾಗುವುದು.

ಇ. ಪ್ರಕೃತಿಯನ್ನು ದೋಚುವ ಪ್ರವೃತ್ತಿಯು ಬದಲಾಗಿ ಪ್ರಕೃತಿ ಸಂರಕ್ಷಣೆಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಹೊಸ ತಂತ್ರಜ್ಞಾನದ ಮೂಲಕ ಶಾಶ್ವತ ಊರ್ಜೆಯ (sustainable energy) ಬಳಕೆಗೆ ಆದ್ಯತೆ ದೊರೆಯುವುದು.

ಈ. ಧಾರ್ಮಿಕ ವಿಚಾರಗಳಲ್ಲಿ ವ್ಯಾಪಕತೆ ಬಂದು ಸಂಕುಚಿತ, ದ್ವೇಷ ಮತ್ತು ಕಟ್ಟರತೆಗೆ  ನೀರುಗೊಬ್ಬರ ಹಾಕುವ ಧಾರ್ಮಿಕ ವಿಚಾರಧಾರೆ ಮತ್ತು ವ್ಯವಸ್ಥೆಗಳು ದುರ್ಬಲವಾಗುವವು.

ಉ. ಕೇವಲ ಭೌತಿಕ ಸ್ತರದಲ್ಲಿ ಸಂಶೋಧನೆ ನಡೆಯದೆ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳ ಸಂಶೋಧನೆಗಳಿಗೂ ವೇಗ ಸಿಗಲಿದೆ. ಅದರಿಂದಾಗಿ ಜಗತ್ತಿಗೆ ಸಂಬಂಧಿಸಿದ ಗ್ರಹಿಕೆಯಲ್ಲಿ ಮೂಲಭೂತ ಬದಲಾವಣೆಯಾಗುವುದು.

ಊ. ಅಧ್ಯಾತ್ಮದ ಮಹತ್ವವು ಹೆಚ್ಚಾಗಿ ಸತ್ಯ, ಜ್ಞಾನ, ಪ್ರೀತಿ, ವ್ಯಾಪಕತೆ ಮುಂತಾದ ಜಾಗತಿಕ ತತ್ತ್ವಗಳತ್ತ ಜನರು ಆಕರ್ಷಿತರಾಗಿ ಅಧ್ಯಾತ್ಮವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುವರು.

೨ ಆ. ಶನಿ ಮತ್ತು ಹರ್ಷಲ್ ಗ್ರಹಗಳ ಸಂಯೋಗ : ಶನಿ ಗ್ರಹವು ಸುಮಾರು ೩೦ ವರ್ಷಗಳಲ್ಲಿ ಮತ್ತು ಹರ್ಷಲ್ ಗ್ರಹವು ಸುಮಾರು ೮೪ ವರ್ಷಗಳಲ್ಲಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆಯನ್ನು ಪೂರ್ಣಗೊಳಿಸುತ್ತವೆ. ಶನಿ ಮತ್ತು ಹರ್ಷಲ್ ಗ್ರಹಗಳ ಸಂಯೋಗವು ಪ್ರತಿ ೪೫ ವರ್ಷಗಳಿಗೊಮ್ಮೆ ಆಗುತ್ತದೆ, ಅಂದರೆ ಅವು ಒಟ್ಟಿಗೆ ಬರುತ್ತವೆ. ಶನಿ ಗ್ರಹವು ಸಾಮಾಜಿಕ ವ್ಯವಸ್ಥೆ ಮತ್ತು ಹರ್ಷಲ್ ಗ್ರಹವು ನವೀನತೆ ಹಾಗೂ ವಿಕಾಸದ ಕಾರಕವಾಗಿದೆ. ಆದ್ದರಿಂದ ಶನಿ ಮತ್ತು ಹರ್ಷಲ್ ಸಂಯೋಗವು ಕ್ರಾಂತಿಕರವಾಗಿರುತ್ತದೆ. ಯುದ್ಧ, ಕ್ರಾಂತಿ, ಚಳುವಳಿ, ರಾಜಕೀಯ ಸ್ಥಿತ್ಯಂತರ ಉಂಟಾಗಿ ಜಾಗತಿಕ ವ್ಯವಸ್ಥೆಯು ಬದಲಾಗುತ್ತದೆ. ಈ ಪರಿಣಾಮವು ಕಣ್ಣಿಗೆ ಕಾಣುವಂತಿರುತ್ತದೆ.

೨ ಆ ೧. ೧೯೪೨ ರಲ್ಲಿ ಸಂಭವಿಸಿದ ಶನಿ ಮತ್ತು ಹರ್ಷಲ್ ಇವುಗಳ ಸಂಯೋಗ : ೨೦ ನೆಯ ಶತಮಾನದಲ್ಲಿ ಶನಿ ಮತ್ತು ಹರ್ಷಲ್ ಇವುಗಳ ಸಂಯೋಗವು ೧೯೪೨ ರಲ್ಲಿ ಆಗಿತ್ತು. ಇದು ಎರಡನೇ ಮಹಾಯುದ್ಧದ ಕಾಲವಾಗಿತ್ತು. ಇದು ಎರಡನೇ ಮಹಾಯುದ್ಧದ ಕಾಲವಾಗಿತ್ತು. ಎರಡನೇ ಮಹಾಯುದ್ಧದಲ್ಲಿ ಜಗತ್ತಿನಾದ್ಯಂತ ಒಟ್ಟು ೬ ಕೋಟಿಗಳಿಗಿಂತ ಹೆಚ್ಚು ಸೈನಿಕರು ಮತ್ತು ನಾಗರಿಕರು ಮೃತಪಟ್ಟರು. ಎರಡನೇ ಮಹಾಯುದ್ಧದ ನಂತರ ಜಾಗತಿಕ ವ್ಯವಸ್ಥೆಯು ಬದಲಾಯಿತು. ಜಾಗತಿಕ ಶಕ್ತಿಯ ಕೇಂದ್ರವು ಯುರೋಪ್‌ನಿಂದ ‘ಅಮೇರಿಕ’ ಮತ್ತು ‘ಸೋವಿಯತ್ ರಷ್ಯಾ’ ಕಡೆಗೆ ಸ್ಥಳಾಂತರಗೊಂಡಿತು. ಬ್ರಿಟನ್, ಫ್ರಾನ್ಸ್‌ನಂತಹ ಸಾಮ್ರಾಜ್ಯವಾದಿ ಶಕ್ತಿಗಳು ಪತನಗೊಂಡು ಭಾರತ, ಇಂಡೋನೇಷ್ಯಾ, ಶ್ರೀಲಂಕಾ ಮುಂತಾದ ರಾಷ್ಟ್ರಗಳು ಸ್ವತಂತ್ರವಾದವು.

೨ ಆ ೨. ೧೯೮೮ ರಲ್ಲಿ ಸಂಭವಿಸಿದ ಶನಿ ಮತ್ತು ಹರ್ಷಲ್ ಇವುಗಳ ಸಂಯೋಗ : ೧೯೪೨ ರ ನಂತರ ಶನಿ ಮತ್ತು ಹರ್ಷಲ್ ಇವುಗಳ ಸಂಯೋಗವು ೧೯೮೮ ರಲ್ಲಿ ಆಯಿತು. ಈ ಅವಧಿಯ ಸುಮಾರಿಗೆ ‘ಅಮೇರಿಕಾ’ ಮತ್ತು ‘ಸೋವಿಯತ್ ರಷ್ಯಾ’ ನಡುವಿನ ಶೀತಲ ಸಮರದ ಕೊನೆಯ ಹಂತ ನಡೆಯುತ್ತಿತ್ತು. ಅದರಲ್ಲಿ ರಷ್ಯಾದ ಸೋಲಾಗಿ ಅದು ೧೫ ಭಾಗಗಳಾಗಿ ವಿಭಜನೆಯಾಯಿತು. ಇದರ ನಂತರ ೨ ದಶಕಗಳ ಕಾಲ ‘ಅಮೆರಿಕ’ ಏಕೈಕ ಮಹಾಶಕ್ತಿಯಾಗಿ ಉಳಿಯಿತು. ಕಮ್ಯುನಿಸಮ್ ಮತ್ತು ಸರ್ವಾಧಿಕಾರದ ಪ್ರಾಬಲ್ಯ ಕಡಿಮೆಯಾಗಿ ಬಂಡವಾಳಶಾಹಿ ಹಾಗೂ ಪ್ರಜಾಪ್ರಭುತ್ವವು ಮುಂಚೂಣಿಗೆ ಬಂದವು. ೨೧ ನೆಯ ಶತಮಾನದಲ್ಲಿ ಚೀನಾ, ಭಾರತ, ಬ್ರಾಜಿಲ್ ಮುಂತಾದ ಉದಯೋನ್ಮುಖ ದೇಶಗಳ ಶಕ್ತಿ ಹೆಚ್ಚಾಗಿ ಜಾಗತಿಕ ಶಕ್ತಿಯ ಕೇಂದ್ರವು ವಿಕೇಂದ್ರೀಕರಣಗೊಂಡಿತು.

೨ ಆ ೩. ೨೦೩೨ ರಲ್ಲಿ ಸಂಭವಿಸಲಿರುವ ಶನಿ ಮತ್ತು ಹರ್ಷಲ್ ಇವುಗಳ ಸಂಯೋಗ : ಈಗ ಶನಿ ಮತ್ತು ಹರ್ಷಲ್ ಗ್ರಹಗಳ ಮುಂದಿನ ಸಂಯೋಗವು ೨೦೩೨ ರಲ್ಲಿ ಸಂಭವಿಸಲಿದೆ. ಅದಕ್ಕೂ ಮೊದಲು ೨೦೨೮ ರಿಂದ ೨೦೩೧ ರ ಕಾಲಾವಧಿಯಲ್ಲಿ ಗುರು ಮತ್ತು ಶನಿ ಗ್ರಹಗಳ ಪ್ರತಿಯೋಗ (ಪರಸ್ಪರ ಮುಖಾಮುಖಿ ಯಾಗುವುದು) ಉಂಟಾಗಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ೨೦೨೮ ರಿಂದ ೨೦೩೨ ರ ಅವಧಿಯಲ್ಲಿ ಗುರು, ಶನಿ ಮತ್ತು ಹರ್ಷಲ್ ಈ ಮೂರೂ ಗ್ರಹಗಳ ನಡುವೆ ಪರಸ್ಪರ ಮಹತ್ವದ ಯೋಗಗಳು ಏರ್ಪಡಲಿವೆ. ಈ ಕಾಲವು ಜಾಗತಿಕ ಮಟ್ಟದಲ್ಲಿ ದೊಡ್ಡ ಸ್ಥಿತ್ಯಂತರಗಳನ್ನು ತೋರಿಸುತ್ತದೆ. ಈ ಅವಧಿಯಲ್ಲಿ ಸಂಭವಿಸಬಹುದಾದ ಪರಿಣಾಮಗಳನ್ನು ಮುಂದೆ ನೀಡಲಾಗಿದೆ.

೨ ಆ ೩ ಅ. ಶಕ್ತಿಶಾಲಿ ದೇಶಗಳಲ್ಲಿನ ಅಧಿಕಾರದ ಸಂಘರ್ಷವು ತೀವ್ರವಾಗುವ ಸಾಧ್ಯತೆ : ೨೦೨೦ ರಲ್ಲಿ ಸಾಯನ ಕುಂಭ ರಾಶಿಯಲ್ಲಿ ಗುರು ಮತ್ತು ಶನಿಯ ಸಂಯೋಗವಾಯಿತು. ಅಂದಿನಿಂದ ಜಾಗತಿಕ ಅಧಿಕಾರದ ಹೋರಾಟವು ವೇಗ ಪಡೆದುಕೊಂಡಿದೆ. ೨೦೨೨ ರಲ್ಲಿ ರಷ್ಯಾ ಉಕ್ರೇನ್ ಮೇಲೆ ಮಾಡಿದ ಆಕ್ರಮಣ, ೨೦೨೪ ರಲ್ಲಿ ಬಾಂಗ್ಲಾದೇಶ ಮತ್ತು ೨೦೨೫ ರಲ್ಲಿ ನೇಪಾಳದಲ್ಲಿ ನಡೆದ ಆಡಳಿತ ಬದಲಾವಣೆ, ೨೦೨೬ ರಲ್ಲಿ ಅಮೆರಿಕವು ಇರಾನ್ ಮೇಲೆ ಮಾಡಿದ ಆಕ್ರಮಣ ಹಾಗೂ ವೆನೆಜುವೆಲಾದ ಅಧ್ಯಕ್ಷರ ಬಂಧನ ಮುಂತಾದ ಘಟನೆಗಳು ಅಮೆರಿಕ, ಚೀನಾ, ರಷ್ಯಾ ಮುಂತಾದ ದೇಶಗಳ ನಡುವಿನ ಅಧಿಕಾರ ಹೋರಾಟವನ್ನು ಎತ್ತಿ ತೋರಿಸುತ್ತಿವೆ. ಈ ಅಧಿಕಾರದ ಹೋರಾಟವು ಮುಂದಿನ ೫-೬ ವರ್ಷಗಳಲ್ಲಿ ತೀವ್ರಗೊಳ್ಳಲಿದೆ. ಈ ದೇಶಗಳು ನೈಸರ್ಗಿಕ ಇಂಧನ ಸಂಪನ್ಮೂಲಗಳು ಮತ್ತು ಅಪರೂಪದ ಖನಿಜಗಳನ್ನು ಹೊಂದಿರುವ ದುರ್ಬಲ ದೇಶಗಳ ಮೇಲೆ ಆಕ್ರಮಣ ಮಾಡಲಿವೆ ಹಾಗೂ ಭೌಗೋಳಿಕವಾಗಿ ಮಹತ್ವವನ್ನು ಹೊಂದಿರುವ ದೇಶಗಳಲ್ಲಿ ಪರೋಕ್ಷ ಯುದ್ಧಗಳನ್ನು ಸೃಷ್ಟಿಸಲಿವೆ. ಆದುದರಿಂದ ಅಲ್ಲಿ ಅರಾಜಕತೆ ಉಂಟಾಗಿ ನಾಗರಿಕರು ಬೇರೆಡೆಗೆ ವಲಸೆ ಹೋಗಬೇಕಾಗುತ್ತದೆ. ಈ ದೇಶಗಳು ಇತರ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ತಮ್ಮತ್ತ ಸೆಳೆಯಲು ಒತ್ತಡ ಹೇರಬಹುದು ಮತ್ತು ಅವರ ಅಭಿವೃದ್ಧಿಗೆ ಅಡ್ಡಿಪಡಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಮತ್ತೊಮ್ಮೆ ಶೀತಲ ಸಮರದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

೨ ಆ ೩ ಆ. ಸಾಮಾನ್ಯ ನಾಗರಿಕರೂ ಆಪತ್ಕಾಲದ ಭೀಕರ ಪರಿಣಾಮವನ್ನು ಎದುರಿಸಬೇಕಾಗುವುದು : ಈ ಅಧಿಕಾರದ ಹೋರಾಟದಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು, ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಹಾಗೂ ಇಂಧನ ಸಂಪನ್ಮೂಲಗಳ ಮೇಲಿನ ನಿಯಂತ್ರಣ, ಆರ್ಥಿಕ ದಿಗ್ಬಂಧನ, ವ್ಯಾಪಾರ ನಿರ್ಬಂಧ, ರಾಜಕೀಯ ಒತ್ತಡ ಮುಂತಾದ ರಣತಂತ್ರಗಳನ್ನು ಬಳಸಲಾಗುತ್ತಿದೆ. ಈ ಸಂಘರ್ಷವು ಕೇವಲ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸೀಮಿತವಾಗಿರದೆ ಇಂಧನ, ತಂತ್ರಜ್ಞಾನ, ಆರ್ಥಿಕತೆ, ಸಾಮಾಜಿಕ ಮಾಧ್ಯಮಗಳು, ಜನರ ಚಿಂತನಶೈಲಿ ಸೇರಿದಂತೆ ಎಲ್ಲಾ ಘಟಕಗಳ ಮೇಲೆ ಪ್ರಾಬಲ್ಯ ಸಾಧಿಸಲು ನಡೆಯುತ್ತಿದೆ. ಆದ್ದರಿಂದ ಮುಂದಿನ ೫-೬ ವರ್ಷಗಳಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ದೊಡ್ಡ ದುಷ್ಪರಿಣಾಮ ಬೀರಲಿದೆ. ಆಹಾರ, ನೀರು, ಇಂಧನ, ವಿದ್ಯುತ್, ಸಾರಿಗೆ, ಸಂಪರ್ಕ ವ್ಯವಸ್ಥೆ ಮುಂತಾದ ಜೀವನಾವಶ್ಯಕ ವಸ್ತುಗಳ ದೀರ್ಘಕಾಲದ ಕೊರತೆ ಉಂಟಾಗಲಿದೆ. ಅದರಿಂದಾಗಿ ಹಣದುಬ್ಬರ (ಬೆಲೆ ಏರಿಕೆ), ನಿರುದ್ಯೋಗ, ಅಪರಾಧ ಮುಂತಾದವುಗಳು ಹೆಚ್ಚಾಗಲಿವೆ. ನಿರಂತರ ಅಸ್ಥಿರತೆಯಿಂದಾಗಿ ಭಯ, ಒತ್ತಡ ಮತ್ತು ಆತಂಕ ನಿರ್ಮಾಣವಾಗಿ ಜನರ ಮನೋಬಲವು ಕುಗ್ಗಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಮಾನ್ಯ ಮನುಷ್ಯನಿಗೂ ಈ ಆಪತ್ಕಾಲದ ಭೀಕರ ಪರಿಣಾಮ ಎದುರಾಗಲಿದೆ.

೨ ಆ ೩ ಇ. ೨೦೩೨ ರ ನಂತರ ಹೊಸ ಜಾಗತಿಕ ವ್ಯವಸ್ಥೆಯ ಉದಯವಾಗುವುದು : ಶಕ್ತಿಶಾಲಿ ದೇಶಗಳ ನಡುವೆ ನಡೆಯುತ್ತಿರುವ ಈ ಅಧಿಕಾರದ ಹೋರಾಟವು ನಿರ್ಣಾಯಕವಾಗುವುದಿಲ್ಲ. ೨೦೩೨ ರಲ್ಲಿ ಶನಿ ಮತ್ತು ಹರ್ಷಲ್ ಸಂಯೋಗವು ಸಾಯನ ಮಿಥುನ ರಾಶಿಯ ಕೊನೆಯಲ್ಲಿ ಮತ್ತು ಕರ್ಕ ರಾಶಿಯ ಆರಂಭದಲ್ಲಿ (ಅಂದರೆ ಸಂಧಿಯಲ್ಲ್ಲಿ) ಸಂಭವಿಸಲಿದೆ. ‘ಕರ್ಕ’ ರಾಶಿಯು ಜಲತತ್ವದ ಮತ್ತು ಚರ ಸ್ವಭಾವದ (ನವನಿರ್ಮಾಣ ಮಾಡುವ) ರಾಶಿಯಾಗಿದೆ. ಆದ್ದರಿಂದ ೨೦೩೨ ರ ನಂತರ ಹೊಸ ಜಾಗತಿಕ ವ್ಯವಸ್ಥೆಯು ಜನ್ಮ ತಾಳುವುದಿದೆ. ಅಮೆರಿಕದ ಜಾಗತಿಕ ಪ್ರಾಬಲ್ಯ ಕಡಿಮೆಯಾಗಲಿದೆ. ಯಾವುದೇ ಒಂದು ದೇಶವೂ ಮಹಾಸತ್ತೆಯಾಗಿ ಉಳಿಯುವುದಿಲ್ಲ. ಜಾಗತಿಕ ವ್ಯವಸ್ಥೆಯು ಬಹುಧ್ರುವೀಯ ಮತ್ತು ಜಟಿಲ ಆಗಲಿದೆ. ಪ್ರತಿಯೊಂದು ದೇಶವೂ ಇಂಧನ, ಭದ್ರತೆ, ವ್ಯಾಪಾರ, ತಂತ್ರಜ್ಞಾನ ಮುಂತಾದವುಗಳಿಗಾಗಿ ವಿಭಿನ್ನ ದೇಶಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬೇಕಾಗುವುದು. ಮನುಷ್ಯನು ‘ಸಹಕಾರ, ಸಮಂಜಸ್ವ, ಸಂವೇದನಶೀಲತೆ, ಸಹಾನುಭೂತಿ ಮತ್ತು ಸದ್ಭಾವನೆ’ ಈ ವ್ಯಾಪಕ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಮುಂಬರುವ ಕಾಲದಲ್ಲಿ ಅವನ ಪ್ರಗತಿ ಆಗುವುದು.

– ಶ್ರೀ. ರಾಜ ಕರ್ವೆ ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೩.೨೦೨೬)