ಯಾರ ನಿರ್ಧಾರ : ಮನುಷ್ಯನದ್ದೋ ಅಥವಾ ಈಶ್ವರನದ್ದೋ ?

ಕಳೆದ 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾ ಅವರಿಗೆ ಇಚ್ಛಾಮರಣ ನೀಡಲು ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ.

ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಒಂದು ನಿರ್ಧಾರವನ್ನು ಪ್ರಕಟಿಸಿದೆ. ಅದರಲ್ಲಿ ಕಳೆದ ೧೩ ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ ರಾಣಾ (ವಯಸ್ಸು ೩೧ ವರ್ಷ) ಅವರಿಗೆ ಇಚ್ಛಾಮರಣ ಪಡೆಯಲು ಅನುಮತಿ ನೀಡಲಾಗಿದೆ. ಇದರ ಅಡಿಯಲ್ಲಿ ಅವರಿಗೆ ನೀಡಲಾಗುತ್ತಿದ್ದ ಜೀವ ರಕ್ಷಕ ಚಿಕಿತ್ಸೆಗಳನ್ನು ನಿಲ್ಲಿಸಲಾಗುವುದು. ವರ್ಷ ೨೦೧೮ ರಲ್ಲಿ ಸರ್ವೋಚ್ಚ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಇಚ್ಛಾಮರಣಕ್ಕೆ ಕಾನೂನುಬದ್ಧ ಮಾನ್ಯತೆ ನೀಡಿತ್ತು; ಆದರೆ ಆ ಮಾರ್ಗಸೂಚಿಗಳ ಪ್ರಕಾರ ಪ್ರತ್ಯಕ್ಷವಾಗಿ ಕ್ರಮ ಜರುಗಿದ ಭಾರತದ ಮೊದಲ ಘಟನೆ ಇದಾಗಿದೆ. ಇದರ ಬಗ್ಗೆ ಚರ್ಚೆಯಾಗುತ್ತಿದೆ. ‘ಇಚ್ಛಾಮರಣ’ ಎಂದರೆ ಒಬ್ಬ ವ್ಯಕ್ತಿಯ ದುಃಖವನ್ನು ಕಡಿಮೆ ಮಾಡಲು ಉದ್ದೇಶಪೂರ್ವಕವಾಗಿ ಆಕೆಯ/ಆತನ ಜೀವನವನ್ನು ಕೊನೆಗೊಳಿಸುವುದು. ಈ ಮಾಧ್ಯಮದ ಮೂಲಕ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರ ವೇದನೆ ಮತ್ತು ಅವರ ತೊಂದರೆಗಳ ತೀವ್ರತೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಇದರ ಉದ್ದೇಶ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ವಿಷಯವು ಜನ್ಮ-ಮೃತ್ಯುವಿಗೆ ಸಂಬಂಧಿಸಿದೆ. ಕೆಲವರ ದೃಷ್ಟಿಯಲ್ಲಿ ಇದು ‘ದಯಾ ಮರಣ’, ಇನ್ನು ಕೆಲವರು ಇದನ್ನು ‘ಗೌರವಾನ್ವಿತ ಸಾವಿನ ಹಕ್ಕು’ ಎಂದು ಪರಿಗಣಿಸುತ್ತಾರೆ. ‘ಆತ್ಮಹತ್ಯೆ’ ಎಂದರೆ ನೈಸರ್ಗಿಕ ಮರಣವನ್ನು ನಿರಾಕರಿಸಿ ಸ್ವತಃ ಹತ್ಯೆ ಮಾಡಿಕೊಳ್ಳುವುದು, ಆದರೆ ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಇಚ್ಛೆಯಂತೆ ಮರಣ ಹೊಂದುವುದನ್ನು ‘ಇಚ್ಛಾಮರಣ’ ಎನ್ನಲಾಗುತ್ತದೆ. ಇಂತಹ ಮರಣವನ್ನು ಸ್ವೀಕರಿಸುವ ವ್ಯಕ್ತಿಯು ಐಹಿಕ ಜೀವನದ ಸಮಸ್ಯೆಗಳಿಂದ ಬೇಸತ್ತಿರುತ್ತಾರೆ. ವಿಶ್ವದ ಕೆಲವು ದೇಶಗಳಲ್ಲಿ ೧೮ ವರ್ಷದೊಳಗಿನ ರೋಗಿಗಳಿಗೆ ಇಚ್ಛಾಮರಣಕ್ಕೆ ಅನುಮತಿಯಿಲ್ಲ; ಆದರೆ ನೆದರ್ಲ್ಯಾಂಡ್ ಅಥವಾ ಬೆಲ್ಜಿಯಂನಂತಹ ದೇಶಗಳಲ್ಲಿ ನಿರ್ದಿಷ್ಟ ಷರತ್ತುಗಳನ್ನು ಪಾಲಿಸಿ ಅಪ್ರಾಪ್ತ ರೋಗಿಗಳೂ ಇಚ್ಛಾಮರಣಕ್ಕಾಗಿ ಅರ್ಜಿ ಸಲ್ಲಿಸಬಹುದು. ಮೇಲಿನ ಎರಡೂ ದೇಶಗಳೊಂದಿಗೆ ಲಕ್ಸೆಂಬರ್ಗ್, ಕೆನಡಾ, ಸ್ಪೇನ್, ನ್ಯೂಜಿಲೆಂಡ್, ಕೊಲಂಬಿಯಾ, ಈಕ್ವೆಡಾರ್, ಉರುಗ್ವೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಇಚ್ಛಾಮರಣಕ್ಕೆ ಕಾನೂನುಬದ್ಧ ಅನುಮತಿಯಿದೆ. ಇಚ್ಛಾಮರಣದಲ್ಲಿ ಸಕ್ರಿಯ ಮತ್ತು ನಿಷ್ಕ್ರಿಯ ಎಂಬ ಎರಡು ವಿಧಗಳಿವೆ. ಸಕ್ರಿಯ ಇಚ್ಛಾಮರಣದಲ್ಲಿ ರೋಗಿಯನ್ನು ಕೊಲ್ಲಲು ನೇರವಾಗಿ ಮಾರಣಾಂತಿಕ ಔಷಧ ಅಥವಾ ಇಂಜೆಕ್ಷನ್ ನೀಡಲಾಗುತ್ತದೆ, ಆದರೆ ನಿಷ್ಕ್ರಿಯ ಇಚ್ಛಾಮರಣದಲ್ಲಿ ಜೀವ ರಕ್ಷಕ ಚಿಕಿತ್ಸೆಗಳನ್ನು ಉದ್ದೇಶಪೂರ್ವಕವಾಗಿ ನಿಲ್ಲಿಸಲಾಗುತ್ತದೆ.

ಇತರ ರಾಷ್ಟ್ರಗಳಲ್ಲಿ ಇಚ್ಛಾಮರಣ

ಪ್ರಾಚೀನ ಗ್ರೀಸ್ ಮತ್ತು ರೋಮ್ ದೇಶಗಳಲ್ಲಿ ಜನರು ‘ಹೆಮ್ಲಾಕ್’ ಎಂಬ ಹೆಸರಿನ ವಿಷವನ್ನು ಉಸಿರಾಟದ ಮೂಲಕ ತೆಗೆದುಕೊಳ್ಳುತ್ತಿದ್ದರು ಮತ್ತು ಅದರ ಮೂಲಕ ವೇದನೆರಹಿತ ಮರಣ ಹೊಂದುತ್ತಿದ್ದರು. ಸಾಕ್ರಟೀಸ್ ಮತ್ತು ಪ್ಲೇಟೋ ಎಂಬ ತತ್ತ್ವಜ್ಞಾನಿಗಳು ಇಚ್ಛಾಮರಣದ ಬೆಂಬಲಿಗರಾಗಿದ್ದರು. ಮಧ್ಯಯುಗದಲ್ಲಿ ಕ್ರೈಸ್ತ ಧರ್ಮವು ಇಚ್ಛಾಮರಣವನ್ನು ಪಾಪ ಎಂದು ಪರಿಗಣಿಸಿತು; ಏಕೆಂದರೆ ‘ಇದು ಒಂದು ರೀತಿಯಲ್ಲಿ ಹತ್ಯೆಯೇ ಆಗಿದೆ’ ಎಂಬುದು ಅವರ ವಾದವಾಗಿತ್ತು. ವರ್ಷ ೧೯೩೦ ಮತ್ತು ೧೯೪೦ ರ ದಶಕಗಳಲ್ಲಿ ನಾಝಿ ಜರ್ಮನಿಯಲ್ಲಿ ಅಂಗವಿಕಲರು ಮತ್ತು ವೃದ್ಧರನ್ನು ಕೊಲ್ಲಲು ಇದನ್ನು ದುರುಪಯೋಗಿಸ ಲಾಗಿತ್ತು. ವರ್ಷ ೧೯೯೭ ರಲ್ಲಿ ಅಮೆರಿಕದ ಒರೆಗಾನ್ ರಾಜ್ಯದಲ್ಲಿ ಆಧುನಿಕ ವೈದ್ಯರ ಸಹಾಯದಿಂದ ಆತ್ಮಹತ್ಯೆ ಯನ್ನು ಕಾನೂನುಬದ್ಧಗೊಳಿಸಲಾಯಿತು. ಸ್ವಿಟ್ಜರ್ಲೆಂಡ್, ಜರ್ಮನಿ, ಆಸ್ಟ್ರಿಯಾದಲ್ಲೂ ಅಂತಹದ್ದೇ ಅನುಮತಿಯಿದೆ. ವೈದ್ಯಕೀಯ ತಂತ್ರಜ್ಞಾನದ ವಿಕಾಸ ಮತ್ತು ರೋಗಿ ಹಾಗೂ ವೃದ್ಧರ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಈ ವಿಷಯವು ಚರ್ಚೆಗೆ ಬರುತ್ತಿದೆ.

ಭಾರತದಲ್ಲಿ ಇತ್ತೀಚೆಗೆ ನಡೆದ ಒಂದು ಪ್ರಸಂಗ ! ಗರ್ಭಿಣಿ ಪತ್ನಿಯ ಮೇಲೆ ಅನಿರೀಕ್ಷಿತವಾಗಿ ನಡೆದ ಹಲ್ಲೆಯಿಂದ ಆಕೆಯ ಗರ್ಭಪಾತವಾಯಿತು. ಆ ಮೃತ ಭ್ರೂಣವನ್ನು ಕೈಯಲ್ಲಿ ಹಿಡಿದುಕೊಂಡು ತಂದೆಯು ಜಬಲ್ಪುರ ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರಿಗೆ ಹೇಳಿದರು, “ಒಂದೋ ನನಗೆ ನ್ಯಾಯ ಕೊಡಿ ಅಥವಾ ನನಗೆ ಇಚ್ಛಾಮರಣಕ್ಕೆ ಅನುಮತಿ ಕೊಡಿ !” ಕೆಲವು ವರ್ಷಗಳ ಹಿಂದೆ ಬಿಹಾರದ ೧೫ ವರ್ಷದ ವಿದ್ಯಾರ್ಥಿಯೊಬ್ಬ ಕೌಟುಂಬಿಕ ಕಲಹದಿಂದ ಬೇಸತ್ತು ಇಚ್ಛಾಮರಣಕ್ಕೆ ಬೇಡಿಕೆ ಇಟ್ಟಿದ್ದನು. ಈಗ ಹರೀಶ ಅವರಿಗೆ ಈ ನಿರ್ಧಾರ ನೀಡಿದ ಮೇಲೆ ಇಚ್ಛಾಮರಣದ ಅನೇಕ ಅರ್ಜಿಗಳು ನ್ಯಾಯಾಲಯಕ್ಕೆ ಬಂದರೆ ಆಶ್ಚರ್ಯಪಡಬೇಕಿಲ್ಲ ! ವಾಸ್ತವವಾಗಿ ಪ್ರತಿಯೊಬ್ಬರಿಗೂ ಸಾವು ಕೇಳುವ ಹಕ್ಕಿಲ್ಲ; ಆದರೆ ಅಸಾಧಾರಣ ಸ್ಥಿತಿಯನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ ಎಂದೇನಿಲ್ಲ. ಭಾರತದಲ್ಲಿ ಅನೇಕರು ಸಂಕಷ್ಟದಲ್ಲಿ, ಬಡತನದಲ್ಲಿ ನರಳುತ್ತಿದ್ದಾರೆ ಮತ್ತು ಗುಣಪಡಿಸಲಾಗದ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಈ ದುಃಸ್ಥಿತಿಯನ್ನು ಗಮನಿಸಿದರೆ ನ್ಯಾಯಾಂಗ ವ್ಯವಸ್ಥೆಗೆ ‘ಇಚ್ಛಾಮರಣ’ ಎಂಬ ವಿಷಯವು ಸವಾಲಿನದ್ದಾಗಿ ಪರಿಣಮಿಸಬಹುದು.

ಇಚ್ಛಾಮರಣದ ಬಗ್ಗೆ ಧರ್ಮಶಾಸ್ತ್ರವೇನು ಹೇಳುತ್ತದೆ ?

ಇಚ್ಛಾಮರಣದಲ್ಲಿ ಸಾಮಾಜಿಕ, ಆರ್ಥಿಕ, ಮಾನಸಿಕ ಮತ್ತು ಭಾವನಾತ್ಮಕದಂತಹ ಅನೇಕ ವಿಷಯಗಳು ಸೇರಿವೆ; ಆದರೆ ಅದರ ಹಿಂದಿನ ಆಧ್ಯಾತ್ಮಿಕ ದೃಷ್ಟಿಕೋನವನ್ನು ಯಾರೂ ಅರ್ಥಮಾಡಿಕೊಳ್ಳುತ್ತಿಲ್ಲ. ಮನುಷ್ಯ ಜನ್ಮವು ಅಮೂಲ್ಯವಾಗಿದೆ. ‘೮೪ ಲಕ್ಷ ಯೋನಿಗಳಲ್ಲಿ ಅಲೆದ ನಂತರ ಜೀವಕ್ಕೆ ಮನುಷ್ಯ ಜನ್ಮ ಲಭಿಸುತ್ತದೆ’ ಎಂದು ಹಿಂದೂ ಧರ್ಮಶಾಸ್ತ್ರ ಹೇಳುತ್ತದೆ. ‘ಮನುಷ್ಯ ಜನ್ಮವೆಂದರೆ ಈಶ್ವರನ ಕೊಡುಗೆ ! ಹೀಗಿರುವಾಗ ಮಾನವಜೀವನವನ್ನು ಕೊನೆಗೊಳಿಸುವ ಆಲೋಚನೆ ಮಾಡುವುದೇ ಸಂಪೂರ್ಣ ಅಯೋಗ್ಯವಾಗಿದೆ’ ಎಂದು ಧರ್ಮಶಾಸ್ತ್ರ ಹೇಳುತ್ತದೆ. ಆದ್ದರಿಂದ ಇಚ್ಛಾಮರಣಕ್ಕೆ ಅನುಮತಿ ನೀಡುವುದೆಂದರೆ ಜೀವನದ ಪಾವಿತ್ರ್ಯಕ್ಕೆ ಧಕ್ಕೆ ತಂದಂತೆ. ಈ ರೀತಿ ಮೃತಪಟ್ಟವರಿಗೆ ಮರಣೋತ್ತರ ಸದ್ಗತಿ ಲಭಿಸುವುದಿಲ್ಲ; ಆದ್ದರಿಂದ ಧರ್ಮಶಾಸ್ತ್ರಗಳು ಆತ್ಮಹತ್ಯೆಯನ್ನು ನಿಷೇಧಿಸಿವೆ. ವ್ಯಕ್ತಿಯ ಮರಣವು ಅದರ ಜನ್ಮದಂತೆಯೇ ಪ್ರಾರಬ್ಧಕ್ಕೆ ಅಧೀನವಾಗಿದೆ. ‘ಅದು ಯಾವಾಗ ಬರಬೇಕು’ ಎಂಬುದು ಈಶ್ವರನಿಂದ ನಿಯೋಜಿತವಾಗಿರುತ್ತದೆ. ಹೀಗಿರುವಾಗ ರೋಗಿ ವ್ಯಕ್ತಿಯ ಅಥವಾ ಆಕೆಯ ಕುಟುಂಬದ ಇಚ್ಛೆಯಂತೆ ಮರಣವನ್ನು ತರುವುದು, ಇದು ಈಶ್ವರನ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಿದಂತೆ ಅಲ್ಲವೇ ? ಸಾಮಾನ್ಯ ವ್ಯಕ್ತಿ ಅಥವಾ ರೋಗಿಯ ಕುಟುಂಬದವರು ಕೇವಲ ಆತನ ಸ್ಥೂಲ ದೇಹಕ್ಕೆ ಆಗುವ ತೊಂದರೆಯ ಬಗ್ಗೆ ಮಾತ್ರ ಆಲೋಚಿಸುತ್ತಾರೆ; ಆದರೆ ಧರ್ಮಶಾಸ್ತ್ರವು ದೇಹಕ್ಕಿಂತ ಆಚೆ ಹೋಗಿ ಮನುಷ್ಯನನ್ನು ಆಲೋಚಿಸಲು ಪ್ರೇರೇಪಿಸುತ್ತದೆ. ಇಂದಿನ ಕಾಲದಲ್ಲಿ ಈ ಅಧ್ಯಾತ್ಮಶಾಸ್ತ್ರವನ್ನು ಯಾರು ನೆನಪಿನಲ್ಲಿಡುತ್ತಾರೆ ?

ಪಾಶ್ಚಾತ್ಯ ದೇಶಗಳಲ್ಲಿ ‘ಪುನರ್ಜನ್ಮ’ದ ಪರಿಕಲ್ಪನೆಯನ್ನೇ ನಂಬುವುದಿಲ್ಲ; ಆದರೆ ಹಿಂದೂ ಧರ್ಮದ ಪ್ರಕಾರ ‘ಪುನರ್ಜನ್ಮ’ ಇದೆ. ಸಹಜವಾಗಿ ಈಗಿನ ಪ್ರಗತಿಪರರು, ಬುದ್ಧಿಜೀವಿಗಳು ಅಥವಾ ಮಾನವ ಹಕ್ಕುಗಳ ಹೋರಾಟಗಾರರು ಇದನ್ನು ವಿರೋಧಿಸಬಹುದು; ಆದರೆ ಅದನ್ನು ನಿರ್ಲಕ್ಷಿಸಿ ಧರ್ಮಶಾಸ್ತ್ರವನ್ನು ಅನುಸರಿಸುವುದು ಸೂಕ್ತವಾಗಿದೆ. ಮನುಷ್ಯ ಜನ್ಮದಲ್ಲಿ ಜೀವವು ಸಂಚಿತ ಮತ್ತು ಪ್ರಾರಬ್ಧ ಕರ್ಮಗಳನ್ನು ಅನುಭವಿಸಲೇಬೇಕು. ಅದರ ನಿಗದಿತ ಲೆಕ್ಕಾಚಾರವನ್ನು ಕೊಡಲೇಬೇಕು ಮತ್ತು ಇದರೊಂದಿಗೆ ನಮ್ಮ ಕ್ರಿಯಮಾಣ ಕರ್ಮಗಳನ್ನೂ ಸರಿಯಾಗಿ ಮಾಡಬೇಕಾಗುತ್ತದೆ. ಅದನ್ನು ಸರಿಯಾಗಿ ಮಾಡಿದರೆ ಮಾತ್ರ ಅದು ಮತ್ತೆ ಸಂಚಿತ ಅಥವಾ ಪ್ರಾರಬ್ಧ ಕರ್ಮವಾಗಿ ರೂಪಾಂತರಗೊಳ್ಳುವುದಿಲ್ಲ. ಇಲ್ಲದಿದ್ದರೆ ಪ್ರಾರಬ್ಧದ ದುಷ್ಟಚಕ್ರವು ಮುಂದುವರಿಯುತ್ತಲೇ ಇರುತ್ತದೆ. ಜೀವನದಲ್ಲಿ ಜೀವದ ಪಾಲಿಗೆ ಎಷ್ಟು ಭೋಗಗಳು ಬಂದಿವೆಯೋ, ಅಷ್ಟನ್ನು ಅನುಭವಿಸಿದ ನಂತರವೇ ಆತನಿಗೆ ಮರಣ ಬರುತ್ತದೆ; ಆದರೆ ಭೋಗಗಳನ್ನು ಅನುಭವಿಸದೆಯೇ ಮರಣದ ಆಯ್ಕೆಯನ್ನು ಸ್ವೀಕರಿಸಿದರೆ, ಆ ಭೋಗಗಳು ಮುಂದಿನ ಜನ್ಮದಲ್ಲಿ ಮತ್ತೆ ನಮ್ಮ ಪಾಲಿಗೆ ಬರುತ್ತವೆ. ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇಚ್ಛಾಮರಣದಿಂದ ಆ ಜೀವದ ಪ್ರಾರಬ್ಧವನ್ನು ಅನುಭವಿಸಲು ನಾವೇ ತಡೆಯೊಡ್ಡಿದಂತಾಗುತ್ತದೆ. ಇದು ಒಂದು ರೀತಿಯಲ್ಲಿ ಪಾಪವಲ್ಲವೇ ? ಹೇಗೆ ಈಶ್ವರನು ಜನ್ಮ ನೀಡುತ್ತಾನೋ, ಹಾಗೆಯೇ ಮರಣದ ಕಾಲವನ್ನೂ ಅವನೇ ನಿರ್ಧರಿಸುತ್ತಾನೆ. ಆದ್ದರಿಂದ ಲಭಿಸಿದ ಈ ಮನುಷ್ಯ ಜನ್ಮದಲ್ಲಿ ಸಾಧನೆ ಮಾಡುವುದು ಅತ್ಯಗತ್ಯವಾಗಿದೆ, ಇಲ್ಲದಿದ್ದರೆ ‘ಪಾಪ-ಪುಣ್ಯ’, ‘ಪ್ರಾರಬ್ಧಭೋಗ’ ಇಂತಹ ಆಧ್ಯಾತ್ಮಿಕ ವಿಷಯಗಳು ಮಾನವ ಬುದ್ಧಿಗೆ ತಿಳಿಯದ ಸಂಗತಿಗಳಾಗಿ ಉಳಿಯುತ್ತವೆ. ‘ಯಾರ ಕರ್ಮ ಹೇಗೋ, ಈಶ್ವರ ಫಲವನ್ನು ಹಾಗೆಯೇ ನೀಡುತ್ತಾನೆ’ ಎಂಬುದು ಗೀತೆಯ ಒಂದು ಸಾಲು, ‘ದೇಹವು ಏನೇ ಮಾಡಿದರೂ, ಆತ್ಮವು ನಂತರ ಅನುಭವಿಸುತ್ತದೆ!’, ಇದರ ಅರಿವು ಮನುಷ್ಯನಿಗೆ ಸದಾ ಇರಲಿ. ಇದರೊಂದಿಗೆ ಮನುಷ್ಯ ಜನ್ಮವೊಂದೇ ಜನ್ಮವಾಗಿದ್ದು, ಅದರಲ್ಲಿ ಮನುಷ್ಯನು ಸಾಧನೆ ಮಾಡಿ ಈಶ್ವರನೊಂದಿಗೆ ಏಕರೂಪವಾಗಬಹುದು, ಅಂದರೆ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತನಾಗಬಹುದು. ಆದ್ದರಿಂದ ಪಾಲಿಗೆ ಬಂದ ಭೋಗಗಳನ್ನು ಅನುಭವಿಸದೆ ಇಚ್ಛಾಮರಣದಂತಹ ಆಯ್ಕೆಯನ್ನು ಬಳಸುವುದಕ್ಕಿಂತ, ಈಶ್ವರನ ಆರಾಧನೆ ಮಾಡಿ ಭೋಗಗಳನ್ನು ಆನಂದದಿಂದ ಅನುಭವಿಸಿ ಜಗತ್ತಿನಿಂದ ವಿದಾಯ ಪಡೆಯುವುದು, ಇದೇ ಜೀವನದ ಸಾರವಾಗಿದೆ !