ನಾವು ದೋಷಮುಕ್ತವಾಗಿ ಕೆಲಸ ಮಾಡಲು ಕಲಿತರೆ, ಜೀವನವಿಡೀ ಆನಂದ ಸಿಗುವುದು !

ಒಂದು ದೇವಸ್ಥಾನದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಮೇಸ್ತ್ರಿ, ಬಡಗಿ ಇವರೆಲ್ಲರೂ ಕೆಲಸದಲ್ಲಿ ಮಗ್ನರಾಗಿದ್ದರು. ಅಲ್ಲಿ ಒಬ್ಬ ಶಿಲ್ಪಿಯು ದೇವಿಯ ವಿಗ್ರಹವನ್ನು ಕೆತ್ತನೆ ಮಾಡುತ್ತಿದ್ದನು. ಅವನು ಕೆತ್ತುತ್ತಿದ್ದ ದೇವಿಯ ಮೂರ್ತಿಯು ಬಹುತೇಕ ಪೂರ್ಣಗೊಳ್ಳುತ್ತಾ ಬಂದಿತ್ತು; ಆದರೆ ಅಂತಹದೇ ಇನ್ನೊಂದು ಮೂರ್ತಿಯನ್ನು ಅದರ ಹತ್ತಿರ ಇಡಲಾಗಿತ್ತು. ಒಬ್ಬ ಪ್ರವಾಸಿಗನು ಅಲ್ಲಿಗೆ ಬರುತ್ತಾನೆ. ಅವನು ಇದೆಲ್ಲವನ್ನು ನೋಡುತ್ತಾನೆ ಮತ್ತು ಆ ಶಿಲ್ಪಿಗೆ, “ಅರೇ, ಒಂದು ವಿಗ್ರಹವಿರುವಾಗ ನೀನು ಇನ್ನೊಂದು ವಿಗ್ರಹ ಏಕೆ ಕೆತ್ತುತ್ತಿದ್ದಿಯಾ ?” ಎಂದು ಕೇಳುತ್ತಾನೆ. ಶಿಲ್ಪಿಯು ಕೆಲಸವನ್ನು ಮಾಡುತ್ತಲೇ ಶಾಂತ ರೀತಿಯಲ್ಲಿ, ‘ಆ ಮೊದಲನೇ ವಿಗ್ರಹದಲ್ಲಿ ದೋಷ ನಿರ್ಮಾಣವಾಗಿದೆ,’ ಎಂದನು. ಆ ಪ್ರವಾಸಿಗನು ಮೊದಲನೇ ವಿಗ್ರಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವನಿಗೆ ದೋಷ ಕಾಣಿಸಲಿಲ್ಲ.

ಸಾಂಕೇತಿಕ ಚಿತ್ರ

ಆಗ ಅವನು ಪುನಃ ಶಿಲ್ಪಿಗೆ, “ನನಗಂತೂ ಎಲ್ಲಿ ದೋಷ ಕಾಣಿಸಲಿಲ್ಲ. ವಿಗ್ರಹವು ಪರಿಪೂರ್ಣವಾಗಿದೆ,” ಎಂದನು. ಆ ಶಿಲ್ಪಿಯು, “ದೋಷವಿದೆ. ಆ ವಿಗ್ರಹದ ಮೂಗಿನ ಮೇಲೆ ಒಂದು ಸಣ್ಣ ಬಿರುಕು ಬಿಟ್ಟಿದೆ,” ಎಂದನು. ಆ ಪ್ರವಾಸಿಗನು ಪುನಃ ವಿಗ್ರಹದ ಹತ್ತಿರ ಹೋಗಿ ಕೆಳಗೆ ಕುಳಿತು ಹತ್ತಿರದಿಂದ ನೋಡಿದರೂ, ಅವನಿಗೆ ಮೂಗಿನ ಮೇಲಿನ ಆ ಬಿರುಕು ಕಾಣಿಸಲಿಲ್ಲ. ಅವನು ಎದ್ದು ಶಿಲ್ಪಿಯ ಹತ್ತಿರ ಬಂದು, “ಈ ಹೊಸ ವಿಗ್ರಹವನ್ನು ದೇವಸ್ಥಾನದಲ್ಲಿ ಎಲ್ಲಿ ಕೂರಿಸಲಾಗುತ್ತದೆ ?” ಎಂದು ಕೇಳಿದನು. ಅದಕ್ಕೆ ಶಿಲ್ಪಿಯು, “೨೦ ಅಡಿ ಎತ್ತರದ ಕಂಬದ ಮೇಲೆ ಕೂರಿಸಲಾಗುತ್ತದೆ,” ಎಂದನು. ಪ್ರವಾಸಿಗನು ಆಶ್ಚರ್ಯದಿಂದ, “ಅರೇ, ನಾನು ಇಷ್ಟು ಹತ್ತಿರದಿಂದ ನೋಡಿದರೂ ಆ ಬಿರುಕು ಕಾಣಿಸಲಿಲ್ಲ, ಇನ್ನು ಅಷ್ಟು ಎತ್ತರದ ಮೇಲೆ ವಿಗ್ರಹವನ್ನು ಕೂರಿಸಿದ ಮೇಲೆ ಯಾರಿಗೂ ಆ ತಪ್ಪು ತಿಳಿಯುವುದೇ ಇಲ್ಲ, ಹೀಗಿರುವಾಗ ನೀನು ಹೊಸ ವಿಗ್ರಹವನ್ನು ಏಕೆ ಕೆತ್ತುತ್ತಿದ್ದೀಯಾ ?” ಎಂದು ಹೇಳಿದನು. ಆಗ ಮಾತ್ರ ಶಿಲ್ಪಿಯು ಕೈಯಲ್ಲಿನ ಸುತ್ತಿಗೆಯನ್ನು ಬದಿಗಿಟ್ಟು, ‘ನಿಜ, ಯಾರಿಗೂ ಅದು ತಿಳಿಯುವುದಿಲ್ಲ; ಆದರೆ ನನಗೆ ತಿಳಿದಿದೆಯಲ್ಲ ! ಅದು ಹೇಗೆ ಮಾಡಲಿ ? ಮತ್ತು ನನಗೆ ತಿಳಿದೂ ದೋಷಯುಕ್ತ ವಿಗ್ರಹವನ್ನು ನಾನು ನೀಡಲು ಸಾಧ್ಯವಿಲ್ಲ.’ ಎಂದು ಹೇಳಿದನು.

ಯಾವುದೇ ಕೆಲಸದಲ್ಲಿ ನಾವು ಸಾಧ್ಯಗೊಳಿಸುತ್ತಿರುವ ಪರಿಪೂರ್ಣತೆಯನ್ನು ಜಗತ್ತಿಗೆ ತೋರಿಸುವುದಕ್ಕಾಗಿ ಇರುವುದಿಲ್ಲ, ಬದಲಾಗಿ ನಮಗೆ ಸಮಾಧಾನ ನೀಡುತ್ತದೆ; ಏಕೆಂದರೆ ಪರಿಪೂರ್ಣತೆಯ ತಳಮಳ ಮತ್ತು ಅದರಿಂದ ಸಿಗುವ ಆನಂದವು ಪೂರ್ಣವಾಗಿ ನಮಗೇ ಲಭಿಸುತ್ತದೆ. ಆಗ ಆ ಆನಂದವು ಬೇರೆ ಯಾರಿಗೂ ತಿಳಿಯುವುದಿಲ್ಲವೆಂಬ ಕಾರಣಕ್ಕಾಗಿ ‘ಸ್ವಲ್ಪ ದೋಷವಿದ್ದರೂ ಪರವಾಗಿಲ್ಲ’, ಎಂದು ನಾನು ಕೆಲಸ ಮಾಡಿದರೆ ಆ ಕೆಲಸವೆನೋ ಪೂರ್ಣಗೊಳ್ಳುವುದು; ಆದರೆ ಸಮಾಧಾನ ಸಿಗುವುದಿಲ್ಲ. ಕೆಲವು ದಿನಗಳ ನಂತರ ಆ ದೋಷವು ನಿಮ್ಮನ್ನೇ ಹಗಲು-ರಾತ್ರಿ ಕಾಡತೊಡಗುತ್ತದೆ. ಆ ವಿಗ್ರಹವನ್ನು ದೇವಸ್ಥಾನದಲ್ಲಿ ಸ್ಥಾಪಿಸಿದಾಗ ಅನಂತರ ಆಗುವ ತೊಂದರೆಯನ್ನು ತಪ್ಪಿಸಲು ಮೊದಲೇ ದೋಷರಹಿತ ಕೆಲಸವನ್ನು ಮಾಡಲು ಕಲಿತರೆ, ಜೀವನವಿಡೀ ಆನಂದ ಸಿಗುತ್ತದೆ.

– ಡಾ. ಧನಂಜಯ ದೇಶಪಾಂಡೆ, ಪುಣೆ.