ಆಷಾಢಿ ವಾರಿಯಲ್ಲಿ ಭಕ್ತರಿಗೆ ಯಾವುದೇ ಅನಾನುಕೂಲತೆಯಾಗದಂತೆ ಜಾಗ್ರತೆ ವಹಿಸಿ! – ದೇವೇಂದ್ರ ಫಡ್ನವಿಸ್, ಮುಖ್ಯಮಂತ್ರಿ, ಮಹಾರಾಷ್ಟ್ರ ರಾಜ್ಯ

  • ವಾರಿಗಾಗಿ ವಿವಿಧ ಇಲಾಖೆಗಳಿಂದ ಸೌಲಭ್ಯಗಳ ವ್ಯಾಪಕ ಸಿದ್ಧತೆ

  • ‘ಡಿಸ್ಕವರಿ’ ಮತ್ತು ‘ಜಿಯೋಗ್ರಫಿ’ ದೂರದರ್ಶನ ವಾಹಿನಿಗಳ ಮೂಲಕ ವಾರಿ ಮಹೋತ್ಸವ ಜಗತ್ತಿನಾದ್ಯಂತ ಪ್ರಸಾರ

ಸಭೆಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್

ಮುಂಬಯಿ (ಮಹಾರಾಷ್ಟ್ರ) – ಆಷಾಢಿ ವಾರಿಯು ವಾರಕರಿ ಸಂಪ್ರದಾಯದ ಶ್ರದ್ಧೆ ಮತ್ತು ಮಹಾರಾಷ್ಟ್ರದ ಸಾಂಸ್ಕೃತಿಕ ಪರಂಪರೆಯ ಮಹತ್ವದ ಉತ್ಸವವಾಗಿದೆ. ಈ ವರ್ಷದ ವಾರಿಯಲ್ಲಿ ಲಕ್ಷಾಂತರ ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲತೆಯಾಗದಂತೆ, ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ವ್ಯಾಪಕ ಯೋಜನೆಗಳನ್ನು ರೂಪಿಸಬೇಕು. ವಾರಿಯ ಈ ಮಹೋತ್ಸವವನ್ನು ‘ಡಿಸ್ಕವರಿ’ ಮತ್ತು ‘ಜಿಯೋಗ್ರಫಿ’ ದೂರದರ್ಶನ ವಾಹಿನಿಗಳ ಮೂಲಕ ಜಗತ್ತಿನಾದ್ಯಂತ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ತಿಳಿಸಿದರು. ವಿಧಾನಭವನದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ತೀರ್ಥಕ್ಷೇತ್ರ ಪಂಢರಪುರದ ಆಷಾಢಿ ಏಕಾದಶಿಯ ಹಿನ್ನೆಲೆಯಲ್ಲಿ ಪೂರ್ವಸಿದ್ದತೆಯ ಪರಿಶೀಲನಾ ಸಭೆ ಜರುಗಿತು. ಆಗ ಅವರು ಮಾತನಾಡುತ್ತಿದ್ದರು.

ಸಭೆಯಲ್ಲಿ ಸಿದ್ಧಪಡಿಸಲಾದ ವಿಶೇಷ ಚಿತ್ರ

ಈ ಸಭೆಯಲ್ಲಿ ಸೋಲಾಪುರ ಜಿಲ್ಲೆಯ ಉಸ್ತುವಾರಿ ಸಚಿವ ಜಯಕುಮಾರ್ ಗೋರೆ, ಸಾರ್ವಜನಿಕ ಆರೋಗ್ಯ ಸಚಿವ ಪ್ರಕಾಶ್ ಆಬಿಟಕರ್ ಸೇರಿದಂತೆ ಹಿರಿಯ ಆಡಳಿತಾಧಿಕಾರಿಗಳು ಮತ್ತು ಪಲ್ಲಕ್ಕಿ ಮಹೋತ್ಸವದ ಪ್ರಮುಖ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಮುಂದುವರಿದು ಮಾತನಾಡುತ್ತಾ, ಈ ವರ್ಷದ ವಾರಿಗಾಗಿ ಪಲ್ಲಕ್ಕಿ ಮಾರ್ಗದ ರಸ್ತೆಗಳ ದುರಸ್ತಿ ಮತ್ತು ಉನ್ನತೀಕರಣಗೊಳಿಸಲಾಗಿದೆ, ಹಾಗೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಾಧ್ಯಮದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದರಿಂದಾಗಿ ಪಲ್ಲಕ್ಕಿಯ ಮಾರ್ಗದ ಪ್ರಯಾಣವು ಹೆಚ್ಚು ಸುರಕ್ಷಿತ ಮತ್ತು ಸುಲಭವಾಗಲಿದೆ. ವಾರಕರಿಗಳು ತಂಗುವ ಸ್ಥಳಗಳಲ್ಲಿ ಭಾರೀ ಪ್ರಮಾಣದಲ್ಲಿ ‘ಜರ್ಮನ್ ಹ್ಯಾಂಗರ್’ (ದೊಡ್ಡ ಮಂಟಪ) ನಿರ್ಮಿಸಲಾಗಿದ್ದು, ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜ, ಜಗದ್ಗುರು ಸಂತ ತುಕಾರಾಮ ಮಹಾರಾಜ ಹಾಗೂ ಇತರ ಪಲ್ಲಕ್ಕಿಗಳು ತಂಗುವ ಸ್ಥಳಗಳಲ್ಲೂ ‘ಜರ್ಮನ್ ಹ್ಯಾಂಗರ್’ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಲಕ್ಷಾಂತರ ವಾರಕರಿಗಳಿಗೆ ಸುರಕ್ಷಿತ ಮತ್ತು ವಿಶಾಲವಾದ ವಸತಿ ಸೌಲಭ್ಯ ಮಾಡಲಾಗಿದೆ’’ ಎಂದರು. ಇದೇ ವೇಳೆ ಪಲ್ಲಕ್ಕಿ ಮಹೋತ್ಸವದ ಪ್ರಮುಖರು ಮಂಡಿಸಿದ ವಿವಿಧ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ವಾರಿ ಮಹೋತ್ಸವವನ್ನು ಸಾಂಪ್ರದಾಯಿಕವಾಗಿಯೇ ಆಚರಿಸಬೇಕು! – ಮುಖ್ಯಮಂತ್ರಿ

‘ಡಿಜೆ’ (ದೊಡ್ಡ ಧ್ವನಿಯ ಧ್ವನಿವರ್ಧಕ ವ್ಯವಸ್ಥೆ) ಮುಕ್ತ ವಾರಿ ಮಹೋತ್ಸವಕ್ಕಾಗಿ ಪೊಲೀಸ್ ಆಡಳಿತ ವ್ಯವಸ್ಥೆಯು ಎಲ್ಲರೊಂದಿಗೆ ಚರ್ಚಿಸಿ ಪ್ರಯತ್ನಿಸಬೇಕು. ವಾರಿ ಮಹೋತ್ಸವವನ್ನು ಸಾಂಪ್ರದಾಯಿಕ ಶೈಲಿಯಲ್ಲೇ ಆಚರಿಸಬೇಕೆಂದು ಮುಖ್ಯಮಂತ್ರಿಗಳು ಹೇಳಿದರು.