೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake

  • ವೆನೆಜುವೆಲಾದಲ್ಲಿ ೨ ಭೀಕರ ಭೂಕಂಪಗಳು!

  • ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ

ಕಾರಾಕಾಸ್ (ವೆನೆಜುವೆಲಾ) – ದಕ್ಷಿಣ ಅಮೆರಿಕಾ ಖಂಡದ ದೇಶವಾದ ವೆನೆಜುವೆಲಾದಲ್ಲಿ ಜೂನ್ ೨೪ ರಂದು ರಾತ್ರಿ ೧೦ ಗಂಟೆಗೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಿಂದಾಗಿ ಭಾರಿ ಪ್ರಮಾಣದ ಹಾನಿಯಾಗಿದೆ. ಕೇವಲ ೩೯ ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಈ ಭೂಕಂಪಗಳ ತೀವ್ರತೆಯು ರಿಕ್ಟರ್ ಮಾಪಕದಲ್ಲಿ ೭.೨ ಮತ್ತು ೭.೫ ರಷ್ಟು ದಾಖಲಾಗಿದೆ. ಇದರಿಂದಾಗಿ ರಾಜಧಾನಿ ಕಾರಾಕಾಸ್ ಸೇರಿದಂತೆ ಹಲವು ನಗರಗಳು ನಡುಗಿವೆ. ಈ ಭೂಕಂಪದ ಕಾರಣದಿಂದಾಗಿ ರಸ್ತೆಗಳು ಮಧ್ಯದಲ್ಲೇ ಬಿರುಕು ಬಿಟ್ಟಿದ್ದು, ಅನೇಕ ಕಟ್ಟಡಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ, ಇನ್ನು ಕೆಲವು ಮನೆಗಳು ಇಸ್ಪೀಟ್ ಎಲೆಗಳಂತೆ ಕುಸಿದು ಬಿದ್ದಿವೆ. ನಗರದಲ್ಲಿ ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಹಾಗೆಯೇ, ರಕ್ಷಣಾ ಪಡೆಗಳು ಜನರನ್ನು ಅವಶೇಷಗಳಡಿಯಿಂದ ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ. ಈ ಭೂಕಂಪದಲ್ಲಿ ಇದುವರೆಗೆ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ಹೊರಬಂದಿಲ್ಲವಾದರೂ, ಮೃತರ ಸಂಖ್ಯೆ ೧೦ ಸಾವಿರದಿಂದ ೧ ಲಕ್ಷದವರೆಗೆ ಇರಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಇದುವರೆಗೆ ೩೨ ಜನರು ಸಾವನ್ನಪ್ಪಿದ್ದು, ೭೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಸ್ತುವಾರಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ದೇಶದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

ಮೊದಲ ಭೂಕಂಪ ರಾತ್ರಿ 10:04 ಕ್ಕೆ ಸ್ಯಾನ್ ಫೆಲಿಪೆ ನಗರದ ಬಳಿ ಸಂಭವಿಸಿತು, ಇದರ ತೀವ್ರತೆ ೭.೨ ರಷ್ಟಿತ್ತು. ಇದರ ಬೆನ್ನಲ್ಲೇ ಕೇವಲ ೩೯ ಸೆಕೆಂಡುಗಳ ನಂತರ ಯುಮಾರೆ ನಗರದ ಬಳಿ ೭.೫ ತೀವ್ರತೆಯ ಎರಡನೇ ಮತ್ತು ಹೆಚ್ಚು ಶಕ್ತಿಶಾಲಿ ಭೂಕಂಪನ ಸಂಭವಿಸಿತು. ಈ ಎರಡೂ ಭೂಕಂಪಗಳು ಪರಸ್ಪರ ಕೇವಲ ೪೫ ಕಿಲೋಮೀಟರ್ ದೂರದಲ್ಲಿ ಸಂಭವಿಸಿವೆ. ಇದರ ಆಘಾತ ನೆರೆಯ ದೇಶವಾದ ಕೊಲಂಬಿಯಾದಲ್ಲೂ ವರದಿಯಾಗಿದೆ. ಮುಂದಿನ ಕೆಲವು ಗಂಟೆಗಳ ಕಾಲ ಭೂಕಂಪದ ನಂತರದ ಸಣ್ಣ ನಡುಕಗಳು (ಆಫ್ಟರ್‌ಶಾಕ್ಸ್) ಬರುವ ಸಾಧ್ಯತೆ ಇರುವುದರಿಂದ ಆಡಳಿತ ಮಂಡಳಿಯು ನಾಗರಿಕರಿಗೆ ಜಾಗರೂಕರಾಗಿರಲು ಕರೆ ನೀಡಿದೆ.

ನಾಗರಿಕರಲ್ಲಿ ಭೀತಿಯ ವಾತಾವರಣ

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಮನೆಯಲ್ಲಿದ್ದ ರೆಫ್ರಿಜರೇಟರ್ ಮತ್ತು ಅಲ್ಮಾರಿಗಳಲ್ಲಿದ್ದ ವಸ್ತುಗಳು ನೆಲಕ್ಕೆ ಬಿದ್ದವು. ಇಂತಹ ಭಯಾನಕ ಅನುಭವ ಹಿಂದೆಂದೂ ಆಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

೮೦ ವರ್ಷದ ವೃದ್ಧೆಯೊಬ್ಬರು ಮಾತನಾಡಿ, ಈ ಭೂಕಂಪವು ೧೯೬೭ ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪಕ್ಕಿಂತಲೂ ಹೆಚ್ಚು ಭಯಾನಕವಾಗಿತ್ತು ಎಂದು ಹೇಳಿದ್ದಾರೆ.

ಅಮೆರಿಕ ಸಹಾಯ ಮಾಡಲಿದೆ! – ಡೊನಾಲ್ಡ್ ಟ್ರಂಪ್, ಅಧ್ಯಕ್ಷರು, ಅಮೆರಿಕ

“ಅಮೆರಿಕ ಸಹಾಯ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ, ಇಚ್ಛೆಯುಳ್ಳದ್ದಾಗಿದೆ ಮತ್ತು ಸಮರ್ಥವಾಗಿದೆ. ನಾನು ನನ್ನ ಸರಕಾರದ ಎಲ್ಲಾ ಸಂಸ್ಥೆಗಳಿಗೆ ತಕ್ಷಣವೇ ಸಿದ್ಧತೆಗಳನ್ನು ಮಾಡಿಕೊಳ್ಳಲು ನಿರ್ದೇಶನ ನೀಡಿದ್ದೇನೆ. ನಾವು ನಮ್ಮ ಹೊಸ ಮತ್ತು ಉತ್ತಮ ಸ್ನೇಹಿತರ ಪರವಾಗಿ ನಿಲ್ಲುತ್ತೇವೆ. ಭೂಕಂಪದ ನಂತರ ಅಲ್ಲಿನ ಪರಿಸ್ಥಿತಿಯನ್ನು ತಿಳಿಸುವ ಪ್ರಾಥಮಿಕ ವರದಿಗಳು ಉತ್ತಮವಾಗಿಲ್ಲ,” ಎಂದು ಹೇಳಿದರು.

ಅಗತ್ಯವಿದ್ದರೆ ಭಾರತವು ವೆನೆಜುವೆಲಾಗೆ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧ! – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ, “ಈ ಕಷ್ಟದ ಸಮಯದಲ್ಲಿ ಭಾರತವು ವೆನೆಜುವೆಲಾದ ಜನರೊಂದಿಗೆ ನಿಂತಿದೆ ಮತ್ತು ಅಗತ್ಯ ಬಿದ್ದರೆ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ.