ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್‌ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein

ಹಣ ನೀಡಿ ರೋಗಿಯನ್ನು ಸುಮ್ಮನಿರಿಸಲು ಯತ್ನ!

ಘಾಜಿಯಾಬಾದ (ಉತ್ತರ ಪ್ರದೇಶ) – ಇಲ್ಲಿನ ಲೋನಿ ಎಂಬಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯ ನದೀಮ್ ಎಂಬಾತನು ದೆಹಲಿ ನಿವಾಸಿಯಾದ ನೂರ್ ಸಬಾ ಎಂಬ ಮಹಿಳಾ ರೋಗಿಯ ತಪ್ಪು ರಕ್ತನಾಳವನ್ನು ಕತ್ತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ಮಹಿಳಾ ರೋಗಿಗೆ ತಿಳಿಯುತ್ತಿದ್ದಂತೆ ಆಕೆ ಇದನ್ನು ವಿರೋಧಿಸಿದಾಗ, ಇದು ಅಲ್ಲಾಹನ ಇಚ್ಛೆಯಾಗಿದೆ ಎಂದು ವೈದ್ಯರು ಉದ್ಧಟತನದ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲದೆ, ವೈದ್ಯರು ಆಕೆಯ ಕುಟುಂಬಕ್ಕೆ 500-1000 ರೂಪಾಯಿಗಳನ್ನು ನೀಡಿ ಸುಮ್ಮನಿರಲು ಹೇಳಿದ್ದಾರೆ. (ಈ ರೀತಿ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಇಂತಹ ಬೇಜವಾಬ್ದಾರಿ ವೈದ್ಯರ ವಿರುದ್ಧ ಸರಕಾರವು ಕಠಿಣ ಕ್ರಮ ಕೈಗೊಳ್ಳಲೇಬೇಕು! – ಸಂಪಾದಕರು) ‘ದಿಲ್ಲಿ ಅಪ್‌ ಡೇಟ್’ ಹೆಸರಿನ ‘ಯೂಟ್ಯೂಬ್ ಚಾನೆಲ್’ನಲ್ಲಿ ಈ ಪ್ರಕರಣವು ಮುನ್ನೆಲೆಗೆ ಬಂದಿದೆ.

1. ದೆಹಲಿಯ ಕರ್ದಮ್ ಪುರಿಯಲ್ಲಿ ವಾಸಿಸುವ ನೂರ್ ಸಬಾ ಅವರು ಲೋನಿಯ ‘ಅಲವಿ ನರ್ಸಿಂಗ್ ಹೋಮ್’ಗೆ ಪಿತ್ತಕೋಶದ (ಗಾಲ್ ಬ್ಲಾಡರ್) ಚಿಕಿತ್ಸೆಗಾಗಿ ತೆರಳಿದ್ದರು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು; ಆದರೆ, 15-20 ದಿನಗಳ ನಂತರ ಅವರಿಗೆ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನೂರ್ ಸಬಾ ಅವರು ಮತ್ತೆ ಅದೇ ನರ್ಸಿಂಗ್ ಹೋಮ್‌ ಗೆ ಚಿಕಿತ್ಸೆಗಾಗಿ ಹೋಗಿದ್ದರು.

2. ನರ್ಸಿಂಗ್ ಹೋಮ್‌ ನಲ್ಲಿ ತಪಾಸಣೆ ನಡೆಸಿದ ನಂತರ ಅವರಿಗೆ ಕಾಮಾಲೆ (ಜಾಂಡೀಸ್) ಕಾಯಿಲೆ ಬಂದಿದೆ ಎಂದು ಹೇಳಲಾಯಿತು. ಆದರೆ ಕಾಮಾಲೆ ಬರಲು ನಿಖರವಾದ ಕಾರಣವನ್ನೇನೂ ಅವರಿಗೆ ತಿಳಿಸಲಿಲ್ಲ. ಹೀಗಾಗಿ ಆಕೆ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ತೆರಳಿದರು. ಅಲ್ಲಿ ತಪಾಸಣೆ ನಡೆಸಿದಾಗ, ಮೊದಲ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ರಕ್ತನಾಳವನ್ನು ಕತ್ತರಿಸಲಾಗಿತ್ತು ಮತ್ತು ಅದೇ ಕಾರಣಕ್ಕಾಗಿ ಅವರಲ್ಲಿ ಕಾಮಾಲೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂಬ ಆಘಾತಕಾರಿ ವಿಷಯ ತಿಳಿಯಿತು. ಈ ಎರಡನೇ ಆಸ್ಪತ್ರೆಯಲ್ಲಿ ಅವರಿಗೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಲಾಗಿ, ನೂರ್ ಸಬಾ ಅವರು ಗುಣಮುಖರಾದರು.

3. ಇದರ ನಂತರ ಆಕೆ ಈ ಬಗ್ಗೆ ಪ್ರಶ್ನಿಸಲು ಲೋನಿಯ ಆ ನರ್ಸಿಂಗ್ ಹೋಮ್‌ ಗೆ ತಲುಪಿದರು. ಅಲ್ಲಿ ವೈದ್ಯ ನದೀಮ್ ಮತ್ತು ಆತನ ಸಹಚರರು ನೂರ್ ಸಬಾ ಅವರಿಗೆ ಇದು ಅಲ್ಲಾಹನ ಇಚ್ಛೆಯಾಗಿದೆ ಎಂದು ಹೇಳಿದರು. ಅದಕ್ಕೆ ಆಕೆ, ಒಂದು ವೇಳೆ ನಾನು ಸಾವನ್ನಪ್ಪಿದ್ದರೆ? ಎಂದು ವೈದ್ಯರನ್ನು ಪ್ರಶ್ನಿಸಿದಾಗ, ಅದು ಕೂಡ ಅಲ್ಲಾಹನ ಇಚ್ಛೆಯೇ ಆಗಿರುತ್ತಿತ್ತು ಎಂದು ಡಾ. ನದೀಮ್ ಉತ್ತರಿಸಿದ್ದಾನೆ. ನೂರ್ ಇದನ್ನು ತೀವ್ರವಾಗಿ ವಿರೋಧಿಸಿದಾಗ, ಆಕೆಗೆ ಹಣ ನೀಡಿ ಪ್ರಕರಣವನ್ನು ಅಲ್ಲೇ ಮುಚ್ಚಿಹಾಕಲು ಯತ್ನಿಸಿದನು. (ಅಲ್ಲಾಹನ ಹೆಸರನ್ನು ಬಳಸಿಕೊಂಡು ತಪ್ಪು ಕೃತ್ಯ ಎಸಗುವ ಇಂತಹ ವೈದ್ಯರನ್ನು ವೈದ್ಯಕೀಯ ವೃತ್ತಿಯಿಂದಲೇ ಅನರ್ಹಗೊಳಿಸುವುದೇ ಯೋಗ್ಯವಾಗಿದೆ! – ಸಂಪಾದಕರು)