ಯುಕ್ರೇನ್‌ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War

ರಷ್ಯಾದಿಂದ ಪ್ರತಿದಾಳಿ

ಕೀವ್ (ಯುಕ್ರೇನ್) – ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧ ಆರಂಭವಾಗಿ ಈಗ ಸುಮಾರು ನಾಲ್ಕೂವರೆ ವರ್ಷಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಯುಕ್ರೇನ್ ರಷ್ಯಾದ 12 ಪ್ರಾಂತ್ಯಗಳು ಹಾಗೂ ಕ್ರಿಮಿಯಾ ದ್ವೀಪಸಮೂಹದ ಮೇಲೆ ಭಾರಿ ದಾಳಿ ನಡೆಸಿದೆ ಎಂದು ರಷ್ಯಾ ಹೊಸದಾಗಿ ಆರೋಪಿಸಿದೆ. ಅದು ನೂರಾರು ಡ್ರೋನ್‌ ಗಳನ್ನು ಉಡಾಯಿಸಿದೆ. ಈ ಸಂಘರ್ಷದಲ್ಲಿ ಇದುವರೆಗೆ ನಡೆದ ಅತ್ಯಂತ ದೊಡ್ಡ ದಾಳಿಗಳಲ್ಲಿ ಇದು ಒಂದಾಗಿದೆ.

ರಷ್ಯಾದ ರಕ್ಷಣಾ ಸಚಿವಾಲಯವು, ತನ್ನ ವಾಯುಪಡೆಯು ಯುಕ್ರೇನ್‌ ನ 660 ಡ್ರೋನ್‌ ಗಳನ್ನು ಹೊಡೆದುರುಳಿಸಿದೆ ಎಂದು ಸ್ಪಷ್ಟಪಡಿಸಿದೆ. ಈ ದಾಳಿಯಲ್ಲಿ ರಷ್ಯಾದ 12 ವಿವಿಧ ಪ್ರಾಂತ್ಯಗಳು, ಹಾಗೆಯೇ ಕ್ರಿಮಿಯಾ ದ್ವೀಪಕಲ್ಪ, ಕಪ್ಪು ಸಮುದ್ರ ಮತ್ತು ಅಜೋವ್ ಸಮುದ್ರವನ್ನು ಗುರಿಯಾಗಿಸಲಾಗಿತ್ತು.
ಕಳೆದ ಕೆಲವು ತಿಂಗಳುಗಳಲ್ಲಿ ರಷ್ಯಾ-ಯುಕ್ರೇನ್ ಯುದ್ಧದ ಪರಿಸ್ಥಿತಿ ಹೀಗಿದೆ…!

ಯುಕ್ರೇನ್ ರಷ್ಯಾದ ತೈಲ ಉತ್ಪಾದನಾ ಘಟಕಗಳು ಮತ್ತು ಇಂಧನ ಕೇಂದ್ರಗಳನ್ನು ಗುರಿಯಾಗಿಸುತ್ತಿದೆ.

ಯುಕ್ರೇನ್‌ ನ ಈ ಕಾರ್ಯತಂತ್ರದಿಂದಾಗಿ ರಷ್ಯಾದ ಇಂಧನ ಪೂರೈಕೆ ಮತ್ತು ಸೈನಿಕ ಸಾಮಗ್ರಿ ಸಾಗಾಟಕ್ಕೆ ಅಡಚಣೆಯಾಗಿದೆ. ಪರಿಣಾಮವಾಗಿ ರಷ್ಯಾದ ಯುದ್ಧಭೂಮಿಯ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿವೆ ಮತ್ತು ಅಧ್ಯಕ್ಷ ಪುಟಿನ್ ಅವರ ಮೇಲಿನ ಒತ್ತಡ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಯುಕ್ರೇನ್ ಅಧ್ಯಕ್ಷ ವ್ಲೋದಿಮಿರ್ ಝೆಲೆನ್ಸ್ಕಿ ಅವರು ‘40-ದಿನಗಳ ಪ್ರಭಾವಿ ಅಭಿಯಾನ’ವನ್ನು ಕೈಗೊಳ್ಳಲು ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಈ ದೊಡ್ಡ ದಾಳಿ ನಡೆದಿದೆ. ರಷ್ಯಾವನ್ನು ಯುದ್ಧ ಕೊನೆಗೊಳಿಸಲು ಒತ್ತಾಯಿಸಲು ದಾಳಿಗಳನ್ನು ತೀವ್ರಗೊಳಿಸುವುದು ಇದರ ಹಿಂದಿನ ಉದ್ದೇಶ ಎಂದು ನಂಬಲಾಗಿದೆ. ಅಮೆರಿಕದ ಶಾಂತಿ ಪ್ರಯತ್ನಗಳು ವರ್ಷವಿಡೀ ನಡೆದರೂ ಯಾವುದೇ ದೃಢವಾದ ಫಲಿತಾಂಶ ಸಿಗದ ಕಾರಣ ಝೆಲೆನ್ಸ್ಕಿ ಈ ಕ್ರಮ ಕೈಗೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ರಷ್ಯಾದಿಂದಲೂ ಪ್ರತಿದಾಳಿ !

ರಷ್ಯಾ ಕೂಡ ಯುಕ್ರೇನ್‌ ನ ಖಾರ್ಕೀವ್ ಪ್ರದೇಶದ ಮೇಲೆ ದಾಳಿ ನಡೆಸಿದೆ. ಪ್ರಾಂತ್ಯದ ಪ್ರಾದೇಶಿಕ ಮುಖ್ಯಸ್ಥ ಒಲೆಹ್ ಸಿನಿಹ್ಯುಬೊವ್ ಅವರು ಮಾಹಿತಿ ನೀಡಿ, ಕಳೆದ 24 ಗಂಟೆಗಳಲ್ಲಿ ನಡೆದ ರಷ್ಯಾದ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 7 ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಯುಕ್ರೇನ್ ವಾಯುಪಡೆಯು, ತಾನು ರಷ್ಯಾದ 189 ಡ್ರೋನ್‌ ಗಳ ಪೈಕಿ 174 ಡ್ರೋನ್‌ ಗಳನ್ನು ಗಾಳಿಯಲ್ಲಿಯೇ ನಾಶಪಡಿಸಿದ್ದಾಗಿ ಹೇಳಿದೆ.