
ಫೆಬ್ರವರಿ ೧೬ ರಿಂದ ೨೦ ರ ಅವಧಿಯಲ್ಲಿ ದೆಹಲಿಯ ಭಾರತ ಮಂಡಪಮ್‌ನಲ್ಲಿ ನಡೆದ ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ೨೦೨೬’ ವಿಶ್ವದ ಅತ್ಯಂತ ಪ್ರಮುಖ ‘ಎಐ’ (ಕೃತಕ ಬುದ್ಧಿಮತ್ತೆ) ಕಾರ್ಯಕ್ರಮಗಳಲ್ಲಿ ಒಂದಾಗಿತ್ತು ! ಈ ಸಮ್ಮೇಳನದಲ್ಲಿ ೧೦೦ ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಮುಖ್ಯಸ್ಥರು, ವಿಜ್ಞಾನಿಗಳು ಮತ್ತು ನೀತಿ ನಿರೂಪಕರು ಒಂದೆಡೆ ಸೇರಿದ್ದರು. ‘ಎಐ’ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಮೇರಿಕಾ ಮತ್ತು ಚೀನಾದಂತಹ ದೇಶಗಳಿಗಿಂತಲೂ, ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ನಡೆದ ಈ ಸಮ್ಮೇಳನದ ಮೇಲೆ ಇಡೀ ವಿಶ್ವದ ಗಮನ ನೆಟ್ಟಿತ್ತು. ಕೈಗಾರಿಕಾ, ಗಣಕಯಂತ್ರ, ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳಂತಹ ಜಾಗತಿಕ ಬದಲಾವಣೆಗಳ ಸಮಯದಲ್ಲಿ ಕೇವಲ ಬಳಕೆದಾರನಾಗಿಯೇ ಉಳಿದಿದ್ದ ಭಾರತವು, ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ಸಜ್ಜಾಗುವುದು ಅನಿವಾರ್ಯವಾಗಿತ್ತು. ಆ ದೃಷ್ಟಿಯಿಂದಲೂ ಈ ‘ಎಐ’ ಸಮ್ಮೇಳನ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿತ್ತು.
‘ಎಐ’ ಇಂದು ಅತ್ಯಂತ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಭಾಗವಾಗಿದೆ. ಇದು ಕೇವಲ ಕಂಪ್ಯೂಟರ್ ವ್ಯವಸ್ಥೆಯಾಗಿ ಉಳಿಯದೆ ಮಾನವ ಕ್ರಿಯಾಶೀಲತೆ, ದೇಶದ ಆರ್ಥಿಕತೆ, ಸಾರ್ವಜನಿಕ ನೀತಿಗಳು ಮತ್ತು ಸಾಮಾಜಿಕ ಬದಲಾವಣೆಗಳ ಮೇಲೆ ಆಳವಾದ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ಬೃಹತ್ ಪ್ರಮಾಣದ ಮಾಹಿತಿಯನ್ನು ತರ್ಕಬದ್ಧವಾಗಿ, ವೇಗವಾಗಿ ವಿಶ್ಲೇಷಿಸುವ ಮತ್ತು ಕಠಿಣವಾದ ಪ್ರಶ್ನೆಗಳನ್ನು ಕ್ಷಣಾರ್ಧದಲ್ಲಿ ಬಿಡಿಸುವ ಅದ್ಭುತ ಸಾಮರ್ಥ್ಯ ‘ಎಐ’ನಲ್ಲಿದೆ. ಪ್ರಸ್ತುತ ಇದು ಅಮೇರಿಕಾ-ಚೀನಾದಂತಹ ದೇಶಗಳ ಅಧೀನದಲ್ಲಿದೆ. ‘ಎಐ’ನ ಸಾಧಕ-ಬಾಧಕಗಳನ್ನು ಗಮನಿಸಿದರೆ, ಇದರ ಮೇಲೆ ಯಾರೋ ಒಬ್ಬರ ಅಥವಾ ಕೆಲವು ದೇಶಗಳ ಏಕಸ್ವಾಮ್ಯವಿರುವುದು ಅತ್ಯಂತ ಅಪಾಯಕಾರಿ. ಈ ಅಪಾಯವನ್ನು ತಜ್ಞರು ಗುರುತಿಸಿದ್ದಾರೆ; ಆದ್ದರಿಂದಲೇ ‘ಎಐ’ನ ಸರಿಯಾದ ಬಳಕೆಯ ದೃಷ್ಟಿಯಿಂದ ಭಾರತದ ಪಾಲ್ಗೊಳ್ಳುವಿಕೆ ಅತ್ಯಂತ ಅವಶ್ಯಕವಾಗಿದೆ.

‘ಎಐ’ ಕ್ಷೇತ್ರದಲ್ಲಿ ಭಾರತದ ಮುನ್ನಡೆ ಅನಿವಾರ್ಯ
ಭಾರತದಲ್ಲಿ ನಡೆದ ಈ ಸಮ್ಮೇಳನವು ತಂತ್ರಜ್ಞಾನದ ಜಾಗತಿಕ ನಾಯಕತ್ವ, ಜಾಗತಿಕ ನೀತಿಗಳು, ಮಾನವ ಕೇಂದ್ರಿತ ‘ಎಐ’ ಮತ್ತು ಸುರಕ್ಷಿತ ಬಳಕೆ ಎಂಬ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕೃತವಾಗಿತ್ತು. ಭಾರತದಲ್ಲಿ ಬುದ್ಧಿವಂತರ ಕೊರತೆಯಿಲ್ಲ ಎಂಬುದನ್ನು ಸುಂದರ್ ಪಿಚೈ, ಸತ್ಯ ನಡೆಲ್ಲಾ, ಶಂತನು ನಾರಾಯಣ್, ಅರವಿಂದ್ ಕೃಷ್ಣನ್ ಅವರು ಈಗಾಗಲೇ ಸಾಬೀತುಪಡಿಸಿದ್ದಾರೆ. ಭಾರತವು ಇನ್ನೂ ಚಾಟ್ ಜಿಪಿಟಿ, ಜೆಮಿನಿ ಅಥವಾ ಡೀಪ್‌ಸೀಕ್‌ನಂತಹ ದೊಡ್ಡ ‘ಎಐ’ ಮಾಧ್ಯಮಗಳನ್ನು ಸ್ವತಃ ನಿರ್ಮಿಸದಿದ್ದರೂ, ಅಸ್ತಿತ್ವದಲ್ಲಿರುವ ‘ಎಐ’ ಮಾಧ್ಯಮಗಳನ್ನು ನಿಖರಗೊಳಿಸುವಲ್ಲಿ ಭಾರತೀಯರ ಪಾಲು ದೊಡ್ಡದಿದೆ. ಸುಮಾರು ೧೦ ಕೋಟಿ ಭಾರತೀಯರು ಚಾಟ್ ಜಿಪಿಟಿ ಬಳಸುತ್ತಿದ್ದಾರೆ ಮತ್ತು ಶೇ. ೫೬ ರಷ್ಟು ಭಾರತೀಯರು ದೈನಂದಿನ ಜೀವನದಲ್ಲಿ ‘ಎಐ’ ಬಳಸುತ್ತಿದ್ದಾರೆ. ಭಾರತದ ಶೇ. ೫೬ ರಷ್ಟು ಜನರು ತಮ್ಮ ಸ್ವಂತ ಪ್ರಜ್ಞೆಯನ್ನು ಬಳಸಿ ಕೃತಕ ಬುದ್ಧಿಮತ್ತೆಗೆ ಆಕಾರ ನೀಡುತ್ತಿದ್ದಾರೆ. ಹೀಗಾಗಿ ‘ಎಐ’ ಕ್ಷೇತ್ರದಲ್ಲಿ ಭಾರತಕ್ಕೆ ಮಹತ್ವದ ಸ್ಥಾನವಿದೆ.

ಇಂದಿನ ದಿನಗಳಲ್ಲಿ ಭಾರತವು ಪ್ರಭಾವಶಾಲಿ ‘ಎಐ’ ಮಾಧ್ಯಮವನ್ನು ಪ್ರಾರಂಭಿಸಬಲ್ಲದೇ ? ಎನ್ನುವುದಕ್ಕಿಂತಲೂ ‘ಅದನ್ನು ದೈನಂದಿನ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಬಳಸಲು ಸಾಧ್ಯವೇ ?’ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಮುಂಬರುವ ದಿನಗಳಲ್ಲಿ ‘ಎಐ’ ಮಾಧ್ಯಮ ಎಷ್ಟು ಪ್ರಭಾವಶಾಲಿಯಾಗಿದೆ ಎನ್ನುವುದಕ್ಕಿಂತ ರಾಷ್ಟ್ರೀಯ ಮಟ್ಟದಲ್ಲಿ, ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಪ್ರಸ್ತುತ ಬಳಕೆಯಲ್ಲಿರುವ ಉಪಕರಣಗಳಲ್ಲಿ ಅದನ್ನು ಬಳಸಲು ಸಾಧ್ಯವೇ ಎನ್ನುವುದು ಮುಖ್ಯವಾಗುತ್ತದೆ. ಆ ದೃಷ್ಟಿಯಿಂದ ‘ಸರ್ವಮ್ ಎಐ’ನಂತಹ ಭಾರತೀಯ ‘ಎಐ’ ವ್ಯವಸ್ಥೆಯ ಮಹತ್ವ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದೆ. ಈ ಸಮ್ಮೇಳನದಿಂದಾಗಿ ಭಾರತ ಕೇವಲ ಗ್ರಾಹಕನಾಗಿ ಉಳಿಯದೆ, ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ನಿರ್ವಹಣೆಯ ‘ಶಿಲ್ಪಿ’ಯಾಗಿ ಗುರುತಿಸಲ್ಪಡುವುದು ಖಚಿತ !
ಕೈಗಾರಿಕಾ, ಗಣಕಯಂತ್ರ ಮತ್ತು ಜಾಲತಾಣದ ಕ್ಷೇತ್ರಗಳಿಗೆ ಭಾರತವು ತಡವಾಗಿ ಪ್ರವೇಶಿಸಿತು. ಅದರ ಪರಿಣಾಮವಾಗಿ ಭಾರತೀಯರ ಬೃಹತ್ ಮಾಹಿತಿ ಸಂಗ್ರಹ ಇಂದು ಅಮೇರಿಕಾದಂತಹ ದೇಶಗಳಲ್ಲಿದೆ, ಇದು ದುರುಪಯೋಗವಾಗುವ ಸಾಧ್ಯತೆಯೂ ಹೆಚ್ಚಿದೆ. ಆದ್ದರಿಂದ ಇದನ್ನು ತಡೆಯಲು ಭಾರತವು ಕೃತಕ ಬುದ್ಧಿಮತ್ತೆಯ ಕೇಂದ್ರವಾಗಬೇಕು. ಕೇವಲ ಬುದ್ಧಿಮತ್ತೆ ಮಾತ್ರವಲ್ಲದೆ, ‘ಪ್ರಜ್ಞೆ’ ಭಾರತದ ವೈಶಿಷ್ಟ್ಯವಾಗಿದೆ. ಅನುಭವ, ಆತ್ಮಚಿಂತನೆ ಮತ್ತು ಸಂಯಮದೊಂದಿಗೆ ಕೂಡಿದ ಬುದ್ಧಿಮತ್ತೆಯೇ ‘ಪ್ರಜ್ಞೆ’, ಇದು ಸಮಾಜದ ಕಲ್ಯಾಣವನ್ನು ಮಾಡುತ್ತದೆ. ಇದನ್ನು ಜಗತ್ತಿಗೆ ನೀಡುವ ಶಕ್ತಿ ಭಾರತಕ್ಕಿದೆ.
ಉದಯಿಸುತ್ತಿರುವ ಸೂರ್ಯನಿಗೆ ಗ್ರಹಣ
ಈ ‘ಎಐ’ ಸಮ್ಮೇಳನದಲ್ಲಿ ನೋಯ್ಡಾದ ಗಲ್ಗೋಟಿಯಾ ವಿಶ್ವವಿದ್ಯಾಲಯವು ತಂದಿದ್ದ ಚೀನೀ ‘ರೋಬೋಡಾಗ್’ ಪ್ರಸಂಗವನ್ನು ಇಟ್ಟುಕೊಂಡು ರಾಹುಲ ಗಾಂಧಿಯವರು ಭಾರತವನ್ನು ಅವಹೇಳನ ಮಾಡುವ ದೇಶವಿರೋಧಿ ನಿಲುವು ತಳೆದರು. ಬಿಬಿಸಿ ಮತ್ತು ‘ದ ವೈರ್’ನಂತಹ ಮಾಧ್ಯಮಗಳು ಸಹ ಸಮ್ಮೇಳನದ ಕುರಿತು ಅಪಪ್ರಚಾರ ಮಾಡಿ ಭಾರತದ ಪ್ರತಿಷ್ಠೆಗೆ ಧಕ್ಕೆ ತರಲು ಪ್ರಯತ್ನಿಸಿದವು. ಧ್ರುವ ರಾಠಿ ಇನ್ನೂ ಸುಮ್ಮನೆ ಕುಳಿತಿರುವುದು ಆಶ್ಚರ್ಯದ ಸಂಗತಿ ! ರಾಹುಲ ಗಾಂಧಿಯವರ ಅವಕಾಶವಾದಿ ರಾಜಕಾರಣದ ನೇರ ಪ್ರಯತ್ನ ಹಾಗೂ ಬಿಬಿಸಿ ಮತ್ತು ‘ದ ವೈರ್’ನಂತಹ ಭಾರತವಿರೋಧಿ ಮಾಧ್ಯಮಗಳ ಹವಣಿಕೆ ಎಂದರೆ ಭಾರತದ ‘ಎಐ’ ಕ್ಷೇತ್ರದ ಉದಯೋನ್ಮುಖ ಸೂರ್ಯನಿಗೆ ಗ್ರಹಣ ಹಚ್ಚುವ ಪ್ರಯತ್ನವೇ ಸರಿ ! ಇಂದು ಇಂತಹವರ ದೊಡ್ಡ ಪ್ರಭಾವವು ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ವ್ಯಾಪಿಸಿದೆ. ಕೃತಕ ಬುದ್ಧಿಮತ್ತೆಯ ಕ್ಷೇತ್ರದಲ್ಲಿ ಇಂದು ಹಿಂದೂ ಧರ್ಮ ಮತ್ತು ದೇವತೆಗಳ ಕುರಿತು ಟೀಕೆ-ಟಿಪ್ಪಣಿಗಳನ್ನು ಸುಲಭವಾಗಿ ಹುಡುಕಬಹುದು, ಆದರೆ ಪಕ್ಷಪಾತದಿಂದ ತನ್ನನ್ನು ರಕ್ಷಿಸಿಕೊಳ್ಳಲು ‘ಎಐ’ ಇತರ ಯಾವುದೇ ಪಂಥಗಳಿಗೆ ಸಂಬಂಧಿಸಿದ ಇಂತಹ ವಿಷಯಗಳನ್ನು ಸುಲಭವಾಗಿ ಮುಟ್ಟುವುದಿಲ್ಲ. ಇದಕ್ಕೆ ಕಾರಣವೆಂದರೆ, ಕೃತಕ ಬುದ್ಧಿಮತ್ತೆಯ ನಿರ್ಮಾತೃಗಳು ‘ಡೀಪ್ ಸ್ಟೇಟ್’ನ ಅಧೀನದಲ್ಲಿರುವ ಸಾಧ್ಯತೆ ಹೆಚ್ಚಾಗಿರುವುದು.
ಜಾಲತಾಣ ಅಥವಾ ‘ಎಐ’ನಲ್ಲಿ ಭಾರತ, ಹಿಂದೂ ಧರ್ಮ, ಸಂಸ್ಕೃತಿ ಮತ್ತು ಇತಿಹಾಸದ ಕುರಿತು ಸರಿಯಾದ ಮಾಹಿತಿ ಸಿಗುವುದು ವಿರಳ. ಅಲ್ಲಿ ಹಿಂದೂವಿರೋಧಿ ನಿರೂಪಣೆಗಳೇ ಹೆಚ್ಚಿದ್ದರಿಂದ ಯೋಗ್ಯ ಮಾಹಿತಿ ಪಡೆಯುವುದು ಇನ್ನಷ್ಟು ದುರ್ಲಭವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ರಾಷ್ಟ್ರನಿಷ್ಠ, ಹಿಂದೂ ಧರ್ಮನಿಷ್ಠ ತಂತ್ರಜ್ಞರು ‘ಎಐ’ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿದ್ದಾರೆ, ಆದರೆ ಇದು ಸಾಕಾಗುವುದಿಲ್ಲ. ಇದಕ್ಕಾಗಿ ಭಗೀರಥ ಪ್ರಯತ್ನಗಳ ಆವಶ್ಯಕತೆ ಇದೆ. ‘ಎಐ’ಗೆ ಸರಿಯಾದ ಹಾದಿಯಲ್ಲಿ ಸಾಗಲು ಅದು ‘ಪ್ರಜ್ಞೆ’ಯಾಗಿ ರೂಪಾಂತರಗೊಳ್ಳಬೇಕು. ಈ ಕಾರ್ಯವನ್ನು ಕೇವಲ ಸಂಸ್ಕೃತಿನಿಷ್ಠ ಭಾರತೀಯರು ಮಾತ್ರ ಮಾಡಲು ಸಾಧ್ಯ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !