ಧರ್ಮಕ್ಕಾಗಿ ಸಕ್ರಿಯರಾಗಿರಿ !

ಎ. ಐ. ನಿರ್ಮಿತ ಚಿತ್ರ

ಉತ್ತರಪ್ರದೇಶದ ವಾರಾಣಸಿ ಜಿಲ್ಲಾ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆದಿತ್ತು. ಈ ವಿಚಾರಣೆಯ ಸಮಯದಲ್ಲಿ ಒಂದು ಕೋತಿಯು ನ್ಯಾಯಾಲಯವನ್ನು ಪ್ರವೇಶಿಸಿತು ಮತ್ತು ಅದು ಮೇಜಿನ ಮೇಲೆ ಬಂದು ಕುಳಿತುಕೊಂಡಿತು. ಸುಮಾರು ಒಂದು ಗಂಟೆಯ ಕಾಲ ವಿಚಾರಣೆ ನಡೆಯಿತು. ವಿಚಾರಣೆ ಮುಗಿದ ನಂತರ ಕೋತಿಯು ತನ್ನಷ್ಟಕ್ಕೆ ತಾನೇ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಹೋಯಿತು. ಅಯೋಧ್ಯೆಯಲ್ಲಿ ನಿರ್ಮಿಸಲಾದ ಶ್ರೀರಾಮ ಮಂದಿರದ ಗರ್ಭಗುಡಿಯೊಳಗೆ ಒಂದು ಕೋತಿಯು ಪ್ರವೇಶಿಸಿತ್ತು. ಪ್ರಾಣಪ್ರತಿಷ್ಠಾಪನಾ ಸಮಾರಂಭದ ಮರುದಿನವೇ ಈ ಘಟನೆ ನಡೆದಿತ್ತು. ೩೦ ಅಕ್ಟೋಬರ್ ೧೯೯೦ ರಂದು ಕಾರಸೇವಕರು ‘ಬ್ಯಾರಿಕೇಡ್ಸ್’ಗಳನ್ನು ಮುರಿದು ಬಾಬರಿ ಮಸೀದಿಯ ಮೇಲೆ ಕೇಸರಿ ಧ್ವಜಗಳನ್ನು ಹಚ್ಚಿದರು. ಭದ್ರತಾ ಸಿಬ್ಬಂದಿಗಳು ಅವರನ್ನು ದೂರಗೊಳಿಸಿದ ನಂತರವೂ ಮಸೀದಿಯ ಗುಮ್ಮಟದ ಮೇಲೆ ಕುಳಿತಿದ್ದ ಕೋತಿಯೊಂದು ಆ ಧ್ವಜಗಳಲ್ಲಿನ ಒಂದು ಧ್ವಜವನ್ನು ರಕ್ಷಿಸಿತು, ಆ ಧ್ವಜವನ್ನು ಅಲ್ಲಿಂದ ತೆಗೆಯಲು ಸಾಧ್ಯವಾಗಲಿಲ್ಲ.

೧೯೯೮ ರಲ್ಲಿ ಕೆಲವು ಭಯೋತ್ಪಾದಕರು ಹನುಮಾನ ಗಢಿ ದೇವಸ್ಥಾನದಲ್ಲಿ ಬಾಂಬ್ ಇಟ್ಟಿದ್ದರು. ಈ ಘಟನೆಯಲ್ಲಿ ಒಂದು ಕೋತಿಯು ಆ ಬಾಂಬ್‌ಅನ್ನು ಪತ್ತೆಹಚ್ಚಿ ಅದನ್ನು ನಿಷ್ಕ್ರಿಯಗೊಳಿಸಿತು. ಆದುದರಿಂದ ದೊಡ್ಡ ಸ್ಫೋಟವೊಂದು ತಪ್ಪಿತು ಮತ್ತು ಅನೇಕ ಜೀವಗಳು ಉಳಿದವು. ಇವೆಲ್ಲವೂ ಕೇವಲ ಕಾಕತಾಳೀಯಲ್ಲ, ಬದಲಾಗಿ ಈ ಘಟನೆ ಸಂಕಟಮೋಚನ ಹನುಮಂತನ ಅಖಂಡ ಮತ್ತು ಶಾಶ್ವತ ಅಸ್ತಿತ್ವದ ಸಾಕ್ಷಿಯಾಗಿದೆ. ಈ ಘಟನೆಗಳು ನಮಗೆ ಭಕ್ತಿ ಮತ್ತು ಸಾಧನೆಯ ಮಾರ್ಗದಲ್ಲಿ ಮತ್ತಷ್ಟು ದೃಢವಾಗಲು ಪ್ರೇರಣೆ ನೀಡುತ್ತವೆ.

ಜೀವದ ರಕ್ಷಣೆಗಾಗಿ ಮತ್ತು ಧರ್ಮದ ಸ್ಥಾಪನೆಗಾಗಿ ದೇವರು ಸ್ವತಃ ಅಥವಾ ತನ್ನ ಅಂಶಗಳ ಮೂಲಕ ಹೇಗೆ ಪ್ರಕಟನಾಗುತ್ತಾನೆ ಎಂಬುದಕ್ಕೆ ಇವು ಜೀವಂತ ಉದಾಹರಣೆಗಳಾಗಿವೆ. ಹನುಮಾನ ಗಢಿ ದೇವಸ್ಥಾನದಲ್ಲಿ ಇರಿಸಲಾಗಿದ್ದ ಬಾಂಬ್‌ಅನ್ನು ಕೋತಿಯು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿದ್ದು, ಇದು ಮಾನವನ ಪ್ರಯತ್ನಕ್ಕೂ ಮೀರಿದ ಪವಾಡವಾಗಿತ್ತು. ಸಂಕಟಮೋಚಕನ ರೂಪದಲ್ಲಿ ಅವನು ಸಾವಿರಾರು ಭಕ್ತರ ಪ್ರಾಣವನ್ನು ಉಳಿಸಿದನು. ಬುದ್ಧಿ ಮತ್ತು ಬಲವನ್ನು ಉಪಯೋಗಿಸಿ ಅವನು ಈ ರೀತಿ ಭಕ್ತರ ರಕ್ಷಣೆ ಮಾಡಿದ್ದಾನೆ. ಹನುಮಂತನು ಹಿಂದೂ ಸಂಪ್ರದಾಯದ ಸಪ್ತಚಿರಂಜೀವಿಗಳಲ್ಲಿ ಒಬ್ಬನಾಗಿದ್ದಾನೆ. ‘ಚಿರಂಜೀವಿ’ ಎಂದರೆ ಯುಗಯುಗಾಂತರಗಳಿಂದ ಧರ್ಮದ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಈ ಭೂಮಿಯ ಮೇಲೆ ಸೂಕ್ಷ್ಮ ಅಥವಾ ಪ್ರಕಟ ರೂಪದಲ್ಲಿ ನೆಲೆಸಿರುವವರು. ಜ್ಞಾನವಾಪಿ, ಅಯೋಧ್ಯೆ ಮತ್ತು ಹನುಮಾನ ಗಢಿಯ ಈ ಪವಾಡ ಸದೃಶ ಘಟನೆಗಳು ಕೇವಲ ಕಾಕತಾಳೀಯಲ್ಲ, ಬದಲಾಗಿ ಧರ್ಮಸಂಸ್ಥಾಪನೆಯ ಮಹಾನ ಕಾರ್ಯದಲ್ಲಿ ಮಾರುತಿಯ ಅಸ್ತಿತ್ವವು ಕಾರ್ಯನಿರ್ವಹಿಸುತ್ತಿರುವುದರ ಅನುಭೂತಿಯಾಗಿದೆ.

ಈಶ್ವರನು ಸ್ವತಃ ಕಾಲಕಾಲಕ್ಕೆ ಅವತಾರ ಅಥವಾ ಅಂಶಾತ್ಮಕ ಅವತಾರಗಳನ್ನು ತಾಳಿ ಧರ್ಮವನ್ನು ರಕ್ಷಿಸುತ್ತಾನೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ವಚನದಂತೆ, ‘ಯಾರು ಧರ್ಮವನ್ನು ರಕ್ಷಿಸುತ್ತಾರೋ, ಅವರನ್ನು ಧರ್ಮವು ರಕ್ಷಿಸುತ್ತದೆ.’ ಸಾಕ್ಷಾತ್ ದೇವರೇ ನಮ್ಮ ರಕ್ಷಣೆಗಾಗಿ ತನ್ನ ಅಸ್ತಿತ್ವದ ಮೇಲಿಂದ ಮೇಲೆ ಅನುಭೂತಿ ನೀಡುತ್ತಿದ್ದಾನೆ, ವಿವಿಧ ಮಾಧ್ಯಮಗಳಿಂದ ಅನುಭೂತಿ ನೀಡುತ್ತಿದ್ದಾನೆ, ಆದುದರಿಂದ ನಾವು ಕೂಡ ಧರ್ಮಕ್ಕಾಗಿ ಸಕ್ರಿಯರಾಗಬೇಕು. ಇಂದು ಅಧರ್ಮ, ಭ್ರಷ್ಟಾಚಾರಗಳು ಮಿತಿಮೀರಿ ನೈತಿಕಮೌಲ್ಯಗಳು ನಾಶವಾಗುತ್ತಿರುವಾಗ ಪ್ರತಿಯೊಬ್ಬ ವ್ಯಕ್ತಿಯೂ ಸಕ್ರಿಯವಾಗುವುದು ಅತ್ಯಂತ ಆವಶ್ಯಕವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರೂ ತನ್ನ ದೈನಂದಿನ ಜೀವನದ ಕಡಿಮೆ ಪಕ್ಷ ಒಂದು ಗಂಟೆಯನ್ನು ಧರ್ಮ-ರಾಷ್ಟ್ರ ಕಾರ್ಯ ಮತ್ತು ಸಾಧನೆಗಾಗಿ ಸಮರ್ಪಿಸಬೇಕು !

– ಸೌ. ಅಪರ್ಣಾ ಜಗತಾಪ, ಪುಣೆ