ಮಕ್ಕಳನ್ನು ಪೂರ್ಣ ಹೆಸರಿನಿಂದ ಕರೆಯದೆ ಅರ್ಧಮರ್ಧ ಹೆಸರಿನಿಂದ ಕರೆದರೆ ಆಗುವ ಹಾನಿ !

ನಾವು ಅನೇಕ ಬಾರಿ ನಮ್ಮ ದೈನಂದಿನ ಜೀವನದಲ್ಲಿ ಅರಿಯದೇ ಕೆಲವು ತಪ್ಪುಗಳನ್ನು ಮಾಡುತ್ತೇವೆ, ಎಂಬುದು ಗಮನಕ್ಕೆ ಬರುವುದಿಲ್ಲ. ಕುಲದೇವತೆಯ ಹೆಸರಿರಲಿ, ಪೂರ್ವಜರ ಹೆಸರಿರಲಿ, ನಿಸರ್ಗದ ಹೆಸರಿರಲಿ ಅಥವಾ ಯಾವುದೇ ಅರ್ಥಪೂರ್ಣ ಹೆಸರಿರಲಿ, ಮಕ್ಕಳ ಹೆಸರುಗಳನ್ನು ಒಳ್ಳೆಯ ಉದ್ದೇಶದಿಂದ ಇಡಲಾಗುತ್ತದೆ; ಆದರೆ ನಮ್ಮ ಸಮಾಜದಲ್ಲಿ ಸಾಮಾನ್ಯ ರೂಢಿ ಇದೆ, ನಾವು ಮಕ್ಕಳನ್ನು ಅವರ ಪೂರ್ಣಹೆಸರಿನಲ್ಲಿ ಕರೆಯುವುದಿಲ್ಲ, ಉದಾ. ಪಾಂಡುರಂಗನ ಬದಲು ಪಾಂಡು, ಜನಾರ್ಧನನ ಬದಲು ಜನ್ನು, ಶ್ರೀನಿವಾಸನ ಬದಲು ಸೀನ, ಬಾಲಕೃಷ್ಣನ ಬದಲು ಬಾಲ. ಈ ರೀತಿ ಅಪೂರ್ಣ ಹೆಸರುಗಳನ್ನು ಕರೆಯುವುದರಿಂದ ವ್ಯಕ್ತಿಯ ಪ್ರಗತಿ ಕುಂಠಿತಗೊಳ್ಳುತ್ತದೆ ಮತ್ತು ಅನಿಷ್ಟ ಶಕ್ತಿಗಳು ಅವನನ್ನು ಆವರಿಸುತ್ತವೆ.

ಒಬ್ಬ ವ್ಯಕ್ತಿಯನ್ನು ಪೂರ್ಣ ಹೆಸರಿನಿಂದ ಕರೆಯುವುದರಿಂದ ಅವರಿಗೆ ಧನಾತ್ಮಕತೆ ಮತ್ತು ಶಕ್ತಿ ಸಿಗುತ್ತದೆ

ಪ್ರತಿಯೊಂದು ಹೆಸರಿನಲ್ಲಿ ತನ್ನದೇ ಆದ ಒಂದು ಶಕ್ತಿ ಮತ್ತು ಮಹತ್ವವಿರುತ್ತದೆ. ಯಾವಾಗ ಒಬ್ಬ ವ್ಯಕ್ತಿಯನ್ನು ಅವನ ಪೂರ್ಣ ಹೆಸರಿನಿಂದ ಕರೆಯಲಾಗುತ್ತದೆಯೋ, ಆಗ ಆ ಹೆಸರಿಗೆ ಸಂಬಂಧಿಸಿದ ಸಕಾರಾತ್ಮಕತೆ ಮತ್ತು ಊರ್ಜೆ ಆ ವ್ಯಕ್ತಿಯ ಕಡೆಗೆ ವರ್ಗಾವಣೆಯಾಗುತ್ತದೆ. ಸೂರ್ಯನು ಸೂರ್ಯೋದಯದ ಸಮಯದಲ್ಲಿ ನಮಗೆ ಹೇಗೆ ಹೊಸ ಚೈತನ್ಯವನ್ನು ನೀಡುತ್ತಾನೆಯೋ, ಅದೇ ರೀತಿ ಮನುಷ್ಯನಲ್ಲಿ ಪ್ರತಿದಿನ ಸಕಾರಾತ್ಮಕ ಊರ್ಜೆ ಬರುತ್ತದೆ. ಉದಾಹರಣೆಗೆ ಯಾವುದಾದರೊಂದು ದೇವತೆಯ ಹೆಸರನ್ನು ಉಚ್ಚರಿಸಿದಾಗ ಆ ದೈವೀತತ್ತ್ವಗಳು ವ್ಯಕ್ತಿಯಲ್ಲಿ ವಾಸ ಮಾಡುತ್ತವೆ. ಹಿರಿಯರ ಹೆಸರನ್ನು ಕರೆದರೆ ಅವರ ಗುಣ ಮತ್ತು ಶಕ್ತಿಯು ಅದರಿಂದ ಹರಿಯುತ್ತಿರುತ್ತವೆ. ಆದ್ದರಿಂದ ಅಪೂರ್ಣ ಹೆಸರಿನಿಂದ ಕರೆಯುವ ಈ ರೂಢಿಯನ್ನು ತಕ್ಷಣ ಬದಲಾಯಿಸಿಕೊಳ್ಳಬೇಕು.

ಮಕ್ಕಳಿಗೆ ಬಾಲ್ಯದಿಂದಲೇ ಪೂರ್ಣ ಹೆಸರಿನಿಂದ ಕರೆಯುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಭಗವಂತನ ಕುರಿತು ಹೀಗೆ ಹೇಳಲಾಗುತ್ತದೆ, ‘ನಿಮ್ಮ ನಾಮದ ಬಲವೊಂದಿದ್ದರೆ ಸಾಕು (ಅದೇ ಶ್ರೀರಕ್ಷೆ)’, ಅದೇ ರೀತಿ ವ್ಯಕ್ತಿಯ ಹೆಸರಿನಲ್ಲಿಯೂ ಹೆಸರಿನ ಒಂದು ಮಹತ್ವದ ಶಕ್ತಿಯಿದೆ. ಹೆಸರಿನ ಈ ಶಕ್ತಿಯು ಪ್ರತಿಯೊಂದು ವ್ಯಕ್ತಿಯಲ್ಲಿ, ಪ್ರತಿಯೊಂದು ಜೀವದಲ್ಲಿದೆ. ಯಾರಾದರೊಬ್ಬರನ್ನು ಅವರ ಪೂರ್ಣ ಹೆಸರಿನಿಂದ ಕರೆದರೆ ಆ ವ್ಯಕ್ತಿಗೆ ತುಂಬಾ ಲಾಭವಾಗುತ್ತದೆ. ಈ ಸಕಾರಾತ್ಮಕ ರೂಢಿಯು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು.

ಸಂಕ್ಷಿಪ್ತಹೆಸರಿನಿಂದ ಕರೆದು ಕೀಳರಿಮೆಯ ಭಾವನೆಯನ್ನು ಮೂಡಿಸುವ ಬದಲು ಗೌರವದಿಂದ ನೀಡಿದ ಹೆಸರಿನಿಂದ ಕರೆಯುವುದು ಹೆಚ್ಚು ಒಳ್ಳೆಯದು !

ಅನೇಕ ಮನೆಗಳಲ್ಲಿ ಪ್ರೀತಿಯಿಂದ ಮಕ್ಕಳನ್ನು ಸಂಕ್ಷಿಪ್ತ ಹೆಸರಿನಿಂದ ಕರೆಯುವ ಪದ್ಧತಿಯಿದೆ. ಕೆಲವೊಮ್ಮೆ ಈ ಹೆಸರನ್ನು ಮುದ್ದಾಗಿ ಮತ್ತು ಪ್ರೀತಿಯಿಂದ ಕರೆಯಲಾಗುತ್ತದೆ; ಆದರೆ ಅನೇಕಬಾರಿ ಮಕ್ಕಳ ಬೆಳವಣಿಗೆ, ಬಣ್ಣ, ತೂಕ, ಮಾತನಾಡುವುದು ಅಥವಾ ಯಾವುದಾದರೊಂದು ರೂಢಿಯಿಂದ ಇಟ್ಟಿರುವ ಇಂತಹ ಹೆಸರುಗಳು ಅವರ ಮೇಲೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತವೆ. ಕಿಟ್ಟಿ, ಚಿಂಟು, ಸೀನು, ಕರಿಯಾ ಎಂಬ ಹೆಸರಿನಿಂದ ಕರೆಯುವುದರಿಂದ ಮಕ್ಕಳ ಮನಸ್ಸಿನಲ್ಲಿ ಕೀಳರಿಮೆಯನ್ನುಂಟು ಮಾಡಬಹುದು. ಬಾಲ್ಯದಲ್ಲಿ ಅವರ ಆತ್ಮಗೌರವ ನಾಜೂಕಾಗಿರುತ್ತದೆ ಮತ್ತು ಇಂತಹ ಹೆಸರುಗಳಿಂದ ಅವರ ಆತ್ಮವಿಶ್ವಾಸವು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಹೆಸರುಗಳು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತವೆ. ಅವರು ತಮ್ಮ ಬಗ್ಗೆ ಹೇಗೆ ವಿಚಾರ ಮಾಡುತ್ತಾರೆ ?, ಇತರರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೆ ? ಇದರ ಮೇಲೆ ಅವಲಂಬಿಸಿರುತ್ತದೆ. ಕೆಲವೊಮ್ಮೆ ಮಕ್ಕಳಿಗೆ ಈ ಹಾಸ್ಯಾಸ್ಪದ ಹೆಸರುಗಳಿಂದ ಶಾಲೆಯಲ್ಲಿ ಗೆಳೆಯರು ಅಣಕಿಸುವ ಸಾಧ್ಯತೆಯೂ ಇರುತ್ತದೆ. ಇಂತಹ ಅನುಭವಗಳ ಪರಿಣಾಮವು ಮುಂದೆ ದೊಡ್ಡವರಾದ ನಂತರವೂ ಕಂಡುಬರುತ್ತದೆ.

ಪಾಲಕರು, ಕುಟುಂಬದವರು ಅಥವಾ ಹತ್ತಿರದ ಜನರು ಮಕ್ಕಳನ್ನು ಅವರ ನಿಜವಾದ ಹೆಸರು ಅಥವಾ ಗೌರವದಿಂದ ನೀಡಿದ ಪ್ರೀತಿಯ ಹೆಸರನ್ನು ಬಳಸಿ ಕರೆಯುವುದು ಹೆಚ್ಚು ಒಳ್ಳೆಯದು. ಮಕ್ಕಳಿಗೆ ಅವರ ಪರಿಚಯವು ಗೌರವಯುತವಾಗಿ ಸಿಗುವುದು ಆವಶ್ಯಕವಾಗಿದೆ. ಆದ್ದರಿಂದ ಅವರು ತಮ್ಮ ಬಗ್ಗೆ ಸಕಾರಾತ್ಮಕ ಭಾವನೆಯನ್ನು ವಿಕಸಿತಗೊಳಿಸುತ್ತಾರೆ, ಅವರ ಆತ್ಮವಿಶ್ವಾಸವು ಹೆಚ್ಚುತ್ತದೆ ಮತ್ತು ಅವರ ವ್ಯಕ್ತಿತ್ವವು ಆರೋಗ್ಯಕರವಾಗಿ ಬೆಳೆಯುತ್ತದೆ; ಆದ್ದರಿಂದಲೇ ಮಕ್ಕಳನ್ನು ಅಪಮಾನವಾಗುವಂತೆ ಅಥವಾ ಕೀಳಾಗಿ ಕಾಣುವಂತಹ ಅಪೂರ್ಣ ಹೆಸರುಗಳಿಂದ ಕರೆಯುವುದನ್ನು ತಕ್ಷಣ ನಿಲ್ಲಿಸಬೇಕು,

– ನಿರ್ಮಿತಿ ತುಷಾರ ರಸಾಳ