
ಅಸ್ಸಾಂ, ಮಿಜೋರಾಂ, ಮಣಿಪುರ ರಾಜ್ಯಗಳ ‘ಕುಕಿ’ ಮತ್ತು ‘ಮಿಜೋ’ ಎಂದು ಗುರುತಿಸಲ್ಪಡುವ ಬುಡಕಟ್ಟು ಸಮುದಾಯದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್‌ಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿಯವರೆಗೆ ಈ ಸಮುದಾಯದ ಸುಮಾರು ೪ ಸಾವಿರ ನಾಗರಿಕರು ಇಸ್ರೇಲ್‌ಗೆ ತೆರಳಿದ್ದಾರೆ. ಇದಕ್ಕೆ ಕಾರಣವೆಂದರೆ, ಈ ಬುಡಕಟ್ಟು ಸಮುದಾಯದ ಮೂಲ ಇಸ್ರೇಲ್‌ನಲ್ಲಿದೆ. ಅನೇಕ ವರ್ಷಗಳ ಹಿಂದೆ ಇಸ್ರೇಲ್ ಮೇಲಿನ ಆಕ್ರಮಣದ ಸಮಯದಲ್ಲಿ ಯಹೂದಿಗಳು ವಿಶ್ವದ ವಿವಿಧ ದೇಶಗಳಿಗೆ ಹಂಚಿಹೋದರು. ಆಸ್ಸಾಂ, ಮಣಿಪುರ ಮತ್ತು ಮಿಜೋರಾಂನ ‘ಕುಕಿ’ ಅಥವಾ ‘ಮಿಜೋ’ ಬುಡಕಟ್ಟು ಸಮಾಜವು ಅವರಲ್ಲಿ ಒಂದು. ಇಸ್ರೇಲ್ ಇಂತಹ ನಿರ್ವಸಿvರನ್ನು ‘ಬನೇಯ್ ಮೆನಾಶೆ’, ಅಂದರೆ ‘ಯಹೂದಿ ಪ್ರವಾದಿಯ ಮಕ್ಕಳು’ ಎಂದು ಗುರುತಿಸುತ್ತದೆ. ಪ್ರಪಂಚದಾದ್ಯಂತ ಇರುವ ಇಂತಹ ‘ಬನೇಯ್ ಮೆನಾಶೆ’ಗಳನ್ನು, ಅಂದರೆ ಮೂಲ ಯಹೂದಿ ನಾಗರಿಕರನ್ನು ಮತ್ತೆ ಮಾತೃಭೂಮಿಗೆ ಕರೆತರಲು ಇಸ್ರೇಲ್ ಪ್ರಯತ್ನಿಸುತ್ತಿದೆ. ೨೦೨೬ ರ ವೇಳೆಗೆ ಭಾರತದಲ್ಲಿರುವ ಇಂತಹ ಎಲ್ಲಾ ‘ಬನೇಯ್ ಮೆನಾಶೆ’ಗಳನ್ನು ಸ್ವದೇಶಕ್ಕೆ ಕರೆತರುವ ಗುರಿಯನ್ನು ಇಸ್ರೇಲ್ ಹೊಂದಿದೆ. ಸ್ವಧರ್ಮೀಯ ಬಾಂಧವರನ್ನು ಮತ್ತೆ ಮಾತೃಭೂಮಿಗೆ ಕರೆತರಲು ಇಸ್ರೇಲ್ ಮಾಡುತ್ತಿರುವ ಈ ಪ್ರಯತ್ನಗಳು ಖಂಡಿತವಾಗಿಯೂ ಶ್ಲಾಘನೀಯ. ಭಾರತವು ಇದರಿಂದ ಖಂಡಿತವಾಗಿಯೂ ಪಾಠ ಕಲಿಯಬೇಕಿದೆ.
ಸ್ವಧರ್ಮೀಯರೆಂದು ಪುನರ್ವಸತಿ !

ಅಸ್ಸಾಂ, ಮಿಜೋರಾಂ, ಮಣಿಪುರ ರಾಜ್ಯಗಳ ‘ಕುಕಿ’ ಮತ್ತು ‘ಮಿಜೋ’ ಬುಡಕಟ್ಟು ಸಮುದಾಯವನ್ನು ಕ್ರೈಸ್ತ ಮಿಷನರಿಗಳು ಗುರಿ ಮಾಡಿಕೊಂಡಿದ್ದರು. ಕಳೆದ ಅನೇಕ ವರ್ಷಗಳಿಂದ ಅವರನ್ನು ಮತಾಂತರಿಸಲು ಮಿಷನರಿಗಳು ಪ್ರಯತ್ನ ಮಾಡಿದ್ದಾರೆ. ಇದರಿಂದಾಗಿ ಪ್ರಸ್ತುತ ಈ ಮೂಲ ಯಹೂದಿ ನಾಗರಿಕರಲ್ಲಿ ಅನೇಕರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ; ಆದರೂ ಅವರನ್ನು ಮತ್ತೆ ಮಾತೃಭೂಮಿಗೆ ಕರೆತರಲು ಇಸ್ರೇಲ್ ಟೊಂಕ ಕಟ್ಟಿ ನಿಂತಿದೆ. ಸಾಮಾನ್ಯವಾಗಿ ವಿಶ್ವದಾದ್ಯಂತ ಚದುರಿಹೋದ ಯಹೂದಿ ನಾಗರಿಕರು ಇಸ್ರೇಲ್‌ಗೆ ಬಂದಾಗ ಅವರನ್ನು ‘ಆಲಿಯಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ; ಆದರೆ ಭಾರತದ ಈ ನಾಗರಿಕರಲ್ಲಿ ಅನೇಕರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿರುವ ಕಾರಣ, ಇಸ್ರೇಲ್‌ಗೆ ಪ್ರವೇಶ ನೀಡುವ ಮೊದಲು ಧಾರ್ಮಿಕ ವಿಧಿವಿಧಾನಗಳ ಮೂಲಕ ಅವರನ್ನು ಯಹೂದಿಗಳನ್ನಾಗಿ ಮಾಡಲಾಗುತ್ತದೆ. ಈ ನಾಗರಿಕರನ್ನು ಇಸ್ರೇಲ್‌ಗೆ ಕರೆಸಿಕೊಂಡ ನಂತರ ಅವರಿಗೆ ‘ಹೀಬ್ರೂ’ ಭಾಷೆ ಕಲಿಸುವುದರಿಂದ ಹಿಡಿದು ಅವರ ಪುನರ್ವಸತಿಯ ವರೆಗಿನ ಜವಾಬ್ದಾರಿಯನ್ನು ಇಸ್ರೇಲ್ ವಹಿಸಿಕೊಂಡಿದೆ. ಇದಕ್ಕಾಗಿ ಇಸ್ರೇಲ್ ಸರಕಾರವು ತನ್ನ ಮುಂಗಡಪತ್ರದಲ್ಲಿ ೨೮ ಕೋಟಿ ಡಾಲರ್, ಅಂದರೆ ಭಾರತೀಯ ಚಲನಿನ ಪ್ರಕಾರ ಸುಮಾರು ೨೫೪ ಕೋಟಿ ರೂಪಾಯಿಗಳ ಅನುದಾನ ನೀಡಿದೆ. ಇಸ್ರೇಲ್‌ನಲ್ಲಿ ಪ್ರಕಟವಾದ ಸುದ್ದಿಗಳ ಪ್ರಕಾರ, ಈ ಸಮುದಾಯವನ್ನು ಇಸ್ರೇಲ್‌ನ ‘ಗ್ಯಾಲಿಲಿ’ ಭಾಗದಲ್ಲಿ, ಅಂದರೆ ಪ್ಯಾಲೆಸ್ಟೈನ್ ಮತ್ತು ಅರಬ್ ಸಮುದಾಯದವರು ಹೆಚ್ಚಾಗಿ ವಾಸಿಸುವ ಮತ್ತು ಜನವಸತಿ ವಿರಳವಾಗಿರುವ ಪ್ರದೇಶದಲ್ಲಿ ನೆಲೆಸುವಂತೆ ಮಾಡಲಾಗುವುದು. ಇದು ಲೆಬನಾನ್ ಗಡಿರೇಖೆಯ ಹತ್ತಿರವಿರುವ ಪ್ರದೇಶವಾಗಿದೆ. ಅರಬ್ ದೇಶಗಳೊಂದಿಗೆ ಇಸ್ರೇಲ್ ನಿರಂತರವಾಗಿ ಸಂಘರ್ಷ ನಡೆಸುತ್ತಿರುವ ಪ್ರದೇಶವಿದು. ಅಂದರೆ ಸ್ವಂತ ದೇಶಕ್ಕೆ ರಕ್ಷಣೆ ಒದಗಿಸುವುದು ಮತ್ತು ತನ್ನ ಶಕ್ತಿಯನ್ನು ಹೆಚ್ಚಿಸುವುದು ‘ಬನೇಯ್ ಮೆನಾಶೆ’ಗಳ ವಲಸೆಯ ಹಿಂದಿನ ಮುಖ್ಯ ಉದ್ದೇಶವಾಗಿರಬಹುದು. ಇದರಲ್ಲಿ ತಪ್ಪೇನೂ ಕಾಣುತ್ತಿಲ್ಲ.
ಹಿಂದೂಗಳ ಪುನರ್ವಸತಿ ಯಾರು ಮಾಡುವರು ?

ಈ ಪ್ರಕ್ರಿಯೆಯ ವಿಶೇಷತೆಯೆಂದರೆ, ಅಸ್ಸಾಂ, ಮಿಜೋರಾಂ, ಮಣಿಪುರ ರಾಜ್ಯಗಳ ‘ಕುಕಿ’ ಮತ್ತು ‘ಮಿಜೋ’ ಈ ಬುಡಕಟ್ಟು ಸಮುದಾಯದ ಮೂಲ ಯಹೂದಿಯಾಗಿದ್ದರೂ, ಅನೇಕ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವುದರಿಂದ ಅವರ ಪೌರತ್ವ ಭಾರತೀಯವೇ ಆಗಿದೆ. ಅಂದರೆ ಒಂದು ರೀತಿಯಲ್ಲಿ ಭಾರತೀಯ ನಾಗರಿಕರೇ ಇಸ್ರೇಲ್‌ನಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ. ಹೀಗಿದ್ದರೂ ಭಾರತ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಬದಲಾಗಿ ‘ಇಸ್ರೇಲ್ ಮತ್ತು ಭಾರತದ ನಡುವಿನ ಸಾಮರಸ್ಯದ ಉದಾಹರಣೆ’ ಎಂಬ ನಿಲುವನ್ನು ಕೇಂದ್ರ ಸರಕಾರ ತಳೆದಿದೆ. ಇದು ತಪ್ಪಾದ ನಿಲುವೇನೂ ಅಲ್ಲ. ಇಸ್ರೇಲ್ ನಮ್ಮ ಮಿತ್ರ ರಾಷ್ಟ್ರವಾಗಿದೆ. ಆದ್ದರಿಂದ ಮೂಲತಃ ತಮ್ಮ ಪೂರ್ವಜರ ದೇಶಕ್ಕೆ ಈ ಸಮಾಜವು ಹೋಗುತ್ತಿದ್ದರೆ ಅದರಲ್ಲಿ ಆಕ್ಷೇಪ ವ್ಯಕ್ತಪಡಿಸಲು ಕಾರಣವಿಲ್ಲ. ಯಾರಿಗೆ ಎಲ್ಲಿಗೆ ಹೋಗಬೇಕು ಅಥವಾ ಎಲ್ಲಿ ವಾಸಿಸಬೇಕು ಎಂಬ ಸ್ವಾತಂತ್ರ್ಯ ಅವರಿಗಿದೆ. ಇಸ್ರೇಲ್ ಪ್ರಪಂಚದಾದ್ಯಂತದ ಯಹೂದಿ ನಾಗರಿಕರ ಆಶ್ರಯತಾಣವಾಗಿದೆ. ಈ ಹಿಂದೆ ಸಿರಿಯಾದಲ್ಲಿ ಕಿರುಕುಳ ಅನುಭವಿಸುತ್ತಿದ್ದ ಯಹೂದಿಗಳಿಗೆ ಇಸ್ರೇಲ್ ತನ್ನ ಭೂಮಿಯಲ್ಲಿ ಆಶ್ರಯ ನೀಡಿದೆ. ಪ್ರಸಂಗ ಬಂದಾಗ ಗುಪ್ತಚರ ಸಂಸ್ಥೆಗಳ ಸಹಾಯ ಪಡೆದೂ ಸಿರಿಯಾದ ಯಹೂದಿಗಳನ್ನು ಇಸ್ರೇಲ್ ತಾಯ್ನಾಡಿಗೆ ಕರೆತಂದಿದೆ. ಇದಕ್ಕಾಗಿ ‘ಆಪರೇಷನ್ ಬ್ಲಾಂಕೆಟ್’ ನಂತಹ ಧೈರ್ಯದ ಕಾರ್ಯಾಚರಣೆಗಳನ್ನು ಇಸ್ರೇಲ್ ನಡೆಸಿದೆ. ಬೇರೆ ದೇಶಗಳಲ್ಲಿರುವ ಯಹೂದಿಗಳನ್ನು ಮರಳಿ ತರುವ ವಿಷಯವೂ ಅಷ್ಟೇ ! ವಿವಿಧ ದೇಶಗಳಲ್ಲಿರುವ, ವಿಭಿನ್ನ ಸಂಸ್ಕೃತಿಯಲ್ಲಿ ಬೆಳೆದ, ವಿಭಿನ್ನ ಶಿಕ್ಷಣ ಪದ್ಧತಿ ಮತ್ತು ಭಾಷೆ ಮಾತನಾಡುವ ಯಹೂದಿಗಳನ್ನು ತಮ್ಮ ಧರ್ಮಭೂಮಿಗೆ ಕರೆತರುವ ಇಸ್ರೇಲ್‌ನ ಈ ಸಾಧನೆ ನಿಜಕ್ಕೂ ಶ್ಲಾಘನೀಯ. ಧರ್ಮಬಾಂಧವರಾಗಿ ಹೇಗೆ ಒಂದಾಗಬೇಕು ಎಂಬುದನ್ನು ಹಿಂದೂಗಳು ಇದರಿಂದ ಕಲಿಯಬೇಕಿದೆ. ಪ್ರಪಂಚದಾದ್ಯಂತದ ಯಹೂದಿ ನಾಗರಿಕರನ್ನು, ಅವರು ಬುಡಕಟ್ಟು ಪಂಗಡಕ್ಕೆ ಸೇರಿದವರಾಗಿದ್ದರೂ, ‘ಧರ್ಮಬಾಂಧವರು’ ಎಂದು ಪರಿಗಣಿಸಿ ತಮ್ಮ ದೇಶದಲ್ಲಿ ಸೇರಿಸಿಕೊಳ್ಳುವ ಇಸ್ರೇಲ್‌ನ ಈ ಪ್ರಯತ್ನವು ಖಂಡಿತವಾಗಿಯೂ ಶ್ಲಾಘನೀಯವಾಗಿದೆ.
ಈಗಲಾದರೂ ಸರ್ವಧರ್ಮಸಮಭಾವ ಬಿಡಿ !
ಯಹೂದಿ ನಾಗರಿಕರ ಪುನರ್ವಸತಿಗೆ ನೀಡಿರುವ ಸಹಕಾರವು ಭಾರತದ ಒಳ್ಳೆಯತನವಾಗಿದೆ. ಮಿತ್ರರಾಷ್ಟ್ರಕ್ಕಾಗಿ ಹೀಗೆ ಮಾಡುವುದು ಸಹಜ. ಆದರೆ ಈ ಪ್ರಕ್ರಿಯೆಯಲ್ಲಿ ಭಾರತವು ಚಿಂತಿಸಬೇಕಾದ ಕೆಲವು ವಿಷಯಗಳು ಖಂಡಿತವಾಗಿಯೂ ಇವೆ. ಭಾರತದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಈ ನಾಗರಿಕರನ್ನು ಮತ್ತೆ ತಮ್ಮ ಮಾತೃಭೂಮಿಗೆ ಕರೆತರಲು ಇಸ್ರೇಲ್ ಯಾವ ರೀತಿ ಹಂಬಲಿಸುತ್ತಿದೆಯೋ, ಅಂತಹ ಹಂಬಲವನ್ನು ಭಾರತ ಎಂದಾದರೂ ತೋರಿದೆಯೇ ? ಈ ಪ್ರಶ್ನೆ ಖಂಡಿತವಾಗಿಯೂ ಕಳವಳಕಾರಿಯಾಗಿದೆ. ಪ್ರಸ್ತುತ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಲಕ್ಷಾಂತರ ಹಿಂದೂಗಳು ನರಕಯಾತನೆ ಅನುಭವಿಸುತ್ತಿದ್ದರೂ ಅವರನ್ನು ಭಾರತಕ್ಕೆ ಕರೆತರುವುದಿರಲಿ, ಅವರನ್ನು ಭಯಮುಕ್ತಗೊಳಿಸುವ ಕೆಲಸವನ್ನೂ ಭಾರತಕ್ಕೆ ಮಾಡಲು ಸಾಧ್ಯವಾಗಿಲ್ಲ. ಇದು ದೇಶದ ಮತ್ತು ಇಲ್ಲಿ ದೀರ್ಘಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ ವೈಫಲ್ಯವಾಗಿದೆ. ದೇಶದಲ್ಲಿ ಅಧಿಕಾರ ಬದಲಾದ ನಂತರವೂ ಈ ಪರಿಸ್ಥಿತಿಯಲ್ಲಿ ವಿಶೇಷ ಬದಲಾವಣೆಯಾಗಿಲ್ಲ. ಈಗಲೂ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಒಂದೆಡೆ ಬೇರೆ ದೇಶದಲ್ಲಿರುವ ತನ್ನ ವಂಶಜರು ಮತಾಂತರಗೊಂಡಿದ್ದರೂ ಅವರನ್ನು ಮತ್ತೆ ಸ್ವಭೂಮಿಗೆ ಕರೆತರಲು ಇಸ್ರೇಲ್ ಶ್ರಮಿಸುತ್ತಿದೆ, ಆದರೆ ಮತ್ತೊಂದೆಡೆ ಭಾರತದ ನೆರೆಯ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಮತ್ತು ಕೊಲೆಗಳು ನಡೆಯುತ್ತಿದ್ದರೂ ಸರಕಾರ ಮಾತ್ರ ಮೌನವಾಗಿದೆ. ಇದರೊಂದಿಗೆ ಭಾರತದೊಳಗಿನ ಹಿಂದೂಗಳ ಮತಾಂತರವನ್ನು ತಡೆಯಲು ಕೂಡ ಸರ್ವಪಕ್ಷಗಳ ಆಡಳಿತಗಾರರು ವಿಫಲರಾಗಿದ್ದಾರೆ. ಭಾರತದಲ್ಲಿರುವ ‘ಸರ್ವಧರ್ಮಸಮಭಾವ’ದ ಪರಿಣಾಮ ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ನಮಗೆ ನಮ್ಮದೇ ದೇಶದ ಹಿಂದೂಗಳ ಬೆಲೆ ಇಲ್ಲದಿರುವಾಗ, ವಿದೇಶದ ಹಿಂದೂಗಳ ಬಗ್ಗೆ ನಾವೇನು ಮಾಡವೆವು ? ಇದು ಕೇವಲ ಸರಕಾರವನ್ನು ದೂಷಿಸುವ ವಿಷಯವಲ್ಲ; ಆದರೆ ಒಂದು ‘ಹಿಂದೂ ಸಮಾಜ’ವಾಗಿ ಒಗ್ಗಟ್ಟಿನ ತೀವ್ರವಾದ ಭಾವನೆ ನಮ್ಮಲ್ಲಿಲ್ಲ ಎಂಬುದು ಕಹಿ ಸತ್ಯ. ಇದಕ್ಕಾಗಿ ಎಲ್ಲರೂ ಭಾರತಕ್ಕೆ ವಲಸೆ ಬರಬೇಕೆಂದಿಲ್ಲ; ಆದರೆ ಧರ್ಮದ ಹೆಸರಿನಲ್ಲಿ ಜಗತ್ತಿನಾದ್ಯಂತ ಇರುವ ಹಿಂದೂಗಳು ಒಂದಾಗಲು ಸಾಧ್ಯವಿಲ್ಲವೇ ? ಎಂಬುದು ಪ್ರಶ್ನೆ. ಆದ್ದರಿಂದ ಇನ್ನು ಮುಂದೆಯೂ ನಾವು ಸರ್ವಧರ್ಮಸಮಭಾವದ ಮುಳುಗುವ ಕೋಲನ್ನು ಹಿಡಿದುಕೊಂಡು ಕುಳಿತರೆ, ಕೆಲವು ವರ್ಷಗಳ ನಂತರ ಜಗತ್ತಿರಲಿ, ಭಾರತದಿಂದಲೂ ಹಿಂದೂಗಳು ನಾಮಶೇಷವಾಗಲು ಸಮಯ ಹಿಡಿಯುವುದಿಲ್ಲ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !